ಊಹಾ ಪತ್ರಿಕೋದ್ಯಮ ಬೇಡ : ಸಿಎಂ

0
236

ಬೆಂಗಳೂರು ಪ್ರತಿನಿಧಿ ವರದಿ
ಸತ್ಯಾನೇಷ್ವಣೆ ಮಾಡುವ ತನಿಖಾ ಪತ್ರಿಕೋದ್ಯಮ ಇರಲಿ. ಆದರೆ, ಊಹಾ ಪತ್ರಿಕೋದ್ಯಮ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿ ಇಂದು ತಿಳಿಸಿದರು.
 
 
 
ವಾರ್ತಾಭಾರತಿ ಕನ್ನಡ ದೈನಿಕದ ಹದಿನಾಲ್ಕನೇ ವಾರ್ಷಿಕ ವಿಶೇಷಾಂಕವನ್ನು ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.
ಸಮಾಜದಲ್ಲಿ ಬದಲಾವಣೆ ಹಾಗೂ ಪರಿವರ್ತನೆ ತರುವಲ್ಲಿ ಮಾಧ್ಯಮದ ಪಾತ್ರ ಹಿರಿದು. ಮಾಧ್ಯಮಗಳು ಅವಕಾಶ ವಂಚಿತ ಸಮುದಾಯಗಳ ಧ್ವನಿಯಾಗಬೇಕು. ಅನ್ಯಾಯಕ್ಕೆ ಈಡಾದವರಿಗೆ, ತುಳಿತಕ್ಕೆ ತುತ್ತಾದವರಿಗೆ ಹಾಗೂ ದೌರ್ಜನ್ಯಕ್ಕೆ ಒಳಗಾದವರಿಗೆ ಹೀಗೆ ಒಟ್ಟಾರೆ ನ್ಯಾಯವಂಚಿತ ಸಮುದಾಯಗಳಿಗೆ ನ್ಯಾಯ ದೊರಕಿಸಿಕೊಡುವಲ್ಲಿ ವಿಶೇಷ ಕಾಳಜಿ ವಹಿಸಬೇಕು ಎಂದು ಮುಖ್ಯಮಂತ್ರಿ ಆಶಿಸಿದರು.
 
 
 
ವಿದ್ಯುನ್ಮಾನ ಮಾಧ್ಯಮ ಕ್ಷೇತ್ರದಲ್ಲಿ ಅಗಾಧ ಬೆಳವಣಿಗೆಯಾದರೂ, ಮುದ್ರಣ ಮಾಧ್ಯಮದ ಮಹತ್ವ ಕಡಿಮೆಯಾಗಿಲ್ಲ. ಜನಸಾಮಾನ್ಯರಿಂದ ಪತ್ರಿಕೆ ಓದುವ ಅಭ್ಯಾಸ ಹಾಗೂ ಹವ್ಯಾಸ ಇನ್ನೂ ದೂರವಾಗಿಲ್ಲ ಎಂದು ಬಣ್ಣಿಸಿದ ಸಿದ್ದರಾಮಯ್ಯ ಅವರು ಸುದ್ದಿ ಪ್ರಸ್ತುತಿಯಲ್ಲಿ ಸತ್ಯ ಹಾಗೂ ನಿಖರತೆಯನ್ನು ಕಾಯ್ದುಕೊಳ್ಳಬೇಕು ಎಂದು ಮಾಧ್ಯಮಗಳಿಗೆ ಸಲಹೆ ಮಾಡಿದರು.
 
 
 
ಹದಿನಾಲ್ಕು ವರ್ಷಗಳ ಹಿಂದೆ ಸಣ್ಣ ಪತ್ರಿಕೆಯಾಗಿ ಮಾಧ್ಯಮ ಲೋಕವನ್ನು ಪ್ರವೇಶಿಸಿದ ವಾರ್ತಾಭಾರತಿ ಕನ್ನಡ ದಿನಪತ್ರಿಕೆಯು ತನ್ನ ಸಮಾಜಮುಖಿ ಕಾರ್ಯ ಚಟುವಟಿಕೆಗಳಿಂದ ರಾಜ್ಯ ಮಟ್ಟದ ಪತ್ರಿಕೆಯಾಗಿ ಬೆಳೆದಿದೆ ಎಂದು ಮುಖ್ಯಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು.
 
 
 
ಬೆಂಗಳೂರು ಅಭಿವೃದ್ಧಿ ಹಾಗೂ ನಗರ ಯೋಜನಾ ಸಚಿವ ಕೆ. ಜೆ. ಜಾರ್ಜ್, ಮಾಜಿ ಸಚಿವ ಸುಬ್ಬಯ್ಯ ಶೆಟ್ಟಿ, ವಾರ್ತಾ ಭಾರತಿ ಪತ್ರಿಯ ಪ್ರಧಾನ ಸಂಪಾದಕ ಅಬುಸ್ಸಲಾಮ್ ಪುತ್ತಿಗೆ, ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎಲ್. ಕೆ. ಅತೀಕ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್. ಆರ್. ವಿಶುಕುಮಾರ್, ಮಾಧ್ಯಮ ಕಮ್ಯುನಿಕೇಷನ್ಸ್ ಲಿಮಿಟೆಡ್‍ನ ನಿರ್ದೇಶಕ ಹೆಚ್. ಎಂ. ಅಫ್ರೋಜ್ ಅಸಾದಿ, ಬ್ಯಾರೀಸ್ ಗ್ರೂಪ್‍ನ ಅಧ್ಯಕ್ಷ ಸೈಯದ್ ಮೊಹಮದ್ ಬ್ಯಾರಿ ಹಾಗೂ ದುಬೈನ ಕ್ರಿಯೇಟಿವ್ ಹೌಸ್ ಸ್ಕೇಫೋಲ್ಡಿಂಗ್ ಎಲ್ ಎಲ್ ಸಿ ಸಂಸ್ಥೆಯ ಆಡಳಿತ ನಿರ್ದೇಶಕ ನಾಸಿರ್ ಹುಸೇನ್ ಅವರೂ ಈ ಸಂದರ್ಭದಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here