ಉಲ್ಟ ಹತ್ತುವ ಸೂಪರ್ ಮ್ಯಾನ್…!

0
496

 
ಲೇಖನ: -ವಿನಾಯಕ ಭಟ್, ಬ್ರಹ್ಮೂರು
ಗಾಳಿಯಲ್ಲಿ ಸುಂಯ್ ಅಂತ ಹಾರೋ ಸ್ಪೈಡರ್ ಮ್ಯಾನ್​ನ ನೋಡಿರ್ತೀರಾ. ಒಂದೇ ಚಕ್ರದಲ್ಲಿ ಬೈಕ್ ಓಡಿಸೋ ಸ್ಪೆಷಲ್ ಮ್ಯಾನ್​ನ ನೋಡಿರ್ತೀರಾ. ಆದ್ರೆ ನಾವಿಂದು ತೋರಿಸೋ ಸೂಪರ್​ಮ್ಯಾನ್​ನ ನೀವು ಎಲ್ಲಿಯೂ ನೋಡಿರಲ್ಲ. ನಮ್ಮಲ್ಲಿಯೇ ಇರುವ ಈ ಅಸಾಧಾರಣ ಪ್ರತಿಭೆಯ ಸಾಹಸವನ್ನ ನೋಡಿದ್ರೆ ಮೈ ಬೆವರೋದು ನಿಶ್ಚಿತ. ಹಾಗಾದ್ರೆ ಯಾರಿರಬಹುದು ಈ ಸೂಪರ್ ಮ್ಯಾನ್? ಈ ಸ್ಟೋರಿ ನೋಡಿ..
 
super man
 
ಸಿನಿಮಾಗಳಲ್ಲಿ ಡ್ಯೂಪ್ ಬಳಸಿ ಮಾಡೋ ಸಾಹಸಗಳನ್ನ ನೋಡಿ ಅಮೇಜಿಂಗ್ ಅಂತ ಬಾಯಗಲ ಮಾಡ್ಕೊಂಡು ನೋಡ್ತೇವೆ. ಆದ್ರೆ ರಿಯಲ್ ಲೈಫ್​ನಲ್ಲಿಯೂ ಸಾಹಸಗಳನ್ನ ಮಾಡುವ ಅನೇಕ ಪ್ರತಿಭೆಗಳು ನಮ್ಮ ನಡುವೆ ಇದ್ದಾರೆ. ಬೇರೆ ಬೇರೆ ವಿಭಾಗಗಳಲ್ಲಿ ತಮ್ಮ ಛಾಪನ್ನು ಮೂಡಿಸಿರುವ ಪರಾಕ್ರಮಿಗಳು ಎಲ್ಲರ ಪಾಲಿಗೆ ಸೂಪರ್ ಮ್ಯಾನ್ ಆಗ್ಬಿಟ್ಟಿದಾರೆ.
 
 
ಪ್ರತಿಭೆ ಬೇರೆ ಯಾರದೋ ಸ್ವತ್ತಲ್ಲ. ಹಾಗೆ ನೋಡಿದ್ರೆ ಹಳ್ಳಿಗಳಲ್ಲೇ ನಮಗೆ ಅದ್ಭುತ ಪ್ರತಿಭೆಗಳು ಸಿಗೋದು. ಆದ್ರೆ ಹೆಚ್ಚಿನವರು ಬೆಳಕಿಗೆ ಬರೋದೇ ಇಲ್ಲ. ಸೀಮಿತ ಪ್ರದೇಶಗಳಲ್ಲಿ ಮಾತ್ರ ಆ ಪ್ರತಿಭೆಯ ಅನಾವರಣವಾಗಿರುತ್ತಷ್ಟೆ. ಬಡಕುಟುಂಬದಲ್ಲಿ ಬೆಳೆದು ಕೂಲಿ ಮಾಡ್ಕೊಂಡು ಜೀವನ ನಡೆಸ್ತಿರೋ ಈತನ ಸಾಹಸ, ಸಾಮರ್ಥ್ಯ ಹೇಗಿದೆ ಗೊತ್ತಾ?
 
 
ತೆಂಗಿನ ಮರಗಳನ್ನು ಸರಳವಾಗಿ ಏರಿ-ಇಳಿಯುವುದಕ್ಕೆ ಪರದಾಡ್ತಾರೆ,ಇನ್ನು ಕೆಲವರು ಸರಳವಾಗಿ ಏರಿ-ಇಳೀತಾರೆ,ಇದೆಲ್ಲ ಸಾಮಾನ್ಯ.ಆದ್ರೆ ಈತ ತಲೆಕೆಳಕಾಗಿ ಮರಗಳನ್ನು ಹತ್ತಿ ಇಳಿತಾನೆ. ಓ ಮೈ ಗಾಡ್…! ಇವೆನೇನು ಮನುಷ್ಯನೋ ಅಥವಾ ಮೈಗೆ ಭೂತ ಹಿಡಿದಿದೆಯೋ ಅಂತ ಕೇಳ್ಬೇಡಿ. ಈಗಿನ ಕಾಲದಲ್ಲಿ ಮರಗಳನ್ನ ಹತ್ತುವವರೇ ಕಡಿಮೆಯಾಗ್ತಾ ಇದಾರೆ. ಅಂತದ್ರಲ್ಲಿ ಮರಗಳನ್ನ ಉಲ್ಟಾ ಹತ್ತಿ ಹೋಗ್ತಾನೆ ಈ ಅಸಾಮಾನ್ಯ ವ್ಯಕ್ತಿ.
 
 
ಹೌದು..ಬಾಗಲಕೋಟೆಯ ಬಾಬು ತೇರದಾಳ ಇಂತಹ ವಿಶೇಷ ಕಲೆಯನ್ನು ಕರಗತಮಾಡಿಕೊಂಡಿದ್ದಾನೆ.ಕೇವಲ ಮರಗಳನ್ನು ಮಾತ್ರವಲ್ಲ ವಿದ್ಯುತ್ ದೀಪದ ಕಂಬಗಳನ್ನು ಕೂಡ ತಲೆಕೆಳಕಾಗಿ ಸಲೀಸಾಗಿ ಹತ್ತುವುದರ ಮೂಲಕ ಎಲ್ಲರಲ್ಲಿ ಆಶ್ಚರ್ಯವನ್ನುಂಟು ಮಾಡ್ತಾನೆ.
ಉದ್ದನೇಯ ತೆಂಗಿನ ಮರಗಳನ್ನು ಸಲೀಸಾಗಿ ತಲೆಕೆಳಗೆ ಮಾಡಿ ಸರಸರನೆ ಏರ್ತಾನೆ ಬಾಬು.. ಸುತ್ತಲೂ ನಿಂತು ಚಪ್ಪಾಳೆ, ಸಿಳ್ಳೆ ಹೊಡೆದು ಪ್ರೋತ್ಸಾಹಿಸುತ್ತಾರೆ ಜನ… ಬಾಬು ಉಲ್ಟಾ ಮರ ಹತ್ತುವ ಮೂಲಕವೇ ಸಖತ್ ಫೇಮಸ್ ಆಗಿದಾನೆ. ಈ ದೃಶ್ಯವನ್ನ ನೋಡೋದೇ ಒಂದು ವಿಶೇಷ ಅನುಭವ. ಬಾಬು ಮರ ಹತ್ತುತ್ತಿದ್ದಾನೆ ಅಂತ ಗೊತಾದ್ರೆ ಜನಗಳೆಲ್ಲಾ ಓಡಿ ಬರ್ತಾರೆ. ಈತನ ಸಾಹಸವನ್ನ ನೋಡಿ ಖುಷಿ ಪಡ್ತಾರೆ. ಶಿಳ್ಳೆ ಹೊಡೆದು ಪ್ರೋತ್ಸಾಹ ತುಂಬ್ತಾರೆ. ಒಟ್ಟಿನಲ್ಲಿ ಬಾಬು ಎಲ್ಲರ ಪಾಲಿಗೆ ಹೀರೋ ಆಗಿದಾನೆ.
 
 
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮೈಗೂರು ಗ್ರಾಮದ ವ್ಯಕ್ತಿ ಬಾಬು ತೇರದಾಳ. ಹಾಗೆ ನೋಡಿದ್ರೆ ಜಮಖಂಡಿ ಬಹುಜನಸಂಖ್ಯೆಯನ್ನ ಹೊಂದಿರುವಂತಹ ಪ್ರದೇಶವೂ ಹೌದು. ಇಲ್ಲಿ ಹಲವು ವೃತ್ತಿಗಳನ್ನ ಮಾಡಿ ಹೊಟ್ಟೆಪಾಡು ನೋಡಿಕೊಳ್ಳೋರಿದ್ದಾರೆ. ನೌಕರಿ ಹಿಡಿದಿರುವ ವಿದ್ಯಾವಂತರೂ ಇದಾರೆ. ಇವರೆಲ್ಲರ ನಡುವೆ ವಿಶೇಷವಾಗಿ ನಿಂತಿದ್ದಾನೆ ಈ ಸಾಹಸಿಗ…
 
 
 
 
ಸಾವಿನ ಜೊತೆ ಸರಸ…………
ಬಾಬುನ ವಯಸ್ಸು 49 ದಾಟಿದೆ. ಈ ವಯಸ್ಸಿನಲ್ಲಿ ಇಂತವೆಲ್ಲಾ ಸಾಹಸ ಮಾಡೋಕೆ ಸಾಧ್ಯನಾ ಅಂತ ಅಚ್ಚರಿಯಾಗಬಹುದು. ಆದ್ರೆ ವಯಸ್ಸು ಹಾಫ್ ಸೆಂಚುರಿ ಹೊಸ್ತಿಲಿನಲ್ಲಿದ್ರೂನು ತೋಳಿನ ಬಲ ಕುಸಿದಿಲ್ಲ. ಕಳೆದ ಹತ್ತು ವರ್ಷಗಳಿಂದ ಹೀಗೆ ಮರಗಳನ್ನು ಹಾಗೂ ವಿದ್ಯುತ್ ದೀಪದ ಕಂಬಗಳನ್ನು ತಲೆಕೆಳಕಾಗಿ ಏರುವುದನ್ನ ಅಭ್ಯಾಸ ಮಾಡಿಕೊಂಡಿರುವ ಈತ ಗ್ರಾಮಸ್ಥರ ಆಕರ್ಷಣೆಯ ಕೇಂದ್ರಬಿಂದು.
ಹೀಗೆ ಮರ ಏರುವುದು ಸುಲಭವಲ್ಲ. ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಸಾವಿನ ಜೊತೆ ಸರಸವಾಡುವ ಹುಚ್ಚು ಇವನಿಗ್ಯಾಕಪ್ಪಾ ಅಂತ ನೀವು ಕೇಳಬಹುದು. ಕೈ ಕಾಲುಗಳಲ್ಲೇ ಬ್ಯಾಲೆನ್ಸ್ ಮಾಡಿಕೊಂಡು ಬಲ ಪ್ರಯೋಗಿಸಿ ಹೀಗೆ ಮರ ಏರುವುದನ್ನ ಅಪ್ರತಿಮ ಕಲೆ ಎನ್ನಬೇಕೋ ಸಾಹಸ ಎನ್ನಬೇಕೋ ನಿಮಗೆ ಬಿಟ್ಟಿದ್ದು.
ಮೊದಲೆಲ್ಲಾ ನೇರವಾಗಿಯೇ ಮರವೇರುತ್ತಿದ್ದ ಬಾಬು ಕಳೆದ ಹತ್ತು ವರ್ಷಗಳಿಂದ ತಲೆಕೆಳಗಾಗಿ ಮರ ಏರ್ತಿದಾನೆ. ಮರಗಳನ್ನು ಹತ್ತಿ ತೆಂಗಿನ ಕಾಯಿ ಕೊಯ್ಯುವುದೇ ಈತನ ಕಸುಬು. ಇದರಲ್ಲಿಯೇ ಹೊಟ್ಟೆಪಾಡನ್ನ ನೋಡ್ಕೋತಾನೆ.
 
 
 
 
‘ಉಲ್ಟಾ’ ಆಗಿದ್ದು ಹೇಗೆ?
ಅವರಿವರ ಮನೆಯಲ್ಲಿ ತೆಂಗಿನ ಕಾಯಿ ಕೊಯ್ದು ಕೂಲಿ ಪಡೆಯುವ ಬಾಬುವಿಗೆ ತಲೆಕೆಳಗಾಗಿ ಮರ ಏರುವುದಕ್ಕಾಗತ್ತಾ ಅನ್ನೋ ಕುತೂಹಲ ಮೂಡಿತ್ತು. ನೋಡಿಯೇಬಿಡೋಣ ಅಂತ ಉಲ್ಟಾ ಹತ್ತೋಕೆ ಪ್ರಯತ್ನ ಮಾಡ್ತಾನೆ. ಅಚ್ಚರಿಯೆಂಬಂತೆ ಬಹುಬೇಗ ತಲೆಕೆಳಕಾಗಿ ಮರ ಹತ್ತೋದು ರೂಢಿಯಾಗಿಬಿಡುತ್ತೆ. ಇದರ ನಂತರವೇ ಬಾಬು ಹೀರೋ ಆಗೋದು. ಈತನ ಮರ ಹತ್ತುವ ಸ್ಟೈಲ್ ಎಲ್ಲರನ್ನ ಮೋಡಿ ಮಾಡೋಕೆ ಶುರು ಮಾಡ್ತು. ಅಕ್ಕಪಕ್ಕದ ಊರುಗಳಿಂದಲೂ ಈ ಅದ್ಭುತ ದೃಶ್ಯವನ್ನ ನೋಡೋಕೆ ಕುತೂಹಲದಿಂದ ಜನಗಳು ಬರತೊಡಗಿದ್ರು. ವಿದ್ಯೆ ಕಲಿಯದ ಬಾಬುವಿಗೆ ಮರ ಹತ್ತುವ ಕಸುಬೇ ಜೀವನಾಧಾರ. ಅದರಲ್ಲೂ ಡಿಫರೆಂಟ್ ಸ್ಟೈಲು ಈತನೆಡೆ ಜನಗಳು ಆಕರ್ಷಿತವಾಗುವಂತೆ ಮಾಡುತ್ತೆ.
 
 
 
 
ಬಾಬುವಿಗೆ ಫುಲ್ ಡಿಮ್ಯಾಂಡ್…….
ಡಿಮ್ಯಾಂಡ್ ಎಷ್ಟರ ಮಟ್ಟಿಗೆ ಅಂದ್ರೆ ಎಲ್ಲಾದರೂ ವಿಶೇಷ ಕಾರ್ಯಕ್ರಮಗಳಿದ್ದಲ್ಲಿ ಬಾಬುವನ್ನ ಇನ್​ವೈಟ್ ಮಾಡ್ತಿದ್ರು. ಮರವನ್ನ ಹತ್ತೋಕೆ ಹೇಳ್ತಿದ್ರು. ತಲೆಕೆಳಗಾಗಿಯೇ ಸಲೀಸಾಗಿ ಮರಹತ್ತುವ ಮೂಲಕ ಬಾಬು ಎಲ್ಲರನ್ನ ರಂಜಿಸ್ತಿದ್ದ. ಈ ಸಾಹಸಕ್ಕೆ ಜನಬೆಂಬಲ ಬಹಳಷ್ಟಿತ್ತು. ಕಾರ್ಯಕ್ರಮಗಳಲ್ಲಿ ಹೀಗೆ ಮರ ಹತ್ತಿಸಿ ಈತನಿಗೆ ಬಹುಮಾನವನ್ನ ನೀಡಿ ಗೌರವಿಸ್ತಿದ್ರು. ವಿಶೇಷ ಕಲೆಗೆ ಬೆಲೆ ಸಿಕ್ಕಿದ್ದರಿಂದ ಹೊಸ ಪ್ರಯತ್ನಕ್ಕೆ ತಕ್ಕ ಫಲವಿದು ಅನ್ನೋ ಸಾರ್ಥಕತೆಯ ಭಾವ ಬಾಬುವಿನಲ್ಲಿ ಮೂಡ್ತು.
 
ಜಮಖಂಡಿ ತಾಲೂಕಿನ ಸುತ್ತಮುತ್ತಲಿನ ಯಾವುದೇ ಗ್ರಾಮದ ತೋಟಗಳಲ್ಲಿ ತೆಂಗಿನ ಮರದಲ್ಲಿನ ಕಾಯಿಗಳನ್ನು ಕೀಳಬೇಕೆಂದ್ರೆ ಮೊದಲಿಗೆ ಕರೆ ಬರುವುದು ಈ ಬಾಬು ತೇರದಾಳನಿಗೆ. ಯಾಕಂದ್ರೆ ಈತ ಯಾವುದೇ ಸಲಕರಣೆಗಳ ಸಹಾಯವಿಲ್ಲದೇ ವಿಚಿತ್ರ ರೀತಿಯಲ್ಲಿ ತೆಂಗಿನ ಕಾಯಿ ಕೀಳುತ್ತಾನೆ.ಸರಸರನೆ ತಲೆಕೆಳಕಾಗಿ ಸ್ಪೈಡರ್ ಮ್ಯಾನ ತರಹ ಮರ ಏರಿ ಕಾಯಿಕೀಳೋದನ್ನ ಜನ ನೋಡಿ ಖುಷಿ ಪಡ್ತಾರೆ. ಚಪ್ಪಾಳೆ ಹೊಡೆದು ಈತನನ್ನ ಹುರಿದುಂಬಿಸುತ್ತಾರೆ.ತೆಂಗಿನ ಮರಗಳು ಎಷ್ಟೇ ಎತ್ತರವಿದ್ರೂ ಈತ ಅವುಗಳನ್ನು ತಲೆಕೆಳಗೆ ಮಾಡಿ ಏರುವುದರಲ್ಲಿ ನಿಸ್ಸೀಮ.
 
 
ಹೀಗೆ ಜಮಖಂಡಿ ತಾಲೂಕಿನ ಸುತ್ತಮುತ್ತಲ ಗ್ರಾಮಗಳಲ್ಲಿ ವಿಶೇಷವಾಗಿ ಮರಗಳನ್ನು ಏರುವುದಕ್ಕೆ ಫೇಮಸ್ ಆಗಿರೋ ಈತನನ್ನು ಕಂಡರೆ ಎಲ್ಲರಿಗೂ ಅಚ್ಚು ಮೆಚ್ಚು .ಯಾರೇ ಯಾವ ಸಂದರ್ಭದಲ್ಲಿ ಕರೆದರೂ ಅವರ ತೋಟಕ್ಕೆ ಹೋಗಿ ಕಾಯಿಗಳನ್ನು ಕಿತ್ತು ಕೊಟ್ಟು ಬರುತ್ತಾನೆ. ಮರದಿಂದ ಕಾಯಿಕಿತ್ತರೆ ಒಂದು ಮರಕ್ಕೆ 15ರಿಂದ 20 ರೂಪಾಯಿ ಕೂಲಿ ದೊರೆಯುತ್ತೆ. ಹೀಗೆ ತೋಟದ ಮಾಲೀಕರು ಅವರು ಕೊಟ್ಟ ಪುಡಿಗಾಸಿನಿಂದ ಜೀವನವನ್ನು ಸಾಗಿಸುತ್ತಾನೆ.
 
 
ಸ್ವಂತ ನೆಲೆ ಇಲ್ಲದ ಬಾಬು ಬದುಕು……
ಹೆಂಡತಿ-ಮೂವರು ಮಕ್ಕಳನ್ನ ಹೊಂದಿರುವ ಈತನಿಗೆ ಒಂದು ಸ್ವಂತ ನೆಲೆಯೂ ಇಲ್ಲ. ಕಡು ಬಡತನದಿಂದ ಜೀವನ ಸಾಗಿಸುತ್ತಾನೆ. ನೆಮ್ಮದಿಯ ಬದುಕಿಗೆ ತನ್ನ ಪರಿಶ್ರಮದ ಜೊತೆ ಸಹಾಯದ ನಿರೀಕ್ಷೆಯಲ್ಲಿದ್ದಾನೆ ಬಾಬು. ಕಡುಬಡತನದಲ್ಲಿ ತನ್ನ ಕಲೆಯನ್ನೇ ನಂಬಿ ಬದುಕುತ್ತಿರುವ ಈ ಹಳ್ಳಿ ಹೈದನ ಸಾಹಸಕ್ಕೆ ಸರ್ಕಾರವಾಗಲಿ ಸಂಘಸಂಸ್ಥೆಗಳಾಗಲಿ ಈತನನ್ನ ಗುರ್ತಿಸಿ ಗೌರವಿಸಿ ಬದುಕಿಗೆ ಒಂದು ನೆಲೆ ಒದಗಿಸಬೇಕು ಅಂತ ಬಾಬುವನ್ನ ಹತ್ತಿರದಿಂದ ಕಂಡವರು ಹೇಳ್ತಾರೆ. ವಿಚಿತ್ರ ಕಲೆಯಿಂದ ಎಲ್ಲರ ಪ್ರಶಂಸೆಗೆ, ಜನಮೆಚ್ಚುಗೆಗೆ ಪಾತ್ರನಾದ ಬಾಬುವಿಗೆ ಕಲೆಯೇ ಬದುಕಿನ ಹಾದಿಯನ್ನ ತೋರಿಸಿದೆ.
ಹವ್ಯಾಸಕ್ಕಾಗಿ ಕಲಿತ ಕಲೆ ಈಗ ತುತ್ತಿನ ಚೀಲ ತುಂಬಿಕೊಳ್ಳುವುದಕ್ಕೆ ಮಾರ್ಗವಾಗಿದೆ. ಕಡುಬಡತನದಲ್ಲಿಯೂ ಬಾಬು ಸಂತೃಪ್ತ ಜೀವನ ನಡೆಸ್ತಿದಾನೆ. ಮರ ಏರುವ ಸಾಹಸ ಬದುಕಿನ ಆಶಾದಾಯಕ ಬೆಳವಣಿಗೆಗೆ ಕಾರಣವಾಗಿದೆ.
 
 
 
ತಲೆ ಕೆಳಕಾಗಿ ಮರ ಏರುವ ವಿಶೇಷ ಸಾಹಸಿಗ.
ಸಹಾಯದ ನಿರೀಕ್ಷೆಯಲ್ಲಿ ಹಳ್ಳಿ ಪ್ರತಿಭೆ ಬಾಬು ತೇರದಾಳ.
ಹವ್ಯಾಸಕ್ಕಾಗಿ ಕಲಿತ ಕಲೆ ಈಗ ಜೀವನೋಪಾಯದ ಮಾರ್ಗ.
ಬದುಕು ಕಟ್ಟಿಕೊಳ್ಳುವುದಕ್ಕೆ ನಿತ್ಯವೂ ಪ್ರಾಣದ ಜೊತೆ ಆಟ.
ವಿದ್ಯುತ್ ಕಂಬ,ತೆಂಗಿನಮರ ತಲೆಕೆಳಕಾಗಿ ಏರುವುದರಲ್ಲಿ ನಿಸ್ಸೀಮ.
ಗ್ರಾಮಸ್ಥರ ಆಕರ್ಷಣೆಯ ಕೇಂದ್ರಬಿಂದು ಈ ಹಳ್ಳಿ ಹೈದ.

LEAVE A REPLY

Please enter your comment!
Please enter your name here