ಉಪಕಾರವೆಂಬುದೆಷ್ಟು ಉದಾತ್ತ ಅಲ್ವಾ?

0
650

 
ಅರಿತುಕೋ ಬದುಕ ವೈಖರಿ ಅಂಕಣ: ಸಂಚನಾ ಎಂ ಎಸ್
“ಪರೋಪಕಾರಂ ಇದಂ ಶರೀರಂ”(ಈ ದೇಹವಿರುವುದೇ ಪರರ ಉಪಕಾರಕ್ಕೆ), ನಿಜಕ್ಕೂ ಇದೊಂದು ಉನ್ನತ ಉಕ್ತಿ, ಸಹಾಯ, ಉಪಕಾರ ಎಂದೆಲ್ಲಾ ಕರೆಯುವ ಆ ಒಂದು ಪದ ಮಾನವೀಯತೆ ಎಂಬ ಕಿರೀಟದ ಒಂದತ್ಯಮೂಲ್ಯ ಹರಳು. ಉಪಕಾರವು, ನೀಡಿದವನ ಮನಕ್ಕೆ ಉಲ್ಲಾಸವನ್ನು, ಪಡೆದವನ ನೋವಿಗೆ ಉಪಶಮನವನ್ನು ನೀಡಬಲ್ಲದು. ಎಲ್ಲರೂ ಎಲ್ಲರಿಗೂ ಉಪಕಾರ ಮಾಡಬೇಕೆಂದರೆ ಅದು ಅಸಾಧ್ಯವೆಂಬುದೆನೋ ಸರಿ, ಆದರೆ ಎಲ್ಲರೂ ಕೆಲವರಿಗಾದರೂ ಉಪಕಾರ ಮಾಡಲು ಸಾಧ್ಯವೆಂಬುದು ಕೂಡ ಅಷ್ಟೇ ಸರಿ.
 
 
ನಮ್ಮ ಕಷ್ಟವ ಕಂಡು, ಆ ಕಷ್ಟವು ಕರಗಲೆಂದು ನಮಗಾಗಿ ಪ್ರಾರ್ಥಿಸುವ ತುಟಿಗಳಿಗಿಂತ ಆ ಕಷ್ಟದಲ್ಲಿ ನಮ್ಮೆಡೆ ಸಹಾಯ ನೀಡುವ ಕೈಗಳೇ ಶ್ರೇಷ್ಠ ಎನ್ನುತ್ತಾರೆ. ಅದರಲ್ಲೇ ತಿಳಿವುದು ಸಹಾಯ ಮಾಡುವ ಹಸ್ತಕ್ಕೆ ಸರಿಸಾಟಿ ಮತ್ತೊಂದಿಲ್ಲ ಎಂದು. ದೇವರು ನಮಗೆ ಎರಡು ಕರಗಳನ್ನು ನೀಡಿರಲು ಕಾರಣ ಬಹುಶಃ ಅದೇ ಏನೋ, ಒಂದು ಕರದಿಂದ ನಮಗೆ ನಾವೇ ನೆರವಾಗುವುದು. ಇನ್ನೊಂದು ಕರದಿಂದ ಅವಶ್ಯಕತೆ ಇರುವ ಇನ್ನೊಬ್ಬರಿಗೆ ಆಸರೆಯಾಗಿ ನಿಲ್ಲುವುದು.
 
 
ಸಮಾಜದಲ್ಲಿ ಸಂಕಷ್ಟದಲ್ಲಿರುವ ಒಬ್ಬ ವ್ಯಕ್ತಿಗೆ ನಮ್ಮಿಂದ ಯಾವ ರೀತಿಯಲ್ಲಾದರೂ ಸಹಾಯವಾದ ಮಾತ್ರಕ್ಕೆ ಈಡೀ ಪ್ರಂಪಚದಲ್ಲೆನೋ ಒಂದು ದೊಡ್ಡ ಬದಲಾವಣೆ ಬರುವುದೆಂದಲ್ಲ, ಕಡೆಯ ಪಕ್ಷ ಸಹಾಯ ಪಡೆದ ಆ ವ್ಯಕ್ತಿಯ ಬದುಕೆಂಬ ಪ್ರಪಂಚದಲ್ಲಿ, ಒಂದು ಪುಟ್ಟ ಬದಲಾವಣೆ ಬಂದರೂ ಆ ಸಹಾಯವು ಸಾರ್ಥಕವೆಂದರ್ಥ. ಕತ್ತಲೆಯಲ್ಲಿ ಕಣ್ಣೀರಿಡುವ ಒಂದು ಜೀವಕ್ಕೆ ಸಹಾಯದ ಮೂಲಕ ಬೆಳಕಿನ ದರ್ಶನ ಮಾಡಿಸುವ ಮತ್ತೊಂದು ಜೀವವನ್ನು ಈ ಜಗದಲ್ಲಿ ಎಂದೂ ಕೂಡ ಜಡವೆಂದು ಜರಿಯಲು ಆಗದು.
 
 
ಸಹಾಯ ಮಾಡಲು ಸದಾ ಹಿಂದೇಟು ಹಾಕುವ ಮಂದಿ ಅದಕ್ಕೆ ಸಾವಿರ ಸಬೂಬುಗಳನ್ನು ನೀಡಬಲ್ಲರು, ಅವುಗಳಲ್ಲಿ ಮುಖ್ಯವಾದುದು, ಸಹಾಯವೇನೋ ಮಾಡಬಹುದು, ಆದರೆ ನಮ್ಮಲ್ಲಿ ಅಷ್ಟೊಂದು ಜನಬಲವಿಲ್ಲ, ಹಣಬಲವಿಲ್ಲ, ಇನ್ನೂ ಏನೇನೋ, ಅಂತವರಿಗೊಂದು ಕಿವಿಮಾತು ಸಹಾಯಮಾಡಲು ಮೊದಲಿಗೆ ಇರಬೇಕಾದದ್ದು ಈ ಯಾವ ಬಲಗಳೂ ಅಲ್ಲ, ಬದಲಿಗೆ ಮನೋಬಲ. ಸಾಕಷ್ಟು ಸಂಪತ್ತು,ದೈಹಿಕ ಶಕ್ತಿ, ಸಾಮಥ್ರ್ಯ, ಸಕಲವೂ ಇದ್ದೂ ಸಹೃದಯ ಮನಸ್ಸೊಂದು ಇಲ್ಲದಿದ್ದರೆ ಸಾಸಿವೆಯಷ್ಟೂ ಸಹಾಯ ಮಾಡಲು ನಿಮ್ಮಿಂದ ಸಾಧ್ಯವಾಗದು.
 
 
ಶಾಲೆಯಲ್ಲಿರುವಾಗ ಗುರುಗಳು ಪದೇ ಪದೇ ಹೇಳುತ್ತಿದ್ದ ಆ ಒಂದು ಮಾತು ಇಂದೂ ನೆನಪಿದೆ, ನಿಮ್ಮ ಬದುಕಲ್ಲಿ ಸುಖ, ಸಂತೋಷ, ಸಮೃದ್ಧಿಯ ನೀಡುವ ದೇವರಿಗೆ ಧನ್ಯವಾದವ ಸಲ್ಲಿಸಲು ಎರಡು ದಾರಿ ಇದೆ, ಒಂದು ಪೂಜೆ-ಪ್ರಾರ್ಥನೆ, ಮತ್ತೊಂದು ಪರೋಪಕಾರಿಯಾಗಿ ಬದುಕುವುದು. ನಾವು ಎರಡನೇ ದಾರಿಯಲ್ಲಿ ಸಾಗಿದಾಗಲೂ ದೇವರು ತುಂಬಾ ಖುಷಿಪಡುತ್ತಾನೆಂದು, ಪರರಿಗೆ ಉಪಕಾರ ಮಾಡುವಾಗ ಮುಂದೆಂದಾದರೂ ಅವರಿಂದ ಪ್ರತ್ಯುಪಕಾರ ಪಡೆಯಬಹುದೆಂಬ ನಿರೀಕ್ಷೆ ಬೇಡ, ನೆರವಾಗುವಾಗ ನಾವೊಂದು ನಿಮಿತ್ತ ಮಾತ್ರ ಎಂಬ ಭಾವ ಬೇಕು. ಆದರೆ ಆ ಸಹಾಯ ಮಾತ್ರದಿಂದ ಮತ್ತೊಬ್ಬರ ಮೊಗದಲ್ಲಿ ಮಂದಹಾಸ ಮೂಡಿದರೆ, ಅವರು ನೆಮ್ಮದಿಯ ನಿಟ್ಟುಸಿರು ಬಿಡುವಂತಾದರೆ, ಅದನ್ನು ನೋಡಿಯೇ ನಾವು ನಲಿಯಬಹುದು, ಆಗ ನಮಗಾಗುವ ಸಂತೋಷವನ್ನು ವರ್ಣಿಸಲು ಪದಗಳೇ ಸಾಲದು.
 
 
ಬಸ್ಸಿನಲ್ಲಿ ವೃದ್ದರೊಬ್ಬರಿಗೆ ನಾವು ಕೂತ ಜಾಗವನ್ನು ಬಿಟ್ಟು ಕೊಡುವುದು, ಪುಟ್ಟ ಮಕ್ಕಳನ್ನು ರಸ್ತೆ ದಾಟಿಸುವುದು, ಹಸಿವೆಯಿಂದ ನರಳುವ ಅಶಕ್ತರಿಗೆ ಊಟ ನೀಡುವುದು, ಬಾಯಾರಿ ಬರುವ ಹಕ್ಕಿ ಪಕ್ಷಿಗಳಿಗೊಸ್ಕರ ಪುಟ್ಟ ಬಟ್ಟಲಲೊಂದಿಷ್ಟು ನೀರ ನೀಡುವುದು, ಇವೆಲ್ಲಾ ಚಿಕ್ಕ ಚಿಕ್ಕ ವಿಷಯಗಳೆನಿಸಬಹುದು, ಆದರೆ ಎಷ್ಟೋ ಬಾರಿ ಈ ಪುಟ್ಟ-ಪುಟ್ಟ ಸಂಗತಿಗಳೇ ನಮ್ಮ ಈಡೀ ದಿನವನ್ನು ಪ್ರಪುಲ್ಲವಾಗಿಡುತ್ತವೆ.
 
 
ಸ್ವಾಮಿ ವಿವೇಕನಂದರು ಒಂದೆಡೆ ಹೇಳುತ್ತಾರೆ- ಪರೋಪಕಾರಕ್ಕಾಗಿ ಜೀವಿಸುವವರದೇ ಜೀವನ, ಇನ್ನುಳಿದವರು ಜೀವಚ್ಛವಗಳು ಮಾತ್ರ ಎಂದು. ನಾವಿಂದು ಮುಖ್ಯವಾಗಿ, ತುರ್ತಾಗಿ ಕೇಳಿಕೊಳ್ಳಬೇಕಾದ ಪ್ರಶ್ನೆಯೂ ಅದೇ, ಅದೆಷ್ಟು ಜನರಿಗೆ ನಾವು ನೆರವಾಗಿದ್ದೇವೆ ಎಂದು. ಹಾಗೆಂದು ಸಂಖ್ಯೆಗಳ ಕುರಿತಂತೆ ಚಿಂತೆ ಮಾಡುತ್ತ ಕೂತರೆ ಫಲವಿಲ್ಲ. ಬದಲಿಗೆ ಒಂದು ಸಮಯಕ್ಕೆ ಒಬ್ಬ ವ್ಯಕ್ತಿಗೆ ಸಹಾಯ ಮಾಡಿದರೂ ಸಾಕು, ಅದರಲ್ಲೂ ನಮಗೆ ಅತ್ಯಂತ ಸಮೀಪವಿರುವ, ಸಹಾಯದ ನಿರೀಕ್ಷೆಯಲ್ಲಿರುವವರಿಂದಲೇ ಮೊದಲು ಶುರು ಮಾಡಬೇಕು.
 
ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಜನಗಳ ನಡುವೆ ಆರ್ಥಿಕತೆಯ ಅಂತರವೇರ್ಪಟ್ಟಾಗ , ಭ್ರಾಷ್ಟಾಚಾರವಿದ್ದಾಗ, ಹಿಂಸೆಯಿದ್ದಾಗ, ಮಾನವೀಯ ಮೌಲ್ಯಗಳೆಲ್ಲ ಕಾಲು ಮುರಿದುಕೊಂಡು ಮೂಲೆಯಲ್ಲಿ ಬಿದ್ದಾಗ, ಪ್ರತಿಯೊಂದಕ್ಕೂ ಆಡಳಿತದ ಮೇಲೆ ಆರೋಪ ಮಾಡುತ್ತಾ ಕಾಲಾಹರಣ ಮಾಡುವುದರಲ್ಲಿ ಅರ್ಥವಿಲ್ಲ. ಒಬ್ಬರಿಗೊಬ್ಬರು ಸಹಾಯ ನೀಡುತ್ತಾ ಸಹಬಾಳ್ವೆಯ ನಡೆಸುವುದೇ ಈ ಸಮಸ್ಯೆಗಳಿಗೂ ಕೂಡ ಒಂದು ಉತ್ತಮ ಪರಿಹಾರ. ಇಂದು ಜಗದೆಲ್ಲೆಡೆ ಶಾಂತಿ ನೆಲಸಬೇಕೆಂಬ ಆಸೆ ಇದ್ದರೆ, ಎಲ್ಲರು ಪರೋಪಕಾರವೆಂಬ ಮಂತ್ರವ ಪಠಿಸಬೇಕು.
 
ನನ್ನಿಂದ ಜನರಿಗೆ ಉಪಕಾರವಾಯಿತು, ನಾನೊಬ್ಬ ಉಪಕಾರಿ ಎಂದು ಊರೆಲ್ಲಾ ಡಂಗೂರ ಸಾರಬಹುದೆಂಬ ಆಸೆಯಲ್ಲಿ ಉಪಕಾರ ಮಾಡಲು ಓಡುವವರಿಗೂ ಕಮ್ಮಿ ಇಲ್ಲ. ಬಹುಮಾನದ ನಿರೀಕ್ಷೆಯಲ್ಲಿ ಸಹಾಯ ನೀಡುವವರನ್ನು ಭಗವಂತನೂ ಮೆಚ್ಚಲಾರ. ಬದಲಿಗೆ ಕೇವಲ ಆತ್ಮತೃಪ್ತಿಗಾಗಿ, ನೆಮ್ಮದಿಗಾಗಿ ಇತರರ ನೆರವಿಗೆ ಧಾವಿಸುವವರೇ ಕೊನೆಯವರೆಗೂ ನೆನಪಿನಲ್ಲಿ ಉಳಿಯುವುದು. ಪ್ರತಿಯೊಂದು ಜೀವಿಯ ಜೀವನದ ಪ್ರಮುಖ ಉದ್ದೇಶವೇ ಅದು ಪರೋಪಕಾರ. ಹೀಗಿದ್ದರೂ ನಾನು ಎಂದಿಗೂ, ಯಾರಿಗೂ, ಉಪಕಾರ ಮಾಡಲಾರೆ ಎನ್ನುವವರಿದ್ದರೆ ಅಂತವರಿಗೊಂದು ಕೊನೆಯ ಮಾತು-ನಿಮಗೆ ಉಪಕಾರ ಮಾಡಲು ಸಾಧ್ಯವಿಲ್ಲದಿದ್ದರೆ ಪರವಾಗಿಲ್ಲ, ಕಡೆಯ ಪಕ್ಷ ಅಪಕಾರ ಮಾಡದೆ ಸುಮ್ಮನಿದ್ದು ಬಿಡಿ, ಆಗ ನೀವು ಉಪಕಾರ ಮಾಡಿದಂತೆಯೇ ಆಗುವುದು.
ಸಂಚನಾ ಎಂ ಎಸ್
[email protected]

LEAVE A REPLY

Please enter your comment!
Please enter your name here