ಉದುರುತ್ತಿರುವ ಮಿಡಿ ಅಡಿಕೆ ಮತ್ತು ಪರಿಹಾರ

0
461

 
ಚಿಗುರು ಅಂಕಣ: ರಾಧಾಕೃಷ್ಣ ಹೊಳ್ಳ
ಮೇ ಮೊದಲ ವಾರದಲ್ಲಿ ಧರೆ ತಂಪಾಗುವಷ್ಟು ಮಳೆ ಬಂತು. ಕೃಷಿಕರು ಇನ್ನು ನೀರಾವರಿ ಅಗತ್ಯವಿಲ್ಲ. ಕೊಳೆ ಔಷಧಿ ಸಿಂಪರಣೆ ಮಾಡುವುದು ಮಾತ್ರ ಎಂದು ಆರಾಮವಾಗಿದ್ದರು. ಮಳೆ ಕಳೆದು ಮೂರು ನಾಲ್ಕು ದಿನಗಳಾಗಿದೆ, ಅಡಿಕೆ ತೋಟದ ಮರದ ಬುಡದಲ್ಲಿ ನೋಡಿದರೆ ರಾಶಿ ರಾಶಿ ಮಿಡಿ ಕಾಯಿಗಳು ಉದುರಿ ಬಿದ್ದಿವೆ. ಇದನ್ನು ನೋಡಿದಾಕ್ಷಣ ಮತ್ತೆ ಫ್ರಾರಂಭವಾಯಿತು ಮಾನಸಿಕ ಉದ್ವಿಗ್ನತೆ.
 
 
arecanut
 
 
ಈಗಿರುವ ಬೆಲೆಯಲ್ಲಿ ಒಂದು ಅಡಿಕೆ ಉದುರಿದರೂ ರೂ. 2 ನಷ್ಟ ಎಂದು, ಇದರ ನಿಯಂತ್ರಣಕ್ಕೆ ಹರ ಸಾಹಸ ಪಡುತ್ತಿದ್ದಾರೆ. ಅಡಿಕೆ ಬೆಳೆಯಾಗಲೀ, ಇನ್ಯಾವುದೇ ಬೆಳೆಯಾಗಲಿ ವಾತಾವರಣದ ಏರುಪೇರಿಗೆ ತಟ್ಟನೆ ಹೊಂದಿಕೊಳ್ಳುವುದಿಲ್ಲ. ಅದರಲ್ಲೂ ತಕ್ಷಣ ಬದಲಾಗುವ ಅಧಿಕ ಉಷ್ಣತೆ, ತಂಪು ಮತ್ತು ಆರ್ಧ್ರತೆಯ ವಾತಾವರಣಕ್ಕೆ ಬೆಳೆ ಫಸಲು ತುಂಬಾ ಸೂಕ್ಷ್ಮಗ್ರಾಹಿ. ಆದುದರಿಂದ ಈ ಸಮಯದಲ್ಲಿ ಕಾಯಿ ಉದುರುವಿಕೆ, ಕಾಯಿ ಸೀಳಿಕೊಳ್ಳುವಿಕೆ, ಹೂ ಗೊಂಚಲು ಒಣಗುವಿಕೆ ಸಾಮಾನ್ಯ. ಇಷ್ಟಕ್ಕೂ ಈ ರೀತಿಯ ಹವಾಮಾನ ಕೀಟಗಳು , ರೋಗಕಾರಗಳ ಚಟುವಟಿಕೆಗೆ ಉತ್ತಮ ವಾತಾವರಣ ಎನ್ನುತ್ತದೆ ಕೃಷಿ ವಿಜ್ಞಾನ.
ಈಗ ಉದುರುತ್ತಿರುವ ಎಳೆ ಮಿಡಿ ಕಾಯಿಗಳು ಕೆಲವು ಶಿಲೀಂದ್ರ ಸೋಂಕಿನಿಂದಾಗಿರಬಹುದು, ಮತ್ತೆ ಕೆಲವು ಕೀಟ ಹಾವಳಿಯಿಂದ ಉದುರಿರಬಹುದು, ಇನ್ನು ಕೆಲವು ಸರಿಯಾಗಿ ಬಳವಣಿಗೆ ಹೊಂದದೆ ಉದುರಿದ್ದಿರಬಹುದು. ಇದು ಇಂತದ್ದೇ ತೊಂದರೆ ಎಂದು ನಿಖರವಾಗಿ ಹೇಳಲು ಬೀಳುವ ಮಿಡಿ ಕಾಯಿಗಳನ್ನು ತಕ್ಷಣವೇ ಪರೀಕ್ಷೆಗೊಳಪಡಿಸಬೇಕಾಗುತ್ತದೆ.
 
 
arecanut1
 
ಸಾಮಾನ್ಯ ರೈತರು ಇದನ್ನು ಸೂಕ್ಷ್ಮದರ್ಶಕ ಸಾಧನದಿಂದ ಪರೀಕ್ಷೆ ಮಾಡಲು ಸಾಧ್ಯವಿಲ್ಲ. ಅವರು ಉದುರಿದ ಮಿಡಿ ಕಾಯಿಗಳನ್ನು ಸೂಕ್ಷ್ಮವಾಗಿ ಗಮನಿಸಿ, ಇದು ಯಾವ ತೊಂದರೆ ಇರಬಹುದು ಎಂದು ಅಂದಾಜು ಮಾಡಬಹುದು. ಉದುರಿದ ಮಿಡಿ ಕಾಯಿಗಳ ತೊಟ್ಟನ್ನು ಸೂಕ್ಷ್ಮವಾಗಿ ಗಮನಿಸಿ. ಅನುಕೂಲವಿದ್ದರೆ ಮಸೂರದ ಸಹಾಯದಿಂದ (ಮ್ಯಾಗ್ನಿಪೈಯಿಂಗ್ ಗ್ಲಾಸ್) ನಲ್ಲಿ ಪರೀಕ್ಷಿಸಿ. ಆಗ ಅದರ ತೊಟ್ಟಿನ ಭಾಗದಲ್ಲಿ ಯಾವುದಾದರೂ ಹೇನುಗಳು ಇರುವುದು ಕಂಡು ಬಂದರೆ, ಅದು ರಸ ಹೀರುವ ಹೇನುಗಳಿಂದ ಆದ ತೊಂದರೆ ಇರಬಹುದು. ಅದೇ ರೀತಿಯಲ್ಲಿ ತೊಟ್ಟನ್ನು ತೆಗೆದು ತೆಗೆದು ನೋಡಿದಾಗ ಏನಾದರೂ ಸೂಜಿಯಿಂದ ಚುಚ್ಚಿದ ಗುರುತುಗಳು ಕಂಡು ಬಂದರೆ ಅದೂ ಹೇನು ಇಲ್ಲವೇ ನುಶಿಯಿಂದಾದ ತೊಂದರೆ. ಇನ್ನೂ ಕೆಲವು ಕಾಯಿಗಳ ತೊಟ್ಟು ತೆಗೆದು ನೋಡಿದಾಗ ಸಲ್ಪ ದೊಡ್ದ ಗಾತ್ರದ ಗಾಯಗಳು ಕಾಣಸಿಗುತ್ತವೆ. ಇದೂ ಸಹ ಒಂದು ರಸ ಹೀರುವ ಕೀಟದ ತೊಂದರೆ. ಯಾವಾಗಲೂ ಕೀಟಗಳು ಎಳೆ ಭಾಗವನ್ನು ಚುಚ್ಚಿ ಹಾನಿ ಮಾಡುತ್ತವೆ. ಆದ ಕಾರಣ ತೊಟ್ಟಿನ ಭಾಗವನ್ನು ಪರೀಕ್ಷಿಸಬೇಕು.
 
 
ಎಲ್ಲಾ ಅಡಿಕೆಯ ಮಿಡಿ ಉದುರುವುದಕ್ಕೆ ಕೀಟ, ಶಿಲೀಂದ್ರಗಳೇ ಕಾರಣವಲ್ಲ. ಕೆಲವೊಮ್ಮೆ ಪರಾಗಸ್ಪರ್ಶ ಕ್ರಿಯೆಯು ಸಮರ್ಪಕವಾಗಿ ನಡೆಯದೆ ಉದುರುವುದಿದೆ. ಗಾಳಿ ಮತು ಕೀಟಗಳಿಂದ ಪರಾಗಸ್ಪರ್ಶ ಹೊಂದುವ ಅಡಿಕೆಗೆ ವಾತಾವರಣದ ಅನುಕೂಲವೂ ಅಗತ್ಯ. ಅದು ಲಭ್ಯವಾಗದೇ ಉದುರುವುದು ಎಲ್ಲಕ್ಕಿಂತ ಹೆಚ್ಚು ಇರುತ್ತದೆ.
 
 
ಕೆಲವು ಉದುರಿದ ಅಡಿಕೆಯ ತೊಟ್ಟಿನ ಭಾಗದಲ್ಲಿ ಬೆಂದಂತಃ ಚಿನ್ಹೆ ಕಂಡು ಬಂದರೆ ಇದು ಶಿಲೀಂದ್ರದಿಂದ ಉಂಟಾಗುವ ಸಮಸ್ಯೆ. ಯಾವಗಲೂ ಮಿಡಿ ಕಾಯಿ ಉದುರಿದ ತಕ್ಷಣವೇ ಅದನ್ನು ಈ ರೀತಿ ಪರೀಕ್ಷಿಸಬೇಕು. ತಡವಾದರೆ ಬಿದ್ದಲ್ಲೇ ಅದಕ್ಕೆ ಬೇರೆ ಶಿಲೀಂದ್ರ ಸೋಂಕು ತಗಲಬಹುದು.
ಕೆಲವು ಉದುರಿದ ಅಡಿಕೆಯನ್ನು ಒಡೆದು ನೋಡಿದರೆ ಒಳಗೆ ಬಂಜೆ ಅಡಿಕೆಯ ತರಹದ ತಿರುಳು ಕಾಣುತ್ತದೆ. ಇಂಥಃ ಅಡಿಕೆಯಲ್ಲಿ ತಿರುಳು ಸರಿಯಾಗಿ ಕೂಡಿರುವುದಿಲ್ಲ. ಅಪಕ್ವ ಬೆಳವಣಿಗೆಯ ಕಾಯಿಗಳು ಅರ್ಧದಲ್ಲೇ ಉದುರುತ್ತವೆ.
ಕೆಲವು ಅಡಿಕೆ ಮಿಡಿಗಳು ಬೆಳೆಯುವ ಹಂತದಲ್ಲಿ ಬುಡ ಭಾಗ ಒಡೆದುಕೊಂಡು ಉದುರುತ್ತದೆ. ಹೆಚ್ಚಾಗಿ ಎಳೆಯ ಮರದಲ್ಲಿ ಈ ಸಮಸ್ಯೆ ಜಾಸ್ತಿ, ಮರಕ್ಕೆ ಕೆಲವೊಂದು ಶಕ್ತಿಯ ಕೊರತೆಯಿಂದಲೂ ಹೀಗಾಗುವುದಿದೆ.
 
 
ಅಡಿಕೆ ಮರಗಳಿಗೆ ಬೆಳೆ ಸಂರಕ್ಷಣೆಗಾಗಿ ಬೇಸಿಗೆಯ ಆರ್ದ್ರ ವಾತಾವರಣ ಇರುವಾಗ ಹೂ ಗೊಂಚಲಿಗೆ ಒಮ್ಮೆ ಹೇನು, ನುಶಿ ನಾಶಕವನ್ನು ಸಿಂಪರಣೆ ಮಾಡುವುದು ಸೂಕ್ತ. ಇದಲ್ಲದೇ ಇನ್ನೊಮ್ಮೆ ಮ್ಯಾಂಕೋಜೆಬ್ ಝಡ್ 78 ಅನ್ನು ಸಿಂಪರಣೆ ಮಾಡಬೇಕು. ಇವೆರಡನ್ನೂ ಮಿಶ್ರಣ ಮಾಡಿ ಸಿಂಪರಣೆ ಮಾಡಕೂಡದು. ಹೇನು, ನುಶಿಗಳಿಗೆ ಡೈಕೋಫಾಲ್ ಕೀಟನಾಶಕ ಪರಿಣಾಮಕಾರಿ. ಇನ್ನೇನು ಮಳೆಗಾಲ ಬರುವ ಸಮಯದಲ್ಲಿ ಮರದ ಬುಡದ ಮಣ್ಣಿನ ರಸ ಸಾರವನ್ನು ಪರೀಕ್ಷಿಸಿ ಅದನ್ನು ತಟಸ್ಥೀಕರಣ ಗೊಳಿಸುವುದಕ್ಕಾಗಿ ಕ್ರಮ ಕೈಗೊಳ್ಳಬೇಕು. ರಸಸಾರ ಹುಳಿಯಾಗಿದ್ದರೆ ಚಿಲ್ಲೇಟೆಡ್ ಕ್ಯಾಲ್ಸಿಯಂ ಮತ್ತು ಬೋರಾನನ್ನು ಮಿಶ್ರಣ ಮಾಡಿ ಮಣ್ಣಿಗೆ ಸೇರಿಸಬೇಕು. ಅಥವಾ ಮರಕ್ಕೆ ಸಿಂಪಡಿಸಬೇಕು. ಆ ನಂತರ ಮೂರು ನಾಲ್ಕು ದಿನ ಬಿಟ್ಟು ಗೊಬ್ಬರ, ಸೂಕ್ಷ್ಮ ಪೋಷಕಾಂಶಗಳನ್ನು ಕೊಡಬಹುದು. ಯಾವಾಗಲೂ ಅಡಿಕೆ ತೋಟದ ಮಣ್ಣಿನ ಆರೋಗ್ಯದ ಮೇಲೆ ಮರದ ಆರೋಗ್ಯ ನಿಂತಿರುತ್ತದೆ. ಅದನ್ನು ಸರಿಪಡಿಸಿಕೊಂಡರೆ ಮರಕ್ಕೆ ರೋಗ ಕೀಟ ಭಾಧೆ ಕಡಿಮೆ.
ರಾಧಾಕೃಷ್ಣ ಹೊಳ್ಳ
[email protected]

LEAVE A REPLY

Please enter your comment!
Please enter your name here