‘ಉಗ್ರ’ಸವಾರಿ

0
360

 
-ವಿನಾಯಕ ಭಟ್ ಬ್ರಹ್ಮೂರು
ಫ್ರಾನ್ಸ್​ನಲ್ಲಿ ಬ್ಯಾಸ್ಟಿಲ್ ಡೇ ಆಚರಣೆಯ ಸಂಭ್ರಮ. ರಾಷ್ಟ್ರೀಯ ದಿನಾಚರಣೆಯ ಸಡಗರ. ಆದ್ರೆ ಕೆಲವೇ ಸಮಯದಲ್ಲಿ ಅಲ್ಲಿ ನಡೆಯೋ ದುರಂತ ಇಡೀ ಸಿಟಿಯನ್ನ ತಲ್ಲಣಗೊಳಿಸುತ್ತೆ. ಒಬ್ಬನೇ ಒಬ್ಬ ಇಸಿಸ್ ಉಗ್ರ ನೂರಾರು ಮಂದಿಯನ್ನ ಬಲಿ ತೆಗೆದುಕೊಳ್ತಾನೆ. ಹಬ್ಬದಾಚರಣೆ ಮಾಯವಾಗಿ ಸೂತಕದ ಛಾಯೆ ಆವರಿಸಿಕೊಳ್ಳುತ್ತೆ. ಅಂದ ಹಾಗೆ ಆ ಉಗ್ರಗಾಮಿ ನಡೆಸಿದ ಭೀಕರ ಕೃತ್ಯ ಟ್ರಕ್ ಅಟ್ಯಾಕ್..!
 
france_terr attack
 
 
ಅನಿರೀಕ್ಷಿತ ದಾಳಿಗೆ ‘ನೈಸ್’ ತಲ್ಲಣ!
ಒಂದು ದುರಂತದ ನೆನಪು ಇನ್ನೂ ಕಣ್ಣ ಮುಂದೆ ಇರುವಾಗ್ಲೇ ಫ್ರಾನ್ಸ್ ಜನರಿಗೆ ಮತ್ತೊಂದು ಆಘಾತ ಎದುರಾಗಿದೆ. ಗುರುವಾರ ರಾತ್ರಿ ಇಸಿಸ್ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಉಗ್ರರ ಅನಿರೀಕ್ಷಿತ ದಾಳಿಗೆ ನೈಸ್ ಸಿಟಿ ಅಕ್ಷರಶಃ ನಲುಗಿ ಹೋಗಿದೆ.
ಹೌದು ಫ್ರಾನ್ಸ್​ನಲ್ಲಿ ಮತ್ತೆ ಉಗ್ರರ ಆರ್ಭಟ ನಡೆದಿದೆ. ನೈಸ್ ಸಿಟಿಯಲ್ಲಿ ಸಾರ್ವಜನಿಕರ ಮೇಲೆ ಭೀಕರ ದಾಳಿ ನಡೆಸಿದ್ದಾರೆ. ಟ್ರಕ್ ದಾಳಿಗೆ ತತ್ತರಿಸಿದ ಜನ ದಿಕ್ಕಾಪಾಲಾಗಿ ಓಡಿದ್ದಾರೆ. ದಾಳಿ ಶುರುವಾಗ್ತಿದ್ದಂತೆ ಇಲ್ಲಿನ ಪರಿಸ್ಥಿತಿಯೇ ಬದಲಾಗಿ ಹೋಗಿದೆ. ಕೆಲಕಾಲ ಇಲ್ಲಿ ಮೊಳಗಿದ್ದು ಪ್ರಾಣಭೀತಿಯ ಚೀತ್ಕಾರ, ಮಾರಣಾಂತಿಕ ಕೂಗು, ಮಹಿಳೆಯರ ಚೀರಾಟ..’
 
 
 
2 ಕಿ.ಮೀ.ವರೆಗೂ ಸಂಚರಿಸಿತು ಸ್ಫೋಟಕ ತುಂಬಿದ್ದ ಟ್ರಕ್!
ಅದು ರಾತ್ರಿ ಸುಮಾರು 11ರ ಸಮಯ. ಇದ್ದಕ್ಕಿದ್ದಂತೆ ವೇಗವಾಗಿ ಬಂದ ಟ್ರಕ್ಕೊಂದು ಜನನಿಬಿಡ ಪ್ರದೇಶಕ್ಕೆ ನುಗ್ಗಿದೆ. ಅಪಾರ ಪ್ರಮಾಣದ ಸ್ಫೋಟಕಗಳು ಈ ಟ್ರಕ್​ನಲ್ಲಿದ್ವು. ರಸ್ತೆಯ ಬದಿಗಳಲ್ಲಿ ನೆರೆದಿದ್ದ ಜನಗಳ ಮೇಲೆ ಟ್ರಕ್ ಎರಗಿದೆ. ಇವ್ರ ಅಟ್ಯಾಕ್ ಯಾವ ಪ್ರಮಾಣದಲ್ಲಿತ್ತು ಅಂದ್ರೆ ಬರೋಬ್ಬರಿ 2ಕಿಮೀ ತನಕ ಡ್ರೈವರ್ ಎರಾಽಬಿರಿಽ ಟ್ರಕ್ ಚಲಾಯಿಸಿದ್ದಾನೆ.
 
ಟ್ರಕ್ ದಾಳಿಗೆ ಸಿಲುಕಿದ ಜನ ಚೀರಾಡುತ್ತಾ ಓಟಕ್ಕಿತ್ತಿದ್ದಾರೆ. ನೆರೆದ ಗುಂಪು, ಸದಸ್ಯರ ಸಮೇತ ಬಂದಿದ್ದ ಕುಟುಂಬ ಎಲ್ಲವೂ ಒಮ್ಮೆಲೇ ಛಿದ್ರಛಿದ್ರವಾಗಿದೆ. ಸಿಕ್ಕ ಸಿಕ್ಕಲ್ಲಿ ಓಡಿದ್ದಾರೆ. ಕೆಲನಿಮಿಷದಲ್ಲಿ ನೈಸ್ ಸಿಟಿ ಅಲ್ಲೋಲಕಲ್ಲೋಲವಾಗಿದೆ.
 
ಒಂದೆಡೆ ಫ್ರಾನ್ಸ್​ನಲ್ಲಿ ರಾಷ್ಟ್ರೀಯ ದಿನಾಚರಣೆಯ ಸಂಭ್ರಮ. ನೈಸ್ ನಗರದ ರಿವೀರಾ ಬೀಚ್ ರೆಸಾರ್ಟ್ ಬಳಿ ಅದ್ಧೂರಿ ಸಂಭ್ರಮಾಚರಣೆ ನಡಿತಿತ್ತು. ಬ್ಯಾಸ್ಟಿಲ್ ಡೇ ಪ್ರೋಗ್ರಾಮ್ ಕಳೆಗಟ್ಟಿತ್ತು. ಆದ್ರೆ ಇಂತಹ ಆಘಾತ ಎದುರಾಗತ್ತೆ ಅಂತ ಇಲ್ಲಿ ನೆರೆದಿದ್ದೋರಿಗೆ ಆಗ ಗೊತ್ತಿರ್ಲೇ ಇಲ್ಲ. ಅಪಾಯದ ಸಣ್ಣದೊಂದು ಮುನ್ಸೂಚನೆ ಕೂಡ ಇರ್ಲಿಲ್ಲ. ಸಿಡಿಮದ್ದು ಪ್ರದರ್ಶನ ನಡೆಯೋ ಸಮಯದಲ್ಲೇ ಅಲರ್ಟ್ ಆಗುವ ಉಗ್ರ ಟ್ರಕ್ ಓಡಿಸಿಕೊಂಡು ಬಂದಿದ್ದ. ಉಗ್ರಗಾಮಿ ಚಾಲಕನ ಕೃತ್ಯ ಈಗ ಹಲವರನ್ನ ಬಲಿ ತೆಗೆದುಕೊಂಡಿದೆ.
 
france_terr attack1
 
80 ಮಂದಿ ಸಾವು, 100ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರ!
ಪ್ರಾಣಭಯದಿಂದ ಎಷ್ಟೋ ಜನ ತಪ್ಪಿಸಿಕೊಂಡಿರ್ಬೋದು. ಆದ್ರೆ ಉಗ್ರರ ಪೂರ್ವ ಯೋಜಿತ ಪ್ಲಾನ್ ಇಲ್ಲಿ ಮತ್ತೆ ಪರಿಣಾಮ ಬೀರಿದೆ. ನೂರಾರು ಜನಗಳ ಮೇಲೆ ಟ್ರಕ್ ನುಗ್ಗಿದೆ. ಈ ದಾಳಿಯಲ್ಲಿ 100ಕ್ಕೂ ಹೆಚ್ಚು ಮಂದಿ ಗಾಯಾಳುಗಳಾಗಿದ್ದಾರೆ.ಕೆಲವರು ಗಂಭೀರ ಸ್ಥಿತಿಯಲ್ಲಿದ್ದಾರೆ. 80 ಮಂದಿ ಬಲಿಯಾಗಿದ್ದಾರೆ. ರಾತ್ರೋರಾತ್ರಿ ಮಾರಣ ಹೋಮ ನಡೆದಿದೆ.
 
 
ಇದೀಗ ಈ ಘಟನೆಯಿಂದ ನೈಸ್ ನಗರ ಅಕ್ಷರಶಃ ತತ್ತರಿಸಿ ಹೋಗಿದ್ದು, ಸದಾಕಾಲ ಜನರಿಂದ ತುಂಬಿ ತುಳುಕುತ್ತಿದ್ದ ಖ್ಯಾತ ಬೀಚ್ ರೆಸಾರ್ಟ್​ನಲ್ಲಿ ಸೂತಕದ ಛಾಯೆ ಆವರಿಸಿದೆ. ಬೀಚ್ ನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವ ಹೆಣಗಳು ಒಂದೆಡೆಯಾದರೆ ಸ್ನೇಹಿತರು ಮತ್ತು ಸಂಬಂಧಿಕರ ಸಾವಿನಿಂದಾಗಿ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಘಟನೆಯಲ್ಲಿ ಗಾಯಗೊಂಡವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
 
 
ಇನ್ನು ಟ್ರಕ್ ಚಲಾವಣೆ ಮಾಡ್ತಿದ್ದ ಉಗ್ರಗಾಮಿ 2 ಕಿಲೋಮೀಟರ್ ತನಕ ನುಗ್ಗಿಸಿ ದಾಳಿ ಮಾಡಿದ್ದಲ್ಲದೇ ಗುಂಡಿನ ದಾಳಿಯನ್ನೂ ನಡೆಸಿದ್ದಾನೆ. ಪೊಲೀಸರು ಟ್ರಕ್ ಮೇಲೆ ದಾಳಿ ನಡೆಸುತ್ತಿದ್ದಂತೆ ತನ್ನ ಕೈನಲ್ಲಿದ್ದ ಬಂದೂಕಿನಿಂದ ಗುಂಡಿನ ಮಳೆಗರೆದಿದ್ದಾನೆ ಅಂತ ಹೇಳಲಾಗ್ತಿದೆ. ಆದ್ರೆ ಈ ಭೀಕರ ದಾಳಿಯನ್ನ ಸಂಘಟಿಸಿದ ಉಗ್ರಗಾಮಿ ಡ್ರೈವರ್​ನ ಹೊಡೆದುರುಳಿಸುವಲ್ಲಿ ಕೊನೆಗೂ ಫ್ರಾನ್ಸ್ ಸೇನೆ ಸಫಲವಾಗಿದೆ. ಟ್ರಕ್​ನಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಗ್ರೆನೇಡ್​ಗಳು ತುಂಬಿಕೊಂಡಿದ್ವು ಅನ್ನೋದು ಕೂಡ ಬೆಳಕಿಗೆ ಬಂದಿದೆ. ಈತನನ್ನ ಹತ್ಯೆಗೈಯುವ ಮೂಲಕ ಮತ್ತಷ್ಟು ಅಪಾಯವನ್ನ ತಡೆದಿದ್ದಾರೆ ಅಂತಾನೇ ಹೇಳಬೇಕು. ಜೊತೆಗೆ ಟ್ರಕ್​​ನಲ್ಲಿದ್ದ ಭಾರೀ ಪ್ರಮಾಣದ ಗ್ರೆನೇಡ್ ಮತ್ತು ಸ್ಫೋಟಕಗಳ​ನ್ನ ವಶಪಡಿಸಿಕೊಳ್ಳಲಾಗಿದೆ. ಅಲ್ದೇ ಚಾಲಕನ ಐಡಿ ಕಾರ್ಡ್​​ನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ.
 
 
 
ಉಗ್ರರ ದಾಳಿಗೆ ವಿಶ್ವದಾದ್ಯಂತ ತೀವ್ರ ಖಂಡನೆ ವ್ಯಕ್ತವಾಗ್ತಿದೆ. ನೈಸ್ ನಗರದಲ್ಲಿ ದಾಳಿ ನಡೆಸಿದ ವಿಚಾರ ತಿಳಿಯುತ್ತಿದ್ದಂತೆ ಫ್ರಾನ್ಸ್ ಅಧ್ಯಕ್ಷ ಹೊಲಾಂಡೆ ತುರ್ತು ಸಭೆ ಕರೆದಿದ್ದು, ಭದ್ರತಾ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಘಟನಾ ಪ್ರದೇಶ ಸೇರಿದಂತೆ ದೇಶಾದ್ಯಂತ ತೀವ್ರ ಕಟ್ಟೆಚ್ಚರದಿಂದ ಇರುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಘಟನಾ ಪ್ರದೇಶದಲ್ಲಿ ಫ್ರಾನ್ಸ್ ರಕ್ಷಣಾ ಪಡೆಗಳು ಕಾರ್ಯಾಚರಣೆಯನ್ನ ಮುಂದುವರೆಸಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಸೇರಿದಂತೆ ವಿಶ್ವದ ಹಲವಾರು ನಾಯಕರು ಖಂಡನೆ ವ್ಯಕ್ತಪಡಿಸಿದ್ದಾರೆ.
 
 
 
ಇದೇ ಮೊದಲಲ್ಲ!
ಹಾಗೆ ನೋಡಿದ್ರೆ ಫ್ರಾನ್ಸ್​ನಲ್ಲಿ ಉಗ್ರರ ಅಟ್ಟಹಾಸ ಇದೇ ಮೊದಲೇನಲ್ಲ. ಇದಕ್ಕೂ ಮುಂಚೆ ಸಾಕಷ್ಟು ಬಾರಿ ಇಂತಹ ಅವಘಡಗಳು ನಡೆದಿದೆ. ಸುಮಾರು 8 ತಿಂಗಳ ಹಿಂದೆ ಫ್ರಾನ್ಸ್ ರಾಜಧಾನಿಯಲ್ಲಿ ನಡೆದಿದ್ದ ಘಟನೆಯನ್ನ ಯಾರೂ ಮರೆಯುವಂತಿಲ್ಲ. 2008ರ ನವೆಂಬರ್‌ನಲ್ಲಿ ಮುಂಬೈ ಮೇಲೆ ಭಯೋತ್ಪಾದಕರು ನಡೆಸಿದ್ದ ದಾಳಿ ಪ್ರಕರಣವನ್ನೇ ಹೋಲುವ ಘಟನೆಯಾಗಿತ್ತದು.
 
 
ಫ‌ುಟ್‌ಬಾಲ್‌ ಮೈದಾನ, ಸಂಗೀತ ಸಭಾಂಗಣ, ಜನನಿಬಿಡ ಉಪಹಾರ ಮಂದಿರ, ಬಾರ್‌ಗಳ ಮೇಲೆ ಆತ್ಮಾಹುತಿ ಬಾಂಬ್‌ ಹಾಗೂ ಗುಂಡಿನ ದಾಳಿ ನಡೆದಿತ್ತು. ಪ್ಯಾರಿಸ್​ನ 7 ಕಡೆ ಸರಣಿ ಬಾಂಬ್ ಸ್ಫೋಟ ಸಂಭವಿಸಿ 160ಕ್ಕೂ ಹೆಚ್ಚು ಜನರು ಹತ್ಯೆಯಾಗಿದ್ದರು. ಫುಟ್ಬಾಲ್ ಪಂದ್ಯ ವೀಕ್ಷಿಸಲು ಬಂದಿದ್ದ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್​ ಹೊಲಾಂಡೆ ಅದೃಷ್ಟವಾತ್ ಪ್ರಾಣಾಪಾಯದಿಂದ ಪಾರಾಗಿದ್ರು. ಈ ದಾಳಿಯಲ್ಲಿ 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ರು.
 
 
ನವೆಂಬರ್ ನಂತರ ಈಗ ಮತ್ತೆ ಫ್ರಾನ್ಸ್​ನಲ್ಲಿ ರಕ್ತದೋಕುಳಿ ಹರಿದಿದೆ. ನಗರದ ಪ್ರಮುಖ ರಸ್ತೆಯಲ್ಲಿ 80 ಕ್ಕೂ ಹೆಚ್ಚು ಮಂದಿ ಶವವಾಗಿ ಬಿದ್ದಿದ್ದಾರೆ. ದೇಶದೆಲ್ಲೆಡೆ ಕಟ್ಟೆಚ್ಚರ ವಹಿಸಲಾಗ್ತಿದೆ. ಕಳೆದ ನವೆಂಬರ್​ನಲ್ಲಿ ಘೋಷಿಸಿದ್ದ ತುರ್ತು ಪರಿಸ್ಥಿತಿಯನ್ನ ಇನ್ನೂ ಮೂರು ತಿಂಗಳ ಅವಧಿಗೆ ವಿಸ್ತರಿಸಲಾಗಿದೆ. ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ 10000 ಹೆಚ್ಚುವರಿ ಸಿಬ್ಬಂದಿಯನ್ನ ನಿಯೋಜಿಸಲಾಗುತ್ತೆ ಅನ್ನೋದನ್ನ ಅಧ್ಯಕ್ಷ ಹೊಲಾಂಡೆ ಖಾತ್ರಿಪಡಿಸಿದ್ದಾರೆ.
 
 
ಇನ್ನು ಉಗ್ರಗಾಮಿ ಚಾಲಕ ಫ್ರಾನ್ಸ್​​-ಟ್ಯುನಿಷಿಯಾ ಮೂಲದ ವ್ಯಕ್ತಿ ಅನ್ನೋದು ತಿಳಿದು ಬಂದಿದೆ. ಈ ಭೀಕರ ದಾಳಿ ಹೊಣೆಯನ್ನ ಪ್ಯಾರಿಸ್ ದಾಳಿ ಮಾಡಿದ್ದ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆ ಹೊತ್ತಿದ್ದು, ಹೋರಾಟದಲ್ಲಿ ಸತ್ತವನು ತನ್ನ ಪಡೆಯವನೇ ಎಂದು ತನ್ನ ವೆಬ್​ಸೈಟ್​ನಲ್ಲಿ ಹೇಳಿಕೊಂಡಿದೆ. ಅಲ್ಲದೆ ಇಂತಹ ಹಲವು ದಾಳಿಗಳನ್ನು ಸಂಘಟಿಸುವುದಾಗಿ ಎಚ್ಚರಿಕೆ ನೀಡಿದೆ.
 
ಫ್ರಾನ್ಸ್​ನ ನೈಸ್ ಸಿಟಿಯಲ್ಲಿ ಸಂಭವಿಸಿರೋ ದುರಂತ ಇಡೀ ದೇಶವನ್ನೇ ಆತಂಕಕ್ಕೀಡು ಮಾಡಿದೆ. ಒಂದೆಡೆ ಭದ್ರತೆಯನ್ನ ಜಾಸ್ತಿ ಮಾಡೋದ್ರ ಬಗ್ಗೆ ಚಿಂತನೆ ನಡೆಯುತ್ತಿದ್ರೂ ಇನ್ನೊಂದೆಡೆ ಇಸಿಸ್ ಉಗ್ರರು ಮತ್ತೆ ಬೆದರಿಕೆಯನ್ನೊಡ್ಡಿದ್ದಾರೆ. ಅತ್ತ ಫ್ರಾನ್ಸ್ ಸೇನೆ ಇಸೀಸ್ ಬೆನ್ನೆಲುಬನ್ನ ಮುರಿಯೋಕೆ ಯಾವ ರೀತಿ ಸಜ್ಜಾಗುತ್ತೆ ಅನ್ನೋದೆ ಇಲ್ಲಿ ಯಕ್ಷ ಪ್ರಶ್ನೆ.

LEAVE A REPLY

Please enter your comment!
Please enter your name here