ಈ ಸಮಯ ಕಾವ್ಯಮಯ ಕಾರ್ಯಕ್ರಮ ಉದ್ಘಾಟನೆ

0
278

 
ಉಡುಪಿ ಪ್ರತಿನಿಧಿ ವರದಿ
ಫೇಸ್ ಬುಕ್, ವಾಟ್ಸಪ್ ಸಂಸ್ಕೃತಿ ಇಂದಿನ ಯುವಜನತೆಯನ್ನು ಮಾನವೀಯ ಭಾವನೆಗಳಿಂದ ವಿಮುಖವಾಗುವಂತೆ ಮಾಡಿದೆ ಎಂದು ಖ್ಯಾತ ಚಿತ್ರ ಸಾಹಿತಿ ಜಯಂತಕಾಯ್ಕಿಣಿಯವರು ಅಭಿಪ್ರಾಯಪಟ್ಟರು.
 
 
ಅವರು ಹಿರಿಯಡಕದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾನವತಾ ಸಂಘದ ಆಶ್ರಯದಲ್ಲಿ ನಡೆದ ‘ಈ ಸಮಯ ಕಾವ್ಯಮಯ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
 
ಜಾತಿ, ಮತ, ರಾಜಕೀಯ ಮುಂತಾದ ವಿಷಗಳು ಮನಸ್ಸನ್ನು ಆಕ್ರಮಿಸಿಕೊಳ್ಳದೇ ಇರುವುದು ವಿದ್ಯಾರ್ಥಿಗಳ ಹೆಗ್ಗಳಿಕೆಯಾಗಿದೆ. ಆದರೆ, ಇಂತಹ ವಿಷಗಳಿಂದ ವಿದ್ಯಾರ್ಥಿಗಳು ಭ್ರಮನಿರಸನಗೊಂಡಾಗ ಪ್ರತಿಭಾ ಪಲಾಯನದ ಹಲವು ದೃಷ್ಟಾಂತಗಳು ನಮ್ಮ ಸುತ್ತಮುತ್ತ ನಡೆಯುತ್ತವೆ. ಬದುಕು ನೇರವಾದುದು ಮತ್ತು ಸರಳವಾದುದು, ಅದನ್ನು ಹಾಗೆಯೇ ಬದುಕಿದಾಗ ನಾವು ನಿಜವಾದ ಮನುಷ್ಯರಾಗಲು ಸಾಧ್ಯ. ‘ನಾವು ಮನುಷ್ಯರಾಗಿ ಹುಟ್ಟಿಲ್ಲ, ಬದಲಾಗಿ ಮನುಷ್ಯರಾಗಲು ಹುಟ್ಟಿದ್ದೇವೆ’ ಎನ್ನುವ ಕವಿವಾಣಿಯನ್ನು ಅವರು ಈ ಸಂದರ್ಭ ಸ್ಮರಿಸಿದರು. ಚಿತ್ರ ಸಾಹಿತಿಯಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡ ಕಾಯ್ಕಿಣಿಯವರು ಜನ ಸಿನಿಮಾ ಗೀತೆಗಳನ್ನು ರಚಿಸುವುದು ಸುಲಭವಾದ ಕೆಲಸ ಎಂದು ಭಾವಿಸುವುದು ಸಾಮಾನ್ಯ. ಆದರೆ, ಅದರ ಹಿಂದಿರುವ ಕ್ಲಿಷ್ಟತೆಗಳನ್ನು ತಾವು ರಚಿಸಿದ ಕೆಲವು ಗೀತೆಗಳ ಉದಾಹರಣೆಯನ್ನು ನೀಡಿ ವಿವರಿಸಿದರು.
 
 
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿ ಹಾಗೂ ಕಾಯ್ಕಿಣಿಯವರು ರಚಿಸಿದ ಚಿತ್ರಗೀತೆಗಳನ್ನು ಹಾಡಿ ರಂಜಿಸಿದರು. ವಿದ್ಯಾರ್ಥಿಗಳ ಕವಿತೆಗಳನ್ನೊಳಗೊಂಡ ಒಂದು ಕಿರುಪುಸ್ತಕ ‘ಕಾಲೇಜು ಕವಿತೆಗಳು’ ಎನ್ನುವ ಕವನ ಸಂಕಲನವನ್ನು ಕಾಯ್ಕಿಣಿಯವರು ಬಿಡುಗಡೆಗೊಳಿಸಿದರು.
 
 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಸೋಜನ್ ಕೆ. ಜಿ. ಇವರು ಮಾತನಾಡಿ ಕನ್ನಡ ಚಲನಚಿತ್ರ ಗೀತೆಗಳಿಗೆ ಮಾಧುರ್ಯ ಪ್ರಧಾನವಾದ ಒಂದು ಹೊಸ ಆಯಾಮವನ್ನು ಕೊಟ್ಟ ಕೀರ್ತಿ ಕಾಯ್ಕಿಣಿಯವರಿಗೆ ಸಲ್ಲುತ್ತದೆ ಎಂದರು. ಕಾರ್ಯಕ್ರಮದಲ್ಲಿ ಹಿರಿಯಡಕ ಕಾರ್ಪೋರೇಶನ್ ಬ್ಯಾಂಕ್ ಶಾಖಾ ಪ್ರಬಂಧಕರಾದ ವೆಂಕಟೇಶ್ ಕಾಮತ್ ಮತ್ತು ಕನ್ನಡ ಉಪನ್ಯಾಸಕಿ ಸುಜಾತ ಟಿ. ಉಪಸ್ಥಿತರಿದ್ದರು.
 
 
ಮಾನವತಾ ಸಂಚಾಲಕಿ ಆಶಾ ಬಾರಕೂರು ಸ್ವಾಗತಿಸಿ, ಕುಮಾರಿ ನಿಶ್ಮಿತಾ ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಕನ್ನಡ ಉಪನ್ಯಾಸಕರಾದ ರವಿಚಂದ್ರ ಬಾಯರಿ, ಕೊಕ್ಕರ್ಣಿ ಇವರು ನಿರ್ವಹಿಸಿದರು.

LEAVE A REPLY

Please enter your comment!
Please enter your name here