ಬೆಂಗಳೂರು ಪ್ರತಿನಿಧಿ ವರದಿ
ದೇಶಾದ್ಯಂತ ಭೀಕರ ಬರಗಾಲದಿಂದ ಬೆಂದ ಜನರಿಗೆ ಕೇಂದ್ರ ಹವಾಮಾನ ಇಲಾಖೆ ಶುಭಸುದ್ದಿ ನೀಡಿದೆ. ಈ ಬಾರಿ ದೇಶಾದ್ಯಂತ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕದಲ್ಲೂ ನಿರೀಕ್ಷೆಯಂತೆಯೇ ನಿಗದಿತ ಸಮಯದಲ್ಲೇ ಮುಂಗಾರು ಪ್ರವೇಶ ಮಾಡಲಿದ್ದು, ಕರ್ನಾಟಕದಾದ್ಯಂತ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ತಜ್ಞರು ಹೇಳಿದ್ದಾರೆ. ಕೇಂದ್ರ ಹವಾಮಾನ ಇಲಾಖೆಯ ಮೂಲಗಳ ಪ್ರಕಾರ ಸಾಮಾನ್ಯಕ್ಕಿಂತ ಈ ಬಾರಿ ಶೇ.4ರಷ್ಟು ಹೆಚ್ಚು ಮಳೆಯಾಗಲಿದ್ದು, ಕರ್ನಾಟಕದಲ್ಲಿ ಸಾಮಾನ್ಯವಾಗಿ 865 ಮಿ.ಮೀ ಮಳೆಯಾಗುತ್ತಿತ್ತು. ಆದರೆ ಈ ಬಾರಿ 900 ಮಿ.ಮೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.
ಇದೇ ಮೇ ತಿಂಗಳ ಅಂತ್ಯ ಅಥವಾ ಜೂನ್ ಆರಂಭದಲ್ಲಿ ಕೇರಳಕ್ಕೆ ಮಾನ್ಸೂನ್ ಮಾರುತಗಳು ಪ್ರವೇಶ ಮಾಡಲಿದ್ದು, ಕರಾವಳಿ ಮತ್ತು ಘಾಟ್ ಪ್ರದೇಶಗಳಲ್ಲಿ ಬಾರಿ ವರ್ಷಧಾರೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.