ಈಗಿನ ಸನ್ಯಾಸಾಶ್ರಮ ಜೀವನವು ನಿಜಾರ್ಥದ ಸಂಪ್ರಾದಯವನ್ನು ಕಳೆದುಕೊಂಡಿದೆ!

0
2799

ನಿತ್ಯ ಅಂಕಣ:೭೨-ತಾರಾನಾಥ್‌ ಮೇಸ್ತ,ಶಿರೂರು
ಭಗವಾನ್ ನಿತ್ಯಾನಂದರು ಆಡಂಬರವನ್ನು ಬಯಸದೆ ನಿರಾಡಂಬರದಲ್ಲಿ ಜೀವನ ಸಾಗಿಸಿದವರು. ಭೂಮಡಿಲು ಅವರಿಗೆ ಚಾಪೆಯಾಗಿತ್ತು, ಆಕಾಶವು ಹೊದಿಕೆಯಾಗಿತ್ತು. ಹಸಿದಾಗ ಉಣ್ಣುತ್ತಿದ್ದರು, ಮರದ ನೆರಳನ್ನು ಆಶ್ರಯಿಸಿಕೊಂಡು ವಿಶ್ರಮಿಸುತ್ತಿದ್ದರು. ಅವರಲ್ಲಿ ಹಣ ಕೊರತೆ ಇತ್ತೇ..! ಇಲ್ಲ, ಅವರೇ ಒಂದು ಧನಾಗಾರ ಆಗಿದ್ದರು. ಆದರೆ ಎಲ್ಲಿಯೂ ಗುರುದೇವರು ಆಡಂಬರವಾಗಿ ಜೀವನ ಕಳೆಯಲಿಲ್ಲ. ಗುರುದೇವರ ಯೋಗೀಜೀವನ ನಾಗರಿಕ ಸಮಾಜಕ್ಕೂ ಜೀವನ ಪಾಠ ಹಾಗೂ ಸಂತ ಸಮಾಜಕ್ಕೂ ಒಂದು ನೀತಿಸಾರವಾಗಿತ್ತು. ಸ್ವಾಮಿ ಪ್ರಭಾನಂದ ಅವರು ನಿತ್ಯಾನಂದರ ಭಕ್ತರಾಗಿದ್ದರು. ಅವರು ಒಮ್ಮೆ ಮಂಗಳೂರಿನಲ್ಲಿ ಇದ್ದರು. ಆವಾಗ ಅವರಿಗೆ ಗಣೇಶಪುರಿಗೆ ತೆರಳಿ, ಭಗವಾನ್ ನಿತ್ಯಾನಂದರ ದರ್ಶನ ಪಡೆಯಬೇಕೆಂಬ ಮನಸ್ಸಾಗುತ್ತದೆ. ಆವಾಗ ಅವರು ಗಣೇಶಪುರಿಗೆ ತೆರಳಲು, ಬೇಗನೆ ತಲುಪಲೆಂದು ಮಂಗಳೂರಿನಿಂದ ಮುಂಬೈಗೆ ವಿಮಾನದಲ್ಲಿ ಪ್ರಯಾಣ ಬೆಳೆಸುತ್ತಾರೆ. ಪುನಃ ಮುಂಬೈ ವಿಮಾನ ನಿಲ್ದಾಣದಿಂದ ಬಾಡಿಗೆ ಕಾರಿನಲ್ಲಿ ಗಣೇಶಪುರಿಗೆ ಬಂದು ತಲುಪುತ್ತಾರೆ. ಬಂದವರೆ ಗುರುಗಳಿರುವ ವೈಕುಂಠಧಾಮಕ್ಕೆ ಪ್ರವೇಶ ಪಡೆಯಲು ಬರುತ್ತಾರೆ.

ಸ್ವಾಮಿ ಪ್ರಭಾನಂದರು ವೈಕುಂಠಧಾಮದ ಪ್ರವೇಶ ಪಡೆಯಲು ಕೆಲವು ಹೆಜ್ಜೆಗಳ ದಾರಿ ಇರುವಾಗಲೇ, ಗುರುದೇವರು ಅವರನ್ನು ಗಮನಿಸುತ್ತಾರೆ. ಅವರನ್ನು ಗುರುದೇವರು ದೊಡ್ಡದಾದ ಸ್ವರ ಹೊರಡಿಸಿ ನಿಲ್ಲಿಸುತ್ತಾರೆ. “ಸನ್ಯಾಸಿಗಳು ಆಕಾಶ ಪ್ರಯಾಣ ಮಾಡುವುದು, ಇದೊಂದು ಒಳ್ಳೆಯ ಸನ್ಯಾಸವೇ…! ಅದೊಂದು ಸನ್ಯಾಸವೇ..? ಎಂದು ನಿತ್ಯಾನಂದರು ಕೋಪದಿಂದಲೇ ನುಡಿಯುತ್ತಾರೆ. ಗುರುದೇವರ ಭೋದಪ್ರದ ನುಡಿಗಳನ್ನು ಆಲಿಸಿಕೊಂಡ ಪ್ರಭಾನಂದರಿಗೆ ಕಾಲಿನ ಹೆಜ್ಜೆಗಳು ಮಂದೆ ಇಡಲು ಮನಸ್ಸು ಒಪ್ಪುದಿಲ್ಲ. ತಾವು ಮಾಡಿರುವ ತಪ್ಪಿನ ಅರಿವು, ಸ್ವಾಮಿ ಪ್ರಭಾನಂದರಿಗೆ ಆಗುತ್ತದೆ. ಪಶ್ಚತ್ತಾಪ ಭಾವನೆಯು ಅವರನ್ನು ಆವರಿಸುತ್ತದೆ. ಅಲ್ಲಿಯೇ ಒಂದು ಕಡೆ ಪ್ರಶಾಂತ ಸ್ಥಳ ಹಿಡಿದು ಏಕಾಂತ ಧ್ಯಾನದಲ್ಲಿ ಕುಳಿತುಕೊಳ್ಳುತ್ತಾರೆ.

ಎರಡು ವಾರಗಳ ಕಾಲ ಧ್ಯಾನ ಸ್ಥಿತಿಯಲ್ಲಿದ್ದ, ಸ್ವಾಮಿ ಪ್ರಭಾನಂದರು ಧ್ಯಾನ ಸಮಾಪನ ಮಾಡುತ್ತಾರೆ. ಆವಾಗ ಅವರಿಗೆ, ಗುರುದೇವರಿಂದ ಆಹ್ವಾನ ಬರುತ್ತದೆ. ಅವರ ಬಳಿ ತೆರಳಿ ವಿಧೇಯರಾಗಿ ನಿಲ್ಲುತ್ತಾರೆ. ಆಗ ನಿತ್ಯಾನಂದರು ಯಾವತ್ತೂ ದುಂದು ವೆಚ್ಚದ ಸುಖವನ್ನು ಸನ್ಯಾಸಿಗಳು ಅನುಭವಿಸಬಾರದು ಮತ್ತು ಬಯಸಬಾರದು. ಧನವು ಅಧಿಕವಾಗಿದ್ದರೆ, ಅದು ಜನರ ಸಂಪತ್ತು ಎಂದು ಭಾವಿಸಬೇಕು. “ಬಡವರ ಸಂಪತ್ತನ್ನು ಭೋಗಿಸುವುದು ಪಾಪ” ಆತನು ಭಿಕ್ಷುಕನಿಗಿಂತ ಕೆಳಮಟ್ಟದವನೆಂದು ತಿಳಿಯಬೇಕೆಂದು ಗುರುದೇವರು ಉಪದೇಶ ನೀಡುತ್ತಾರೆ. ಈಗಿನ ಸನ್ಯಾಸಾಶ್ರಮ ಜೀವನವು ನಿಜಾರ್ಥದ ಸಂಪ್ರಾದಯವನ್ನು ಕಳೆದುಕೊಂಡಿದೆ. ಸುಖ ಭೋಗದ ವಿಲಾಸಜೀವನದತ್ತ ವಾಲಿಕೊಂಡಿರುವುದು ಸತ್ಯ..!.

LEAVE A REPLY

Please enter your comment!
Please enter your name here