ದೇಶಪ್ರಮುಖ ಸುದ್ದಿರಾಜ್ಯವಾರ್ತೆ

ಇವರ ಸಾಧನೆ ಎಲ್ಲರಿಗೂ ಅಚ್ಚರಿ ತರುವಂತದ್ದು!

ಮೂಡುಬಿದಿರೆ: ಪ್ರಜ್ಞಾವಂತ ಜನರು ಜಾಗೃತರಾಗುವಂತಹ ಕಾರ್ಯವನ್ನು ಅಮರ್ ಕೋಟೆ ನೇತೃತ್ವದ ಜವನೆರ್ ಬೆದ್ರ ಸಂಘಟನೆ ಮಾಡುತ್ತಿದೆ. ಪ್ರತಿಯೊಬ್ಬರಲ್ಲಿ ಸ್ವಚ್ಚತೆಯ ಅರಿವು ಮೂಡಿಸುವುದರ ಜೊತೆಗೆ ಪರಿಸರ ಸ್ವಚ್ಛತೆಯ ಕಾರ್ಯವನ್ನು ಪರಿಣಾಮಕಾರಿಯಾಗಿ ನಡೆಸುವ ಸಂಘಟನೆ ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಾರತಭೂಷಣ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ಅಭಿಪ್ರಾಯಿಸಿದರು.
ಮೂಡುಬಿದಿರೆಯ ಪ್ರತಿಷ್ಠಿತ ಜವನೆರ್ ಬೆದ್ರ ಸಂಘಟನೆ ಜೈನಕಾಶಿಯ ಅಪರೂಪದ ಹಳೆಯ ಮೂರು ಬಸದಿಗಳ ಒಳ ಹೊರ ಭಾಗಗಳನ್ನು ಆವರಣ ಗೋಡೆಗಳನ್ನು ಸ್ವಚ್ಚಗೊಳಿಸಿತು. ತದನಂತರ ನಡೆದ ಸರಳ ಕಾರ್ಯಕ್ರಮದಲ್ಲಿ ಶ್ರೀಗಳು ಸಂಘಟನೆಗೆ ಆಶೀರ್ವಾದ ನೀಡಿದರು.
ಯಾವುದೇ ಫಲಾಪೇಕ್ಷೆಯಿಲ್ಲದೆ, ಸಮಾಜಮುಖೀ ಚಿಂತನೆಗಳೊಂದಿಗೆ ಬಿಸಿಲು ಮಳೆ ಚಳಿಯೆನ್ನದೆ ತನ್ನಪಾಡಿಗೆ ಸ್ವಚ್ಛತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜವನೆರ್ ಬೆದ್ರ ಸಂಘಟನೆ ಪ್ರತಿಯೊಬ್ಬರಿಗೂ ಆದರ್ಶವಾಗಿದೆ ಎಂದು ಹೇಳಿದರು.

ಸಾಥ್: ಮೂಡುಬಿದಿರೆ ಜೈನ್ ಮಿಲನ್, ಸರ್ವಮಂಗಳ ಮಹಿಳಾ ಮಂಡಳಿ, ಎನ್.ಸಿ.ಸಿ ಘಟಕ ಜೈನ್ ಹೈಸ್ಕೂಲ್ ಹಾಗೂ ಸ್ಥಳೀಯರು ಸಂಘಟನೆಯ ಸ್ವಚ್ಛತೆಗೆ ಸಾಥ್ ನೀಡಿದರು. ಬಸದಿಗಳ ಮೊಕ್ತೇಸರ ಆನಡ್ಕ ದಿನೇಶ್ ಕುಮಾರ್ , ನಾಗವರ್ಮ ಜೈನ್, ಜೈನ್ ಹೈಸ್ಕೂಲ್ ಅಧ್ಯಾಪಕರಾದ ನಿತೇಶ್ ಬಲ್ಲಾಳ್, ಜೈನ್ ಮಿಲನ್ ಅಧ್ಯಕ್ಷೆ ಶ್ವೇತಾ ಜೈನ್ ಸೇರಿದಂತೆ ಇತರರು ಇದ್ದರು.
ಮನೆ ಮನೆಗಳಲ್ಲಿ ಸ್ವಚ್ಚತೆಯಾಗಲಿ: ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ್ ಯೋಜನೆಯಿಂದ ಪ್ರೇರಣೆ ಪಡೆದ ಜವನೆರ್ ಬೆದ್ರ ಸಂಘಟನೆ ಮೂಡುಬಿದಿರೆಯಲ್ಲಿ ನಿರಂತರ 80ವಾರಗಳಿಂದ ಸ್ವಚ್ಛತಾ ಅಭಿಯಾನ ನಡೆಸುತ್ತಿದೆ. ಪ್ರತೀ ಮನೆ ಮನೆಗಳಲ್ಲಿ ಸ್ವಚ್ಛತೆಯ ಕಾರ್ಯ ಆಗಬೇಕಾಗಿದೆ ಎಂದು ಸಂಘಟನೆಯ ಸಂಸ್ಥಾಪಕ ಅಮರ್ ಕೋಟೆ ಕರೆನೀಡಿದರು.

ಫಲಾಪೇಕ್ಷೆಯಿಲ್ಲ: ಸರಕಾರದ ಅನುದಾನವಾಗಲೀ, ಇತರ ಧನಮೂಲವಾಗಲೀ ಪ್ರಾಯೋಜಕರಾಗಲೀ ಯಾರೂ ಇಲ್ಲದೆಯೇ ಕೇವಲ ಸಂಘಟನೆಯ ಸದಸ್ಯರ ಉತ್ಸಾಹದೊಂದಿಗೆ ನಿರಂತರ ಕ್ಲೀನ್ ಅಪ್ ಕಾರ್ಯಕ್ರಮ ನಡೆಯುತ್ತಿರುವುದು ಸರ್ವತ್ರ ಶ್ಲಾಘನೆಗೆ ಪಾತ್ರವಾಗಿದೆ. ಮೂಡುಬಿದಿರೆಯ ಪಟ್ಟಣ, ಒರ ಹೊರಭಾಗಗಳಲ್ಲಿ ಪ್ರತೀ ಭಾನುವಾರ ಸಂಘಟನೆಯ ಸದಸ್ಯರು ಸ್ವಚ್ಛತೆಯ ಕಾರ್ಯ ನಡೆಸುತ್ತಾ ಜಾಗೃತಿ ಮೂಡಿಸುತ್ತಿದ್ದಾರೆ. ಯಾವೊಂದು ದುರುದ್ದೇಶವೂ ಇಲ್ಲದೆ ನಿರಂತರ ಈ ರೀತಿಯ ಸ್ವಚ್ಛತಾ ಕಾರ್ಯ ನಡೆಸುವ ಮೂಡುಬಿದಿರೆಯ ಏಕೈಕ ಸಂಘಟನೆ ಇದೆಂಬ ಹೆಗ್ಗಳಿಕೆಯನ್ನು ಜವನೆರ್ ಬೆದ್ರ ಉಳಿಸಿಕೊಂಡಿದೆ.

ಪ್ರೇರಣೆ: ಜವನೆರ್ ಬೆದ್ರ ಸಂಘಟನೆಯಿಂದ ಪ್ರೇರಣೆ ಪಡೆದು ಇಂದು ಹಲವು ಸಂಘಟನೆಗಳು ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳುತ್ತಿದೆ. ಜವನೆರ್ ಬೆದ್ರ ಸಂಘಟನೆಯ ಮಾದರಿಯಲ್ಲಿಯೇ ಹಲವಾರು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಎಲ್ಲರಿಗೂ ಈ ಸಂಘಟನೆ ಪ್ರೇರಣ ಶಕ್ತಿಯಾಗಿರುವುದು ಉಲ್ಲೇಖನೀಯ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here