ಇವರ ಲೀಲೆಗೆ ಅವರು ದಂಗಾಗಿ ಹೋದರು!!!

0
698


ನಿತ್ಯ ಅಂಕಣ:೫೫-ತಾರಾನಾಥ್‌ ಮೇಸ್ತ,ಶಿರೂರು.
ಕಾಂಞಂಗಾಡು ಇಲ್ಲಿ ನಿತ್ಯಾನಂದ ಸ್ವಾಮಿಗಳಿಂದ ಗುಹೆ ರಚನೆಗಳ ಕಾಮಗಾರಿ ನಡೆಯುತ್ತಿರುವ ಸಮಯದಲ್ಲಿ ನಡೆದ ವಿಸ್ಮಯ ಘಟನೆ ಇದು. ಅಂದು ಮಳೆಗಾಲದ ಪ್ರಾರಂಭದ ದಿನಗಳು. ನಭೋಮಂಡಲದಲ್ಲಿ ಮೋಡಗಳ ಹೊದಿಕೆ ಆವರಿಸಿತ್ತು. ನಿತ್ಯಾನಂದರು ಅಲ್ಲಿದ್ದ ಬಂಡೆಯೊಂದಕ್ಕೆ ಒರಗಿ ಕುಳಿತು ವಿಶ್ರಮಿಸುತ್ತಿದ್ದರು. ನಿತ್ಯಾನಂದರು ಏಕಾಂತದಲ್ಲಿ ಇರುವ ಸಮಯ ನೋಡಿಕೊಂಡು ಓರ್ವ ವ್ಯಕ್ತಿಯು ಅವರಲ್ಲಿಗೆ ಬರುತ್ತಾನೆ. ಬಂದ ವ್ಯಕ್ತಿ ಒಂದು ತರಹ ವಾಚಾಳಿ. ಬಾಯಿ ಬಡುಕ ಸ್ವಭಾವದ ವ್ಯಕ್ತಿ. ಆತ ಬಂದವನೆ, ನಿತ್ಯಾನಂದರು ಕೇಳಿಸುಕೊಳ್ಳುವಂತೆ, ಗಟ್ಟಿ ಸ್ವರದಲ್ಲಿ “ನಿತ್ಯಾನಂದ ಸ್ವಾಮಿಗಳು, ಅಂತಹ ಶ್ರೇಷ್ಠ ಪುರುಷ ಹೌದಾದರೇ.. ನನಗೆ ದೇವರ ದರ್ಶನ ಮಾಡಿಸಲಿ ನೋಡುವಾ..?” ಅಹಂಭಾವದ ಆಗ್ರಹದಂತೆ ಹೇಳುತ್ತಾನೆ. ನಿತ್ಯಾನಂದರಿಗೆ ಅವನಾಡಿದ ಮಾತು ಸ್ವಷ್ಟವಾಗಿ ಕೇಳಿಸಿತು. ಅವರು ಏನನ್ನೂ ಪ್ರತಿಕ್ರಿಯೆ ನೀಡದೆ ಮೌನರಾಗಿಯೇ ಉಳಿದರು. ನನಗೆ ಏಕಾಂತವಾಗಿ ಇರಲು ಸ್ವಲ್ಪ ಸಮಯ ಬಿಡೆಂದು ನಿತ್ಯಾನಂದರು ಅವನಲ್ಲಿ ಕೇಳಿಕೊಂಡರು. ಆತನು ನಿತ್ಯಾನಂದರ ಸಹನೆಯನ್ನು ಕೆಣಕಿದ, ಉದ್ಧಟತನದ ವರ್ತನೆ ಮತ್ತೆ ತೋರಿಸಿದ.

ಚಿತ್ರ:ಅಂತರ್ಜಾಲಕೃಪೆ

ಆವಾಗ ನಿತ್ಯಾನಂದರು ಆತನು ಕೈಯಲ್ಲಿ ಹಿಡಿದುಕೊಂಡಿದ್ದ ಕೊಡೆಯನ್ನು ಎಳೆದು ಪಡೆದರು. ಕೊಡೆಯನ್ನು ಬಂದೂಕಿನಂತೆ ಹಿಡಿದು, ಆತನ ಕೈಗೆ ಗುರಿ ಇಟ್ಟಂತೆ ನಟಿಸಿದರು. ಅಷ್ಟಕ್ಕೆ ಆ ವ್ಯಕ್ತಿ ಕಿರುಚುತ್ತಾ ಸುಸ್ತಾದ, ಏನೋ ಗುಂಡೇಟಿನಿಂದ ಪೆಟ್ಟು ತಿಂದ ಗಾಯಾಳುವಿನಂತೆ ವರ್ತಿಸಿದ. ಆತನಿಗೆ ನೋವು ಹಾಗೆಯೇ ಉಳಿದುಕೊಂಡಿತು. ಹಾಗಾಗಿ ಆತ ಚಿಕಿತ್ಸೆ ಪಡೆಯಲು ಸರಕಾರಿ ಆಸ್ಪತ್ರೆಗೆ ದಾಖಲಾದ. ಆಸ್ಪತ್ರೆಯ ವೈದ್ಯರು ನಿತ್ಯಾನಂದರು ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದಾರೆ. ಸಾರ್ವಜನಿಕರು ಇವರಿಂದಾಗಿ ಭಯಭೀತರಾಗಿದ್ದಾರೆ. ಅಪಾಯಕಾರಿ ವ್ಯಕ್ತಿ ಇವರಾಗಿದ್ದಾರೆಂದು, ದೂರಿನ ವರದಿಯನ್ನು ಪೊಲೀಸ್ ಠಾಣೆಗೆ ಒಪ್ಪಿಸುತ್ತಾರೆ.

ಸರಕಾರಿ ವೈದ್ಯರು ನೀಡಿದ ದೂರಿನ ವಿಚಾರಣೆ ನಡೆಸಲು ನಿತ್ಯಾನಂದರನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಬಂದು, ಮ್ಯಾಜಿಸ್ಟ್ರೇಟರ ಮುಂದೆ ಹಾಜರುಪಡಿಸುತ್ತಾರೆ. ನ್ಯಾಯಾಲಯದಲ್ಲಿ ನಿತ್ಯಾನಂದರು ಬಂದಿರುವ ದೂರಿನಂತೆ, ನನ್ನಿಂದ ಹಾಗೆ ಏನು ಅಪರಾಧ ನಡೆದಿಲ್ಲವೆಂದು ಹೇಳಿಕೆ ನೀಡುತ್ತಾರೆ. ಅದಕ್ಕೆ ಯಾವುದಾದರೂ ಸಾಕ್ಷ್ಯಗಳಿವೆಯೇ..? ಎಂದು ಮ್ಯಾಜಿಸ್ಟ್ರೇಟರು ವಿಚಾರಿಸುತ್ತಾರೆ. ಆಗ ನಿತ್ಯಾನಂದ ಸ್ವಾಮಿಗಳು ನ್ಯಾಯಾಲಯದಲ್ಲಿ ಇರುವ ನಾಲ್ಕು ಕಂಬಗಳತ್ತ ತೋರಿಸಿ, ಅವುಗಳೇ ಪ್ರಮುಖ ಸಾಕ್ಷಿಗಳು..! ಎನ್ನುತ್ತಾರೆ. ನಿತ್ಯಾನಂದರ ಮಾತಿನ ಶೈಲಿಕಂಡು ವೈದ್ಯರು ನೀಡಿದ ದೂರು ಸಮರ್ಪಕವಾಗಿದೆ. ಸ್ವಾಮಿಗಳು ಮಾನಸಿಕ ಅಸ್ವಸ್ಥರು ಎಂದು ನಿರ್ಣಯಸಿ ಬಂಧಿಸಲು ಆದೇಶ ನೀಡುತ್ತಾರೆ.

ಸ್ವಲ್ಪ ಸಮಯ ಕಳೆದ ಬಳಿಕ, ನಿತ್ಯಾನಂದರು ಕರ್ತವ್ಯದಲ್ಲಿದ್ದ ಆರಕ್ಷಕ ಪೇದೆಯಲ್ಲಿ ನನಗೆ ತಡೆಯಲಾಗದ ಮೂತ್ರಬಾಧೆ ಕಾಡುತ್ತಿದೆ. ತುರ್ತಾಗಿ ಮೂತ್ರಿಸಬೇಕೆಂದು ಹೇಳುತ್ತಾರೆ. ಅವರಿಗೊಂದು ಮೂತ್ರ ಹಿಡಿಯಲು ಪರಿಕರ ಕೊಡಲಾಗುತ್ತದೆ. ಅದು ತಕ್ಷಣವೇ ತುಂಬಿ ಹೊರ ಹರಿಯಿತು. ಮತ್ತೊಂದು ಪಾತ್ರೆ ತಂದು ಕೊಡಲಾಯಿತು. ಅದೂ ತುಂಬಿತು. ಕೊನೆಗೆ ಮಣ್ಣಿನ ದೊಡ್ಡದಾದ ಕೊಡಪಾನ ನೀಡಲಾಗುತ್ತದೆ. ಅದು ಕೂಡ ತುಂಬಿ ತುಳುಕಿದಾಗ, ಆರಕ್ಷಕ ಪೇದೆ ಅಚ್ಚರಿಗೆ ಒಳಗಾಗುತ್ತಾನೆ. ಇವರು ‘ವ್ಯಕ್ತಿ ಅಲ್ಲ ಅತಿಮಾನುಷ ಶಕ್ತಿ’ ಅವನಿಗೆ ಅರಿವಾಗುತ್ತದೆ. ಕರ್ತವ್ಯದಲ್ಲಿದ್ದ ಆರಕ್ಷಕ ಪೇದೆ ಮ್ಯಾಜಿಸ್ಟ್ರೇಟರ ಬಳಿ ಹೋಗಿ, ಅವರ ಲೀಲಾಮೃತ ವಿವರಿಸಿದ. ಅವರನ್ನು ದಿಗ್ಭಂಧದಲ್ಲಿ ಇಡುವುದು ಕಷ್ಟಕರ ಎಂದು ಹೇಳಿದ. ಕೊನೆಗೆ ನಿತ್ಯಾನಂದರನ್ನು ಬಿಡುಗಡೆ ಮಾಡಲಾಯಿತು. ಗುಹೆಗಳ ಕೆಲಸ ನಡೆಯುವ ಸ್ಥಳದತ್ತ ನಿತ್ಯಾನಂದರು ಆಗಮಿಸಿದರು. ಕಾರ್ಮಿಕರಿಗೆ ಆ ದಿನದ ಕೂಲಿಯನ್ನು ವಿತರಿಸಿದರು.

ಅತ್ತ ಕಡೆ ಮತ್ತೊಂದು ಘಟನೆ ನಡೆದಿರುತ್ತದೆ. ನಿತ್ಯಾನಂದ ಸ್ವಾಮಿಗಳನ್ನು ಮಾನಸಿಕ ರೋಗಿ ಎಂದು ಘೋಷಣೆ ಮಾಡಿದ ಸರಕಾರಿ ವೈದ್ಯರು, ಮಧ್ಯಾಹ್ನದ ಊಟಕ್ಕೆಂದು ಮನೆಯತ್ತ ಹೋಗಿದ್ದರು. ಅಲ್ಲಿ ಅವರಿಗೆ ದಂಗಾಬೇಕಾದ ದೃಶ್ಯದ ದರ್ಶನವಾಗುತ್ತದೆ. ಅವರ ಪತ್ನಿ ಮನೆಯ ಕೊಠಡಿಯಲ್ಲಿ ನಗ್ನಳಾಗಿ ನೃತ್ಯ ಮಾಡುತ್ತಿರುವುದು ಕಂಡು ಬರುತ್ತದೆ. ಬೆಳಿಗ್ಗೆ ಕೆಲಸಕ್ಕೆ ಹೋರಡುವಾಗ ಸರಿ ಇದ್ದ ಹೆಂಡತಿ ಹೀಗಾದಳಲ್ಲಾ ಎಂದು ವೈದ್ಯರು ಪಶ್ಚಾತಾಪ ಪಡುತ್ತಾರೆ. ಹೆಂಡತಿಯ ಅಸಹ್ಯ ವರ್ತನೆಗೆ ಮಾನಸಿಕ ವ್ಯಾಧಿ ಬಾಧಿಸಿರುವುದು ಕಾರಣವೆಂದು ವೈದ್ಯರಿಗೆ ತಿಳಿದುಬರುತ್ತದೆ. ಅಲ್ಲಿಂದ ವೈದ್ಯರು ತಡಮಾಡದೆ ಆರಕ್ಷಕ ಠಾಣೆಗೆ ತೆರಳುತ್ತಾರೆ. ಅಲ್ಲಿ ನಿತ್ಯಾನಂದರು ಬಿಡುಗಡೆಯಾದ ವಿಷಯವು ತಿಳಿದು ಗುಹೆಗಳತ್ತ ಬರುತ್ತಾರೆ. ಅಲ್ಲಿ ನಿತ್ಯಾನಂದ ಸ್ವಾಮೀಜಿಗಳನ್ನು ಮೊದಲು ಕಾಣುತ್ತಾರೆ. ಅವರಲ್ಲಿ, “ಮಾನಸಿಕ ಅಸ್ವಸ್ಥ ಎಂದು ರೋಗ ತಿರ್ಮಾನ ಮಾಡಿ, ನಿಮ್ಮ ಮೇಲೆ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎಂದು ದೂರು ನೀಡಿದೆ. ನನ್ನಿಂದ ದೊಡ್ಡ ತಪ್ಪಾಗಿದೆ ಕ್ಷಮಿಸಬೇಕು. ನಿಮ್ಮನ್ನು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿಸಿದೆ. ನ್ಯಾಯಾಲಯದ ಕಟಕಟೆ ಹತ್ತಿಸಿದೆ. ದಯಾಮಾಡಿ ನನ್ನಿಂದಾದ ಮಹಾಪ್ರಮಾದಗಳಿಗೆ ಕ್ಷಮೆ ನೀಡಬೇಕೆಂದು ವೈದ್ಯರು ಅಂಗಲಾಚಿ ವಿನಂತಿಸುತ್ತಾರೆ. ದಯಾಗುಣದ ಕರುಣಾಸಿಂಧು ನಿತ್ಯಾನಂದರು ಕೈಯಾಡಿಸಿ ಕಳಿಸುತ್ತಾರೆ. ನಂತರ ವೈದ್ಯರ ಪತ್ನಿಯು ಮೊದಲಿನಂತೆ ಆಗುತ್ತಾಳೆ.

Advertisement

LEAVE A REPLY

Please enter your comment!
Please enter your name here