ಇವರ ಕಾರ್ಯಕ್ಕೆ ಶಿರಬಾಗಿ ನಮಿಸೋಣ…!

0
1302

ಮೂಡುಬಿದಿರೆ: ದೇಶವಾಸಿಗಳನ್ನು ʻಕೊರೊನಾʼ ಬಾಧಿಸುತ್ತಿದೆ…ಪ್ರಧಾನಿ ನರೇಂದ್ರ ಮೋದಿಯವರು ಅಂದು ʻಜನತಾ ಕರ್ಫ್ಯೂʼ ಆದೇಶಿಸುತ್ತಾರೆ. ಜನ ಪಾಲಿಸಿದ್ದರು. ತದನಂತರದ ದಿನಗಳಲ್ಲಿ ʻಲಾಕ್‌ ಡೌನ್‌ʼ… ಇದೀಗ ಮೂರನೇ ಹಂತದ ಲಾಕ್‌ ಡೌನ್‌ ನಡೆಯುತ್ತಿದೆ. ಜನತೆ ಅನೇಕಾನೇಕ ರೀತಿಯ ತೊಂದರೆಗಳನ್ನು ಅನಿವಾರ್ಯವಾಗಿ ಅನುಭವಿಸುತ್ತಿದ್ದಾರೆ. ದೇಶದ ಹಿತದೃಷ್ಠಿಯಿಂದ ಜನತೆಯ ಒಳಿತಿಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಕರೆಯಂತೆ ಲಾಕ್‌ ಡೌನ್‌ ಆದೇಶದ ಪಾಲನೆಯೂ ಆಗುತ್ತಿದೆ. ಯಾರೊಬ್ಬರೂ ಹಸಿದಿರಬಾರದು. ದುಡಿಯುವ ಕೈಗೆ ಕೆಲಸವಿಲ್ಲದಿದ್ದರೂ , ಸ್ವಾಭಿಮಾನೀ ಜೀವನ ಸಾಗಿಸುವ ಮಂದಿ ಹೊಟ್ಟೆಗೆ ಹಿಟ್ಟಿಲ್ಲದೆ ಉಳಿಯದಿರಲಿ ಎಂಬ ಮೋದಿಯವರ ಆಶಯವನ್ನು ಪಾಲಿಸುತ್ತಾ ಅದೆಷ್ಟೋ ಹಸಿದ ಹೊಟ್ಟೆಗೆ ಅನ್ನ ನೀಡುವ ಕಾರ್ಯವನ್ನು ಹಲವು ಸಂಘಟನೆಗಳು, ಸಮಾನ ಮನಸ್ಕರು ಸಮಾಜದುದ್ದಗಲದಲ್ಲಿ ಮಾಡುತ್ತಾ ಬಂದಿದ್ದಾರೆ…ಬರುತ್ತಿದ್ದಾರೆ. ಆ ಸಾಲಿನಲ್ಲಿದೆ ಮೂಡುಬಿದಿರೆಯ ಸಮಾನ ಮನಸ್ಕರ ಯುವ ಪಡೆ.

ಜವನೆರ್‌ ಬೆದ್ರ ಸಂಸ್ಥಾಪಕ ಅಮರ್‌ ಕೋಟೆ


ಜನತಾ ಕರ್ಫ್ಯೂ ನಂತರ ಲಾಕ್‌ ಡೌನ್‌ ಸಂದರ್ಭ ಅನೇಕ ಕುಟುಂಬಗಳಿಗೆ ದಿನಸಿ ಸೇರಿದಂತೆ ಅವಶ್ಯ ವಸ್ತು ಖರೀದಿ , ಹೊಂದಾಣಿಕೆ ಆರಂಭದ ದಿನಗಳಲ್ಲಿ ಕಷ್ಟ ಹಾಗೂ ಸಮಸ್ಯೆಯಾಗಿ ತಲೆದೋರಿತು. ಇಂತಹ ಸಂದರ್ಭದಲ್ಲಿ ಸಮಾಜಿಕ ತೊಂದರೆಯಾಗದಂತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಅಶಕ್ತರಿಗೆ ನೆರವು ನೀಡುವ ಉದ್ದೇಶವನ್ನಿಟ್ಟುಕೊಂಡು ಕಾರ್ಯೋನ್ಮುಖವಾಗಿರುವುದು ಮೂಡುಬಿದಿರೆಯ ಅಮರ್‌ ಕೋಟೆ ನೇತೃತ್ವದ ಜವನೆರ್‌ ಬೆದ್ರ ಸಂಘಟನೆ ; ಸಂಘಟನೆಯ ಕಾರ್ಯಕರ್ತರು.

ಸಂಘಟನೆಯ ಸದಸ್ಯರಿಂದ ಅವಶ್ಯ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್‌ ವಿತರಣೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪುರಸಭೆ ಹಾಗೂ ಪೊಲೀಸ್‌ ಇಲಾಖೆಯ ಸಹಯೋಗದೊಂದಿಗೆ ಪಟ್ಟಣದಾದ್ಯಂತ ಇರುವ ಅಂಗಡಿಗಳ ಮುಂಭಾಗದಲ್ಲಿ ಶಾಶ್ವತ ವೃತ್ತ ರಚನೆ, ಜಾಗೃತಿ ಕಾರ್ಯವನ್ನು ಮಾಡಿತು.ದಾನಿಗಳ ನೆರವಿನೊಂದಿಗೆ ೭೫೦ಕ್ಕೂ ಅಧಿಕ ಮನೆಗಳಿಗೆ ಆಹಾರ ಸಾಮಾಗ್ರಿಗಳ ಕಿಟ್‌ ವಿತರಣೆ ಮಾಡಿತು. ಸಂಘಟನೆಯ ಸದಸ್ಯರಾದ ರಂಜಿತ್‌ ಶೆಟ್ಟಿ, ನವೀನ್‌ ಕುಮಾರ್‌, ಶಿವಪ್ರಸಾದ್‌ ಅವಶ್ಯವಸ್ತುಗಳನ್ನು ಮನೆ ಮನೆಗೆ ತಲುಪಿಸಲು ವಾಹನ ನೀಡಿ ಸಹಕರಿಸಿದರು. ಇಷ್ಟೇ ಅಲ್ಲ…ಪಟ್ಟಣದುದ್ದಕ್ಕೂ ಇರುವ ಬೀದಿ ನಾಯಿಗಳಿಗೆ ನಿತ್ಯ ಆಹಾರನೀಡುವ ಮಾನವೀಯ ಕಾರ್ಯವೂ ಸಂಘಟನೆಯಿಂದಾಗುತ್ತಿದೆ. ಲಾಕ್‌ ಡೌನ್‌ ಸಂದರ್ಭ ಮೂರುವರೆ ಲಕ್ಷಕ್ಕೂ ಅಧಿಕ ಮೌಲ್ಯದ ಆಹಾರ ಸಾಮಾಗ್ರಿಗಳನ್ನು ಅವಶ್ಯವಿರುವವರಿಗೆ ಒದಗಿಸಿಕೊಟ್ಟ ಕೀರ್ತಿ ಈ ಸಂಘಟನೆಗೆ ಸಲ್ಲುತ್ತದೆ.

ಇವರ ಕಾರ್ಯ ಶ್ಲಾಘನಾರ್ಹ

ನವೀನ್‌ ಮನವಿ ಮಾಡಿದ್ದು ಹೀಗೆ…

ಮೂಡುಬಿದಿರೆ ಪ್ರೀತಿ ಗ್ರಾಫಿಕ್ಸ್‌ ಸಂಸ್ಥೆಯ ಮಾಲಕ ನವೀನ್‌ ಕುಮಾರ್‌ ಮೂಡುಬಿದಿರೆ ಲಾಕ್‌ ಡೌನ್‌ ಸಂದರ್ಭ ಮಾನವೀಯತೆ ಮೆರೆಯುವ ಕಾರ್ಯ ಮಾಡಿದ್ದಾರೆ. ಲಾಕ್‌ ಡೌನ್‌ ಆರಂಭದ ದಿನಗಳಲ್ಲಿ ಮೂಡುಬಿದಿರೆ ಪ್ರದೇಶಗಳಲ್ಲಿ ಅಗತ್ಯ ದಿನಸಿ ವಸ್ತುಗಳನ್ನು,ಔಷಧಿಗಳನ್ನು ಮನೆ ಮನೆಗೆ ತಲುಪಿಸುವ ಯೋಜನೆ ರೂಪಿಸಿದರು. ಸ್ವಂತ ವಾಹನ ಹೊಂದಿಲ್ಲದವರು, ಮಹಿಳೆಯರು,ವಯೋವೃದ್ಧರು ಇದರ ಪ್ರಯೋಜನ ಪಡೆಯಬಹುದು ಎಂದು ವಾಟ್ಸ್‌ ಆಪ್‌ ಮೂಲಕ ಸಂದೇಶ ನೀಡಿದರು. ಪೇಟೆಯಲ್ಲಿ ಜನದಟ್ಟಣೆಯನ್ನು ನಿವಾರಿಸಲು ಹಾಗೂ ಜನರ ಸುರಕ್ಷತೆಯ ದೃಷ್ಟಿಯಿಂದ ನಮ್ಮದೊಂದು ಅಳಿಲ ಸೇವೆ ಎಂಬ ಧ್ಯೇಯವನ್ನಿರಿಸಿ ಈ ಕಾರ್ಯವನ್ನು ಮಾಡಿದರು. ಸುಮಾರು ೧೮೫ಕ್ಕೂ ಅಧಿಕ ಮನೆಗಳಿಗೆ ವೈಯಕ್ತಿಕವಾಗಿ ತಮ್ಮ ವಾಹನದಲ್ಲಿ ಅವಶ್ಯವಸ್ತು ತಲುಪಿಸಿದರು. ನವೀನ್‌ ಅವರ ಈ ಕಾರ್ಯವನ್ನು ಕಂಡು ಅನೇಕ ಮಂದಿ ಸಹಾಯ ನೀಡಲು ಮುಂದಾದರು. ಆ ಪ್ರಕಾರ ದಾನಿಗಳ ನೆರವು ವಿವಿಧ ರೀತಿಯಲ್ಲಿ ಲಭಿಸಲಾರಂಭಿಸಿತು. ಮೂಡುಬಿದಿರೆಯ ಪ್ರತಿಷ್ಠಿತ ಜವನೆರ್‌ ಬೆದ್ರ ಸಂಘಟನೆಯ ಸದಸ್ಯರಾಗಿರುವ ನವೀನ್‌ , ಸಂಘಟನೆಯ ಸಂಸ್ಥಾಪಕ ಅಮರ್‌ ಜೊತೆ ಸೇರಿ ಲಾಕ್‌ ಡೌನ್‌ ನ ಮೂರೂ ಹಂತಗಳಲ್ಲಿ ಮನೆ ಮನೆಗೆ ಕಿಟ್‌ ನೀಡುವ ಅಭಿಯಾನದಲ್ಲಿ ತೊಡಗಿಕೊಂಡರು.

Advertisement
ನವೀನ್‌ ಕುಮಾರ್‌ ಮೂಡುಬಿದಿರೆ

ಫ್ರೀ ಡೋರ್‌ ಡೆಲಿವರಿ: ಲಾಕ್‌ ಡೌನ್‌ ಸಂದರ್ಭ ಹಲವು ತೊಂದರೆ ಹಲವರಿಗಾಗುತ್ತದೆ. ಔಷಧಿಗಾಗಿ ಅಲೆದಾಡುವ ಸ್ಥಿತಿ ಅನೇಕರಿಗೆ; ಹಣವಿದ್ದೂ ಸಾಮಾಗ್ರಿ ಖರೀದಿಗೆ ತೊಡಕು ಇನ್ನನೇಕರಿಗೆ. ಪಟ್ಟಣಕ್ಕೆ ಹೋಗಲು ವ್ಯವಸ್ಥೆ ಇಲ್ಲದಿರುವುದು , ಅವಶ್ಯ ವಸ್ತು ಖರೀದಿಗೆ ಅಸಾಧ್ಯವಾಗಿರುವುದು ಹಲವರಿಗೆ …ಈ ಎಲ್ಲಾ ಸಮಸ್ಯೆಗಳನ್ನು ಗಮನದಲ್ಲಿರಿಸಿ ಮೂಡುಬಿದಿರೆಯ ಸಮಾಜ ಸೇವೆಯಲ್ಲಿ ತೊಡಗಿದೆ ಯುವಕರಾದ ಸಂಪತ್‌ ಕುಮಾರ್‌, ರಾಜೇಶ್‌ ಕೆಲ್ಲಪುತ್ತಿಗೆ, ಪ್ರಸಾದ್‌ ಕೊಡ್ಯಡ್ಕ, ವಿನೋದ್‌ ನಝೆರತ್ ತಮ್ಮ ವಾಹನಗಳಲ್ಲಿ ಅವಶ್ಯವಿರುವವರಿಗೆ ಸಂಪೂರ್ಣ ಉಚಿತವಾಗಿ ಡೋರ್‌ ಡೆಲಿವರಿ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಜವನೆರ್‌ ಬೆದ್ರ ಸಂಘಟನೆಯ ಸದಸ್ಯರಿಂದ ಆಹಾರ ಕಿಟ್‌ ವಿತರಣೆ.

ಇವರೆಲ್ಲರ ಸಹಾಯ ಮರೆಯುವಂತಿಲ್ಲ : ಗುರುಪ್ರಸಾದ್‌ ಶೆಟ್ಟಿ, ಸಾನ್ವಿ ಎಸ್‌,ನಿಖಿಲೇಶ್‌ ಕುಮಾರ್‌, ದಿನೇಶ್‌ ಕುಮಾರ್‌, ರಕ್ಷಣ್‌, ದೀಪಕ್‌ ಆನಂದ್‌, ಬಿ.ಪಿ.ನಾಯ್ಕ್‌, ಕಿರಣ್‌, ಶಶಿಕಲಾ ಆಚಾರ್ಯ, ಗಣೇಶ್‌ ಪೂಜಾರಿ, ಪಿ.ವಿ.ಸುನಿಲ್‌ ಕುಮಾರ್‌, ಹೇಮ ಹಿರೇಮಠ್‌,ರಾಘವೇಂದ್ರ ಪಿ, ಗಂಗಾಧರ್‌,ಮಹೊಮ್ಮದ್‌ ಆರಿಫ್‌, ಸತೀಶ್‌ ಸೂರತ್‌, ಪುಷ್ಪರಾಜ್‌ ಕುವೈಟ್‌, ಸೋಹನ್‌ ಕಂಪೆನಿ, ಟೀಮ್‌ ಡೈಮಂಡ್‌, ಗ್ರೀನ್‌ ಬೆರ್ರಿ ವೆಜಿಟೇಬಲ್ಸ್‌, ಡಾ.ಸುಧೀರ್‌ ರಾವ್‌, ಸುಚೇತ, ಗೌತಮ್‌ ಕಾಮತ್‌, ರೂಪಶ್ರೀ, ಮಮತಾ, ಶಾಲಿನಿ, ಹೆರಾಲ್ಡ್‌ ತಾವ್ರೋ,ಗಿರೀಶ್‌ ಶೆಣೈ, ರವೀಂದ್ರ ಪೈ, ಅಬುಲ್‌ ಆಲಾ, ಇಮ್ರಾನ್‌, ಶ್ರೀಕಾಂತ್‌ ಜೈನ್‌, ಸುಕೇಶ್‌ ಕೇಮಾರು, ಶ್ಯಾಮ್‌ ರಾಜ್‌ ಬಿ.ಕೆ.ಹಾಸನ ಮೊದಲಾದ ದಾನಿಗಳು ಮೂಡುಬಿದಿರೆಯ ಜವನೆರ್‌ ಬೆದ್ರ ಸಂಘಟನೆಯ ಆಹಾರ ಸಾಮಾಗ್ರಿಗಳ ಕಿಟ್‌ ತಯಾರಿಕೆಗೆ ಅವಶ್ಯ ವಸ್ತುಗಳನ್ನು ನೀಡಿ ಪ್ರೋತ್ಸಾಹಿಸಿದರು.

LEAVE A REPLY

Please enter your comment!
Please enter your name here