ಇವರು ಹೇಳಿರುವುದು ಸ್ವಲ್ಪ ಮಾಡಿ ತೋರಿಸಿರುವುದು ಹಲವು!!!

0
6948

ನಿತ್ಯ ಅಂಕಣ-೧೦೧ : ತಾರಾನಾಥ್‌ ಮೇಸ್ತ, ಶಿರೂರು.
ಭಗವಾನ್ ನಿತ್ಯಾನಂದರಿಂದ ಧಾರ್ಮಿಕ ಸೇವೆ, ಸಾಮಾಜಿಕ ಸೇವೆ, ಶೈಕ್ಷಣಿಕ ಸೇವೆ, ಆರೋಗ್ಯ ಸೇವೆ ಹೀಗೆ ಮೊದಲಾದ ಅನುಪಮ ಸೇವಾ ಕಾರ್ಯಗಳು ಬಹಳಷ್ಟು ನಡೆದಿವೆ. ಯಾವೊಂದು ಆದಾಯ ಮೂಲ ಇಲ್ಲದೆ ಅವರು ನಡೆಸಿರುವ ಸೇವಾ ಕಾರ್ಯಗಳು ಅನನ್ಯ ಅದ್ಭುತ. ನಿತ್ಯಾನಂದರು ಕೇರಳದ ಕಾಂಞಂಗಾಡ್, ಗುರುವನ ಇಲ್ಲಿ ಅಭಿವೃದ್ಧಿ ಕಾರ್ಯಗಳು 1935 ರ ಮೊದಲು ನಡೆಸಿದರು. ಅದರ ನಂತರ ಅವರ ಶಿಷ್ಯ ಜನಾನಂದ ಸ್ವಾಮಿಗಳಿಂದ ಅಭಿವೃದ್ಧಿ ಕಾರ್ಯಗಳು ಮುಂದುವರಿಯುತ್ತದೆ. ಮಹಾರಾಷ್ಟ್ರದ ವಜ್ರೇಶ್ವರಿ, ಅಕ್ರೋಲಿ, ಗಣೇಶಪುರಿ ಪುರಾಣ ಪ್ರಸಿದ್ಧ ಕ್ಷೇತ್ರಗಳ ನವ ನಿರ್ಮಾಣ ಕಾರ್ಯವು ಭಗವಾನ್ ನಿತ್ಯಾನಂದರಿಂದ ನಡೆಯುತ್ತದೆ. ಈ ಭಾಗಗಳೆಲ್ಲವು ದಟ್ಟ ಕಾನನ ಪ್ರದೇಶಗಳಾಗಿದ್ದವು. ಆದಿ ವಾಸಿಗಳು, ಬುಡಕಟ್ಟು ಜನಾಂಗದವರು ಜೀವನ ಸಾಗಿಸುತ್ತಿದ್ದರು. ಕೂಗಳತೆಗೊಂದು ಮನೆಗಳಿದ್ದವು. ಯಾವೊಂದು ಮೂಲ ಸೌಕರ್ಯಗಳು ಇಲ್ಲಿ ಇರದೆ, ಕುಗ್ರಾಮವಾಗಿದ್ದವು. 1936 ರಲ್ಲಿ ನಿತ್ಯಾನಂದರ ಆಗಮನದ ತರುವಾಯ ಮೂರು ಪವಿತ್ರಕ್ಷೇತ್ರಗಳು ಅಭಿವೃದ್ಧಿ ಪಡೆಯುತ್ತದೆ.
ಅಕ್ರೋಲಿಯ ನದಿಯಲ್ಲಿದ್ದ ಸರ್ವಕುಂಡಗಳ ದುರಸ್ಥಿ, ರಾಮೇಶ್ವರ ಮಂದಿರದ ನವೀಕರಣ. ದೇವಾಲಯದ ಸನಿಹ ಧರ್ಮಶಾಲೆಯ ನಿರ್ಮಾಣ. ಕ್ಷೇತ್ರಕ್ಕೆ ಬರುವ ಭಕ್ತರಿಗೆ ಅಡಿಗೆ ಮಾಡಿಕೊಂಡು ಉಣ್ಣಲು ಪಾತ್ರೆಗಳ ವ್ಯವಸ್ಥೆ, ಅಕ್ರೋಲಿಯಿಂದ ವಜ್ರೇಶ್ವರಿಯವರೆಗೆ ರಸ್ತೆಯ ನಿರ್ಮಾಣ, ಇವೆಲ್ಲ ಕಾರ್ಯಗಳು ನಿತ್ಯಾನಂದರಿಂದ ನಡೆಯುತ್ತವೆ. ಇಲ್ಲಿಂದ ನಿತ್ಯಾನಂದರು ವಜ್ರೇಶ್ವರಿಗೆ ಬಂದು ವಾಸ ಇರುತ್ತಾರೆ. ಶತಮಾನಗಳ ಹಿಂದೆ ಮಚ್ಚೇಂದ್ರನಾಥ್ ಮತ್ತು ಗೋರಖನಾಥ್ ನಾಥ ಪಂಥದ ಸಂತರೀರ್ವರು ವಜ್ರೇಶ್ವರಿಯಲ್ಲಿ ತಪಸ್ಸನ್ನು ಆಚರಿಸಿದವರು. ಅವರ ಸ್ಮರಣಾರ್ಥ ನಾಥಮಂದಿರದ ಸ್ಥಾಪನೆಯು ನಿತ್ಯಾನಂದರಿಂದ ನಡೆಯುತ್ತದೆ. ಅಲ್ಲಿ ಪಾದುಕೆ ಸ್ಥಾಪಿಸುತ್ತಾರೆ. ಭಕ್ತರ ಅನುಕೂಲತೆಗಾಗಿ ಎರಡು ಧರ್ಮಶಾಲೆ, ಎರಡು ಬಾವಿಗಳ ನಿರ್ಮಾಣವು ನಿತ್ಯಾನಂದರಿಂದ ನಡೆಯುತ್ತದೆ. ಅನುಸೂಯ ಮಂದಿರದ ಜೀರ್ಣೋದ್ಧಾರವನ್ನು 1953 ರಲ್ಲಿ ನಡೆಸುತ್ತಾರೆ. ವಜ್ರೇಶ್ವರಿಯಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರ ಇವೇ ಮೊದಲಾದ ಧಾರ್ಮಿಕ ಸೇವಾಕಾರ್ಯಗಳು ಮಾಡಿದಲ್ಲದೆ, ಆಡಳಿತ ವ್ಯವಸ್ಥೆಗಳು ನಾಗರಿಕ ಸಮಾಜಕ್ಕೆ ಒದಗಿಸ ಬೇಕಾದ ಅತಿ ಅಮೂಲ್ಯ ಸೌಕರ್ಯಗಳನ್ನು ನಿತ್ಯಾನಂದರು ಆ ಕಾಲಘಟ್ಟದಲ್ಲಿ ಸಾರ್ವಜನಿಕರಿಗೆ ಒದಗಿಸಿದ್ದರು. ಮಕ್ಕಳು ಶಾಲೆಯಿಂದ ದೂರ ಉಳಿಯ ಬಾರದು ಎಂಬ ನೆಲೆಯಲ್ಲಿ ವಜ್ರೇಶ್ವರಿಯಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಮರಾಠಿ ಶಾಲೆಯನ್ನು 1949 ರಲ್ಲಿ ನಿರ್ಮಿಸುತ್ತಾರೆ. ರೋಗಿಗಳ ಉಪಯೋಗಕ್ಕೆ ಆಸ್ಪತ್ರೆಯನ್ನು 1950 ರಲ್ಲಿ ಹಾಗೂ ಹೆರಿಗೆ ಆಸ್ಪತ್ರೆಯನ್ನು 1956 ಸ್ಥಾಪಿಸುತ್ತಾರೆ. ಅಂಚೆ ಕಛೇರಿ ತೆರೆಯಲು ಕಟ್ಟಡ ನಿರ್ಮಿಸಿ ಒದಗಿಸುತ್ತಾರೆ. ಅದಲ್ಲದೆ ಇಂಗ್ಲೀಷ್ ಶಾಲೆಯನ್ನು ಸ್ಥಾಪಿಸುತ್ತಾರೆ.
ನಿತ್ಯಾನಂದರು ವಜ್ರೇಶ್ವರಿಯಿಂದ ಗಣೇಶಪುರಿಗೆ ಬಂದು ಮಹಾಸಮಾಧಿ ಪಡೆಯುವ ತನಕ ಇರುತ್ತಾರೆ. ಸ್ವಾಮಿಗಳು ಗೋಕರ್ಣದಿಂದ ಬಂದಾಗ ಭದ್ರಕಾಳಿ ದೇವಿ ಅವರನ್ನು ಹಿಂಬಾಲಿಸಿ ಕೊಂಡುಬರುತ್ತಾಳೆ. ಅವರಲ್ಲಿ ಗಣೇಶಪುರಿಯಲ್ಲಿ ನೆಲೆ ಯಾಚಿಸುತ್ತಾಳೆ. ಹಾಗಾಗಿ ಭದ್ರಕಾಳಿ ದೇವಸ್ಥಾನವನ್ನು ನಿತ್ಯಾನಂದರು ಗಣೇಶಪುರಿಯಲ್ಲಿ ನಿರ್ಮಿಸಿ ದೇವಿಯನ್ನು ಪ್ರತಿಷ್ಠಾಪಿಸುತ್ತಾರೆ. ಅಲ್ಲದೆ ಗ್ರಾಮದೇವಿ ಮಂದಿರ, ಗೋಪಾಲಕೃಷ್ಣ ಮಂದಿರ ಸ್ಥಾಪನೆ ಮಾಡುತ್ತಾರೆ. ಕುಡಿಯುವ ನೀರಿಗಾಗಿ ಬಾವಿಯನ್ನು ನಿರ್ಮಿಸುತ್ತಾರೆ. 1940 ರಲ್ಲಿ ಗಣೇಶಪುರಿ ವೈಕುಂಠ ಆಶ್ರಮದಿಂದ ಗಣೇಶಪುರಿ ಮುಖ್ಯ ರಸ್ತೆಯವರೆಗೆ ರಸ್ತೆ ನಿರ್ಮಿಸುತ್ತಾರೆ. ಈ ರಸ್ತೆಯ ನಿರ್ಮಾಣ ಕಾರ್ಯಕ್ಕೆ ಸ್ಥಳಿಯರು ಸ್ಥಳದಾನವನ್ನು ನಿತ್ಯಾನಂದರಿಗೆ ನೀಡುತ್ತಾರೆ. ಈ ರಸ್ತೆಯಾದ ಬಳಿಕ ಜನಸಂಚಾರ, ಜನ ವಸತಿಗಳು ಹೆಚ್ಚಾದವು. ಭಕ್ತರ ಆಗಮನದ ಸಂಖ್ಯೆಯು ಹೆಚ್ಚಾಯಿತು. 1947 ರಲ್ಲಿ ಪ್ರಾಥಮಿಕ ಶಾಲೆಯನ್ನು ನಿರ್ಮಿಸುತ್ತಾರೆ. ಗಣೇಶಪುರಿಯಲ್ಲಿ ವೈಕುಂಠ ಆಶ್ರಮವನ್ನು ನಿತ್ಯಾನಂದರು ಸ್ಥಾಪಿಸುತ್ತಾರೆ. 1956 ರ ತನಕ ಅದರಲ್ಲಿಯೇ ಸ್ವಾಮಿಗಳ ಜೀವನ ಸಾಗುತ್ತದೆ. ನಂತರ ಅವರ ಭಕ್ತ ಚಿಮಣ್ ಲಾಲ್ ಶಾ ಕಟ್ಟಿಸಿದ ಕೈಲಾಶ ಆಶ್ರಮದಲ್ಲಿ ವಾಸಿಸುತ್ತಾರೆ. ಬಾಲಭೋಜನ ವ್ಯವಸ್ಥೆ ಮಾಡಿಸುತ್ತಾರೆ. ಅದಕ್ಕೆಂದು ಭೋಜನಾಲಯವನ್ನು ನಿರ್ಮಿಸುತ್ತಾರೆ. ಹೀಗೆ ಹಲವು ಸಮಾಜಿಮುಖಿ ಸೇವಾಕಾರ್ಯಗಳು ಗಣೇಶಪುರಿಯಲ್ಲಿ ಭಗವಾನ್ ನಿತ್ಯಾನಂದರಿಂದ ನಡೆದಿವೆ.
ನಿತ್ಯಾನಂದರ ಮಹಿಮೆಗಳ ಕುರಿತಾಗಿ ಹಲವು ಪುಸ್ತಕಗಳ ಬರೆದಿರುವ ಹಿರಿಯ ಸಾಹಿತಿ ಶ್ರೀಹರಿಕೃಷ್ಣ ರಾವ್ ಸಗ್ರಿ ಅವರು, ಗುರುದೇವರ ಸೇವಾಕಾರ್ಯದ ಕುರಿತು ಈ ರೀತಿ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ನಿತ್ಯಾನಂದರು ಭಕ್ತೋದ್ಧಾರದ ಘನ ಉದ್ದೇಶದಿಂದ ಧರೆಗೆ ಬಂದವರು. ಮುಖ್ಯವಾಗಿ ತತ್ವಜ್ಞಾನದೊಂದಿಗೆ ಸೇವಾಯೋಗವನ್ನು ನೀಡಿದ ಸಂದೇಶ ಅವರ ಅವತಾರದಲ್ಲಿ ಎದ್ದು ಕಾಣುವ ಅಂಶ. ಶ್ರೀ ಕೃಷ್ಣನ ಗೀತೆಯಲ್ಲಿ ಹದಿನೆಂಟು ಯೋಗಗಳ ಅಧ್ಯಾಯ ವಿದ್ದರೆ, ಅದೆಲ್ಲವನ್ನೂ ಒಂದೇ ಯೋಗದಲ್ಲಿ ಸರಳವಾಗಿ ಹೇಳಿದ ಸಾರ ಸೇವಾಯೋಗ. ಕ್ಲಿಷ್ಟಕರ ಸಾಧನೆಯನ್ನು ಸರ್ವರಿಗೂ ಸುಲಭವಾಗಿ ಸಿಗುವ ಗುರುದೇವರ ಸುಜ್ಞಾನದ ವಾಣಿ “ಚಿದಾಕಾಶ ಗೀತೆ”. ಪಂಡಿತರ ಸಮಸ್ಯೆಗೂ ಸುಂದರ ಪರಿಹಾರ ನೀಡಿದ ಕಿರುಪುಸ್ತಕ. ಗುರುವಿನ ಮಹಿಮೆ ಮತ್ತು ಆತ್ಮ, ಪರಮಾತ್ಮ, ಗುರು ಈ ಮೂರು ತತ್ವಗಳು ಒಂದೇ ನಿತ್ಯಾನಂದ ಎನ್ನುವ ಸತ್ಯ ಇಲ್ಲಿದೆ. ಸರ್ವಧರ್ಮಗಳ ಸತ್ಯ ಒಂದೇ ಎನ್ನುವುದು ಸ್ವಾಮಿಗಳು ತೋರಿದ ದಾರಿದೀಪ. ಇವರು ಹೇಳಿರುವುದು ಸ್ವಲ್ಪ ಮಾಡಿ ತೋರಿಸಿರುವುದು ಹಲವು. ಶ್ರೀಲಂಕಾ, ಬರ್ಮಾ ದೇಶಗಳಲ್ಲಿ ಗಲೀಜಿನ ಸಾರ್ವಜನಿಕ ಶೌಚಾಲಯವನ್ನು ಸ್ವತಃ ತಾವೋಬ್ಬರೇ ಶುಚಿಗೊಳಿಸಿ ಸ್ವಚ್ಛತೆಯ ಪಾಠ ನೀಡಿದ್ದರು. ನಾಗರಿಕ ಸಮಾಜದಲ್ಲಿ ತುಳಿತಕ್ಕೆ ಒಳಪಟ್ಟಿರುವ ಸಮಾಜದ ಮಕ್ಕಳನ್ನು ಕೆರೆ ಸರೋವರದಲ್ಲಿ ತಾವೇ ಸಾಬೂನು ಹಾಕಿ ಸ್ನಾನವನ್ನು ಮಾಡಿಸುತ್ತಿದ್ದರು. ಅವರಿಗೆ ತಾವೇ ಚಾಕಲೇಟ್, ತಿಂಡಿಗಳನ್ನು ನೀಡಿ ಸಂತೋಷ ಪಡುತ್ತಿದ್ದರು. ವಿಶೇಷ ಹಬ್ಬದ ದಿನಗಳಲ್ಲಿ ಹೊಸ ಬಟ್ಟೆಗಳನ್ನು ನೀಡುತ್ತಿದ್ದರು. ಇದು ಕಲಿಯುಗದ ಜನರಿಗೆ ಬೇಕಾದ ಧರ್ಮ ಎಂಬುದನ್ನು ತೋರಿಸಿದ ಮಹಿಮ!.

LEAVE A REPLY

Please enter your comment!
Please enter your name here