ಇನ್ನೂ `ಪರಂಪರೆಯ ತಾಣ'ವೆಂಬ ಪಟ್ಟಕ್ಕೇರದ ಬೆದ್ರ

0
207

ವಿಶೇಷ ವರದಿ: ಹರೀಶ್ ಕೆ.ಆದೂರು.
ಪರಂಪರೆಯ ಕುರುಹು ಮಾಸದಿರಲಿ
ಒಂದೊಮ್ಮೆ ಅತೀ ಹೆಚ್ಚಿನ ಸಾಂಸ್ಕೃತಿಕ ಮತ್ತು ಪ್ರಾಕೃತಿಕ ಮಹತ್ವಗಳನ್ನು ಹೊಂದಿದ್ದ ಅದರ ಕುರುಹುಗಳಿಂದಾಗಿಯೇ ವಿಶ್ವ ಪ್ರಸಿದ್ಧಿಗೆ ಕಾರಣವಾಗಿರುವ ಮೂಡಬಿದಿರೆಗೆ ಇನ್ನೂ `ಪರಂಪರೆಯ ತಾಣ’ವೆಂಬ ಪಟ್ಟ ದೊರೆತಿಲ್ಲ. ಅತ್ಯಾಕರ್ಷಕ ಹದಿನೆಂಟು ಪುರಾತನ ಬಸದಿಗಳು, ಅತ್ಯದ್ಭುತ ಕಾರಣೀಕಗಳ ಹದಿನೆಂಟು ದೇಗುಲ, ಅಷ್ಟೇ ಪ್ರಾಚೀನ ಹದಿನೆಂಟು ಕೆರೆಗಳ ಮೂಲಕ ಪ್ರಸಿದ್ಧಿ ಪಡೆದಿದೆ `ಜೈನ ಕಾಶಿ’ ಮೂಡಬಿದಿರೆ. ರತ್ಕಾಕರ ವರ್ಣಿಯೇ ವಾಸಿಸಿ, ಅದ್ಭುತ ಕಾವ್ಯ ರಚಿಸಿದ ಐತಿಹಾಸಿಕ ಮನೆಯೂ ಇದೇ ಜೈನಕಾಶಿಯಲ್ಲಿದೆ. ಹಲವು ನಿಶಿಧಿಗಳು, ಪುರಾತನ ಶಾಸನಗಳು ಅದ್ಭುತ ವಾಸ್ತು ವೈವಿಧ್ಯದ ನಿರ್ಮಿತಿಗಳನ್ನೊಳಗೊಂಡಿರುವ ಈ ಪಟ್ಟಣ `ಪರಂಪರೆಯ ತಾಣ’ ಎಂದು ಗುರಿತಿಸಿಕೊಳ್ಳುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದರೂ ಘೋಷಿಸುವ ಕಾರ್ಯವಾಗಿಲ್ಲ. ಏತನ್ಮಧ್ಯೆ ಅಳಿದುಳಿದ ಪರಂಪರೆಯ ಕುರುಹುಗಳನ್ನು ಉಳಿಸುವಲ್ಲಿ ಎಡವುತ್ತಿರುವುದು ಆಘಾತಕಾರಿ ಅಂಶವೇ ಸರಿ.
 
mood_jain basdi_story
 
ಮೂಡಬಿದಿರೆಯ ಜೈನ ಪೇಟೆ ಅತ್ಯದ್ಭುತ ಪಾರಂಪರಿಕ ಪ್ರದೇಶವಾಗಿ ಗುರುತಿಸಲ್ಪಟ್ಟಿದೆ. ಕಾಲನ ಕೈಗೆ ಸಿಲುಕಿ ಇಂದು ಆಧುನಿಕತೆಯ ಸ್ಪರ್ಶ ಇಲ್ಲಿಗಾಗುತ್ತಿದೆಯಾದರೂ ಇನ್ನೂ ಹಳೆಯ ಸಾಂಪ್ರದಾಯಿಕ ಶೈಲಿಯ ಕಟ್ಟಡಗಳು, ನಿರ್ಮಿತಿಗಳು ಇಲ್ಲಿವೆ. ಇವುಗಳನ್ನು ಉಳಿಸುವತ್ತ ಚಿಂತನೆ ನಡೆಯಬೇಕಾಗಿದೆ.
 
mood_jain basdi_story2
2012ರ ಸುಮಾರಿಗೆ ಮೂಡಬಿದಿರೆಯನ್ನು ಪಾರಂಪರಿಕ ತಾಣವಾಗಿ ಘೋಷಿಸುವ ಹಾಗೂ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸುವ ಕಾರ್ಯಕ್ಕೆ ಚಾಲನೆ ದೊರಕಿತ್ತು. ಅಂದಿನ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಈ ಬಗ್ಗೆ ಸೂಕ್ತ ಚಿಂತನೆ ನಡೆದಿತ್ತು. ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆಯನ್ನು ನಡೆಸಿದ್ದರು. ಸರ್ವೇ ಕಾರ್ಯವೂ ನಡೆದಿತ್ತು. ಪಾರಂಪರಿಕ ತಾಣದ ಅಭಿವೃದ್ಧಿಯ ದೃಷ್ಠಿಯಿಂದ 32 ಕೋಟಿ ರುಪಾಯಿಯ ಯೋಜನೆಯನ್ನೂ ರೂಪಿಸಲಾಗಿತ್ತು. ಅವೆಲ್ಲವೂ ಕಡತಗಳಿಗಷ್ಟೇ ಸೀಮಿತವಾಗಿ ಉಳಿದಿದೆ. ಇಂದದು ನೆನೆಗುದಿಗೆ ಬಿದ್ದಿದೆ.
 
 
 
ಮೂಡಬಿದಿರೆಯ ಜೈನ ಪೇಟೆ, ಅಲ್ಲಿಯೇ ಇರುವ ಕೊಂಡೆ ಸ್ಟ್ರೀಟ್ ಸಂಪೂರ್ಣವಾಗಿ ಹಳೆಯ ಪಾರಂಪರಿಕ ಕಟ್ಟಡಗಳಿಂದ ಕೂಡಿವೆ. ಅಪವಾದವೆಂಬಂತೆ ಅಲ್ಲೊಂದು ಇಲ್ಲೊಂದು ಆಧುನಿಕ ಶೈಲಿಯ ಕಟ್ಟಡಗಳಿವೆ. ಇಲ್ಲೇ ಸಮೀಪದಲ್ಲಿ ವಿಶ್ವಪ್ರಸಿದ್ಧಿಯ ಸಾವಿರ ಕಂಬದ ಬಸದಿಯಿದೆ. ಉಳಿದಂತೆ ಇತರೆ ಬಸದಿಗಳೂ ಸಮೀಪದಲ್ಲಿಯೇ ಇವೆ. ದಿಗಂಬರ ಜೈನ ವಿದ್ಯಾವರ್ಧಕ ಸಂಘವೂ ಅತ್ಯಂತ ಹಳೆಯ ಕಟ್ಟಡದಲ್ಲಿದೆ. ಇವೆಲ್ಲವೂ ಪಾರಂಪರಿಕ ಕಟ್ಟಡವಾಗಿದ್ದು ಅತ್ಯಾಕರ್ಷಕವಾಗಿಯೇ ಇವೆ. ಕೊಂಡೆ ರಸ್ತೆ, ಜೈನ ಮಠದ ಮುಂಭಾಗದಲ್ಲಿ ಸಾಗುವ ಹೆದ್ದಾರಿಯ ಅಂಚಿನಲ್ಲೂ ಕೆಲವೊಂದು ಕಟ್ಟಡಗಳು ವಾಸ್ತುವೈವಿಧ್ಯತೆಯಿಂದ ಕೂಡಿದೆ. ಈ ಅದ್ಭುತ ವಾಸ್ತು ವೈಭವದ ಕಟ್ಟಡಗಳಿಂದಾಗಿ ವಿದೇಶಿಯರೂ ಈ ಕಟ್ಟಡಗಳತ್ತ ಆಕರ್ಷಿತರಾಗುತ್ತಿದ್ದಾರೆ. ತಮ್ಮ ಪುಟ್ಟು ಪುಟ್ಟ ಕ್ಯಾಮಾರಾಗಳಲ್ಲಿ ಇವೆಲ್ಲವುಗಳನ್ನು ಅವರು ದಾಖಲಿಸುತ್ತಿದ್ದಾರೆ!
 
mood_jain basdi_story3
 
ನಗರ ಬದಲಾಗಿದೆ… ದಾಖಲೀಕರಣ ಇಲ್ಲದಾಗಿದೆ…
ಮೂಡಬಿದಿರೆಯ ಕಳೆದ ಇಪ್ಪತ್ತು ವರುಷಗಳಲ್ಲಿ ತೀವ್ರ ಗತಿಯ ಬದಲಾವಣೆಗಳನ್ನು ಕಂಡಿದೆ. ನಗರ ಸಂಪೂರ್ಣ ಬದಲಾಗಿದೆ. ಪಾರಂಪರಿಕ ಕಟ್ಟಡಗಳು ಹಲವು ಕಾರಣಕ್ಕೆ ಧಾರಾಶಾಹಿಯಾಗಿದೆ. ಅದೇ ಸ್ಥಳಗಳಲ್ಲಿ ಅತ್ಯಾಧುನಿಕ ಶೈಲಿಯ ಬಹುಮಹಡಿ ಕಟ್ಟಡಗಳು ತಲೆಯೆತ್ತಿ ನಿಂತಿವೆ…ನಿಲ್ಲುತ್ತಿವೆ. ಐತಿಹಾಸಿಕ ನಗರಿ ಮೂಡಬಿದಿರೆಯ ಪಾರಂಪರಿಕ ಕಟ್ಟಡಗಳ ದಾಖಲಾತಿಯನ್ನು ಮಾತ್ರ ಸಮರ್ಪಕವಾಗಿ ಯಾರೊಬ್ಬರೂ ಮಾಡಿಲ್ಲ. ಇಲಾಖೆಯಂತೂ ಈ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ. ಅದ್ಭುತ , ಅತ್ಯಾಕರ್ಷಕ ವಾಸ್ತು ವಿನ್ಯಾಸದ ಕಟ್ಟಡಗಳು ಹಳೆಯ ತಲೆಮಾರಿಗಷ್ಟೇ ಸೀಮಿತವಾಗಿ ಹೋಗುವಂತಾಗಿದೆ. ಮುಂದಿನ ತಲೆಮಾರಿಗೆ ಇದರ `ಅರಿವೂ’ ಸಿಗದಂತಾಗಿರುವುದು ದುರಂತ.
 
 
ಮೂಡಬಿದಿರೆಯಲ್ಲಿ ಹಳೆಯ ಕೆಲವೊಂದು ಸರಕಾರೀ ಕಟ್ಟಡಗಳು ಉಳಿದುಕೊಂಡಿವೆ. ಜೊತೆಗೆ ಖಾಸಗೀ ಒಡೆತನದಲ್ಲಿರುವ ಹಲವು ನಿರ್ಮಿತಿಗಳು ಸುಸ್ತಿತಿಯಲ್ಲಿವೆ. ಅವುಗಳನ್ನು ಉಳಿಸುವ ಕಾರ್ಯ ಆದರೆ `ಪರಂಪರೆಯ’ ದರ್ಶನಕ್ಕೆ ಅವಕಾಶವಾದಂತಾಗುವುದರಲ್ಲಿ ಸಂದೇಹವಿಲ್ಲ.
 
`ಹೆರಿಟೇಜ್ ನಗರ ಉಳಿಯಲಿ’
ಮೂಡಬಿದಿರೆಗೆ ತನ್ನದೇ ಆದ ಮಹತ್ವವಿದೆ. ಇದೊಂದು ಹೆರಿಟೇಜ್ ಸಿಟಿ ಎಂದೇ ಗುರುತಿಸಲ್ಪಟ್ಟಿದೆ. ಈ ಪರಂಪರೆಯ ನಗರ ಉಳಿಯಬೇಕಾಗಿದೆ. ಈಗ ಉಳಿದಿರುವ ಪಾರಂಪರಿಕ ಕಟ್ಟಡಗಳ ದಾಖಲೀಕರಣ ಆಗಲಿ. ಸರಕಾರ ಈ ಬಗ್ಗೆ ಚಿಂತಿಸಲಿ
– ಡಾ.ಪುಂಡಿಕಾ ಗಣಪಯ್ಯ ಭಟ್, ಸಂಶೋಧಕರು.
pundikai-ganapayya-bhat
ಪಾರಂಪರಿಕ ತಾಣ ಪಟ್ಟಿಗೆ ಸೇರಲಿ
ಮೂಡಬಿದಿರೆ ಹಲವು ಕಾರಣಗಳಿಗೆ ಪ್ರಸಿದ್ಧಿ ಪಡೆದಿದೆ. ಇದನ್ನು ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಬೇಕು. ಇಲ್ಲಿರುವ ವಾಸ್ತು ವೈಭವ, ಪುರಾತನ ನಿರ್ಮಿತಿಗಳ ಪುನರುತ್ಥಾನಕ್ಕೆ ತನ್ಮೂಲಕ ಪ್ರಯತ್ನಗಳು ಆಗಬೇಕಾಗಿದೆ. ಜೈನಪೇಟೆಯ ಪರಿಸರದಲ್ಲಿ ಪರಂಪರೆಯ ಕುರುಹುಗಳಿವೆ. ಇಲ್ಲಿಗೆ ಆಧುನಿಕತೆಯ ಸ್ಪರ್ಶ ಆಗಬಾರದು. ಈ ಬಗ್ಗೆ ಗಮನ ಹರಿಸುವ ಅವಶ್ಯಕತೆ ಇದೆ.
– ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮಿಗಳು
ಜೈನ ಮಠ , ಮೂಡಬಿದಿರೆ.
bhattaraka swamiji
 
ನಮ್ಮ ಮೂಡುಬಿದಿರೆ ಜೈನಕಾಶಿಯ ರಸ್ತೆಗಳಿಗೂ ಬಸದಿಗಳಿಗೂ ಅಲ್ಲಿರುವ ಬಸದಿ ಅಂಕಿ-ಸಂಖ್ಯೆಗೂ ಆಧ್ಯಾತ್ಮಕ್ಕೆಲ್ಲಾ ಬಹು ಅಪರೂಪದ ಅಂಕಿ-ಸಂಖ್ಯೆಗಳ ರಹಸ್ಯದ ನಂಬಿಕೆ ಇದೆ. ಮೊದಲ ವೃತ್ತ ಶ್ರೀ ಮಠಕ್ಕೂ, ಅದರ ಸನಿಹದ ಇತರ ಮೂರು ಬಸದಿ, ನಾಲ್ಕು ಜೈನ ಪರಮಾಗಮಗಳ ಚಾರುಕೀರ್ತಿ ಶ್ರೀ ಮಠವಿರುವ ನಾಲ್ಕು ಬಸದಿ, ಎರಡನೇ ವೃತ್ತದಲ್ಲಿ ದಶಲಕ್ಷಣಗಳ ಪ್ರತೀಕ ಹತ್ತು ಬಸದಿಗಳು, ಮೂರನೇ ವೃತ್ತದಲ್ಲಿ ರತ್ನತ್ರಯ ಪ್ರತೀಕದ ಮೂರು ಬಸದಿಗಳು, ನಾಲ್ಕನೇ ವೃತ್ತದಲ್ಲಿ ಆತ್ಮನೊಬ್ಬನೇ ಕರ್ಮಗಳ ಬಿಡುಗಡೆಗೆ ಸ್ವತಂತ್ರ ದ್ರವ್ಯ ಎನ್ನುವ ಪ್ರತೀಕವಾಗಿ ಒಂದು ಬಸದಿ ಇರುವುದನ್ನು ಗಮನಿಸಬಹುದು.
 
 
ದಿಗಂಬರ ಜೈನಮಠದ ಪರಿಸರದಲ್ಲಿರುವ ಬಸದಿಗಳು:
ಹೊಸ ಬಸದಿ, ಶ್ರೀ ಮಠದ ಬಸದಿ, ಪಾಠಶಾಲೆ ಬಸದಿ/ರಮಾರಾಣಿ ಶೋಧ ಸಂಸ್ಥಾನ ಸರಸ್ವತಿ ಮಂದಿರ, ಪಡುಬಸದಿ.
ಜೈನ ಬಸದಿ ರಸ್ತೆ ಪರಿಸರದಲ್ಲಿರುವ ಬಸದಿಗಳು:
ಕಲ್ಲುಬಸದಿ, ದೇರಮ್ಮ ಶೆಟ್ಟಿ ಬಸದಿ, ಚೋಳಶೆಟ್ಟಿ ಬಸದಿ, ಮಹಾದೇವ ಶೆಟ್ಟಿ ಬಸದಿ, ಬೈಕಣತಿಕಾರಿ ಬಸದಿ, ಕೆರೆಬಸದಿ
ಇತರೆ ಬಸದಿಗಳು:
ಹಿರೇ ಬಸದಿ, ಶೆಟ್ರ ಬಸದಿ, ಬಡಗ ಬಸದಿ, ಬೆಟ್ಕೇರಿ ಬಸದಿ.
ಚಿತ್ರಗಳು: ಹರೀಶ್ ಕೆ.ಆದೂರು.

LEAVE A REPLY

Please enter your comment!
Please enter your name here