ಇನ್ನು ಮುಂದೆ ಆತ್ಮಹತ್ಯೆಗೆ ಚಿಂತಿಸಬೇಡ…!

0
3025

ನಿತ್ಯ ಅಂಕಣ-೯೭ : ತಾರಾನಾಥ್‌ ಮೇಸ್ತ, ಶಿರೂರು.
ಮುಂಬೈಯಲ್ಲಿ ಹೊಟೇಲ್ ನಡೆಸುತ್ತಿದ್ದ ಮಣಿಕೋತ್ ಕನರನ್ ಎನ್ನುವರು, ನಿತ್ಯಾನಂದ ಸ್ವಾಮಿಯ ಭಕ್ತರಾಗಿದ್ದರು. ಅವರು ಸಮಯಾವಕಾಶ ಸಿಕ್ಕಾಗ ಗಣೇಶಪುರಿಗೆ ಬಂದು, ಗುರುದೇವರ ದರ್ಶನವನ್ನು ಪಡೆಯುತ್ತಿದ್ದರು. ಅವರು ಗುರುಗಳು ಜೀವನ ಒಳಿತಿಗಾಗಿ ನೀಡಿದ ಸಲಹೆಯನ್ನು ಪಾಲನೆ ಮಾಡದ ತಪ್ಪಿಗಾಗಿ, ಜೀವನ ಮತ್ತು ವ್ಯವಹಾರದಲ್ಲಿ ಬಹಳವಾಗಿ ಕಷ್ಟ ನಷ್ಟಗಳನ್ನು ಅನುಭವಿಸ ಬೇಕಾಗುತ್ತದೆ. ಹೊಟೇಲು ಪ್ರಾರಂಭಿಸಿದ ದಿನದಿಂದ ವ್ಯಾಪಾರವು ಬಹಳ ಒಳ್ಳೆಯ ರೀತಿಯಲ್ಲಿ ನಡೆಯುತಿತ್ತು. ಹೀಗಿರುವಾಗ ಒಂದು ದಿನ, ಕನರನ್ ಗಣೇಶಪುರಿಗೆ ಬಂದಿರುವಾಗ, ನಿತ್ಯಾನಂದ ಸ್ವಾಮಿಗಳು “ಕಾಲ ಸರಿಯಿಲ್ಲ. ಹೋಟೆಲ್ ಮುಚ್ಚಿಸಿ, ಉದ್ಯೋಗ ಬದಲಿಸುವುದು ಸೂಕ್ತ”, ಎಂಬ ಸಲಹೆಯನ್ನು ನೀಡುತ್ತಾರೆ. ಆದರೆ ಕನರನ್ ಉತ್ತಮ ರೀತಿಯಲ್ಲಿ ವ್ಯಾಪಾರ ಆಗುತ್ತಿರುವ ಹೋಟೆಲ್ ಮುಚ್ಚುವುದು ಸರಿಯಲ್ಲ ಎಂದು ನಿರ್ಧರಿಸಿ, ಸ್ವಾಮಿಗಳ ನೀಡಿದ ಸಲಹೆ ಪಾಲನೆ ಮಾಡದೆ ವ್ಯವಹಾರವನ್ನು ಮುಂದುವರಿಸಿದ.
ಗುರು ನೀಡಿರುವ ಸಲಹೆಯನ್ನು ದಿಕ್ಕರಿಸಿದ ಪರಿಣಾಮವನ್ನು ಮುಂದೆ ಕನರನ್ ಎದುರಿಸಬೇಕಾಯಿತು. ಕನರನ್ ವ್ಯಾಪಾರವು ಇಲ್ಲದೆ ದಿವಾಳಿಯಾಗ ಬೇಕಾಯಿತು. ಸೋಲು ಎದುರಿಸಲಾಗದೆ ಕನರನ್ ಹೋಟೆಲ್ ಮುಚ್ಚುವಂತಾಯಿತು. ಸಾಲವು ಬೆಳೆಯಿತು. ಸಾಲದಾತರು ಬೆನ್ನುಬಿದ್ದರು. ಬದುಕಲು ದಾರಿಕಾಣದೆ ಮಿತ್ರನ ಬಾಡಿಗೆ ಕೊಠಡಿಯಲ್ಲಿ ಕನರನ್ ಆಶ್ರಯ ಪಡೆಯ ಬೇಕಾಯಿತು. ಊಟ ಇಲ್ಲದೆ ಹಸಿವೆಯಿಂದ ದಿನಗಳ ಕಳೆಯ ಬೇಕಾದ ಪರಿಸ್ಥಿತಿ ಅವರದಾಯಿತು. ಹೋಟೆಲಿನಲ್ಲಿ ತಾನು ಊಟ ಬಡಿಸಿದವನು, ಈಗ ನಾನು ಊಟಕ್ಕೆ ಕೈಯೊಡ್ಡಬೇಕಾದ ಪರಿಸ್ಥಿತಿ ನನಗೆ ಬಂದಿತ್ತಲ್ಲ..! ಎಂದು ಕನರನ್ ಬಹಳವಾಗಿ ನೊಂದುಕೊಂಡ. ಜೀವನದಲ್ಲಿ ಜಿಗುಪ್ಸೆ ಅವನಿಗೆ ಬಂದಿತು. ಯಾಕೆ ಈ ನರಕಯಾತನೆಯ ಜೀವನ. ಹೀಗೆ ಬದುಕಿ ಉಳಿಯುವುದಕಿಂತ ಸಾಯುವುದೆ ಉತ್ತಮ ಎಂಬ ನಿರ್ಧಾರವನ್ನು ಕನರನ್ ಗಟ್ಟಿ ಮಾಡಿಕೊಂಡ.
ಒಂದು ದಿನ ಕನರನ್ ತನ್ನ ಕೊಠಡಿಯ ಬಾಗಿಲಿಗೆ ಬೀಗ ಹಾಕಿ, ಕೀಲಿಯನ್ನು ಹಿಡಿದುಕೊಂಡು ಸಮುದ್ರ ಕಿನಾರೆಗೆ ತೆರಳಿದ. ಓಡೋಡಿ ಬರುತ್ತಿರುವ ಕಡಲ ತೆರೆಗೆ ಬೀಗದ ಕೀಲಿಯನ್ನು ಎಸೆದ. ಬಳಿಕ ಕಡಲಿಗೆ ಧುಮುಕಿದ. ಹೀಗಿರುವಾಗ ಅಲ್ಲಿ ವಿಸ್ಮಯವೊಂದು ನಡೆಯುತ್ತದೆ. ಶೇಟ್ ನಂತಿರುವ ವ್ಯಕ್ತಿ ಜೀವರಕ್ಷಕನಂತೆ ಬಂದು ಕನರನ್ ಅವನನ್ನು ರಕ್ಷಿಸಿ ದಡಕ್ಕೆ ಸೇರಿಸುತ್ತಾನೆ. ಈ ರೀತಿ ಜೀವನ ಮುಗಿಸುವುದು ಹೇಡಿಗಳ ಲಕ್ಷಣ, ಎಂದು ಬುದ್ಧಿ ಮಾತುಗಳ ಹೇಳಿ, ರೂಮಿಗೆ ಸೇರಿಸುತ್ತಾನೆ. ಬಾಗಿಲ ಬೀಗ ತೆಗೆಯಲು ಬೀಗ ನೀಡಿಯೂ ಸಹಕರಿಸುತ್ತಾನೆ. ಕನರನ್ ಹಸಿವು ಎಂದು ಹೇಳಿಕೊಂಡಾಗ ಊಟವನ್ನು ಒದಗಿಸುತ್ತಾನೆ. ಮತ್ತೆ ಬರುತ್ತೇನೆ ಎಂದು ಹೇಳಿ ಶೇಟ್ ನಂತೆ ಕಾಣುವ ವ್ಯಕ್ತಿ ತೆರಳುತ್ತಾನೆ. ನಂತರ ನೀಡಿರುವ ಊಟ ಉಂಡು ಕನರನ್ ನಿದ್ದೆಗೆ ಜಾರುತ್ತಾನೆ.
ಮರುದಿನ ಕನರನನಿಗೆ ತಾನು ಹಿಂದಿನ ದಿನ ಎಸಗಿದ ಅಪರಾಧ ಕೃತ್ಯ ನೆನಪಾಗಿ ಪ್ರಶ್ನೆಯಾಗಿ ಕಾಡುತ್ತದೆ. ನನ್ನನ್ನು ರಕ್ಷಿಸಿದ ಶೇಟ್ ನಂತೆ ಕಂಡಿರುವ ಆಪದ್ಬಾಂಧವ ವ್ಯಕ್ತಿ ಯಾರು..? ತಾನು ಎಸೆದ ಕೀ ಹೇಗೆ ಅವರಿಗೆ ದೊರಕಿತು..? ಹಸಿದಿರುವ ನನಗೆ ಊಟ ನೀಡಿ, ಈಗ ಬರುತ್ತೇನೆಂದು ಹೇಳಿ ಹೋದವರು ಎಲ್ಲಿಗೆ ಹೋದರು..? ಹೀಗೆಲ್ಲಾ ಕಾಡುತ್ತಿರುವ ಪ್ರಶ್ನೆಗಳಿಗೆ ಅವನಿಗೆ ಉತ್ತರ ದೊರೆಯಲಿಲ್ಲ. ಕನರನ್ ಗಣೇಶಪುರಿಗೆ ತೆರಳಿದ. ಅಲ್ಲಿ ನಿತ್ಯಾನಂದರು ಕನರನನ್ನು ಕಂಡು, ನಿನ್ನನ್ನು ರಕ್ಷಿಸಿದ ಶೇಟ್ ಕೊಟ್ಟ ಊಟ ಉಂಡೆಯಾ..? ಇನ್ನು ಮುಂದೆ ಆತ್ಮಹತ್ಯೆಗೆ ಚಿಂತಿಸಬೇಡ, ಅದೊಂದು ಪಾಪದ ಕೃತ್ಯ. ಹೇಡಿಗಳ ಲಕ್ಷಣ. ಹೋಗು ಇನ್ನು ನಿನಗೆ ಶುಭವಾಗುತ್ತದೆ ಎಂದು ಅನುಗ್ರಹಿಸಿ ಕಳಿಸುತ್ತಾರೆ. ಬಳಿಕ ಕನರನನಿಗೆ ತನ್ನ ರಕ್ಷಿಸಿದ ಆಪದ್ಭಾಂಧವ ಗುರುದೇವ ನಿತ್ಯಾನಂದರು ಎಂದು ತಿಳಿಯಲು ಕಷ್ಟವಾಗುದಿಲ್ಲ. ಜೀವನದಲ್ಲಿ ಬಹಳವಾಗಿ ದುಃಖಿತನಾಗಿದ್ದ ಕನರನ್ ನಿತ್ಯಾನಂದರ ಕೃಪೆಯಿಂದ ಮುಂದೆ ಆನಂದವನ್ನು ಅನುಭವಿಸುತ್ತಾನೆ. ಗುರುದೇವರ ಅಪ್ಪಣೆ ಪಡೆದು, ಪುನಃ ಹೊಟೇಲು ಪ್ರಾರಂಭಿಸಿದ. ಒಳ್ಳೆಯ ರೀತಿಯಲ್ಲಿ ಸಂಪಾದಿಸಿ ಸಮೃದ್ಧಿ ಪಡೆಯುತ್ತಾನೆ.

LEAVE A REPLY

Please enter your comment!
Please enter your name here