ಇದೇ ನೋಡಿ ದೈವಲೀಲೆ ಎಂದರೆ…

0
3094

ನಿತ್ಯ ಅಂಕಣ-೮೦ : ತಾರಾನಾಥ್‌ ಮೇಸ್ತ, ಶಿರೂರು.
ಮಾಹೆ, ಇಲ್ಲಿಯ ನಿವಾಸಿ ಕೊಟ್ಟೇರ್ ಕರನ್ ಕುಂಞಕುಟ್ಟಿ ಇವರ ಸೊಸೆ ಲಕ್ಷ್ಮೀ ಕುಟ್ಟಿ ಕೆಲವು ಸಮಯಗಳಿಂದ ಮಾನಸಿಕ ವ್ಯಾಧಿಗೆ ಒಳಪಟ್ಟಿರುತ್ತಾಳೆ. ಆಕೆಗೆ ಗಂಡ, ಮಾವ ಬಹಳಷ್ಟು ಕಡೆಗಳಲ್ಲಿ ತಜ್ಞ ವೈದ್ಯರ ಮೂಲಕ ಚಿಕಿತ್ಸೆಗಳನ್ನು ನೀಡಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಲೇ ಇಲ್ಲ. ಈ ಬಗ್ಗೆ ಮನೆಮಂದಿ ಚಿಂತಿತರಾಗಿರುತ್ತಾರೆ. ನಿತ್ಯಾನಂದರ ಸ್ವಾಮಿಗಳ ಬಳಿ ಈ ಬಗ್ಗೆ ಪರಿಹಾರ ವಿಚಾರಿಸಿಕೊಂಡು ಬರವುದು ಸೂಕ್ತ ಎಂದು, ಮಾವ ಕುಂಞಕುಟ್ಟಿ, ಹಾಗೂ ಅವಳ ಗಂಡ ಕುಂಞರಾಮನ್ ಜತೆಗೂಡಿ ಕಾಂಞಂಗಾಡ್ ನಿತ್ಯಾನಂದ ಆಶ್ರಮಕ್ಕೆ ತೆರಳುತ್ತಾರೆ.

ಇರ್ವರು ಕಾಂಞಂಗಾಡ್ ನಿತ್ಯಾನಂದ ಆಶ್ರಮಕ್ಕೆ ಬಂದು ತಲುಪುತ್ತಾರೆ. ಅವರಿಗೆ ನಿತ್ಯಾನಂದರು ಗುಹೆಗಳ ರಚನೆಯ ಕೆಲಸದಲ್ಲಿ ಶ್ರಮಿಸುತ್ತಿರುವುದು ಕಂಡುಬರುತ್ತದೆ. ಈರ್ವರನ್ನು ಕಂಡು, ನಿತ್ಯಾನಂದರು “ಇವಾಗ ಊಟದ ಸಮಯ, ಈಗ ನೀವು ಊಟಕ್ಕೆ ತೆರಳಿ, ತಡಮಾಡಿದರೆ ಊಟ ಸಿಗಲಿಕ್ಕಿಲ್ಲ” ಎಂದರು. ನಿತ್ಯಾನಂದರು ಹೇಳಿದಂತೆ ಈರ್ವರು ಊಟ ಮುಗಿಸಿಕೊಂಡು ಬಂದು, ನಿತ್ಯಾನಂದರು ಇದ್ದಡೆಗೆ ಬಂದು ವಿಧೇಯರಾಗಿ ನಿಲ್ಲುತ್ತಾರೆ. ಆಗ ನಿತ್ಯಾನಂದ ಸ್ವಾಮಿಗಳು, ಈಗ ನೀವು ಊರಿಗೆ ಹೋಗುವ ರೈಲಿನ ಸಮಯ. ಇಗಲೇ ಹೋದರೆ ನಿಮಗೆ ರೈಲು ಸಿಗುವುದು. ಮತ್ತೆ ನಿಮಗೆ ಯಾವೊಂದು ರೈಲು ಇಲ್ಲ ಎಂದು ಹೇಳುತ್ತಾರೆ.

ಸ್ವಾಮೀಜಿ ಅವರು ಹೇಳಿದ ಸಲಹೆ ಸತ್ಯವಿತ್ತು. ಹಾಗಾಗಿ ಇರ್ವರು ಕಾಂಞಂಗಾಡ್ ರೈಲು ನಿಲ್ದಾಣದ ಕಡೆಗೆ ತೆರಳುತ್ತಾರೆ. ಹೋದ ತಕ್ಷಣದಲ್ಲಿ ಅವರೂರಿಗೆ ಹೋಗಬೇಕಾದ ರೈಲು ಬಂದಿರುತ್ತದೆ. ರೈಲಿನ ಪ್ರಯಾಣದಲ್ಲಿ ಅವರಿಬ್ಬರ ನಡುವೆ ಮಾತುಕತೆ ನಡೆಯುತ್ತದೆ, ನಿತ್ಯಾನಂದರಲ್ಲಿ ನಾವು ಹೇಳಬೇಕಾದ ವಿಷಯ ಹೇಳಲು ಅವಕಾಶ ದೊರೆಯಲೇ ಇಲ್ಲ. ನಾವು ಬಂದಿರುವ ಉದ್ದೇಶವು ಇಡೇರಲಿಲ್ಲ. ಅದಕ್ಕೇನಂತೆ ಬೇಸರಿಸುವ ಅಗತ್ಯ ಇಲ್ಲ, ಪುನಃವೊಮ್ಮೆ ಬಂದರಾಯಿತು. ಹೇಗೋ ಅವರ ದರ್ಶನ ಸಿಕ್ಕಿತಲ್ಲ ಅದೇ ನಮ್ಮ ಭಾಗ್ಯ ಎಂದು ಈರ್ವರ ನಡುವೆ ಪ್ರಯಾಣದ ಹಾದಿಯಲ್ಲಿ ಚರ್ಚೆಗಳಾಗಿದ್ದವು.

ಈರ್ವರು ಗುರುದೇವರ ದರ್ಶನ ಪಡೆದು ಬಂದ ಸಂತೋಷದಲ್ಲಿ ಮನೆಗೆ ಸೇರುತ್ತಾರೆ. ಬಂದಾಗ ಅವರಿಗೆ ನಂಬಲು ಅಸಾಧ್ಯವಾಗಿರುವ ಅಚ್ಚರಿಯೊಂದು ಕಂಡು ಬರುತ್ತದೆ. ಸೊಸೆ ಕೈ ಕಾಲು ತೊಳೆಯಲೆಂದು ನೀರನ್ನು ತಂದು ನೀಡುತ್ತಾಳೆ. ಲಕ್ಷ್ಮೀ ಕುಟ್ಟಿಯ ಸೌಮ್ಯ ವರ್ತನೆ, ಬದಲಾದ ಮಾನಸಿಕತೆ ಕಂಡು, ಇದು ಸ್ವಾಮಿಗಳ ಮಹಿಮೆಯೇ ಸರಿ ಎಂದು ಅವರು ತಿಳಿಯುತ್ತಾರೆ. ನಾವು ಆಕೆಯನ್ನು ನಿತ್ಯಾನಂದ ಆಶ್ರಮದ ಕಡೆಗೆ ಕರೆದುಕೊಂಡು ಹೋಗದಿದ್ದರೂ, ಅವಳ ಪರವಾಗಿ ಕ್ಷೇತ್ರ ದರ್ಶನ ಮಾಡಿದರೂ ಅವಳಿಗೆ ಗುರುದೇವರು ಕರುಣೆ ತೋರಿಸಿದರಲ್ಲ ಎನ್ನುವ ಗುರುಕೃಪೆಯ ಅನುಭೂತಿ ಅವರಿಗಾಗುತ್ತದೆ.

LEAVE A REPLY

Please enter your comment!
Please enter your name here