ನಿತ್ಯ ಅಂಕಣ-೧೦೦ : ತಾರಾನಾಥ್ ಮೇಸ್ತ, ಶಿರೂರು.
“ಪ್ರಿಯ ಓದುಗರೇ…ನಿತ್ಯ ಅಂಕಣಕ್ಕೆ ಶತ ಸಂಭ್ರಮ. ನಿರಂತರವಾಗಿ ಅವಧೂತ್ ಶ್ರೀ ನಿತ್ಯಾನಂದ ಭಗವಾನ್ ಅವರ ಕುರಿತಾದ ಅದ್ಭುತ ಸರಣಿ ಲೇಖನವನ್ನು ಶ್ರೀ ತಾರಾನಾಥ್ ಮೇಸ್ತ, ಶಿರೂರು ವಾರ್ತೆ.ಕಾಂ ನ ಸಮಸ್ತ ಓದುಗರಿಗೆ ದಿನ ನಿತ್ಯ ನೀಡುತ್ತಿರುವುದು ಒಂದರ್ಥದಲ್ಲಿ ಗುರುಸೇವೆಯೇ ಸರಿ. ಅತ್ಯದ್ಭುತವಾದ ಈ ಸರಣಿ ಲೇಖನ ನೀಡಿದ ಶ್ರಿ ತಾರಾನಾಥ್ ಮೇಸ್ತ, ಶಿರೂರು ಹಾಗೂ ಓದುಗ ಮಿತ್ರರೆಲ್ಲರಿಗೂ ಕೃತಜ್ಞತೆಗಳು. ನಿಮ್ಮ ಅನುಭಗಳಿದ್ದಲ್ಲಿ ಹಂಚಿಕೊಳ್ಳಲು ಅವಕಾಶವಿದೆ. ವಂದನೆಗಳು-ಸಂಪಾದಕ”
ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯಲ್ಲಿ ಬರುವ ಕಾಂಞಂಗಾಡ್ ಐತಿಹಾಸಿಕ ಸ್ಥಳ. ಇದು11 ನೇ ಶತಮಾನದಲ್ಲಿ ಬಂದರಾಗಿತ್ತು. ಅರಬಸ್ಥಾನಗಳಿಂದ ಇಲ್ಲಿಗೆ ವ್ಯಾಪಾರಿಗಳು ಆಗಮಿಸುತ್ತಿದ್ದರು. ರಾಜಾಡಳಿತ ಕಾಲಘಟ್ಟದಲ್ಲಿ ಕಾಂಞಂಗಾಡ್ ಕರ್ನಾಟಕದ ವಿಜಯನಗರ ಅರಸರ ಅಧೀನದಲ್ಲಿತ್ತು. ನಂತರ ವಿಜಯನಗರ ಸಂಸ್ಥಾನದ ಆಡಳಿತವು ಕೊನೆಗೊಂಡ ಬಳಿಕ ಸ್ಥಳೀಯ ಸರದಾರನಾದ ಭದ್ರಪ್ಪ ನಾಯಕ ಕಾಂಞಂಗಾಡ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ವಶಪಡಿಸಿಕೊಂಡು ರಾಜ್ಯಭಾರ ನಡೆಸುತ್ತಿದ್ದ. ಅವರ ನಂತರ ಬಂದ ರಾಜ ವಲ್ಲಭನ್ ಹೊಸದುರ್ಗ ಕೋಟೆಯನ್ನು ಕಟ್ಟಿಸಿದ. ಬಳಿಕ ವಲ್ಲಭನ್ ವಂಶದ ಇಕ್ಕೇರಿ ಎಂಬ ರಾಜನು ಆಡಳಿತ ನಡೆಸುವಾಗ, ಟಿಪ್ಪು ಸುಲ್ತಾನನ ಆಕ್ರಮಣ ನಡೆಯುತ್ತದೆ. ಅವನನ್ನು ಪರಾಕ್ರಮದಿಂದ ಸೆಣಸಿ ಹಿಮ್ಮಟ್ಟಿಸುವ ಕೆಲಸವು ಇಕ್ಕೇರಿ ರಾಜನ ಸೈನಿಕ ಪರಿವಾರದಿಂದ ನಡೆಯುತ್ತದೆ. ಹೀಗೆ ಒಂದು ಇತಿಹಾಸ ಹೇಳುತ್ತದೆ.
ಪಯ್ಯನ್ನೂರು ಕಳಗಮ್ ಎಂದು ಕರೆಯಲ್ಪಡುವ ಮೂವತ್ತೆರಡು ತಾಲೂಕುಗಳ ಗ್ರಾಮಗಳಲ್ಲಿ ಕಾಂಞಂಗಾಡ್ ಒಂದಾಗಿತ್ತು. ಆ ಪ್ರದೇಶವು ಚರ್ಕಳ ರಾಜನಾದ ಕೊಲತ್ತರಿಯಿಂದ ಆಳಲ್ಪಡುತಿತ್ತು. ತುಂಡರಸ ಕಾಂಞನ ಎನ್ನುವನು ಕಾಂಞಂಗಾಡನ್ನು ಆಳುತ್ತಿದ್ದ. ಆತನಿಂದ ಪೇಟೆಯಲ್ಲಿ ಸಣ್ಣಕೋಟೆ ಕಟ್ಟಲ್ಪಡುತ್ತದೆ. ನಂತರ ಕನ್ನಡದ ಅರಸ ರಾಜ ಇಕ್ಕೇರಿಯು ಕಾಂಞಂಗಾಡ್ ವಶಕ್ಕೆ ಪಡೆದು, ಹೊಸದುರ್ಗವನ್ನು ಕಟ್ಟಿಸುತ್ತಾನೆ. ಹೊಸದುರ್ಗ ಎಂದರೆ ಕನ್ನಡದಲ್ಲಿ ಹೊಸದಾದ ಕೋಟೆ ಎಂಬ ಅರ್ಥ ನೀಡುತ್ತದೆ. ಹಾಗಾಗಿ ಊರು ಹೊಸದುರ್ಗ ಎಂಬ ಹೆಸರು ಪಡೆದು ಕೊಳ್ಳುತ್ತದೆ. ಈ ರೀತಿಯ ಇತಿಹಾಸದ ಕಥೆಯು ಕಾಂಞಂಗಾಡಿನ ಹಿಂದಿದೆ. ಕೋಲತ್ತಿಲ ವಂಶದ ಕಾಂಞನ ಎಂಬ ರಾಜನು ಯುದ್ಧದಲ್ಲಿ ಮಡಿದ ಬಳಿಕ ಅವನ ಹೆಸರನ್ನು ಊರಿಗೆ ಕಾಂಞನಗಾಡು ಎಂದು ನೀಡಾಲಾಯಿತು. ಕಡೆಗೆ ಕಾಂಞಂಗಾಡ್ ಎಂದು ಕರೆಯಲ್ಪಟ್ಟಿತು ಎಂದು ಹೇಳಲಾಗುತ್ತದೆ.
ಐತಿಹಾಸಿಕ ಚರಿತ್ರೆಯ ಹಿನ್ನಲೆಯುಳ್ಳ ಕಾಂಞಂಗಾಡ್ ಪ್ರದೇಶಕ್ಕೆ ನಿತ್ಯಾನಂದರು ದಕ್ಷಿಣ ಕೇರಳದಿಂದ ಆಮಿಸುತ್ತಾರೆ. ಗಿಡ ಗಂಟಿಗಳು ಬೆಳೆದು ಕಾಡಾಗಿ, ವಿಷಜಂತುಗಳು ವಾಸವಾಗಿರುವ ಪ್ರದೇಶವನ್ನು ಸ್ವಚ್ಚಗೊಳಿಸುವ ಕಾರ್ಯವನ್ನು ಪ್ರಾರಂಭಿಸುತ್ತಾರೆ. ದೊಡ್ಡದಾದ ಕೆಂಪು ಕಲ್ಲಿನಲ್ಲಿ 43 ಗುಹೆಗಳ ನಿರ್ಮಾಣವು ಅವರಿಂದ ನಡೆಯುತ್ತದೆ. ಬರಿಗೈಯಲ್ಲಿ ಬಂದಿರುವ ಕೌಪಿನಧಾರಿ ಸಾಧು ಮಾಡುತ್ತಿರುವ ನಿರ್ಮಾಣ ಕಾರ್ಯಗಳು ಕಂಡು ಎಲ್ಲರಿಗೂ ಅಚ್ಚರಿ ಆಗುತ್ತದೆ. ಹಲವು ಬಾರಿ ಬ್ರಿಟಿಷ್ ಅಧಿಕಾರಿಗಳಿಂದ ತನಿಖೆಗೂ ಒಳಪಡುತ್ತಾರೆ. ನಿರ್ಮಾಣ ಕಾರ್ಯದಲ್ಲಿ ಶ್ರಮಿಸುತ್ತಿರುವ ಶ್ರಮಿಕರಿಗೆ ಸರಿಯಾದ ಕೂಲಿಯನ್ನು ನಿತ್ಯಾನಂದರು ತಾವು ಉಟ್ಟಿರುವ ಲಂಗೋಟಿಯಿಂದ ತೆಗೆದು ಕೊಡುತ್ತಿದ್ದರು.
ಕಾಂಞಂಗಾಡ್ ನಿತ್ಯಾನಂದ ಆಶ್ರಮದಿಂದ ಪೂರ್ವ ದಿಕ್ಕಿನ ಸುಮಾರು ಐದು ಕೀ.ಮೀಟರ್ ದೂರದಲ್ಲಿ ಗುರುವನ ಎಂಬ ಪ್ರದೇಶ ಇದೆ. ಕೆಲವು ವರ್ಷಗಳ ಕಾಲ ಇಲ್ಲಿ ನಿತ್ಯಾನಂದರು ನೆಲೆ ಕಂಡಿದ್ದರು. ಸ್ವಾಮಿಗಳು ಆಗಮಿಸುವ ಸಂದರ್ಭ ಈ ಪ್ರದೇಶವು ದಟ್ಟಾರಣ್ಯವಾಗಿತ್ತು. ಆದಿವಾಸಿ ಕೊರಗರು ನೆಲೆಸಿದ್ದರು. ಹಾಗಾಗಿ ಆ ಊರಿಗೆ ಕೊರಾತವನ ಎಂದು ಕರೆಯುತ್ತಿದ್ದರಂತೆ. ಗುರುದೇವರು ನೆಲೆಕಂಡ ಬಳಿಕ ಕೊರಾತವನ “ಗುರುವನ” ಎಂದು ಹೆಸರು ಪಡೆಯಿತು. ವನ್ಯಜೀವಿಗಳು ವಿಷಜಂತುಗಳು ಆಶ್ರಯ ಪಡೆದಿದ್ದವು. ಸ್ವಾಮಿಗಳು ಇಲ್ಲಿಗೆ ಬಂದಾಗ ಯಾವೊಂದು ಜಲಮೂಲಗಳು ಇಲ್ಲವಾಗಿದ್ದವು. ಸಮಸ್ಯೆ ಅರಿತು ನಿತ್ಯಾನಂದರು ಕೆಂಪುಕಲ್ಲು ಬಂಡೆಯನ್ನು ಕೈಯಿಂದ ಒಡೆದರು. ಕಲ್ಲಿಂದ ನೀರು ಚಿಮ್ಮಲು ಪ್ರಾರಂಭಗೊಂಡಿತು. ಈಗಲೂ ನೀರು ಹರಿಯುತ್ತಿದೆ. ಅದು ಕೊಳದಲ್ಲಿ ಸಂಗ್ರಹಗೊಳ್ಳುತ್ತದೆ. ಈ ಝರಿಗೆ ನಿತ್ಯಾನಂದರು “ಪಾಪಾನಾಶನೀ ಗಂಗಾ” ಎಂದು ಕರೆದರು. ಇದು ಪವಿತ್ರಗಂಗೆ ಸ್ಥಾನ ಪಡೆದುಕೊಂಡಿದೆ. ಈ ತೀರ್ಥದ ಸೇವನೆ ಪುಣ್ಯಪ್ರದವಾಗಿದೆ. ಇಲ್ಲಿಯ ತೀರ್ಥ ಸ್ನಾನವು ಗಂಗಾ ಸ್ನಾನಕ್ಕೆ ಸಮನಾಗಿದೆ ಎನ್ನುತ್ತಾರೆ. ಗುರುವನ ಪ್ರದೇಶದಲ್ಲಿ ಶತಮಾನಗಳ ಹಿಂದೆ ಯೋಗಿಗಳು ಸಾಧನೆ ಮಾಡುತ್ತಿದ್ದರು. ಋಷಿ ಮುನಿಗಳು ವಾಸಿತ್ತಿದ್ದರೆಂದು ನಿತ್ಯಾನಂದರು ಹೇಳುತ್ತಿದ್ದರು. ಅಷ್ಟ ಸಿದ್ಧಿಯ ರಚನೆಗಳು ಇಲ್ಲಿ ನಿತ್ಯಾನಂದರಿಂದ ನಿರ್ಮಿಸಲ್ಪಟ್ಟಿವೆ.
ಗುರುವನದ ನಿರ್ಮಾಣ, ಕಾಂಞಂಗಾಡಿನಲ್ಲಿ ಗುಹೆಗಳು, ಆಶ್ರಮ, ಬಾವಿ, ಸಂಪರ್ಕ ರಸ್ತೆ ಮೊದಲಾದ ಮೂಲ ಸೌಕರ್ಯಗಳ ನಿರ್ಮಿಸಿ ನಿತ್ಯಾನಂದರು ಸಂಚಾರ ಮುಂದುವರಿಸುತ್ತಾರೆ. ಮುಂದಿನ ಜವಬ್ದಾರಿಯನ್ನು ಶಿಷ್ಯ ಜನಾನಂದ ಸ್ವಾಮಿಗಳಿಗೆ ವಹಿಸಿಕೊಡುತ್ತಾರೆ. ಜನಾನಂದ ಸ್ವಾಮಿಗಳಿಂದ ಗುರುದೇವರ ಸಮಾಧಿ ಬಳಿಕ ಭವ್ಯವಾದ ನಿತ್ಯಾನಂದ ಮಂದಿರದ ಸ್ಥಾಪನೆ ಆಗುತ್ತದೆ. ಹಾಗೆಯೇ ವಿದ್ಯಾಲಯದ ಸ್ಥಾಪನೆ ಅವರಿಂದ ನಡೆತ್ತದೆ. ಜನಾನಂದ ಸ್ವಾಮಿಗಳು 1982.ಡಿಸಂಬರ್ 27 ರಂದು ನಿತ್ಯಾನಂದರಲ್ಲಿ ಐಕ್ಯವಾದರು. ಅವರ ಸಮಾಧಿಮಂದಿರವು ಇಲ್ಲಿದೆ. ಕಾಂಞಂಗಾಡ್ ರೈಲ್ವೇ ನಿಲ್ದಾಣದಿಂದ 2 ಕಿ.ಮೀ ದೂರದಲ್ಲಿ ರೈಲು ಮಾರ್ಗದ ಪೂರ್ವ ಪಾರ್ಶ್ವಧಲ್ಲಿ ನಿತ್ಯಾನಂದ ಆಶ್ರಮ ಭಕ್ತರ ಶ್ರದ್ಧಾಕೇಂದ್ರವಾಗಿ ಬೆಳೆದು ನಿಂತಿದೆ. ದೇಶ ವಿದೇಶದ ಭಕ್ತರು ಆಗಮಿಸಿ ಗುರುದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಯಾತ್ರಾರ್ಥಿಗಳಿಗೆ ವಸತಿ ವ್ಯವಸ್ಥೆ, ಭಕ್ತರಿಗೆ ಭೋಜನ ಪ್ರಸಾದದ ವ್ಯವಸ್ಥೆಯು ಇಲ್ಲಿದೆ. ನಿತ್ಯವು ತ್ರಿಕಾಲಪೂಜೆ, ದತ್ತಜಯಂತಿ, ನಿತ್ಯಾನಂದರ ಆರಾಧನೆ, ಭಜನೆ, ಸತ್ಸಂಗ, ವಿಶೇಷ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ.