ಲೇಖನ: ವಿನಾಯಕ್ ಭಟ್
ಭಿಕ್ಷುಕ… ಸಮಾಜದ ವ್ಯವಸ್ಥೆಗಳಿಗೆ ಹೊರತಾದ ವ್ಯಕ್ತಿತ್ವ ಬೆಳೆಸಿಕೊಂಡವನು ಅಂತಾನೂ ಹೇಳಬಹುದು. ಭಿಕ್ಷುಕರ ಬದುಕನ್ನ ಊಹಿಸಿಕೊಂಡರೆ ನಿಜಕ್ಕೂ ಕರುಳು ಚುರ್ ಎನ್ನುತ್ತೆ. ಬೀದಿಬೀದಿಯಲ್ಲಿ ಅಲೆದು ಅಮ್ಮಾ, ತಾಯೇ, ಅಣ್ಣಾ, ಅಂತ ಕಾಡಿ ಬೇಡಿ ಭಿಕ್ಷೆ ಯಾಚಿಸುವ ಅವ್ರಿಗೆ ಚಿಲ್ಲರೆ ಕಾಸು ತಟ್ಟೆಗೆ ಬಿದ್ದರೂ ಏನೋ ಒಂದು ತೃಪ್ತಿ. ಭಿಕ್ಷೆ ಸಿಗದಿದ್ರೆ ಕಸದ ತೊಟ್ಟಿಯಲ್ಲಿ ಬೀಸಾಡಿದ ಅನ್ನವೇ ಅವರ ಪಾಲಿನ ಮೃಷ್ಟಾನ್ನ.
ಭಿಕ್ಷುಕರೆಂದ್ರೆ ಇಷ್ಟೇ ಅಲ್ಲ, ಮೈ ಮುರಿದು ದುಡಿಯುವ ಬದಲು ಸುಲಭ ಸಂಪಾದನೆಗೆ ಅಂತಾನೇ ಈ ವೃತ್ತಿಗಿಳಿಯುವವರಿದ್ದಾರೆ. ಇನ್ನೆಷ್ಟೋ ಜನ ಎಲ್ಲವನ್ನ ಕಳೆದುಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿದವರಿದ್ದಾರೆ. ಮಾನಸಿಕ ಅಸ್ವಸ್ಥರಾಗಿ ಬೀದಿ ಪಾಲಾದವರಿದ್ದಾರೆ. ಅನಾಥರಾಗಿಯೇ ಹುಟ್ಟಿ ಭಿಕ್ಷೆ ಬೇಡೋದನ್ನೇ ಕಸುಬು ಮಾಡಿಕೊಂಡಿರೋರಿದ್ದಾರೆ. ಕಾರಣಗಳೇನೇ ಇರಲಿ, ಅಂತಹ ಭಿಕ್ಷುಕರ ಬಾಳಲ್ಲಿ ಹೊಸಬೆಳಕು ಮೂಡೋಕೆ ಸಾಧ್ಯಾನೇ ಇಲ್ವಾ? ಹೀನಾಯ ಸ್ಥಿತಿಯಲ್ಲಿಯೇ ಬದುಕಿ ಮಣ್ಣಾಗಬೇಕಾ? ಸಾರ್ಥಕತೆ ಕಾಣೋದೇ ಬೇಡ್ವಾ ? ಇವುಗಳ ಅವಲೋಕನೆಯೂ ಮುಖ್ಯ. ಯಾಕೆಂದ್ರೆ ಇಲ್ಲಿ ನಾವು ಹೇಳ್ತಾ ಇರೋದು ಕೂಡಾ ಇಂತಹದೇ ಒಂದು ಸ್ಟೋರಿ..
ಪುನೀತ್ ಸಿನಿಮಾದ ಮೆಲುಕು
ಭಿಕ್ಷುಕರೆಂದ್ರೆ ಕೊಳೆಯಾದ ಬಟ್ಟೆ, ಕೆದರಿದ ಗಡ್ಡ, ಅನ್ನೋದೆಲ್ಲಾ ನಮ್ಮ ಕಲ್ಪನೆಗೆ ಇದೆ. ಆದ್ರೆ ಇಷ್ಟೊಂದು ಶಿಸ್ತಿನಿಂದ ಇದ್ದಾರಲ್ಲ ಅಂತ ನೀವು ಅಂದ್ಕೊಬಹುದು.. ಹಾಗೇ ಒಮ್ಮೆ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಯಾರೇ ಕೂಗಾಡಲಿ’ ಸಿನಿಮಾವನ್ನ ನೆನಪು ಮಾಡಿಕೊಳ್ಳಿ. ಭಿಕ್ಷುಕನಾಗಿದ್ದವನನ್ನ ಸ್ಮಾರ್ಟ್ ಬಾಯ್ ಥರ ಬದಲು ಮಾಡಲಾಗಿತ್ತು. ಅದು ಸಿನಿಮಾ..ಆದ್ರೆ ನಿಜಜೀವನದಲ್ಲಿ ಇಂತಹದೆಲ್ಲಾ ನಡೆಯೋಕೆ ಸಾಧ್ಯಾನಾ?
ಇವರದ್ದು ಎಲ್ಲವನ್ನ ಕಳೆದುಕೊಂಡ ಜೀವನ. ಕತ್ತಲೆಯಾಚೆ ಒಂದು ಬೆಳಕಿದೆ, ಸುಂದರ ಬದುಕಿದೆ ಅನ್ನೋದನ್ನೇ ತಿಳಿಯದವರು. ಛೀ, ಥೂ ಎಂದು ಕಂಡಕಂಡವರಿಂದ ಉಗಿಸಿಕೊಂಡವರು. ಇವರ್ಯಾರೂ ರಕ್ತ ಸಂಬಂಧಿಗಳಲ್ಲ. ಎಲ್ಲಿಂದಲೋ ಬಂದವರು ಇಲ್ಲಿ ಒಂದೆಡೆ ಸೇರಿದ್ದಾರೆ. ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ತಾನು ಏಕಾಂಗಿ, ತನ್ನವರು ಯಾರಿಲ್ಲ ಅನ್ನೋ ಫೀಲ್ ಕಾಡ್ತಾ ಇದೆ. ಇರುವುದ ನೆನೆದು ಆನಂದ ಪಡುವುದೋ ಅಥವಾ ಕಳೆದುಕೊಂಡಿರುವುದ ನೆನೆದು ಕೊರಗುವುದೋ ಎಂಬ ನಿರ್ಲಿಪ್ತ ಭಾವ. ಆದರೂ ಎಲ್ಲವನ್ನ ನುಂಗಿ ಇಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡ್ತಾರೆ.
‘ಕಾಯಕವೇ ಕೈಲಾಸ’ವೆನ್ನುವ ಭಿಕ್ಷುಕರು!
ತೋಟದಲ್ಲಿ ಗಿಡಗಳಿಗೆ ನೀರು ಹಾಕೋದು ನಿತ್ಯದ ಕಾಯಕ. ಉರಿಬಿಸಿಲಿನಲ್ಲಿ ಮೈ ಬಗ್ಗಿಸಿ ದುಡಿತಾರೆ. ಮಣ್ಣನ್ನ ಅಚ್ಚು ಹಾಕಿ ಇಟ್ಟಿಗೆ ತಯಾರಿಯ ಕಸುಬಲ್ಲಿ ಭಾಗಿಯಾಗ್ತಾರೆ. ಇವರೆಲ್ಲರೂ ಗೊತ್ತೋ ಗೊತ್ತಿಲ್ಲದೆಯೋ ತಪ್ಪು ಹಾದಿ ತುಳಿದು ಸಮಾಜದಲ್ಲಿ ತಿರಸ್ಕರಿಸಲ್ಪಟ್ಟವರು. ಭಿಕ್ಷಾಟನೆಯನ್ನೇ ನಿತ್ಯ ಕಸುಬನ್ನಾಗಿ ಮಾಡ್ಕೊಂಡಿದ್ದವರು.
ಕಂಡಕಂಡವರನ್ನು ಕಾಡಿ, ಬೇಡಿ ನಿಂದಿಸಿಕೊಂಡು ತಮ್ಮ ಹೊಟ್ಟೆತುಂಬಿಸಿಕೊಳ್ಳುತ್ತಿದ್ದ ಇವರು, ಇದೀಗ ಯಾರ ಹಂಗಿಲ್ಲದೆ ಬದುಕ್ತಾ ಇದ್ದಾರೆ. ತಮ್ಮ ಕಾಲಮೇಲೆ ತಾವು ನಿಂತುಕೊಳ್ಳುವ ಮಟ್ಟಿಗೆ ಬೆಳೆದಿದ್ದಾರೆ. ಪರಿಶ್ರಮ ಪಟ್ಟರೆ ನೆಮ್ಮದಿ ಜೀವನ ಸಾಧ್ಯ ಎಂಬುದನ್ನ ಅರಿತುಕೊಂಡಿದ್ದಾರೆ. ಕೈ ಕಾಲು ಗಟ್ಟಿಯಿದೆ ಭಿಕ್ಷೆ ಬೇಡೋದ್ಯಾಕೆ ಅಂತ ವಿಮರ್ಶೆ ಮಾಡ್ಕೊಳೋ ಲೆವೆಲ್ಗೆ ಇವರಲ್ಲಿ ಬದಲಾವಣೆ ಗಾಳಿ ಬೀಸಿದೆ. ಈ ಮಹತ್ತರ ಬದಲಾವಣೆಗೆ ಕಾರಣ ಯಾವುದು ಗೊತ್ತಾ?
ಕತ್ತಲಿನಿಂದ ಬೆಳಕಿನೆಡೆಗೆ….
ನಿರಾಶ್ರಿತರ ಪರಿಹಾರ ಕೇಂದ್ರ.. ತಪ್ಪುಹಾದಿ ತುಳಿದು ಹಾಳಾಗುತ್ತಿದ್ದ ಜನರನ್ನು ತಿದ್ದುವ ಜಾಗ. ಕತ್ತಲೆಯಾಚೆ ಕರೆತಂದು ಬದುಕಲ್ಲಿ ಆಶಾಕಿರಣವನ್ನ ಮೂಡಿಸುವ ಜಾಗ. ಸರ್ಕಾರದ ಅಧೀನದಲ್ಲಿರುವ ಈ ಕೇಂದ್ರ ಇರೋದು ತುಮಕೂರಿನಲ್ಲಿ.
ಹಾದಿ ತಪ್ಪಿದವರನ್ನ ಬೀದಿಗೆ ಬಿದ್ದವರನ್ನ ಸನ್ಮಾರ್ಗದೆಡೆ ಕೊಂಡೊಯ್ಯುವ ಕೆಲಸವನ್ನ ಇದು ಮಾಡ್ತಾ ಇದೆ. ಭಿಕ್ಷುಕರಿಗೆ, ಅನಾಥರಿಗೆ ಊಟ ವಸತಿಯನ್ನ ನೀಡಿ ಆಸರೆಯಾಗಿದೆ.
ಈ ಪರಿಹಾರ ಕೇಂದ್ರ ಇವರನ್ನು ಬದಾಲಾಯಿಸಿದೆ. ಬಸ್ ನಿಲ್ದಾಣಗಳಲ್ಲಿ ಮತ್ತು ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷೆ ಬೇಡುವ ಇವರನ್ನು, ಕರ್ನಾಟಕ ಭಿಕ್ಷೆ ನಿಮೂರ್ಲನೆ ಕಾಯ್ದೆಯಡಿ ಬಂಧಿಸಲಾಗುತ್ತೆ. ನಂತ್ರ ಈ ಪರಿಹಾರ ಕೇಂದ್ರಕ್ಕೆ ಕರೆತರ್ತಾರೆ. ಹೇರ್ಕಟಿಂಗ್, ಶೇವಿಂಗ್ ಮಾಡಿ ಸ್ನಾನ ಮಾಡಿಸ್ತಾರೆ. ಹಾಕ್ಕೊಳೋಕೆ ಬಟ್ಟೆ ಕೊಡ್ತಾರೆ. ಕೆಲದಿನ ಕಂಪರ್ಟೇಬಲ್ ಆಗೋ ಥರ ರೂಮಿನಲ್ಲಿ ಇವರನ್ನ ಬಿಡ್ತಾರೆ. ಇಲ್ಲಿ ಭಿಕ್ಷುಕರಷ್ಟೇ ಅಲ್ಲ, ಮಾನಸಿಕ ಸ್ಥಿಮಿತ ಕಳೆದುಕೊಂಡಿರೋರು ಕೂಡ ಬಹಳಷ್ಟಿದ್ದಾರೆ.
ಬದುಕೇ ಶೂನ್ಯ ಎಂದುಕೊಂಡ ಇವರ ಮನಃಪರಿವರ್ತನೆ ಮಾಡೋದಿದ್ಯಲ್ಲ, ಅದು ನಿಜಕ್ಕೂ ಶ್ಲಾಘನೀಯ. ಕೇಂದ್ರದಲ್ಲಿ ಇವರಿಗೆ ಆಸಕ್ತಿಯಿರುವ ಕೆಲಸಗಳನ್ನೇ ಮಾಡೋಕೇಳ್ತಾರೆ. ಮೈ ಮುರಿದು ದುಡಿತಾರೆ. ಮೂರೊತ್ತು ಹೊಟ್ಟೆತುಂಬಾ ಊಟ ಮಾಡ್ತಾರೆ. ವಾರಕ್ಕೆ ಮೂರು ದಿನ ಮೊಟ್ಟೆ, ಬಾಳೆಹಣ್ಣು ಸಿಗತ್ತೆ. ಇಲ್ಲಿ 165 ಜನ ನಿರಾಶ್ರಿತರಿದ್ದಾರೆ. ಇವರಿಗೆ ಅನುಕೂಲವಾಗುವಂತೆ ಎಲ್ಲಾ ರೀತಿಯ ವ್ಯವಸ್ಥೆಯನ್ನು ಸರ್ಕಾರ ಒದಗಿಸಿಕೊಟ್ಟಿದೆ.
2.50 ಎಕರೆ ಪ್ರದೇಶದಲ್ಲಿ ಪರಿಹಾರ ಕೇಂದ್ರ ನಿರ್ಮಾಣವಾಗಿದೆ. ಒಟ್ಟು 12 ಮಂದಿ ಸಿಬ್ಬಂದಿ ಇಲ್ಲಿ ಕಾರ್ಯನಿರ್ವಹಿಸ್ತಾ ಇದಾರೆ. ನಿರಾಶ್ರಿತರ ಊಟ, ವಸತಿ, ಬಟ್ಟೆ ಮುಂತಾದ ಮೂಲಭೂತ ಸೌಲಭ್ಯಗಳನ್ನು ಸರ್ಕಾರ ನೋಡಿಕೊಳ್ಳುತ್ತಿದೆ. ನಿರಾಶ್ರಿತರ ಶ್ರಮದಿಂದಲೇ ನಿರ್ಮಾಣವಾಗಿರುವ ಬಾಳೆ ತೋಟ ಮಾತ್ರ ಅದ್ಭುತ. ಎನ್.ಪಿ.ಕೆ ಹೆಸರಿನಲ್ಲಿ ಇಟ್ಟಿಗೆಗಳನ್ನು ಕೂಡ ತಯಾರು ಮಾಡ್ತ್ತಾರೆ. ಈ ನಿರಾಶ್ರಿತರು ತಯಾರಿಸುವ ಇಟ್ಟಿಗೆಯಿಂದಲೇ ಸರ್ಕಾರಕ್ಕೆ 4 ಲಕ್ಷ ಆದಾಯ ಬಂದಿದೆ. ಕರ್ನಾಟಕದಲ್ಲಿ ನಿರಾಶ್ರಿತರನ್ನ ಸ್ವಾವಲಂಬಿಗಳನ್ನಾಗಿ ಮಾಡಿರುವ ರಾಜ್ಯದ 2 ನೇ ಪ್ರಮುಖ ನಿರಾಶ್ರಿತರ ಕೇಂದ್ರ ಅನ್ನೋ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದೆ.
ಜೀವನದ ಪಾಠ ಹೇಳುವ ‘ಕೇಂದ್ರ’
ಕಳೆದ 8 ತಿಂಗಳ ಹಿಂದೆ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದ ಕಲ್ಲಪ್ಪ ಈಗ ಭಿಕ್ಷಾಟನೆಯಿಂದ ಮುಕ್ತಿ ಹೊಂದಿದ್ದಾನೆ. ತನ್ನ ಜೀವನದಲ್ಲಿಯೇ ಇಂತಹ ಊಟ ಮಾಡಿರಲಿಲ್ಲ, ದುಡಿದು ತಿನ್ನೋದನ್ನ ಇಲ್ಲಿ ಕಲಿಸಿಕೊಟ್ಟಿದ್ದಾರೆ. ಇಂತಹ ಸುಂದರ ಜೀವನವನ್ನ ಅನುಭವಿಸ್ತೀನಿ ಅಂತ ಕನಸಲ್ಲೂ ಭಾವಿಸಿರಲಿಲ್ಲ ಎಂದು ಹೇಳ್ತಾನೆ.
ಇಲ್ಲಿಗೆ ಬಂದವರು ಒಂದು ವರ್ಷದ ನಂತರ ಮರಳಿ ಹೋಗುವಾಗ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವುದನ್ನ ಕಲಿತಿರ್ತಾರೆ. ಬೀದಿ ಬೀದಿಯಲ್ಲಿ ಕೈ ಚಾಚುತ್ತಿದ್ದವರು ಈಗ ಸ್ವಾಭಿಮಾನಿಗಳಾಗಿದ್ದಾರೆ. ಹೊಸ ಬದುಕನ್ನ ಹುಡುಕಿ ಹೊರಟಿದ್ದಾರೆ. ಆದ್ರೆ ಇವರಲ್ಲಿ ಎಷ್ಟೋ ಜನ ಅನಾಥರು, ಎಷ್ಟೋ ಜನ ಕುಟುಂಬದಿಂದ ದೂರಾದವರು. ನಿರಾಶ್ರಿತರ ಕೇಂದ್ರ ಇವರ ಬದುಕಲ್ಲಿ ಹೊಸ ಆಶಾಭಾವವನ್ನ ಮೂಡಿಸಿದೆ ನಿಜ, ಆದ್ರೆ ಒಂಟಿತನದ ಕೊರಗು ದೂರವಾಗೋಕೆ ಸಾಧ್ಯಾನಾ? ಬದುಕುವುದನ್ನ ಕಲಿತು ಇಲ್ಲಿಂದ ಹೊರ ಹೋಗುವಾಗ ತನ್ನವರ್ಯಾರಿದ್ದಾರೆ ಅನ್ನೋ ಪ್ರಶ್ನೆ ಮನಸಲ್ಲಿ ಕಾಡದೇ ಇರಲ್ಲ. ಆಗಿದ್ದಾಗ್ಲಿ ಮುಂದಕ್ಕೋಗು ಲೈಫು ಇಷ್ಟೇನೆ ಅನ್ನೋ ಸಾಲು ಮನಸಲ್ಲಿ ಗುನುಗ್ತಾ ಇದ್ರೂ ಅಚ್ಚರಿಯೇನಿಲ್ಲ.
ಭಿಕ್ಷೆ ಬೇಡಿ ಬದುಕುವ ಬದಲು ಸ್ವಾಭಿಮಾನಿಯಾಗಿ ಬದುಕು ಅನ್ನೋ ಪಾಠ ಕಲಿಸುತ್ತೆ. ದಿಕ್ಕಿಲ್ಲದವರಿಗೆ ನೆಲೆ ಕಲ್ಪಿಸಿ ನಿನ್ನ ದಾರಿಯನ್ನ ನೀನೇ ಹುಡುಕುವುದು ಹೇಗೆ ಎಂಬುದನ್ನ ತೋರಿಸುತ್ತೆ. ಈ ಮೂಲಕ ನಿರಾಶ್ರಿತರ ಪರಿಹಾರ ಕೇಂದ್ರ ನಿರ್ಜೀವದಂತಿದ್ದವರಿಗೆ ಪುನರ್ಜನ್ಮ ನೀಡುವಲ್ಲಿ ದಿಟ್ಟ ಹೆಜ್ಜೆಯಿಟ್ಟಿದೆ.