ಇದು ಬಜೆಟ್ ಅಲ್ಲ, ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ

0
293

ಮಂಗಳೂರು ಪ್ರತಿನಿಧಿ ವರದಿ
ಅಪ್ಪಟ ಚುನಾವಣಾ ಬಜೆಟ್, ಜಾರಿಗೆ ತರಲು ಸಾಧ್ಯವಿಲ್ಲವಾದರೂ ಜನರ ಕಣ್ಣಿಗೆ ಮಣ್ಣೆರೆಚಲು ಮತ್ತು ಜನರಿಗೆ ತಮ್ಮ ದುರಾಡಳಿತವನ್ನು ಮುಚ್ಚಿ ಹಾಕಲು ಮಾಡಿರುವ ಹರಸಾಹಸ ಎನ್ನುವುದು ಸ್ಪಷ್ಟವಾಗಿ ಎದ್ದು ಕಾಣುತ್ತದೆ.
 
 
ಮೂಡಬಿದ್ರೆ, ಕಡಬ ತಾಲೂಕು ರಚನೆ ಘೋಷಣೆಯನ್ನು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಘೋಷಿಸಲಾಗಿತ್ತು. ಅದಕ್ಕೆ ಕಳೆದ ನಾಲ್ಕು ವರ್ಷಗಳಲ್ಲಿ ಏನೂ ಮಾಡದ ಸಿದ್ಧರಾಮಯ್ಯ ಸರಕಾರ ಇನ್ನೇನೂ ತಮ್ಮ ಅಧಿಕಾರಾವಧಿಯ ಕೊನೆ ವರ್ಷದಲ್ಲಿ ಮತ್ತೆ ಘೋಷಿಸುವ ಮೂಲಕ ಅಲ್ಲಿನ ಜನರಿಗೆ ವಂಚಿಸಿದೆ. ಇಚ್ಚಾಶಕ್ತಿ ಇದ್ದಿದ್ದರೆ ಇದನ್ನು ಯಾವತ್ತೂ ಮಾಡಬಹುದಿತ್ತು. ಪಶ್ಚಿಮ ವಾಹಿನಿಗೆ ನೂರು ಕೋಟಿ ಇಡಲಾಗಿದೆ. ಪಶ್ಚಿಮ ವಾಹಿನಿ ಎಂದರೆ ಅದರ ಸ್ಪಷ್ಟ ರೂಪುರೇಶೆ ಇನ್ನೂ ಕೂಡ ತಯಾರಾಗಿಲ್ಲ. ಅದು ಮತ್ತೊಂದು ಎತ್ತಿನಹೊಳೆ ತರಹ ಆಗುವುದರಲ್ಲಿ ಸಂಶಯವಿಲ್ಲ. ಎತ್ತಿನಹೊಳೆಯ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ. ಈಗ ಮತ್ತೆ ಜನರ ದಾರಿ ತಪ್ಪಿಸಲು ಪಶ್ಚಿಮ ವಾಹಿನಿಯ ಹೆಸರಿನಲ್ಲಿ ಹೊಸ ಕಥೆ ಹೆಣೆಯಲಾಗಿದೆ.
 
 
ಬಂಟ್ವಾಳದಲ್ಲಿ ಆರ್ ಟಿ ಒ ಕಚೇರಿ ಘೋಷಣೆ ಮಾಡಿದ್ದಾರೆ. ಈಗ ಮಂಗಳೂರಿನಲ್ಲಿರುವ ಆರ್ ಟಿ ಒ ಕಚೇರಿಯಲ್ಲಿ ಪೂರ್ಣಕಾಲೀನ ಅಧಿಕಾರಿ ಇಲ್ಲದೆ ವರ್ಷ ಕಳೆದಿದೆ. ಅತ್ಯಧಿಕ ವ್ಯವಹಾರವುಳ್ಳ ಮಂಗಳೂರು ಆರ್ಟಿಎ ಕಚೇರಿಯ ಬಗ್ಗೆ ಗಣನೆಗೆ ತೆಗೆದು ಕೊಳ್ಳದವರು ಬಂಟ್ವಾಳದಲ್ಲಿ ಆರ್ ಟಿ ಒ ಕಚೇರಿ ಘೋಷಿಸಿರುವುದು ಹ್ಯಾಸ್ಯಾಸ್ಪದ.
 
 
ತಮಿಳುನಾಡಿನ ಅಮ್ಮಾ ಕ್ಯಾಂಟೀನ್ ತರಹದ ಕ್ಯಾಂಟೀನ್ ಇಲ್ಲಿ ಕೂಡ ಮಾಡುವ ಘೋಷಣೆ ಮಾಡಿದ್ದಾರೆ. ಇದಕ್ಕೆ ಸೂಕ್ತ ಸಂಪನ್ಮೂಲ ಕೊಡಲು ಸಾಧ್ಯವಿಲ್ಲ ಎಂದು ಆಹಾರ ಇಲಾಖೆ ಈಗಾಗಲೇ ಇದನ್ನು ತಿರಸ್ಕರಿಸಿದೆ. ಇವರು ಹೇಗೆ ಅಮ್ಮಾ ಕ್ಯಾಂಟಿನ್ ಮಾಡುತ್ತಾರೋ ಗೊತ್ತಾಗುತ್ತಿಲ್ಲ. ಆ ಹೆಸರು ಬಹುಶ: ಈ ವರ್ಷ ಮಾತ್ರ ಚಾಲ್ತಿಯಲ್ಲಿ ಇರುವಂತೆ ನೋಡಿಕೊಳ್ಳುವ ಉದ್ದೇಶ ರಾಜ್ಯ ಸರಕಾರದ್ದು.
 
 
ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಐದು ಗ್ರಾಮಗಳನ್ನು ಮಾದರಿ ವಿದ್ಯುತ್ ಗ್ರಾಮಗಳನ್ನು ಮಾಡುವ ಪ್ರಸ್ತಾಪ ಇಟ್ಟಿದ್ದಾರೆ. ಈಗಾಗಲೇ ವಿದ್ಯುತ್ ಕೊರತೆಯಿಂದ ಜನರು ಲೋಡ್ ಶೆಡ್ಡಿಂಗ್ ನಿಂದ ಬಳಲುತ್ತಿದ್ದಾರೆ, ಹಾಗಿರುವಾಗ ವಿದ್ಯುತ್ ಗ್ರಾಮ ಕನಸು ಮಾತ್ರ.
 
 
 
ಮಲ್ಟಿಫ್ಲೆಕ್ಸ್ ಗಳಲ್ಲಿ 200 ರೂಪಾಯಿ ಗರಿಷ್ಟ ಟಿಕೆಟ್ ದರ ನಿಗದಿಗೊಳಿಸಲಾಗಿದೆ. ಆದರೆ ಬಡವರ, ಮಧ್ಯಮವರ್ಗದವರ ಸಿನೆಮಾ ಮಂದಿರಗಳು ಮುಚ್ಚಿ ಹೋಗುತ್ತಿವೆ. ಜನತಾ ಥಿಯೇಟರ್ ಪ್ರಸ್ತಾಪವೇ ಇಲ್ಲ. ರೈತರ ಸಾಲ ಮನ್ನ ಮಾಡುವ ಪ್ರಸ್ತಾಪ ಇಲ್ಲ. ಇದು ಬಜೆಟ್ ಅಲ್ಲ ಬರೇ ಚುನಾವಣಾ ಗಿಮಿಕ್ ಎಂದು ಮಂಗಳೂರು ನಗರ ದಕ್ಷಿಣದ ಅಧ್ಯಕ್ಷರಾದ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here