ಆ ಬಾಲಕನಲ್ಲಿತ್ತು ಅತಿಮಾನುಷ ಲೀಲೆ!!!

0
708

ನಿತ್ಯ ಅಂಕಣ:೩೨

(ನಿನ್ನೆಯ ಸಂಚಿಕೆಯ ಮುಂದುವರಿದ ಭಾಗ…) ಹೆಂಡತಿಯಾದ, ‘ಉನ್ನಿ ಅಮ್ಮ’ ದೇವಸ್ಥಾನದತ್ತ ಹೋದವಳು ಇನ್ನೂ ಯಾಕೆ ಬರಲಿಲ್ಲ..! ಮನೆಗೆ ಬರಲು ತಡವಾಗಿರಲು ಕಾರಣ ಏನಿರಬಹುದು.? ಇಷ್ಟು ಸಮಯದೊಳಗೆ ದೇವಾಸ್ಥನದ ಎಲ್ಲಾ ಕೆಲಸ ಮುಗಿಸಿಕೊಂಡು ಮನಗೆ ಹಿಂತಿರುಗಿ ಬರುತ್ತಿದ್ದವಳು. ಇಂದು ಯಾಕೇ ಹೀಗಾಯಿತೆಂದು, ಚಾತು ನಾಯರ್ ಗಾಭರಿಗೊಂಡು ಚಡಪಡಿಸುತ್ತಾನೆ. ಮಲಗಿರುವ ಮಕ್ಕಳು ನಿದ್ದೆಯಿಂದ ಇನ್ನೂ ಎಚ್ಚರಗೊಂಡಿಲ್ಲ. ನಾನು ಒಮ್ಮೆ ದೇವಸ್ಥಾನದ ಕಡೆಗೆ ಹೋಗಿ ಬರುವುದೇ ಉತ್ತಮ. ಹೀಗೆಂದು ಆಲೋಚಿಸಿದ ಚಾತು ನಾಯರ್, ಹೆಂಡತಿಯನ್ನು ಹುಡುಕುತ್ತ ದೇವಸ್ಥಾನದ ಕಡೆಗೆ ಹೊರಡುತ್ತಾನೆ. ಅಲ್ಲಿ ಹೆಂಡತಿ ಸುರಕ್ಷಿತವಾಗಿ ಇರುವುದು ಕಂಡು ಬರುತ್ತದೆ. ಗಂಡನನ್ನು ಕಂಡ ಉನ್ನಿಯಮ್ಮ, “ಇಲ್ಲಿ ನೋಡಿ…ಸರ್ಪದ ಸನಿಹ ಮಗು ಇದೆ” ಎಂದು ಹೇಳಿ, ಬೆರಳೊಡ್ಡಿ ತೋರಿಸುತ್ತಾಳೆ. ಚಾತು ನಾಯರ್ ಆ ದೃಶ್ಯ ಕಂಡು ಆಶ್ಚರ್ಯ ಪಡುತ್ತಾನೆ. ತಕ್ಷಣ ಚಾತು ನಾಯರ್ ಅಲ್ಲಿಂದ ಬೇಗನೆ ಮನೆಗೆ ಬಂದು ವಕೀಲ ಈಶ್ವರ್ ಐಯ್ಯರ್ ಅವರಿಗೆ ವಿಷಯ ಮುಟ್ಟಿಸುತ್ತಾನೆ. ಸುದ್ದಿ ಕೇಳಿದ ತಕ್ಷಣ ತಡಮಾಡದೆ ಈಶ್ವರ ಐಯ್ಯರ್ ಅವರು, ಸ್ಥಳಕ್ಕೆ ಚಾತು ನಾಯರ್ ಅವರೊಂದಿಗೆ ಧಾವಿಸಿ ಬರುತ್ತಾರೆ.

ಘಟನಾ ಸ್ಥಳಕ್ಕೆ ಬಂದು ನೋಡಿದಾಗ…’ ಈಶ್ವರ್ ಐಯ್ಯರ್ ಅವರಿಗೆ, ಚಾತು ನಾಯರ್ ಹೇಳಿರುವ ವಿಷಯವು ಸತ್ಯವಾಗಿ ಕಂಡು ಬರುತ್ತದೆ. ಅವರಿಗೆ ಪರಮಾಶ್ಚರ್ಯ ಆಗುತ್ತದೆ. ಸರ್ಪದ ಸನಿಹ ಇರುವ ಮಗುವನ್ನು ಕಣ್ಣಾರೆ ಕಾಣುತ್ತಾರೆ. ಅವರು ಕಂಡೊಡನೆ ನಾಗರ ಹಾವು ಸ್ಥಳದಿಂದ ನಿಧಾನಗತಿಯಲ್ಲಿ ತೆವಳುತ್ತ ಹೋಗಿ, ಮುಂದೆ ಕಣ್ಮರೆಯಾಗುತ್ತದೆ. ವಕೀಲರು ಮಗುವನ್ನು ಉನ್ನಿ ಅಮ್ಮರ ಬಳಿ ಎತ್ತಿಕೊಳ್ಳುವಂತೆ ಹೇಳುತ್ತಾರೆ. ಅದು ನೋಡಿದಾಗ ಗಂಡು ಮಗು ಆಗಿರುತ್ತದೆ. ಮಗುವನ್ನು ಚಾತು ನಾಯರ್- ಉನ್ನಿಯಮ್ಮ ದಂಪತಿಗಳು ಮನೆಗೆ ತರುತ್ತಾರೆ. ಮಗು ವೃದ್ಧ ದಂಪತಿಗಳ ಗುಡಿಸಲಿನಲ್ಲಿ ಬೆಳೆಯುತ್ತದೆ. ಮಗುವಿಗೆ ಒಂದು ವರ್ಷ ತುಂಬಿದ ಬಳಿಕ ವಕೀಲ ಈಶ್ವರ್ ಐಯ್ಯರ್ ಅವರು ಪುರೋಹಿತರ ಮೂಲಕ ನಾಮಕರಣ ಶಾಸ್ತ್ರವನ್ನು ನಡೆಸುತ್ತಾರೆ. ಮಗುವಿಗೆ ‘ರಾಮನ್’ ಎಂದು ಶುಭನಾಮವನ್ನು ಇಡುತ್ತಾರೆ. ನಾಮಕರಣ ಕಾರ್ಯಕ್ರಮವು ಮಗು ಸಿಕ್ಕಿದ ವಠಾರದಲ್ಲಿ ಇರುವ ಅಯ್ಯಪ್ಪ ದೇವಾಲಯದಲ್ಲಿಯೇ ನಡೆಯುತ್ತದೆ.

ಚಾತು ನಾಯರ್-ಉನ್ನಿಯಮ್ಮ ದಂಪತಿಗಳ ಐವರು ಮಕ್ಕಳೊಂದಿಗೆ ಬಾಲ ರಾಮನ್ ಬೆಳೆಯುತ್ತಾನೆ. ರಾಮನ್ ಸಾಮಾನ್ಯ ಮಗು ಅಲ್ಲ..! ಆತ ಏನೋ ಒಂದು ದಿವ್ಯಶಕ್ತಿ ಆಗಿರಬೇಕೆಂದು ಅವನ ನಡವಳಿಕೆಯಿಂದ ಮನೆಯವರಿಗೆ ಅನುಭವಕ್ಕೆ ಬರುತ್ತದೆ. ಬಾಲ್ಯದಲ್ಲಿಯೇ ಅತಿಮಾನುಷ ಲೀಲೆಗಳನ್ನು ಅವನಿಂದ ಪ್ರಕಟವಾಗುತ್ತಿದ್ದವು. ಉನ್ನಿಯಮ್ಮ ಬಡತನ ಇದ್ದರೂ ಮಗುವನ್ನು ಮಾತ್ರ ಯಾವೂದಕ್ಕೂ ಕೊರತೆ ಮಾಡದೆ, ಹೆತ್ತ ಮಕ್ಕಳಗಿಂತಲೂ ಹೆಚ್ಚಾಗಿ ಮುದ್ದಿನಿಂದ ಸಾಕತೋಡಗಿದಳು. ಆ ಮಗುವಿನ ಬಾಲಲೀಲೆಗಳ ಕಂಡು ಉನ್ನಿಯಮ್ಮ ನಿತ್ಯವು ಆನಂದ ಪಡೆಯುತ್ತಾಳೆ. ಅದೇ ಬಾಲಕ ರಾಮನ್, ಮುಂದೆ ‘ಅವಧೂತ ನಿತ್ಯಾನಂದ ಸ್ವಾಮೀಜಿ’ ಆಗುತ್ತಾನೆ. ಈ ಘಟನೆ ಕಲಿಯುಗದಲ್ಲಿ ನಡೆದರೂ ನಡೆದಿರುವ ನಿಖರವಾದ ದಿನಾಂಕ, ವರ್ಷದ ದಾಖಲೆಗಳು ಲಭ್ಯವಾಗಿಲ್ಲ. ಕ್ರಿ.ಶ 1885 ರ ಸುಮಾರಿಗೆ ನಡೆದಿರ ಬಹುದೆಂದು ಅಂದಾಜಿಸಲಾಗಿದೆ. ರಾಮನ್ ಅಥವಾ ನಿತ್ಯಾನಂದರು ಯಾವ ಮಾತೆಯ ಉದರ ಗರ್ಭದೊಳಗೆ ನವಮಾಸ ವಾಸವಾಗಿದ್ದರು ಎಂಬುವುದು ಯಾರಿಗೂ ತಿಳಿದು ಬಂದಿರದ ನಿಗೂಢ ವಿಚಾರವಾಗಿದೆ. ಅವರು ಸಾಕಲ್ಪಟ್ಟವರು ಎಂದಷ್ಟೆ ತಿಳಿದು ಬಂದಿದೆ. ಹಾಗಾಗಿ ನಿತ್ಯಾನಂದರನ್ನು ಅಯೋನಿಜ, ಅವತಾರ ಶಕ್ತಿ ಎಂದು ಭಕ್ತರು ಶೃದ್ಧಾ ಭಕ್ತಿಯಿಂದ ಪೂಜಿಸುತ್ತಿದ್ದಾರೆ.
(ಮುಂದುವರಿಯುವುದು)

ತಾರಾನಾಥ್‌ ಮೇಸ್ತ,ಶಿರೂರು.

Advertisement

LEAVE A REPLY

Please enter your comment!
Please enter your name here