ಆ ದೃಶ್ಯವನ್ನು ಕಂಡವರೆಲ್ಲರೂ ದಂಗಾಗಿ ಹೋಗಿದ್ದರು!

0
897

ನಿತ್ಯ ಅಂಕಣ: ೧೬

ಗಣೇಶಪುರಿಯಲ್ಲಿ ನಿತ್ಯಾನಂದ ಸ್ವಾಮೀಜಿ ದರ್ಶನ ಪಡೆದು, ಗುರುದೇವರ ಅನುಗ್ರಹ ಪಡೆದವರು ಶ್ರೀ ಶಂಕರ ತೀರ್ಥ ಸ್ವಾಮಿಗಳು ಕೂಡ ಒರ್ವರು. ಶ್ರೀಗಳು “ನಾಥ ಮಂದಿರ” ದಲ್ಲಿ ಇದ್ದರು. ಅವರನ್ನು 1959, ಏಪ್ರಿಲ್ ತಿಂಗಳಲ್ಲಿ ಉಡುಪಿ ಪೇಜಾವರ, ಅಧೋಕ್ಷಜ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳು ಭೇಟಿ ಮಾಡಿದ್ದರು. ಇಬ್ಬರ ನಡುವೆ ಬಹಳ ಹೊತ್ತು ಮಾತುಕತೆ ನಡೆಯಿತು. ಪೇಜಾವರ ಶ್ರೀಗಳು ಮಾತನಾಡುತ್ತಾ ಶಂಕರತೀರ್ಥ ಶ್ರೀಪಾದರಲ್ಲಿ ಕೇಳಿದರು, “ತಾವು ಶ್ರೀ ನಿತ್ಯಾನಂದ ಮಹಾರಾಜರನ್ನು ಯಾವ ದೃಷ್ಠಿಯಲ್ಲಿ ನೋಡುತ್ತೀರಿ..?” ಈ ಮಾತು ಕೇಳಿದ ಶಂಕರತೀರ್ಥ ಸ್ವಾಮಿಗಳ ಕಣ್ಣಿಂದ ಕಣ್ಣೀರು ಬಂದಿತಂತೆ. ಅವರ ಬಗ್ಗೆ ಹೇಗೆ ತಿಳಿಸಲಿ, ಅವರು “ದೇವರು” ಎಂದರಂತೆ. ಪೇಜಾವರ ಶ್ರೀಪಾದರು ಪುನಃ ಕೇಳಿದರು, ಅವರನ್ನು ನೀವು ಯಾವ ಆಧಾರದ ಮೇಲೆ ದೇವರೆಂದು ಹೇಳುವಿರಿ..? ಶಂಕರತೀರ್ಥ ಶ್ರೀಗಳು.. “ನಾನು ಈ ನನ್ನ ನಾಲಿಗೆಯಿಂದ, ಅವರ ವಿಷಯವನ್ನು ನಿಮ್ಮಗೆ ಹೇಗೆ ವರ್ಣಿಸಿ ಹೇಳಲಿ..? ಎಂದು ಹೇಳುತ್ತಾರಂತೆ. ಉತ್ತರಿಸುವಾಗಲೇ ಅವರ ತುಟಿಗಳು ನಡುಗುತ್ತವೆ. ಕಣ್ಣುಗಳಿಂದ ನೀರು ಬರುತ್ತದೆ. ಈ ದೃಶ್ಯವನ್ನು ಕಂಡವರೆಲ್ಲರೂ ದಂಗಾಗಿ ಹೋಗುತ್ತಾರೆ. ಅಲ್ಲೆ ಇದ್ದ ನಿತ್ಯಾನಂದ ಸ್ವಾಮೀಜಿಗಳ ಭಕ್ತರಾದ ಉಡುಪಿಯ ಟಿ.ಆರ್.ಎ ಪೈಗಳು ಬಾವುಕರಾಗುತ್ತಾರೆ. ಈ ವಿಷಯವನ್ನು ಅವರು ಲೇಖನವೊಂದರಲ್ಲಿ ಉಲ್ಲೇಖಿಸಿದ್ದಾರೆ.

ಚಿತ್ರ ಕೃಪೆ: ಅಂತರ್ಜಾಲ.

ಗಣೇಶಪುರಿಯಲ್ಲಿ ಒಮ್ಮೆ ಭಜಕರು ತಾಳ ಹಿಡಿದು ಭಜನೆ ಹಾಡುತ್ತಿದ್ದರು. ನಿತ್ಯಾನಂದ ಸ್ವಾಮಿಗಳು ಭಜನೆ ಹಾಡುಗಳನ್ನು ಕೇಳುತ್ತಿದ್ದರು. ಭಜನೆ ಹಾಡುವಲ್ಲಿಗೆ ಬಂದ ಗುರುದೇವರು ಯಾವುದೋ ಒಂದು ಕಾಲ್ಪನಿಕ ವಸ್ತುವಿಗೆ ಗುರಿ ಇಟ್ಟು ಗುಂಡು ಹೊಡೆಯುವ ನಟನೆ ಮಾಡಿದರು. ಹೀಗೆ ಮಾಡುವಾಗ ‘ಟಫ್’ ಎಂಬ ಶಬ್ದವನ್ನು ಬಾಯಿಂದ ಹೊರಡಿಸುತ್ತಾರೆ. ಅಲ್ಲಿ ಕುಳಿತಿರುವ ಭಜನೆ ಭಜಕರು ಗುರುದೇವರ ವರ್ತನೆ ಕಂಡು ಆಶ್ಚರ್ಯ ಪಡುತ್ತಾರೆ. “ಇದೇನು ಗುರುದೇವರು ಈ ರೀತಿ ವರ್ತಿಸುತ್ತಾರೆ..!! ಎಂದು. ತಕ್ಷಣ ಗುರುದೇವರು, ತನ್ನ ನಟನೆಗೆ ಸಿಕ್ಕಿದ ಪ್ರತಿಕ್ರಿಯೆ ಕಂಡು, “ಮನಸ್ಸೆಲ್ಲಿಯೋ..! ಹಾಡುವ ಭಜನೆ ಎಲ್ಲಿಯೋ..!” ಬೇಡನ ಹಾಗೆ ಇರಬೇಕು. ಬೇಡನಿಗೆ ಪಕ್ಷಿ ಹೊಡೆಯುವಾಗ ಏಕಾಗ್ರತೆ ಇರುತ್ತದೆ. ಅವನ ಮನಸ್ಸು ಪಕ್ಷಿಯ ಮೇಲೆ ನಾಟಿರುತ್ತದೆ. ಅದೇ ರೀತಿ ದೇವರ ಭಜನೆ, ಚಿಂತನೆ ಮಾಡುವಾಗ ಮನಸ್ಸನ್ನು ಸಾವಿರ ಕಡೆ ಹರಿಯಲು ಬಿಡುವುದಲ್ಲ. ದೇವರ ಮೇಲೆಯೇ ಇಡಬೇಕು. ಹೀಗೆಂದು ಗುರುದೇವರು ಹೇಳುತ್ತಾರಂತೆ. ಈ ಭೋದಪ್ರದ ವಾಣಿಯನ್ನು ಹತ್ತಿರದಿಂದ ಕೇಳಿದ, ಮತ್ತು ಅಂದಿನ ಗುರುಗಳ ಅಣುಕು ನಟನೆಯನ್ನು ಕಂಡಿರುವ ಉಡುಪಿಯ ಟಿ.ಆರ್.ಎ ಪೈಗಳು, 24 ನವಂಬರ್ 1961ರಲ್ಲಿ ಕವಿ ಮುದ್ದಣ ಮಾರ್ಗ ಇಲ್ಲಿಯ ನಿತ್ಯಾನಂದ ಮಂದಿರ ಉದ್ಘಾಟನೆಗೊಳ್ಳುವ ದಿನದಂದು ಧಾರ್ಮಿಕ ಸಭೆಯ ಅಧ್ಯಕ್ಷರಾಗಿರುತ್ತಾರೆ. ಅಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಈ ಗುರುದೇವರ ನೀತಿಸಾರದ ಈ ಕಥೆಯನ್ನು ಸಭಿಕರ ಮುಂದೆ ಇಡುತ್ತಾರೆ.

ನಿತ್ಯಾನಂದರು ಈ ಲೋಕದಲ್ಲಿ ಇದ್ದಷ್ಟು ಕಾಲದಲ್ಲಿ ನಿರ್ಲಿಪ್ತತೆಯ ಬಾಳನ್ನು ಬಾಳಿದರು. ಎಲ್ಲರೂ ಅವರನ್ನು ಹಚ್ಚಿಕೊಂಡರು. ಆದರೆ ಅವರು ಯಾರನ್ನು ಹಚ್ಚಿಕೊಂಡಿಲ್ಲ. ಅವರಲ್ಲಿ ಒಂದು ಸಾತ್ತ್ವಿಕತೆಯ ಸಿದ್ಧಿ ಇತ್ತು. ಆಧ್ಯಾತ್ಮಿಕ ಅನುಸಂಧಾನದಿಂದ ಅವರ ಹೃದಯವು ಮಾಗಿತ್ತು. ದೈವಿಕತೆಯ ಸಾತ್ತ್ವಿಕ ಪ್ರಭೆ ನೆಲೆಸಿತ್ತು. ಜನರನ್ನು ಅವರೆಡೆಗೆ ಬರಿಸುತ್ತಿದ್ದ ಅಯಸ್ಕಾಂತ ಎಂದರೆ ಈ ಅಂತಶಕ್ತಿ. ಈ ಆಧ್ಯಾತ್ಮದ ಹೊಂಬೆಳಕೇ ಇಂದಿಗೂ ಎಂದೆಂದಿಗೂ ಜೀವನದ ಪಥದರ್ಶಕವಾಗಿದೆ. ಹೀಗೆಂದು ಹೇಳಿದವರು ಹಿರಿಯ ವಿದ್ವಾಂಸರು ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದ ಆಚಾರ್ಯರು.1961 ರಲ್ಲಿ ಅವರೊಂದು ಗುರುದೇವರ ಕುರುತಾಗಿ, “ಆಧ್ಯಾತ್ಮದ ಹೊಂಬೆಳಕು” ಶಿರೋನಾಮೆಯ ಲೇಖನ ಬರೆದಿದ್ದರು. ಅವರ ಆ ಲೇಖನದಲ್ಲಿ ಇರುವ, ಅವರ ಅಭಿವ್ಯಕ್ತಿಯ ಅಮೃತವಾಕ್ಯವಿದು.

ತಾರಾನಾಥ ಮೇಸ್ತ,ಶಿರೂರು.

Advertisement

LEAVE A REPLY

Please enter your comment!
Please enter your name here