ಆಹಾರವೇ ನಮಗೆ ಔಷಧವಾಗಬೇಕು, ಔಷಧ ನಮಗೆ ಆಹಾರವಾಗಬಾರದು

0
327

 
ವರದಿ: ಶ್ಯಾಮ್ ಪ್ರಸಾದ್ ಬದಿಯಡ್ಕ
ಆಹಾರವೇ ನಮಗೆ ಔಷಧವಾಗಬೇಕು, ಔಷಧ ನಮಗೆ ಆಹಾರವಾಗಬಾರದು. ದೇಶೀ ಗೋತಳಿಯನ್ನು ಸಂರಕ್ಷಿಸುವುದರಿಂದ ಸಾವಯವ ಕೃಷಿಯನ್ನು ಮಾಡುವ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಕುಂಬಳೆ ಗ್ರಾಮಪಂಚಾಯತು ಸದಸ್ಯ ಮುರಳೀಧರ ಯಾದವ್ ಅಭಿಪ್ರಾಯಪಟ್ಟರು.
 
 
ಅವರು ಆದಿತ್ಯವಾರ ಕುಂಬಳೆ ಶ್ರೀ ಗೋಪಾಲಕೃಷ್ಣ ಕ್ಷೇತ್ರದ ಪರಿಸರದಲ್ಲಿ ನಡೆದ ಮಂಗಲ ಗೋಯಾತ್ರೆಯ ಪೂರ್ವಭಾವಿ ಪ್ರಚಾರಣಾರ್ಥ ಹೊರಟ ಗೋಕಿಂಕರ ಯಾತ್ರೆಯ ಸಭಾಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು. ಅವರು ಮಾತನಾಡುತ್ತ ನಮ್ಮ ಮನೆಯಲ್ಲಿ ಗೋವಿದ್ದರೆ ಮನಸ್ಸಿಗೆ ಸಂತೋಷ ಹಾಗೂ ಧೈರ್ಯ ಲಭಿಸುತ್ತದೆ. ಮಠ ಮಂದಿರಗಳಲ್ಲಿ ಗೋವನ್ನು ಸಾಕುವಂತಾಗಬೇಕು. ದೇಶೀ ಗೋತಳಿಯ ಹಾಲನ್ನೇ ದೇವರಿಗೆ ಅರ್ಪಿಸಬೇಕು ಎಂದು ಹೇಳಿದರು.
 
ಉದ್ಯಮಿ ಉಮೇಶ್ ಪೈ ಕುಂಬಳೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಗೋವು ನಮ್ಮ ಸಂಸ್ಕೃತಿಯ ಪ್ರತೀಕ, ಗೋವಿಲ್ಲದ ಭಾರತವನ್ನು ಊಹಿಸಲೂ ಅಸಾಧ್ಯ ಎಂದರು. ಮುಂದಿನ ದಿನಗಳಲ್ಲಿ ನಡೆಯುವ ಮಂಗಲ ಗೋಯಾತ್ರೆಯನ್ನು ವಿಜಯಗೊಳಿಸಲು ನಾವೆಲ್ಲ ಕೈಜೋಡಿಸಬೇಕು ಎಂದು ಕರೆಯಿತ್ತರು.
 
 
ಡಾ| ಡಿ.ಪಿ. ಭಟ್ ಮಾತನಾಡಿ ಸಮಾಜೋದ್ಧಾರದ ಕೈಂಕರ್ಯದಲ್ಲಿ ಗೋಸಂರಕ್ಷಣೆಗೆ ಮಹತ್ವವನ್ನು ಕೊಟ್ಟಿರುವುದು ಶ್ಲಾಘನೀಯ ಎಂದರು. ವಿಘ್ನೇಶ್ವರ ತಲಕಾಲಕೊಪ್ಪ ದಿಕ್ಸೂಚಿ ಭಾಷಣದಲ್ಲಿ ಗೋವಿನಿಂದ ಕೇವಲ ಹಾಲನ್ನು ಮಾತ್ರ ನಿರೀಕ್ಷಿಸಬಾರದು. ಗೋವು ಸಂಚರಿಸುವ ಸ್ಥಳಗಳನ್ನು ಪ್ಲಾಸ್ಟಿಕ್ ಮುಕ್ತವಾಗಿರಿಸಬೇಕು. ವಿದ್ಯಾರ್ಥಿಗಳು ಗೋವನ್ನು ಪ್ರೀತಿಸುವಂತೆ ಮಾಡಬೇಕು, ಸಾವಯವ ಕೃಷಿಯತ್ತ ರೈತರನ್ನು ಪ್ರೇರೇಪಿಸುವಂತೆ ಮಾಡಬೇಕು ಎಂದರು. ಸುಬ್ರಹ್ಮಣ್ಯ ಭಟ್ ಬಜಪ್ಪೆ ಸ್ವಾಗತಿಸಿ, ಅಧ್ಯಾಪಕ ಗುರುಮೂರ್ತಿ ನಾಯ್ಕಾಪು ಧನ್ಯವಾದವನ್ನಿತ್ತರು. ಸಂಚಾಲಕ ಚಂದ್ರಶೇಖರ ಪಳ್ಳತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here