ಆಹಾರದ ಕಲಬೆರಕೆ , ಬಲಿ ನಮ್ಮ ಜನರದಕೆ

0
382

 
ಅರಿತುಕೋ ಬದುಕ ವೈಖರಿ ಅಂಕಣ: ಎಂ ಎಸ್ ಸಂಚನಾ
ಹಿಂದಿನ ಸಂಚಿಕೆಯಿಂದ….
‘ಕಲಬೆರಕೆ’ ಎಂಬುದು ಕೇವಲ ನಮ್ಮ ಭಾರತ ಮಾತ್ರವಲ್ಲದೆ, ವಿಶ್ವದ ಹಲವಾರು ದೇಶಗಳೂ ಕಂಗೆಡುವಂತೆ ಮಾಡುತ್ತಿರುವ ಒಂದು ಅಕ್ರಮ. ನಮ್ಮಲ್ಲಿ ಅನೇಕರು ತಮಗೆ ದಿಢೀರನೆ ಹೋಟ್ಟೆನೋವು, ವಾಂತಿ, ಅಜೀರ್ಣ, ಆಮಶಂಕೆಯ ಲಕ್ಷಣಗಳು ಕಾಣಿಸಿಕೊಂಡರೆ ಇದು ಆಹಾರದ ದೋಷದಿಂದಾಗಿಯೇ ಬಂದಿರಬಹುದೆಂದು ಬಹುಬೇಗ ಗ್ರಹಿಸಬಲ್ಲರು. ಆದರೆ ಒಮ್ಮೆ ಆರೋಗ್ಯವು ಚೇತರಿಕೊಂಡಾಗ ಪುನಃ ಆ ದೋಷಗಳ ಕಡೆಯೇ ಮುಖ ಮಾಡುವರು. ಆದರೆ ತಿಳಿದಿರಲಿ ಕಲಬೆರಕೆಯಿಂದ ಬಂದೆರಗುವ ಆಹಾರ ಸಂಬಂಧೀ ಖಾಯಿಲೆಗಳ ಮೇಲೆ ಸರಿಯಾದ ನಿಗವಿಡದೆ ನಿರ್ಲಕ್ಷ್ಯ ತೋರಿದರೆ ಮುಂದೊಂದು ದಿನ ಭಯಾನಕ ಖಾಯಿಲೆಗಳೆಲ್ಲಾ ದೇಹದೊಳಗೆ ಬಂದು ಮನೆಮಾಡಿ ಬಾಧಿಸಲಾರಂಭಿಸುತ್ತದೆ.
 
ದೇಹದ ಹಲವಾರು ಅಂಗಗಳನ್ನು ಹಲವಾರು ರೀತಿಯಲ್ಲಿ ಹಿಂಸಿಸಬಲ್ಲ ಅದ್ಭುತ ಶಕ್ತಿ ಕಲಬೆರಕೆಗಾಗಿ ಬಳಸುವ ವಸ್ತುಗಳಲ್ಲಿದೆ. ನಾವು ದಿನನಿತ್ಯ ಬಳಸುವ ಆಹಾರ ಸಾಮಾಗ್ರಿಗಳಲ್ಲಿ ಕಾಣದಂತೆ ಅಡಗಿರುವ ಅಂತಹ ವಸ್ತುಗಳು ತಂದೊಡ್ಡುತ್ತಿರುವ ಅವಾಂತರಗಳನ್ನು ಅರಿಯುವುದಾದರೆ – ಹಾಲಲ್ಲಿರುವ ಅಶುದ್ದ ನೀರು ಅಥವ ಸ್ಟಾರ್ಚ್, ಮೆಣಸಿನ ಪುಡಿಯಲ್ಲಿರುವ ಇಟ್ಟಿಗೆ ಪುಡಿ, ಉಪ್ಪು-ಸಕ್ಕರೆಯಲ್ಲಿರುವ ಸೀಮೆ ಸುಣ್ಣದ ಪುಡಿ, ಕಾಫಿ ಪುಡಿಯಲ್ಲಿರುವ ಯತೇಚ್ಛ ಚಿಕೋರಿ ಪುಡಿ, ನಮ್ಮ ಹೊಟ್ಟೆಕೆಡುವಂತೆ ಮಾಡುವಲ್ಲಿ ತಮ್ಮ ಕೊಡುಗೆ ನೀಡಬಲ್ಲವು. ಒಮ್ಮೆ ಬಳಸಿ ಬಿಟ್ಟ ಟೀ ಪುಡಿಗೆ ನೈಸರ್ಗಿಕವಲ್ಲದ ಬಣ್ಣಗಳನ್ನೆಲ್ಲಾ ಬೆರಸಿ ಮರುಬಳಕೆ ಮಾಡಿದರೆ, ಅಡುಗೆ ತೈಲದಲ್ಲಿ ಮಿನರಲ್ ತೈಲವನ್ನು ಬಳಸಿದರೆ ನಮ್ಮ ಯಕೃತ್ತಿನ ಮೇಲೆ ಏಟು ಬೀಳುವುದು ಖಂಡಿತ. ಮಕ್ಕಳೆಲ್ಲಾ ಬಲು ಇಷ್ಟ ಪಟ್ಟು ತಿನ್ನುವ ಐಸ್ ಕ್ರಿಮ್ ನಲ್ಲಿ ಡಿಟರ್ಜಂಟ್ ಫೌಡರನ್ನು ಕಲಬೆರಕೆಯ ವಸ್ತುವಾಗಿ ಬಳಸಿದಾಗ ಅದು ಚರ್ಮ ಹಾಗು ಶ್ವಾಸಕೋಶ ಸಂಬಂಧಿ ಖಾಯಿಲೆಗಳಿಗೆ ರಹದಾರಿ ಮಾಡಿಕೊಡುತ್ತದೆ.
 
 
 
 
ತೊಗರಿ ಬೇಳೆಯಲ್ಲಿ ಹೆಚ್ಚಾಗಿ ಸೇರಿಸುವ ಕೇಸರಿ ಬೇಳೆ (kesari dal)ನಿಂದಾಗಿ ಲಥೈರಿಸಂ(lathyrism)ಎಂಬ, ನಡೆಯಲು ಕಷ್ಟವಾಗಿ ಕುಂಟುವಂತಾಗುವ ಖಾಯಿಲೆ ಬರುತ್ತದೆ. ಮಾಂಸ ಉತ್ಪಾದನೆಯಲ್ಲಿ ಪ್ರಾಣಿಗಳ ಬೆಳವಣಿಗೆ ವೇಗವಾಗಲೆಂದು ಬಳಸುವ ಆಕ್ಸಿಟೋಸಿನ್ ಇಂಜೆಕ್ಷನ್ ಗಳು ಮತ್ತು ಪಾದರಸದಿಂದ ಮಲಿನಗೊಂಡ ಸಮುದ್ರ ಮೀನುಗಳು ಮೆದುಳಗೆ ಹಾನಿಯನ್ನು ಮಾಡಬಲ್ಲವು.ಸಾಸಿವೆಯ ಜೊತೆ ಸೇರಿಸುವ ದತ್ತೂರಿಗಿಡದ ಬೀಜವು(Argemone seed) ಜಲೋಧರ ಸಮಸ್ಯೆ, ಹೃದಯ ಸ್ತಂಭನದಂತ ಭೀಕರ ಸಮಸ್ಯೆಗಳಿಗೆ ಬಾಗಿಲು ತೆರೆಯುತ್ತದೆ.
 
 
 
 
ಕುಡಿಯುವ ನೀರಿನ ಕಲಬೆರಕೆಯಲ್ಲಿ ಸಾಂಬಾರ ಪದಾರ್ಥಗಳ ಕಲಬೆರಕೆಯಲ್ಲಿ ಸೇರಿಕೊಳ್ಳುವ ಸೀಸ (Lead), ಸೇಬು ಹಣ್ಣಿನ ಮೇಲೆಲ್ಲಾ ಸ್ಪ್ರೇ ಮಾಡುವ ಆರ್ಸೆನಿಕ್ ನಂತ ವಿಷಯುಕ್ತ ರಸಾಯಾನಿಕಗಳು ಪಾರ್ಶ್ವವಾಯುವಿನಂತ ಸಮಸ್ಯೆಗಳನ್ನು ಪರಿಚಯಿಸಬಲ್ಲದು. ಹಾಲಿಗೆ ಸುರಿಯುವ ಯುರೀಯ, ತುಪ್ಪಕ್ಕೆ ಸುರಿಯುವ ವನಸ್ಪತಿ ಅಥವಾ ಡಾಲ್ಡದಿಂದಾಗಿ ಕಿಡ್ನಿ ತನ್ನ ಕಾರ್ಯವನ್ನು ಸುಸೂತ್ರವಾಗಿ ನಡೆಸದೆ ವೈಫಲ್ಯಕಾಣುತ್ತದೆ. ಬೇಕರಿಗಳ ಸಿಹಿ ಸದಾರ್ಥಗಳು ನಮ್ಮ ಕಣ್ಣನ್ನು ಕುಕ್ಕಲು ಕಾರಣವಾದ, ಮನೆಗಳಲ್ಲಿ ಬಳಸುವ ಅರಿಶಿನದ ಪುಡಿಯು ಕಡು ಹಳದಿಯಾಗಿರುವಂತೆ ಮಾಡುವ ಅನುಮತಿ ಪಡೆಯದ ಮೆಟಾನಿಲ್ ಎಲ್ಲೋ(Metanil yellow)ಎಂಬ ವಿಷಯುಕ್ತ ಬಣ್ಣವು, ಹಣ್ಣು ತರಕಾರಿಗಳ ಮೇಲೆ ಅತಿಯಾಗಿ ಬೀಳುವ ರಸಗೊಬ್ಬರ ,ಕೀಟ ನಾಶಕಗಳು ಕ್ಯಾನ್ಸರ್ ನಂತ ಮಹಾಮಾರಿಗೆ ಮುನ್ನುಡಿ ಬರೆಯುತ್ತವೆ.
 
ಕಠಿಣ ಕಾನೂನುಗಳ ಜಾರಿ, ಪ್ರಮಾಣಪತ್ರದಂತ ಯೋಜನೆಗಳು ಹಾಗೂ ಇವೆಲ್ಲಾ ಕಾರ್ಯಗಳಲ್ಲಿ ಸಾರ್ವಜನಿಕರ ಸಂಪೂರ್ಣ ಭಾಗವಹಿಸುವಿಕೆ ಮತ್ತು ಒಳಗೊಳ್ಳುವಿಕೆಯಿದ್ದರೆ ಅಹಾರದ ಕಲಬೆರಕೆಯನ್ನು ಕಡಿತಗೊಳಿಸುವುದು ಕಷ್ಟವೇನಲ್ಲ. ಬಹು ಹಿಂದಿನಿಂದಲೂ ನಮ್ಮ ಭಾರತ ಸರ್ಕಾರಕ್ಕೆ ಕಲಬೆರಕೆ ಎಂಬ ಈ ಅಕ್ರಮದ ಕುರಿತಂತೆ ಅರಿವಿದೆ. ಹಾಗಾಗಿಯೇ ಈ ನಿಟ್ಟಿನಲ್ಲಿ ಅನೇಕ ಸಂಸ್ಥೆಗಳನ್ನು, ಕಾನೂನು-ಖಾಯಿದೆಗಳನ್ನು ರಚಿಸಿವೆ, ಅವುಗಳಲ್ಲಿ ಕೆಲವೊಂದನ್ನು ಕಡ್ಡಾಯವಾಗಿ ಪಾಲಿಸಬೇಕೆಂದೂ, ಇನ್ನೂ ಕೆಲವನ್ನು ಐಚ್ಚಿಕವೆಂದು ವಿಂಗಡಿಸಲಾಗಿದೆ.
 
ಕಡ್ಡಾಯವಾಗಿ ಪಾಲಿಸಬೇಕಾದ ಕಾನೂನುಗಳಲ್ಲಿ ಅತೀ ಪ್ರಮುಖವಾದುದು 1954 ರ ಆಹಾರ ಕಲಬೆರಕೆ ತಡೆಗಟ್ಟಣಾ ಕಾನೂನು (Prevention of food adulteration Act) ಇದು ಜಾರಿಯಾದ ವರ್ಷ 1955. ಆಹಾರ ಕಲಬೆರಕೆ ತಡೆಹಿಡಿಯುವಲ್ಲಿ ಶುರುವಾದ ಈ ಪ್ರಥಮ ಕಾನೂನಿನ ಮುಖ್ಯ ಉದ್ದೇಶ ಗ್ರಾಹಕ ಕೊಳ್ಳುವ ಪ್ರತೀ ಆಹಾರವು ಶುದ್ಧ ಹಾಗು ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುವುದು. ಹಾಗೆಯೇ ಅದರ ಜೊತೆ ಗ್ರಾಹಕರಿಗಾಗುವ ಮೋಸ, ವಂಚನೆಯನ್ನು ತಡೆದು ನ್ಯಾಯಯುತ ವ್ಯಾಪಾರವನ್ನು ಪ್ರೋತ್ಸಾಹಿಸುವುದು, ಈ ಕಾನೂನಿನಲ್ಲಿರುವ ಲೋಪ ದೋಷಗಳನ್ನು ಸರಿಪಡಿಸುವ ಸಲುವಾಗಿ 1964 ಮತ್ತು 1976 ರಲ್ಲಿ ತಿದ್ದುಪಡಿ ನಡೆಸಲಾಗಿದೆ.
 
ಆಹಾರ ಕಲಬೆರಕೆ ತಡೆಗಟ್ಟುಣಾ ಕಾನುನಿನಂತೆಯೇ 1955 ಜಾರಿಯಾದ ಉಪಯುಕ್ತ ಆಹಾರ ವಸ್ತುಗಳ ಕಾನೂನು (Essential commodities Act)ಸಹ ಕಡ್ಡಾಯವಾಗಿ ಪಾಲಿಸಲೇಬೇಕಾದ ಶಾಸನದಡಿಯಲ್ಲೇ ಬರುತ್ತದೆ.ಈ ಕಾನೂನಿನ ಪ್ರಮುಖ ಉದ್ದೇಶ ಸರಿಯಾದ ಖಾಯಿದೆಗಳ ಮೂಲಕ ಕಾಳಸಂತೆಯನ್ನು ತಡೆಗಟ್ಟಿ, ಕೈಗೆಟಕುವ ಬೆಲೆಯಲ್ಲಿ ಅಗತ್ಯ ಆಹಾರ ಸಾಮಾಗ್ರಿಗಳನ್ನು ಜನರಿಗೆ ಪೂರೈಸುವಂತೆ ಮಾಡುವುದು. ಈ ಕಾನೂನಿನಡಿಯಲ್ಲಿ ಅನೇಕ ನಿಯಂತ್ರಣ ಕ್ರಮಗಳನ್ನೂ ರೂಪಿಸಲಾಗಿದೆ. ಅವುಗಳಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಮತ್ತು ಅವುಗಳಿಂದ ತಯಾರಿಸ್ಪಡುವ ಉತ್ಪನ್ನಗಳ ಗುಣಮಟ್ಟವನ್ನು ಕಾಪಾಡಲು 1955 ರಲ್ಲಿ ಜಾರಿಯಾದ (Fruit product order), ಅಡುಗೆ ತೈಲವನ್ನು ತಯಾರಿಸುವ ಕಾರ್ಖಾನೆಗಳು ಹೊಂದಿರಬೇಕಾದ ಮಾನ್ಯತೆ ಮತ್ತು ಅವುಗಳ ಪ್ಯಾಕೇಜ್ ಹಾಗೂ ಲೇಬಲಿಂಗ್ನಲ್ಲಿ ಅನುಸರಿಸಬೇಕಾದನ ಕ್ರಮಗಳ ಕುರಿತಂತೆ 1967 ರಲ್ಲಿ ಬಂದ (Solvent Extracted oil, De-oiled meal and edible flour (control)order, ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ತಯಾರಿಸುವ ಡೈರಿಗಳು ಪಾಲಿಸಬೇಕಾದ ಶುಚಿತ್ವ ಹಾಗು ಆರೋಗ್ಯ ವಿಜ್ಞಾನದ ಕುರಿತಾಗಿ 1992 ರಲ್ಲಿ ಜಾರಿಯಾದ (Milk and Milk product order), ಮೀನು, ಮಾಂಸದ ಉತ್ಪನ್ನಗಳು ಹೊಂದಿರಬೇಕಾದ ಗುಣಮಟ್ಟ ಹಾಗು ಶುಚಿತ್ವದ ಕುರಿತಾಗಿ 1973ರಲ್ಲಿ ಬಂದ (Meat product order) ಪ್ರಮುಖವಾದವುಗಳು.
 
 
 
ಕೇವಲ ಕಡ್ಡಾಯ ಕಾನೂನುಗಳು ಮಾತ್ರವಲ್ಲದೆ ಕೆಲವೊಂದು ಐಚ್ಚಿಕ ನಿರ್ದಿಷ್ಟ ಮಾಪನಗಳು, ಪ್ರಮಾಣ ಪತ್ರಗಳು ಆಹಾರದ ಗುಣಮಟ್ಟವನ್ನು ನಿರ್ದರಿಸುವಲ್ಲಿ ಸಹಕಾರಿಯಾಗುತ್ತವೆ. ನಮ್ಮ ದೇಶದಲ್ಲಿರುವ ಈ ಬಗೆಯ ಕೆಲವು ಜನಪ್ರಿಯ ಪ್ರಮಾಣಪತ್ರಗಳನ್ನೇ ಉದಾಹರಿಸುವುದಾದರೆ, ಮೊದಲನೆಯದಾಗಿBureau of Indian standard ಅಥವಾ ISI ಮಾರ್ಕ್ . 1986 ರಲ್ಲಿ ಜಾರಿಯಾದ Bureau of Indian standard Act ನಅಡಿಯಲ್ಲಿ ಆಹಾರದ ಗುಣಮಟ್ಟವು ಶ್ರೇಷ್ಠವೆಂದು ತಿಳಿಸಲು ಪ್ರಮಾಣ ಪತ್ರವನ್ನು ಪಡೆಯವಹುದಾಗಿದೆ. ಇದರಡಿಯಲ್ಲಿ ಸುಮಾರು 450 ವಿವಿಧ ಬಗೆಯ ಆಹಾರ ಉತ್ಪನ್ನಗಳು ಸೇರಿಕೊಂಡಿದೆ. ಎಲ್ಲಾ ಬಗೆಯ ಆಹಾರ ಉತ್ಪನ್ನಗಳು ISI mark ಅನ್ನು ಹೊಂದಿರಬೇಕಾದುದು ಕಡ್ಡಾಯವಲ್ಲ ಎಂಬುದು ಹೌದಾದರೂ, ಕೆಲವೊಂದು ಆಹಾರಗಳ ಮಾರಾಟದಲ್ಲಿ ಮುಖ್ಯವಾಗಿ ಆಹಾರದಲ್ಲಿ ಬಳಸುವ ಬಣ್ಣಗಳು, ಮಕ್ಕಳ ಪೋಷಕ ಆಹಾರಗಳು, ಹಾಲಿನ ಪುಡಿಗಳ ಪ್ಯಾಕ್ ಮೇಲೆಲ್ಲಾ ಖ ಮಾರ್ಕ್ ಇದುವುದು ಕಡ್ಡಾಯವೆಂದೇ ಪರಿಗಣಿಸಲಾಗುತ್ತವೆ.ISI ಮಾರ್ಕ್ ನಂತೆಯೇ 1937ರಲ್ಲಿ ಭಾರತ ಸರ್ಕಾರವು ತಂದಂತಹ ಕೃಷಿ ಉತ್ಪನ್ನಗಳ ಕಾನೂನಿನ (Agricultural Product Act)ಅಡಿಯಲ್ಲಿ ನೀಡುವ ‘AGMARK’ಎಂಬ ಪ್ರಮಾಣ ಪತ್ರವು ಆಹಾರದ ಗುಣಮಟ್ಟ ಹಾಗು ಶುದ್ದತೆಯನ್ನು ಖಾರ್ತಿಪಡಿಸುತ್ತದೆ.
 
 
 
ಅಕ್ಕಿ ಗೋ ಧಿಯ ಉತ್ಪನ್ನಗಳು ಅಡುಗೆ ತೈಲ, ಸಾಂಬಾರ ಪದಾರ್ಥಗಳು, ಹಾಲಿನ ಉತ್ಪನ್ನ, ಜೇನು, ಇಂಗು ಮೊದಲಾದವುಗಳು ಅವುಗಳ ಶುದ್ದತೆಯ ಆಧಾರದ ಮೇಲೆ AGMARK ಪ್ರಮಾಣವನ್ನು ಪಡೆಯಲು ಅರ್ಹ ಆಹಾರಗಳಾಗಿವೆ. ಆದರೆ ಅವುಗಳೆಲ್ಲವುಗಳ ಮೇಲೆ AGMARK ಚಿಹ್ನೆ ಇರಲೇಬೇಕೆಂಬ ಕಡ್ಡಾಯ ಕಾನೂನೇನೂ ಇಲ್ಲ. ಆದರೆ ಕೆಲವೊಮ್ಮೆ ಆಹಾರಗಳು ವಿದೇಶಗಳಿಗೆ ರಫ್ತಾಗುವ ಸಂದರ್ಭದಲ್ಲಿ ಮುಖ್ಯವಾಗಿ ಸಾಂಬಾರ ಪದಾರ್ಥಗಳು, ವಾಲ್ನಟ್, ಬಾಸ್ಮತಿ ಅಕ್ಕಿ, ಈರುಳ್ಳಿ. ಆಲೂಗಡ್ಡೆ ಇವುಗಳ ಮೇಲೆಲ್ಲಾAGMARK ಚಿಹ್ನೆ ಇರಲೇಬೇಕೆಂಬ ಕಡ್ಡಾಯ ಕನೂನಿದೆ. 1986 ರಲ್ಲಿ ಜಾರಿಯಾದ ಗ್ರಾಹಕರ ರಕ್ಷಣಾ ಕಾನೂನು (Consumer protection Act)ಕೂಡ ಕಲಬೆರಕೆ ಎಂಬ ಮೋಸದಿಂದ ಗ್ರಾಹಕರ ಹಕ್ಕನ್ನು ರಕ್ಷಿಸುವಲ್ಲಿ ಸಹಕಾರಿಯಾಗಬಲ್ಲದಾಗಿದೆ.
ಆದರೆ, ಸಾವಿರ ಕಾನೂನು-ಖಾಯ್ದೆಗಳನ್ನು ರಚಿಸಿದರೇನಂತೆ ಅವುಗಳನ್ನು ಕಾಣಬೇಕಾದ ನಮ್ಮ ಕಣ್ಣುಗಳೇ ಕುರುಡಾದರೆ, ಅವೆಲ್ಲವು ಕೇವಲ ಕಡತಗಳಲ್ಲಿಯೇ ಉಳಿದು ಕೊಳೆಯುವವಷ್ಟೇ. ಹಾಗಾಗಿಯೇ ಅವುಗಳ ಅನುಷ್ಠಾನದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಪಾತ್ರ ಎಷ್ಟು ಮುಖ್ಯವೋ, ಜನಸಾಮಾನ್ಯರಾದ ನಮ್ಮ ಪಾತ್ರವು ಅಷ್ಟೇ ಮುಖ್ಯ, ಹಾಗಾದಲ್ಲಿ ಮಾತ್ರ ಕಲಬೆರಕೆಗೊಂದು ಕೊನೆಗಾಣಿಸಬಹುದು.
 
 
ಎಂ ಎಸ್ ಸಂಚನಾ
[email protected]

LEAVE A REPLY

Please enter your comment!
Please enter your name here