ಆಹಾರದ ಕಲಬೆರಕೆ, ಬಲಿ ನಮ್ಮಜನರದಕೆ!!!!

0
333

 
ಅರಿತುಕೋ ಬದುಕ ವೈಖರಿ ಅಂಕಣ: ಸಂಚನ ಎಂ ಎಸ್
‘ಕಲಬೆರಕೆ’ ಹೆಸರೇ ಸೂಚಿಸುವಂತೆ ಅಯೋಗ್ಯ ವಸ್ತುವೊಂದನ್ನು, ಯೋಗ್ಯವಸ್ತುವಿನೊಂದಿಗೆ ಬೆರೆಸಿ ಅದರ ಗುಣಮಟ್ಟವನ್ನು ಕುಗ್ಗಿಸುವ ಒಂದು ವಿಧಾನ. ಹಲವಾರು ಕಡೆಯಲ್ಲಿ ಹಲವಾರು ಬಗೆಯಲ್ಲಿ  ಹಬ್ಬಿರುವ ಈ ಕಲಬೆರಕೆ, ಆಹಾರ ಕ್ಷೇತ್ರದಲ್ಲಿ ತನ್ನ ವಿಚಾರವನ್ನು  ಬಲು ಜೋರಾಗಿಯೇ ನಡೆಸುತ್ತಿದೆ. ಕಲಬೆರಕೆಯಲ್ಲಿ ಉದ್ದೇಶಿತ ಮತ್ತು ಅನುದ್ದೇಶಿತ  ಎಂಬ ಎರಡು ಗುಂಪೇನೋ ಇದೆ, ಆದರೆ ಉದ್ದೇಶಿತ ಕಲಬೆರಕೆಯ ಅಬ್ಬರವೇ ಅತಿಯಾಗಿದೆ. ಮಾರುಕಟ್ಟೆಗಳಲ್ಲಿ ಕಲಬೆರಕೆಗೊಳ್ಳದ ಶುದ್ದ ಆಹಾರ ಸಾಮಗ್ರಿಗಳನ್ನು ಕೊಳ್ಳುವುದಾದರೆ ಅದಕ್ಕೆ ದುಪ್ಪಟ್ಟು ಬೆಲೆಯನ್ನು ತೆರಲೆಬೇಕಾದ ಕಾಲದಲ್ಲಿ ನಾವಿದ್ದೇವೆ. ಕಲಬೆರಕೆ ಅಪರಾಧವೆಂಬ ಅರಿವಿದ್ದರೂ ವ್ಯಾಪಾರೀ ಮನೋಭಾವದ  ಜನ ಹಣದ ಮೇಲಿನ ಅತಿ ಆಸೆಗೆ ಅದರ ಮೊರೆಹೋಗುತ್ತಿರುವುದು ಮಾಮೂಲೆಂಬಂತಾಗಿದೆ. ಪ್ಲಾಸ್ಟಿಕ್, ಲೋಹ, ಗಾಜು, ಕಲ್ಲು, ಮಣ್ಣು, ಸುಣ್ಣ, ಬಣ್ಣದಂತಹ ತಿನ್ನಲನರ್ಹ ವಸ್ತುಗಳನ್ನು ತಿನ್ನಲರ್ಹ ವಸ್ತುಗಳೊಂದಿಗೆ ಬೆರಸಿ ತಮ್ಮ ಕಿಸೆಯನ್ನು ತುಂಬಿಸಿಕೊಳ್ಳುವ ದುರಾಸೆ ಜನರ ದುರ್ಬುದ್ದಿಯ ನೆನೆದು ದುಃಖಿಸಬಹುದಷ್ಟೆ. ಮೇಲ್ವರ್ಗದ ಜನರಾದರೆ ಕೇಳಿದಷ್ಟು ಬೆಲೆಯನ್ನು ತೆತ್ತು ಮೇಲ್ದರ್ಜೆಯ ಆಹಾರವನ್ನೇ ಕೊಂಡು ತಿನ್ನುತಾರೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಕೆಳವರ್ಗದ, ಮದ್ಯಮ ವರ್ಗದ ಜನರಿಗೆ ಪರಿಶುದ್ದ ಆಹಾರ ಸಾಮಗ್ರಿಯೆಂಬುದೆಲ್ಲಾ ಗಗನಕುಸುಮವೇ ಸರಿ, ಹಾಗಾಗಿ ದಿನನಿತ್ಯ ಅವರ ತಟ್ಟೆಯಿಂದ ಹೊಟ್ಟೆ ಸೇರುವ ಬಹುಪಾಲು ಆಹಾರವು ಕಲಬೆರಕೆ ಗೊಂಡಿರುತ್ತದೆ ಎಂಬುದಂತೂ ಕಟು ಸತ್ಯ.
 
 
 
ಅಕ್ಕಿ , ಗೋಧಿ, ರಾಗಿ ಇನ್ನೂ ಮೊದಲಾದ ಆಹಾರಗಳಲ್ಲಿ ಕಲ್ಲೇ ಕಲಬರಕೆಯ ಪ್ರಮುಖ ಅಸ್ತ್ರ. ಈ ಮೇಲ್ಕಂಡ ಆಹಾರಗಳ ಅಕಾರ ಬಣ್ಣಗಳನ್ನೇ ಹೋಲುವ ಕಲ್ಲುಗಳನ್ನಾಯ್ದು ಅವುಗಳನ್ನು ಕಲೆಸಿ ಬೆರೆಸಿ ಮಾರಿದಾಗ ಮೇಲ್ನೋಟಕ್ಕೆ ಈ ಮೋಸವನ್ನು ಕಂಡುಹಿಡಿಯುವುದು ಕಷ್ಟಸಾಧ್ಯವೆನಿಸುತ್ತದೆ. ಇನ್ನು ಬೇಳೆಗಳ ವಿಷಯಕ್ಕೆ ಬಂದರೆ ಕಲ್ಲಿನ ಜೊತೆ ಗಾಢ ಬಣ್ಣಗಳು ಆ ಸ್ಥಾನವನ್ನು ಅಲಂಕರಿಸುತ್ತವೆ. ಬೇಡವಾದ್ದನ್ನು ಬೆರೆಸಿ ತಮ್ಮ ಬೇಳೆ ಬೇಯಿಸಿಕೊಳ್ಳುವುದೆಂದರೆ ಇದೇ ನೋಡಿ.
 
 
 
ಸಸ್ಯಾಹಾರಿ ಊಟದ ಅವಿಭಾಜ್ಯ ಅಂಗವೆನ್ನಬಹುದಾದ ಸೊಪ್ಪು-ತರಕಾರಿಗಳೂ ಕಲಬೆರಕೆ ಎಂಬ ಈ ಅಕ್ರಮಕ್ಕೆ ಬಲಿಯಾಗದೆ ಉಳಿದಿಲ್ಲ. ಇವುಗಳ ಕೃಷಿಯಲ್ಲಿ ಬಳಸುವ ರಾಸಾಯನಿಕ ಗೊಬ್ಬರ, ಕೀಟನಾಷಕಗಳು ಅನುದ್ದೇಶಿತ ಕಲಬೆರಕೆ ವಸ್ತುಗಳು ಅಂಗಡಿಯಿಂದಲೋ ಅಥವಾ ಸಂತೆಯಿಂದಲೋ, ನಾವು ಕಟ್ಟುಗಳು ಅಥವಾ ಕೆಜಿ ಲೆಕ್ಕದಲ್ಲಿ ತರುವ ಈ ಪದಾರ್ಥಗಳನ್ನು ಮನೆಯಲ್ಲಿ ಕ್ಲೀನ್ ಮಾಡಿ ನೋಡಿದರೆ ಒಂದು ಹಿಡಿಯಷ್ಟು ಉಪಯೋಗಿಸಲು ಸಾಧ್ಯ ಎನ್ನುವ ಪ್ರಮಾಣದಲ್ಲಿ ದೊರೆಯುವುದಿಲ್ಲ. ಗಾಢ ಹಸಿರು ಬಣ್ಣದ ಸೊಪ್ಪು-ತರಕಾರಿಗಳು ಕ್ಷಣ ಮಾತ್ರದಲ್ಲಿ ನಮ್ಮ ಮನ ಸೆಳೆಯುತ್ತವೆ. ಆದರೆ ಅದರ ಹಿಂದಿರುವ ಮರ್ಮ ಕಾಪರ್ ಸಲ್ಫೇಟ್ ಎಂಬ ಒಂದು ವಿಷಯುಕ್ತ ದ್ರಾವಣ ಎಂದು ಎಷ್ಟು ಜನರಿಗೆ ತಿಳಿದಿದೆ ಹೇಳಿ? ಹಾಗಾಗಿ ನಾವು ಅಷ್ಟೊಂದು ಹಣ ಕೊಟ್ಟು ಕೊಳ್ಳುವ ಇವುಗಳಿಂದ ಕೊನೆಗೆ ದೊರೆಯುವುದು ಮುಕ್ಕಾಲು ಭಾಗ ಮಣ್ಣು ಮತ್ತು ಒಂದು ಮುಷ್ಠಿ ಆಹಾರ ಮಾತ್ರ. ಆಸೆ ಇಂದ ನಾವು ಕೊಳ್ಳುವ ಹಣ್ಣುಗಳು ಈ ಮಾತಿಗೆ ಹೊರತಾಗಿಲ್ಲ, ಅವುಗಳಲ್ಲಿಯೂ ಅನೇಕ ಬಾರಿ ಕೊಳೆತು ನಾರುವಂತಹ ತಾಜಾ ಹಣ್ಣುಗಳ ನಡುವೆ ಬೆರೆಸಿ ಮರೆಮಾಚಿ ಮಾರಾಟ ಮಾಡುತ್ತಾರೆ. ಬಾಳೆ, ಮಾವು ಮುಂತಾದವುಗಳನ್ನು ಇನ್ನೂ ಎಳೆತಿರುವಾಗಲೇ ಕಿತ್ತು ಬೇಗ ಹಣ್ಣಾಗಲಿ ಎಂಬ ಕಾರಣಕ್ಕೆ ಈಥಲೀನ್ ಗ್ಯಾಸ್ ಅನ್ನು ಬಳಸುತ್ತಾರೆ. ಸೇಬು ಹೊಳಪಿರಲೆಂದು ಅದಕ್ಕೆ ವ್ಯಾಕ್ಸ್ ಅನ್ನು ಬಳಸುತ್ತಾರೆ. ಇವೆಲ್ಲವೂ ಕಲಬೆರಕೆಯ ವಸ್ತುಗಳೇ, ಸಹಜತೆ ಎಂಬುದೇ ಇಲ್ಲೆಲ್ಲಾ ಮರೆಯಾಗಿದೆ. ಹಾಗಾಗಿ ಅಂತಿಮವಾಗಿ ನಾವು ತಿಂದಂತಾಗುವುದು ನಮ್ಮ ನೆಚ್ಚಿನ ಹಣ್ಣಲ್ಲ , ಬರೀ ಚಳ್ಳೆಹಣ್ಣು.
 
 
 
ಹಾಲೆಂದು ನಾವು ಕರೆಯುವ ದ್ರವ ಪದಾರ್ಥದ ಬಗ್ಗೆಯಂತೂ ಹೇಳಿದಷ್ಟು ಮುಗಿಯುವುದಿಲ್ಲ. ಹಾಲಿನ ಕಲಬೆರಕೆಯಲ್ಲಿ ಸಹಜವಾಗಿ ಬಳಸುವ ವಸ್ತು ಎಂದರೆ ಅದು ನೀರು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಹಾಲಿಗೆ ನೀರನ್ನು ಬೆರಸಿದ್ದರೋ ಅಥವಾ ನೀರಿಗೆ ಹಾಲನ್ನು ಬೆರಸಿದ್ದಾರೋ ಎಂಬಂತಹ ಗೊಂದಲವನ್ನು ಅದು ಹುಟ್ಟು ಹಾಕುತ್ತದೆ. ಬಿಳಿ ಬಣ್ಣದ ಹಿಟ್ಟುಗಳನ್ನೆಲ್ಲಾ (ಅಕ್ಕಿ ಹಿಟ್ಟು, ಸ್ಟಾರ್ಚ್ ಕಾಸ್ಟಿಕ್ ಸೋಡಾ ) ಹಾಲಿನ ಜೊತೆ ಬೆರೆಸಿ ಮಾರುವ ಮಂದಿಯೂ ಹಲವರು. ಇನ್ನೂ ಕೆಲವರಂತೂ ಬಿಳಿ ಬಣ್ಣದ ರಾಸಾಯನಿಕ ಪದಾರ್ಥವಾದ ಯೂರೀಯಾವನ್ನು ಹಾಲಿನೊಡನೆ ಬೆರೆಸಿ ಹಾಲಾಹಲವನ್ನಾಗಿ ಮಾಡುತ್ತಿದ್ದಾರೆ ಎಂಬ ಭಯಾನಕ ಸತ್ಯವೂ ಇತ್ತೀಚಿಗೆ ಬೆಳಕಿಗೆ ಬರುತ್ತಿದೆ. ಬೆಳ್ಳಗಿರುವುದೆಲ್ಲ ಹಾಲಲ್ಲ ಎಂಬ ಪಾಠವನ್ನು ಹಾಲಿನ ಕಲಬೆರಕೆಯು ನಮಗೆ ಹೇಳಿಕೊಡುವಂತಾಯಿತು.
 
 
ನಮ್ಮ ಭಾರತೀಯ ಆಹಾರ ಪದ್ಧತಿಯಲ್ಲಿ ಸಾಂಬಾರ ಪದಾರ್ಥಗಳು ಅಥವಾ ಮಸಾಲೆ ಪದಾರ್ಥಗಳಿಗೆ ಒಂದು ವಿಶೇಷ ಸ್ಥಾನಮಾನವಿದೆ. ಊಟವು ಕೇವಲ ತನ್ನ ಸುವಾಸನೆ ಮಾತ್ರದಿಂದಲೇ ನಮ್ಮನ್ನು ಆಕರ್ಷಿಸುವಂತೆ ಮಾಡುವಲ್ಲಿ ಅವುಗಳು ವಿಶಿಷ್ಟ ಪಾತ್ರವಹಿಸುತ್ತವೆ.  ಬೆಲೆಯ ವಿಚಾರಕ್ಕೆ ಬಂದರೂ ಸಾಂಬಾರ ಪದಾರ್ಥಗಳಭಾರ ಇತರೆ ಪದಾರ್ಥಗಳಿಗಿಂತ ತುಸು ಹೆಚ್ಚೇ ಎನ್ನಬಹುದು. ಬೆಲೆ ಜಾಸ್ತಿ ಎಂದ ಮೇಲೆ ಕೇಳಬೇಕೆ ಕಲಬೆರಕೆಯಕರಾಳ ಛಾಯೆ ಒಂದನ್ನು ನಾವಿಲ್ಲಿ ಸಹಜವಾಗಿ ನಿರೀಕ್ಷಿಸಬಹುದು. ಕೆಲವೊಂದು ಸಣ್ಣ-ಪುಟ್ಟ ಉದಾಹರಣೆಗಳನ್ನು ಹೆಸರಿಸುವುದಾದರೆ- ಅರಿಶಿನ ಕಲಬರಕೆಯಲ್ಲಿ ಮೆಟಾನಿಲ್ ಎಲ್ಲೊ (Metanil yellow) ಎಂಬ ಕೆಟ್ಟ ರಾಸಾಯನಿಕ ಒಂದನ್ನು ಬಳಸುತ್ತಾರೆ. ಕೆಂಪು ಮೆಣಸಿನ ಪುಡಿಯಲ್ಲಿ ಇಟ್ಟಿಗೆ ಚೂರುಗಳ ಪುಡಿಯನ್ನು, ಕೊತ್ತುಂಬರಿ ಅಥವಾ ಜೀರಿಗೆ ಪುಡಿಯಲ್ಲಿ ಮರದ ಹೊಟ್ಟನ್ನು, ಕಪ್ಪು ಕಾಳುಮೆಣಸಿನ ಜೊತೆ ಪಪ್ಪಾಯಿ ಬೀಜವನ್ನು, ಗಸಗಸಯೆ ಜೊತೆ ರವೆಯನ್ನು ಬೆರೆಸುತ್ತಾರೆ. ಹೀಗೆ ಹೇಳುತ್ತಾ ಹೋದರೆ ಸಾಂಬಾರ ಪದಾರ್ಥಗಳ ಕಲಬೆರಕೆಯ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಾ ಸಾಗುತ್ತದೆ. ಮಸಾಲೆ ಪದಾರ್ಥಕ್ಕೇ ಸಲ್ಲದ ಮಸಾಲೆ ಬೆರಸಿ ಮೋಸ ಮಾಡುವ ಮಂದಿಗೆ ಅವರ ತಪ್ಪನ್ನು ಮನವರಿಕೆ ಮಾಡಿ ಕೊಡುವುದಾದರೂ ಹೇಗೆ?
 
 
 
ಮಾಂಸಹಾರಿಗಳ ವಿಷಯಕ್ಕೆ ಬಂದರೆ ಅವರೂ ಸಹ ತಾವು ತಿನ್ನುವ ಮಾಂಸದ ಗುಣಮಟ್ಟ ಉತ್ತಮವೆಂದು ನಿಟ್ಟುಸಿರು ಬಿಡುವಂತಿಲ್ಲ. ಅಲ್ಲಿಯೂ ಕೂಡ ಕಲಬೆರಕೆಯು ತನ್ನ ರಕ್ತ ಕಾರಿದೆ. ಮಾಂಸಕ್ಕಾಗಿ ಸಾಕುವ ಪ್ರಾಣಿಗಳ ಬೆಳವಣಿಗೆ ಶೀಘ್ರವಾಗಲಿ ಎಂಬ ದೃಷ್ಟಿಯಿಂದ ಬಳಸುವ ಪ್ರತಿಜೀವಕ(Anti-biotic)ಗಳ ಪ್ರಮಾಣ ಹೆಚ್ಚಾದಲ್ಲಿ ಅದನ್ನು ಕಲಬೆರಕೆಯ ವಸ್ತು ಎಂದೇ ಪರಿಗಣಿಸಲಾಗುತ್ತದೆ. ಮಾಂಸವು ಕಡುಗೆಂಪು ಬಣ್ಣದಲ್ಲಿರಬೇಕೆಂಬ ಆಲೋಚನೆಯಲ್ಲಿ ಬಳಸುವ ಯಥೇಚ್ಛ ನೈಟ್ರೇಟ್, ನೈಟ್ರೈಟ್ ಗಳಂತಹ ಹಾನಿಕಾರಕ ರಾಸಾಯನಿಕಗಳು ಮುಂದೊಂದು ದಿನ ನಮ್ಮ ಆರೋಗ್ಯಕ್ಕೆ ಕಂಟಕ ಪ್ರಾಯವಾಗಿ ಪರಿಣಮಿಸುವಲ್ಲಿ ಎರಡು ಮಾತಿಲ್ಲ.
 
 
 
ಜೇನುತುಪ್ಪದಲ್ಲಿ ಸಕ್ಕರೆಪಾಕ, ಕಾಫಿ ಪುಡಿಯಲ್ಲಿ ಹುಣಸೆ ಬೀಜದ ಪುಡಿ, ಟೀ ಪುಡಿಯಲ್ಲಿ ಹಿಂದೆಂದೋ ಬಳಸಿ ಬಿಟ್ಟ ಟೀ ಪುಡಿಯ ಮರುಬಳಕೆ, ತುಪ್ಪ ಬೆಣ್ಣೆಯಲ್ಲಿ ಡಾಲ್ಡದ ಮಿಶ್ರಣ ಹೀಗೆ, ಆಹಾರದ ಪ್ರತಿ ಗುಂಪಲ್ಲೂ ಕಲಬೆರಕೆಯ ಗುರುತೊಂದನ್ನು ಗಮನಿಸಬಹುದು.
 
 
 
ಈ ದುಬಾರಿ ದುನಿಯಾದಲ್ಲಿ ಬೆಲೆ ಏರಿಕೆಯ ಬಿಸಿ ಒಂದೆಡೆಯಾದರೆ  ಕಲಬೆರಕೆಯ ಕಾಟ ಇನ್ನೊಂದೆಡೆ. ಕಲಬೆರಕೆಯಿಂದ ಜನ್ಮತಾಳುತ್ತಿರುವ ಖಾಯಿಲೆಗಳ ಸಂಖ್ಯೆಯೂ ಕಮ್ಮಿ ಏನಿಲ್ಲ. ನಮ್ಮ ಭಾರತ ದೇಶದಲ್ಲಂತೂ ಕಲಬೆರಕೆ ಎಂಬ ಈ ಕಳೆಯನ್ನು ಸಂಪೂರ್ಣವಾಗಿ ಕಿತ್ತೆಸೆಯುವ ನಿಟ್ಟಿನಲ್ಲಿ ಅನೇಕ ಕಠಿಣ ಕಾನೂನುಗಳನ್ನು ಜಾರಿಗೊಳಿಸಿದ್ದಾರೆ, ಆದರೆ ಜನರಿಗೆ ಅದರ ಬಗ್ಗೆ ಅರಿವು ಮೂಡಿಸುವಲ್ಲಿ ಮಾತ್ರ ಜಾರಿ ಬಿದ್ದಿದ್ದಾರೆ. ಈ ಕಾರಣದಿಂದಾಗಿಯೇ ಆ ಕಾನೂನುಗಳೆಲ್ಲಾ ಕಾಲು ಮುರಿದುಕೊಂಡು ಮೂಲೆ ಗುಂಪಾಗುತ್ತಿವೆ. ಇನ್ನಾದರೂ ನಾವುಗಳು ಇತ್ತ ಕಣ್ಣೆತ್ತಿ ನೋಡುವುದು ಕ್ಷೇಮ.
ಕಲಬೆರಕೆಯಿಂದ ಬಂದೆರಗುತ್ತಿರುವ ಖಾಯಿಲೆಗಳ ಹಾಗೂ ಕಲಬೆರಕೆಗೆ ಕಡಿವಾಣ ಹಾಕಬಲ್ಲ ಕಾನೂನುಗಳ ಕುರಿತಾದ ಕಿರು ಮಾಹಿತಿಯೊಂದನ್ನು ನಿರೀಕ್ಷಿಸಿ ಮುಂದಿನ ಭಾಗದಲ್ಲಿ….
 
ಸಂಚನ ಎಂ ಎಸ್
[email protected]

LEAVE A REPLY

Please enter your comment!
Please enter your name here