ಆರ್ ಟಿ ಐ ಕಾರ್ಯಕರ್ತರಿಗೆ ಜೀವ ಬೆದರಿಕೆ ಆರೋಪ

0
699

ಮಡಿಕೇರಿ ಪ್ರತಿನಿಧಿ ವರದಿ
ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ತೀವ್ರ ಗೊಳಿಸುವ ಉದ್ದೇಶದಿಂದ ಕೊಡಗು ಜಿಲ್ಲೆಯಲ್ಲಿ ಸಮಗ್ರ ಮಾಹಿತಿ ಮಾನವ ಹಕ್ಕಿನ ಭ್ರಷ್ಟಾಚಾರ ವಿರೋಧಿ ಟ್ರಸ್ಟ್ ನ್ನು ಸ್ಥಾಪಿಸಲು ನಿರ್ಧರಿಸಿರುವುದಾಗಿ ಜಿಲ್ಲೆಯ ಆರ್ ಟಿ ಐ ಕಾರ್ಯಕರ್ತರು ತಿಳಿಸಿದ್ದಾರೆ.
 
 
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ ಟಿ ಐ ಕಾರ್ಯಕರ್ತ ಸಿ. ನಾರಾಯಣ, ಮಾ. 5 ರಂದು ಜಿಲ್ಲೆಗೆ ಆಗಮಿಸುವ ಟ್ರಸ್ಟ್ನ ರಾಜ್ಯಾಧ್ಯಕ್ಷರಾದ ಟಿ. ದೇವರಾಜ ಪಟೇಲ್ ಜಿಲ್ಲಾ ಶಾಖೆಗೆ ಚಾಲನೆ ನೀಡಲಿದ್ದಾರೆ ಎಂದರು. ಕರ್ನಾಟಕ ಮಾಹಿತಿ ಹಕ್ಕು ಹಾಗೂ ಕಡ್ಡಾಯ ಶಿಕ್ಷಣ ಕಾರ್ಯಕರ್ತರ ವೇದಿಕೆಯನ್ನು ಸ್ಥಾಪಿಸಿ ಕಳೆದ ಮೂರು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿತ್ತು. ಆದರೆ, ಈ ಸಂಘಟನೆಯ ರಾಜ್ಯಾಧ್ಯಕ್ಷರಿಂದ ಕಾರ್ಯಕರ್ತರಿಗೆ ಯಾವುದೇ ರಕ್ಷಣೆ ದೊರಕಿಲ್ಲ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಾ ಸತ್ಯಾಂಶದ ಮಾಹಿತಿಗಳನ್ನು ಕಲೆ ಹಾಕುವ ಸಂದರ್ಭ ಜೀವ ಬೆದರಿಕೆಗಳು ಬಂದಿವೆ. ಆದರೆ ವೇದಿಕೆ ಯಾವುದೇ ಸ್ಪಂದನೆ ನೀಡದೆ ನಿರ್ಲಕ್ಷ್ಯ ತೋರಿದೆ. ರಾಜ್ಯ ಮಟ್ಟದಲ್ಲಿ ಈ ವೇದಿಕೆ ಸಂಪೂರ್ಣ ನಿಷ್ಕ್ರೀಯವಾಗಿರುವುದನ್ನು ಮನಗಂಡು ಭ್ರಷ್ಟಾಚಾರ ವಿರೋಧಿ ಟ್ರಸ್ಟನ್ನು ರಚಿಸುತ್ತಿರುವುದಾಗಿ ತಿಳಿಸಿದರು.
 
 
ಕೊಡಗು ಜಿಲ್ಲೆಯಲ್ಲಿ ಆರ್ ಟಿ ಐ ಕಾರ್ಯಕರ್ತರು ಪ್ರಾಮಾಣಿಕವಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಆದರೆ, ಹೋರಾಟವನ್ನು ಹತ್ತಿಕ್ಕುವ ಉದ್ದೇಶದಿಂದ ಪೊಲೀಸ್ ಠಾಣೆಯಲ್ಲಿ ಇಲ್ಲ ಸಲ್ಲದ ಆರೋಪ ಹೊರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಸಿ.ನಾರಾಯಣ ಆರೋಪಿಸಿದರು.
ಮತ್ತೊಬ್ಬ ಕಾರ್ಯಕರ್ತ ಹ್ಯಾರಿಸ್ ಮಾತನಾಡಿ, ತಮಗೆ ಜೀವ ಬೆದರಿಕೆ ಇದ್ದು, ಮುಂದೊಂದು ದಿನ ಅನಾಹುತ ಸಂಭವಿಸಿದಲ್ಲಿ ಅದಕ್ಕೆ ಪೊಲೀಸರು ಹಾಗೂ ಅಕ್ರಮ ಮರಳು ದಂಧೆಯಲ್ಲಿ ಶಾಮೀಲಾಗಿರುವವರು ನೇರ ಹೊಣೆ ಎಂದು ಎಚ್ಚರಿಕೆ ನೀಡಿದರು. ಮರಳು ದಂಧೆಯ ವಿರುದ್ಧ ಹೋರಾಟ ನಡೆಸಿದ್ದಕ್ಕಾಗಿ ಕೊಲೆ ಸಂಚು ರೂಪಿಸಲಾಗುತ್ತಿದೆಯೆಂದು ಆರೋಪಿಸಿದ ಅವರು, ತಮಗೆ ಜೀವ ಭಯ ಇದೆಯೆಂದು ಆತಂಕ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮನು ಮೇದಪ್ಪ, ಯೋಗೇಶ್ ಕುಮಾರ್, ಸೂಫಿ ಹಾಗೂ ಗಣೇಶ್ ಕುಮಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here