`ಆಯುರ್ವೇದ ಉಳಿಸಿ ಬೆಳೆಸುವ ಕಾರ್ಯವಾಗಲಿ'

0
1138
ಡಾ.ಪತಂಜಲಿ

ಸಂಪಾದಕರೊಂದಿಗೆ ವಾರ್ತೆ ವಾರದ ಅತಿಥಿ – ಮನದಾಳದ ಮಾತಿನಲ್ಲಿ ಡಾ.ಪತಂಜಲಿ
ಸಂದರ್ಶನಃ ಹರೀಶ್ ಕೆ.ಆದೂರು.
ನೇರ ನಡೆ-ನುಡಿ…ಸರಳ ವ್ಯಕ್ತಿತ್ವ… ಸ್ಪಷ್ಟ ತೀರ್ಮಾನ…ನಿಖರ ನಿಲುವು…ಇದು ಡಾ.ಪತಂಜಲಿ ಅವರ ಒಟ್ಟಾರೆ ಚಿತ್ರಣ. ಸಾಗರ ಸಮೀಪದ ಕಲ್ಲುಕೊಪ್ಪ(ಪುರಪ್ಪೆಮನೆ)ಯಲ್ಲಿ ವಾಸವಾಗಿರುವ ಪತಂಜಲಿಯವರು ಆಯುರ್ವೇದ ವೈದ್ಯರು. ಸರಕಾರಿ ವೃತ್ತಿ. ಜನರಿಗೆ ಆಯುರ್ವೇದ ಪದ್ಧತಿಯ ಮೂಲಕ ಚಿಕಿತ್ಸೆ ನೀಡುವ ಕಾರ್ಯ. ಸರಕಾರಿ ಚಿಕಿತ್ಸಾಲಯಕ್ಕೆ ಬರುವ ರೋಗಿಗಳಿಗೆ ಸರಳ ಸುಲಭ ಮಾರ್ಗದಲ್ಲಿ ಚಿಕಿತ್ಸೆ ನೀಡುತ್ತಾ ಮನೆಮಾತಾದವರು. ಧನದಾಸೆಗೆ ಬಲಿಯಾಗದೆ ತನಗೆ ತಿಳಿದಿದ್ದನ್ನು ಅತ್ಯಂತ ಸ್ಪಷ್ಟವಾಗಿ ರೋಗಿಗಳಿಗೆ ತಿಳಿಹೇಳುವುದರಲ್ಲಿ ಡಾ.ಪತಂಜಲಿ ಸಿದ್ಧಹಸ್ತರು. `ಗೊತ್ತಿರುವುದನ್ನು ಸರಿಯಾಗಿ ಹೇಳ್ತೇನೆ…ಗೊತ್ತಿಲ್ಲದ್ದನ್ನು ಗೊತ್ತಿಲ್ಲ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ ‘ಎನ್ನುವ ಡಾ.ಪತಂಜಲಿ ಅಪರೂಪದ ವೈದ್ಯ. ತಮ್ಮ ವೃತ್ತಿ ಧರ್ಮಕ್ಕೆ ಎಂದಿಗೂ ಮೋಸ ಎಸಗಿಲ್ಲ. ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲೇಬೇಕೆಂಬ ಹಠವಾದಿ. ಇದನ್ನು ಜೀವನದಲ್ಲಿ ಅಳವಡಿಸಿಕೊಂಡು `ಯಶ’ಪಡೆದಿದ್ದಾರೆ. ತಾತ,ತಂದೆಯ ನಂತರ ಇದೀಗ ಮೂರನೇ ತಲೆಮಾರಿನಲ್ಲಿ ವೈದ್ಯವೃತ್ತಿಯನ್ನು ಮುಂದುವರಿಸುತ್ತಿರುವ ಡಾ.ಪತಂಜಲಿ ಅವರು ವಾರ್ತೆ .ಕಾಂನ ವಾರದ ಅತಿಥಿಯಾಗಿ ತಮ್ಮ ಮನದಾಳದ ಮಾತುಗಳನ್ನು ನಮ್ಮ ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ಆಯುರ್ವೇದ ಕಲಿತವರು ಆಯುರ್ವೇದ ಪದ್ಧತಿಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಲೇಬೇಕು ಎಂಬ ಅವರ ಮನದಾಳದ ಮಾತುಗಳು ಪ್ರತಿಯೊಬ್ಬ ಆಯುರ್ವೇದ ವಿದ್ಯಾರ್ಥಿಗಳಿಗೆ ಸ್ಫೂರ್ತಿ ಯಾಗಬೇಕಾಗಿದೆ.
vaarada athiti_patanjali_sagara_prappemane2
ಅಲೋಪತಿ ಚಿಕಿತ್ಸಾ ಪದ್ಧತಿಗೆ ಹೋಲಿಸಿದರೆ ಆಯುರ್ವೇದ  ಕೊಂಚ ಹಿನ್ನಡೆಯಾದಂತಿದೆಯಲ್ಲ…
ಹೌದು. ಅಲೋಪತಿ `ಎಮರ್ಜೆನ್ಸಿ ಹೀಲಿಂಗ್’ ಎಂದೇ ಪ್ರಸಿದ್ಧಿ ಪಡೆದಿದೆ. ಬ್ರಿಟಿಷರ ಕಾಲದಿಂದ ಅಲೋಪತಿ ಚಿಕಿತ್ಸಾ ಪದ್ಧತಿ ಪ್ರಚಲಿತಕ್ಕೆ ಬಂತು. ಮಿಷನರಿಗಳ ಮೂಲಕ ಜಿಲ್ಲೆ ಜಿಲ್ಲೆಗಳಲ್ಲಿ ಅಲೋಪತಿ ಚಿಕಿತ್ಸಾ ಕೇಂದ್ರಗಳನ್ನು ಕಟ್ಟಿ ಬೆಳೆಸುವ ಕಾರ್ಯ ನಡೆಯಿತು. `ಸೇವೆ’ಯೆಂಬ `ಹೆಸರಿನಲ್ಲಿ’ ಅಲೋಪತಿಯೊಂದಿಗೆ ತಮ್ಮ ಧರ್ಮ ಪ್ರಚಾರ ಕಾರ್ಯವನ್ನು ಯಶಸ್ವಿಯಾಗಿ ಮಾಡಿದರು. ಬೌದ್ಧ ಧರ್ಮದ ಸಂದರ್ಭದಲ್ಲಿ ` ಆಯುರ್ವೇದ ‘ ಪದ್ಧತಿ ಸಂಪೂರ್ಣ ಹಿನ್ನಡೆ ಅನುಭವಿಸಿತು. `ಶಸ್ತ್ರ ಪ್ರಯೋಗ’ ಹಿಂಸೆ ಎಂಬ ಭಾವನೆ ಮೂಡತೊಡಗಿತು. ಅಲ್ಲಿಂದ ನಂತರ ಆಯುರ್ವೇದದಲ್ಲಿ ಶಸ್ತ್ರ ಪ್ರಯೋಗ ಸಂಪೂರ್ಣ ನಿಷೇಧವಾಯಿತು. ಆಯುರ್ವೇದ ದ `ಸುಶ್ರುತ’, ಶಸ್ತ್ರಚಿಕಿತ್ಸೆಯ ಪಿತಾಮಹ ಎಂಬುದು ಸಾರ್ವಕಾಲಿಕ. ದುರದೃಷ್ಟವಶಾತ್ ಇಂದಿಗೂ ಆಯುರ್ವೇದ ಚಿಕಿತ್ಸೆಯನ್ನು ಅಷ್ಟು ಸುಲಭದಲ್ಲಿ ಜನ ಮೆಚ್ಚುತ್ತಿಲ್ಲ.
ಅಲೋಪತಿ `ಮಾರಕ’ ಅಲ್ಲವೇ…
ಖಂಡಿತಾ ಹೌದು. ಆಯುರ್ವೇದ ರಕ್ತಕ್ಕೆ ಬೇಗ ಒಗ್ಗುವಂತಹುದು. ಪರ್ಯಾಯ ಆಹಾರ. ಶೇ.25ರಷ್ಟು ಔಷಧಿಗಳು ದಿನನಿತ್ಯ ಅಡುಗೆ ಮನೆಯಲ್ಲಿ ಬಳಸುವ ಸಾಮಾಗ್ರಿಗಳಲ್ಲೇ ಇರುವಂತಹುದು.
ದುರದೃಷ್ಠವಶಾತ್ ಇಂದು ಹಲವು ಆಯುರ್ವೇದ ವೈದ್ಯರೂ ಅಲೋಪತಿ ಔಷಧಿ ನೀಡುತ್ತಿದ್ದಾರೆ; ಈ ಬಗ್ಗೆ…?
ಇದು ತಪ್ಪು. ವೃತ್ತಿ ಧರ್ಮಕ್ಕೂ ಸಮಾಜಕ್ಕೂ ಮಾಡುವ ದೊಡ್ಡ ಮೋಸ. ಆಯುರ್ವೇದ ವೈದ್ಯರಿಗೆ ಅಲೋಪತಿಯ ಪೂರ್ಣ ಜ್ಞಾನ ಇರಲು ಸಾಧ್ಯವೇ ಇಲ್ಲ. ಅಪೂರ್ಣ ಜ್ಞಾನದಿಂದ ಔಷಧಿ ನೀಡುವುದು ತಪ್ಪು.
 
ಯಾವ ಕಾರಣಕ್ಕೆ ಹೀಗಾಗುತ್ತಿದೆ…?
ಇದಕ್ಕೆ ಮೂರು ಮುಖ್ಯ ಕಾರಣ. ಮೊದಲನೆಯದು ವೈದ್ಯಕೀಯ ಕಾಲೇಜುಗಳಲ್ಲಿ ಸಮರ್ಪಕವಾದ ತಿಳುವಳಿಕೆ ನೀಡುವಲ್ಲಿ ಆಗುವ ಕೊರತೆಗಳು. ಜನರಲ್ ಪ್ರಾಕ್ಟೀಷನರ್ ಆಗಿ ಹೇಗೆ ಕಾರ್ಯ ನಿರ್ವಹಿಸಬೇಕೆಂಬ ಪ್ರಾಥಮಿಕ ಮಾಹಿತಿ ಇಲ್ಲದಿರುವುದು. ಎರಡನೇಯದು ಬೇರೆ ವಿಧಿಯೇ ಇಲ್ಲದೆ ಆಯುರ್ವೇದ ವಿಷಯವನ್ನು ಆಯ್ಕೆ ಮಾಡಿಕೊಂಡಿರುವುದು, ಮೂರನೇಯ ಕಾರಣವೆಂದರೆ ಪೂರ್ಣ ಆಯುರ್ವೇದ ಪದ್ಧತಿಯಲ್ಲಿ ಪ್ರಾಕ್ಟೀಸ್ ಮಾಡುವುದು ತೀರಾ ಕಷ್ಟ.
 
ಅಲೋಪತಿಯಲ್ಲಿ ರೋಗಿಗಳನ್ನು ಪ್ರಯೋಗದ ವಸ್ತುವನ್ನಾಗಿಸುತ್ತಾರೆಂಬ ಮಾತು ಕೇಳುತ್ತಿದೆಯಲ್ಲಾ…? ಇದು ಎಷ್ಟರಮಟ್ಟಿಗೆ ಸರಿ?
ಇಲ್ಲಿ ಬಹುಮುಖ್ಯ ಅಂಶವೊಂದಿದೆ. ಇದು ಸಿಸ್ಟಂನ ತಪ್ಪಲ್ಲ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ವೈದ್ಯರ ದೋಷ. ಮುಖನೋಡಿ ಔಷಧಿ ಕೊಡುವ ವ್ಯವಸ್ಥೆಯಿಲ್ಲ. ರಿಪೋರ್ಟ್ ನೋಡಿ ಔಷಧಿ ಕೊಡುವ ವ್ಯವಸ್ಥೆಯಾಗಿದೆ. ಕಾರಣ ನೂರಾರು ಕೋಟಿ ವ್ಯಯಿಸಿ ಕಾರ್ಪೋರೇಟ್ ಸಿಸ್ಟಂನಂತೆ ದೊಡ್ಡ ದೊಡ್ಡ ಚಿಕಿತ್ಸಾಲಯಗಳನ್ನು ಮಾಡುತ್ತಾರೆ. ಅದರ ರಿಟರ್ನ್ಸ್ ಅವರಿಗೆ ಇಂಪಾರ್ಟೆಂಟ್.
 

ಸಂಪಾದಕ ಹರೀಶ್ ಕೆ.ಆದೂರು ಹಾಗೂ ಡಾ.ಪತಂಜಲಿ
ಸಂಪಾದಕ ಹರೀಶ್ ಕೆ.ಆದೂರು ಹಾಗೂ ಡಾ.ಪತಂಜಲಿ

ಇದನ್ನು ಹೇಗೆ ಸರಿಪಡಿಸಬಹುದು…
ಕಷ್ಟ… ಜನರಲ್ಲಿ ಜಾಗೃತಿ ಮೂಡಿಸುವುದು ತುಂಬಾನೇ ಕಷ್ಟ. ನಿಮಗೊಂದು ಸಣ್ಣ ಉದಾಹರಣೆ ಕೊಡ್ತೇನೆ ನೋಡಿ. ಮನೆ ಮನೆಗೆ ಬಂದು ಚಿನ್ನ ತೊಳೆಯುವ ಮಂದಿಯಿರುತ್ತಾರೆ. ಅವರು ಮೋಸಗಾರರೆಂದು ಗೊತ್ತಿದ್ದರೂ ಪ್ರಜ್ಞಾವಂತ-ವಿದ್ಯಾವಂತರೇ ಅವರಿಗೆ ಚಿನ್ನ ನೀಡಿ ಮೋಸ ಹೋಗುತ್ತಿರುವುದು ಮಾಮೂಲಿಯಾಗಿದೆ. ಇನ್ನೊಂದು ಉದಾಹರಣೆ ನೋಡಿ. ಫೈನಾನ್ಸ್ ಕಂಪೆನಿಗಳಲ್ಲಿ ಅದೆಷ್ಟೋ ವಿದ್ಯಾವಂತರೇ ಹಣಹೂಡಿಕೆ ಮಾಡಿ ಪಂಗನಾಮ ಹಾಕಿಸಿಕೊಳ್ಳುವುದಿಲ್ಲವೇ… ಇಂತಹ ಸಮಾಜದಲ್ಲಿ ಹೇಗೆ ಜಾಗೃತಿ ಮೂಡಿಸುವುದು ನೀವೇ ಹೇಳಿ. ಸಮೂಹ ಮಾಧ್ಯಮಗಳು ಪರಿಣಾಮಕಾರಿಯಾಗಿ ಆಯುರ್ವೇದವನ್ನು ಪ್ರಚಾರಮಾಡಿದರೆ ಒಂದಷ್ಟು ಪ್ರಯೋಜನವಾಗಬಹುದು.
 
ಸ್ವರ್ಣ ಬಿಂದು ಪ್ರಾಶನ ಇಂದು ದೊಡ್ಡಮಟ್ಟದಲ್ಲಿ ಪ್ರಸಿದ್ಧಿಯಾಗಿದೆಯಲ್ಲಾ…
ಹೌದು. ಶಾಸ್ತ್ರದಲ್ಲಿ ಹೇಳುವ ಸ್ವರ್ಣ ಪ್ರಾಶನದ ಕ್ರಮಕ್ಕೂ ಇದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಈಗ ಪ್ರಚಲಿತದಲ್ಲಿರುವ ಸ್ವರ್ಣಬಿಂದು ಪ್ರಾಶನದಿಂದ ಯಾವ ಲಾಭವೂ ಇಲ್ಲ. ಇದರಿಂದಾಗಿ ಆಯುರ್ವೇದದತ್ತ ಒಂದಷ್ಟು ಜನ ಮುಖಮಾಡುವಂತಾಗಿದೆ. ಇದೊಂದು ಪ್ರಯೋಜನವಾಗಿದೆ.
 
ಆಯುರ್ವೇದ ಎಂಬುದು ಭಾರತೀಯ ಚಿಕಿತ್ಸಾ ಪದ್ಧತಿ. ಆದರೆ ಸರಕಾರ ಇದನ್ನು ಹೆಚ್ಚು ನೆಚ್ಚಿಕೊಂಡಂತೆ ಕಾಣುತ್ತಿಲ್ಲವಲ್ಲಾ…?
ನಿಜ…ಸರಕಾರ ಆಯುರ್ವೇದಕ್ಕೆ ಎಳ್ಳಷ್ಟೂ ಮಹತ್ವ ನೀಡುತ್ತಿಲ್ಲ. ಬಜೆಟ್ ನಲ್ಲೂ ಹಣ ನೀಡುತ್ತಿಲ್ಲ. ಈ ಪದ್ಧತಿಯ ಸಮರ್ಪಕ ಅನುಷ್ಠಾನದ ಬಗ್ಗೆ ಮುತುವರ್ಜಿ ವಹಿಸುತ್ತಿಲ್ಲ.
ಬಹುಪ್ರಚಲಿತದಲ್ಲಿರುವ `ಎಮರ್ಜೆನ್ಸಿ ಮೆಡಿಕಲ್ ಕೇರ್’ ವ್ಯವಸ್ಥೆಯ ಬಗ್ಗೆ.
ಈ ಕಾನ್ಸೆಪ್ಟೇ ತಪ್ಪು.ಸಾದಾ ಶೀತ – ಜ್ವರ ಬಂದವನೂ ಎಮರ್ಜೆನ್ಸಿ ಮೆಡಿಕಲ್ ಕೇರ್ ಗೆ ಹೋಗುವ ವ್ಯವಸ್ಥೆ!…ಫಿಸಿಷಿಯನ್ನ್ನು ಭೇಟಿಮಾಡುವ ವ್ಯವಸ್ಥೆ.ಇದು ಬೇಕೇ…? ಇದರಿಂದ ವೈದ್ಯರಿಗೆ ಒತ್ತಡ ಜಾಸ್ತಿಯಾಗುತ್ತದೆ. ಸಮಾಜಕ್ಕೆ ಇದರಿಂದ ತೊಂದರೆ.
ಯಾವ ರೀತಿಯ ವ್ಯವಸ್ಥೆಯಿದ್ದರೆ ಒಳಿತೆಂಬುದು ನಿಮ್ಮ ಭಾವನೆ…?
ಆಯುರ್ವೇದ -ಅಲೋಪತಿ-ಹೊಮಿಯೋಪಥಿ-ಯುನಾನಿ ಹೀಗೆ ಎಲ್ಲಾ ರೀತಿಯ ವೈದ್ಯಕೀಯ ಪದ್ಧತಿಯೂ ಒಟ್ಟಾಗಿ ಒಂದೇ ಸೂರಿನಡಿ ಸಿಗುವ ವ್ಯವಸ್ಥೆಯಾಗಬೇಕು. ಆ ಮೂಲಕ ರೋಗಿಗೆ ಸಮರ್ಪಕ ಚಿಕಿತ್ಸೆ ನೀಡುವ ಕಾರ್ಯ ಸಮಾಜದಲ್ಲಿ ಅನುಷ್ಠಾನವಾಗಬೇಕಾಗಿದೆ. ಯೂನಿಫೈಡ್ ಮೆಡಿಸಿನಲ್ ಸಿಸ್ಟಂನ ಅವಶ್ಯಕತೆ ಸಮಾಜಕ್ಕೆ ಇಂದಿದೆ.
ಹೆಲ್ತ್ ಇನ್ಶೂರೆನ್ಸ್ ಸ್ಕೀಂ ಬಗ್ಗೆ…?
ಇದು ಟೋಟಲ್ ಕರಪ್ಶನ್ ಸ್ಕೀಂ. ಕಾರ್ಪೋರೇಟ್ ಹಾಸ್ಪಿಟಲ್ಗಳು ಇದರಿಂದ ದುಡ್ಡುಮಾಡ್ತಾ ಇವೆ. ರೋಗಿಗಳಿಗೆ ನಯಾಪೈಸೆ ಪ್ರಯೋಜನ ಇದರಿಂದ ಆಗ್ತಾ ಇಲ್ಲ.
ಸರಕಾರ ಆರೋಗ್ಯ ವಿಚಾರದಲ್ಲಿ ಎಡವುತ್ತಿದೆಯೇ…?
ನೋಡಿ ಪ್ರಾಥಮಿಕ ಆರೋಗ್ಯ ಕೇಂದ್ರ(ಪಿ.ಎಚ್.ಸಿ), ಸಮುದಾಯ ಆರೋಗ್ಯ ಕೇಂದ್ರ (ಸಿ.ಎಚ್.ಸಿ), ತಾಲೂಕು ಆಸ್ಪತ್ರೆ, ಜಿಲ್ಲಾಸ್ಪತ್ರೆ, ಮೆಡಿಕಲ್ ಕಾಲೇಜು ಆಸ್ಪತ್ರೆ ಈ ರೀತಿಯ ಅದ್ಭುತವಾದ ನೆಟ್ ವರ್ಕ್ ಸರಕಾರದಿಂದಲೇ ನಡೆಸಲಾಗುತ್ತಿದೆ. ಇದು ಉತ್ತಮವಾಗಿದೆ. ಇದರ ದುರ್ಬಳಕೆಗೆ ಅವಕಾಶವಾಗದಂತೆ ನೋಡುವ ಕಾರ್ಯವಷ್ಟೇ ಆಗಬೇಕಾಗಿದೆ. ಇಲ್ಲಿ ಸಮರ್ಪಕವಾದ ಚಿಕಿತ್ಸಕರನ್ನು ನೇಮಕಮಾಡಿ ಅವರ ಮೂಲಕ ಚಿಕಿತ್ಸೆ ನೀಡುವ ಕಾರ್ಯ ಆಗಬೇಕು. ಸರಕಾರಿ ಚಿಕಿತ್ಸಾಲಯಗಳು ಖಾಸಗೀ ಚಿಕಿತ್ಸಾಲಯಗಳಿಂದ ಮೇಲ್ಮಟ್ಟದಲ್ಲಿವೆ ಎಂಬುದನ್ನು ಸಮಾಜ ಅರಿಯಬೇಕಾಗಿದೆ. ಸರಕಾರೀ ಆಸ್ಪತ್ರೆಗಳಿಗೆ ಜನ ಬರುವಂತಾಗಬೇಕು. ಆ ರೀತಿ ಮಾಡುವ ಕೆಲಸ ಸರಕಾರದಿಂದಲೂ ಆಗಬೇಕಾಗಿದೆ. ಹಾಗಾದಾಗ ಇಂತಹ ಖಾಸಗೀ ಹೆಲ್ತ್ ಇನ್ಶೂರೆನ್ಸ್ ಆಗಲೀ, ಹಣಮಾಡುವ ದಂಧೆಗಳಾಗಲೀ ನಡೆಯುವುದಕ್ಕೆ ಅವಕಾಶವೇ ಇರುವುದಿಲ್ಲ.
`ಡಾ.ಪತಂಜಲಿ’ ಇತರ ವೈದ್ಯರಂತಲ್ಲ…ಇದು ಸಾಬೀತಾಗಿದೆ…
ನಾನು ಈ ತನಕ ದುಡ್ಡಿಗಾಗಿ ಕೆಲಸ ಮಾಡಿಲ್ಲ. ನಾವು ಮಾಡುವ ಕೆಲಸಕ್ಕೆ ಸರಕಾರ ಸಂಬಳ ನೀಡುತ್ತಿದೆ. ವೃತ್ತಿ ಧರ್ಮಕ್ಕೆ ವಿರುದ್ಧವಾದ ಕಾರ್ಯವನ್ನು ಎಂದಿಗೂ ಮಾಡಿಲ್ಲ. ನನಗೇನು ಗೊತ್ತಿದೆ ಅದನ್ನು ಹೇಳುತ್ತೇನೆ. ಎಷ್ಟೋ ಬಾರಿ ನಾನೊಬ್ಬ `ಸಲಹೆ’ಗಾರನಾಗಿ ಸೇವೆ ನೀಡಿದ್ದೂ ಇದೆ. ಒಟ್ಟಿನಲ್ಲಿ ನನಗೆ ತೃಪ್ತಿ ಇದೆ.
ವೃತ್ತಿ ಜೀವನದ ಸುಖ – ದುಃಖ
ಜನ ವೈದ್ಯರನ್ನು ದುರ್ಬಳಕೆ ಮಾಡುತ್ತಾರೆ. ಅವರವರ ತೊಂದರೆಗಳಿಗೆ ಪರಿಹಾರವಾದರೆ ಆಯಿತು…ಎಂಬ ಭಾವನೆ ಜನಕ್ಕಿರುತ್ತದೆ. ವೈದ್ಯರಿಗೂ ಒಂದು ಜೀವನ ವಿದೆ ಎಂಬುದನ್ನು ಜನ ಅರ್ಥಮಾಡಿಕೊಳ್ಳುವುದೇ ಇಲ್ಲ.
ಖುಷಿಯ ವಿಷಯವೆಂದರೆ ಸಮಾಜದಲ್ಲಿ ವೈದ್ಯರಿಗೆ ಇರುವಷ್ಟು ಗೌರವ-ಬೆಲೆ ಬೇರೆ ಯಾವ ವೃತ್ತಿಗೂ ಇಲ್ಲ…ನಮ್ಮ ಉದ್ಯೋಗಕ್ಕೆ ವಿಶೇಷವಾದ ಗೌರವವಿದೆ.
ಪದವಿಯ ನಂತರ ಗ್ರಾಮೀಣ ಪ್ರದೇಶದಲ್ಲಿ ಸೇವೆ ಮಾಡಬೇಕು- ಇದು ಸರಿಯೇ…?
ಗ್ರಾಮೀಣ ಪ್ರದೇಶದಲ್ಲಿ ಸೇವೆ ಮಾಡಲೇ ಬೇಕು. ಅದು ಸಮಾಜದ ದೃಷ್ಠಿಯಿಂದ ಉತ್ತಮ. ಗ್ರಾಮೀಣ ಜನರ ಬದುಕಿನ ಸಮಸ್ಯೆ ಗೊತ್ತಾಗಬೇಕು. ಜನರ ನಾಡಿಮಿಡಿತ ಗೊತ್ತಾಗುವುದೇ ಗ್ರಾಮೀಣ ಭಾಗದ ಸೇವೆಯಿಂದ.
 
ಸಂದರ್ಶನಃ ಹರೀಶ್ ಕೆ.ಆದೂರು
[email protected]

LEAVE A REPLY

Please enter your comment!
Please enter your name here