ಆಯುಧಪೂಜೆ ಸಡಗರ

0
335

ಮೈಸೂರು ಪ್ರತಿನಿಧಿ ವರದಿ
ನಾಡಿನೆಲ್ಲೆಡೆ ದಸರಾ ಹಬ್ಬದ ಸಂಭ್ರಮ ಕಳೆಗಟ್ಟಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2016ರ ಅಂಗವಾಗಿ ಸಾಂಸ್ಕೃತಿಕ ನಗರಿ ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ ಮುಗಿಲುಮುಟ್ಟಿದೆ. ಅರಮನೆಯಲ್ಲಿ ಪೂಜಾ ಕೈಂಕರ್ಯಗಳು ನಡೆದಿದೆ.
 
 
mysore-dasara
ಚಾಮುಂಡಿಬೆಟ್ಟದಲ್ಲಿ ವಿಶೇಷ ಹೋಮ-ಹವನಗಳು ನಡೆದಿದೆ.ಆಯುಧ ಪೂಜೆ ಹಿನ್ನೆಲೆಯಲ್ಲಿ ಪಟ್ಟದ ಆನೆ, ಪಟ್ಟದ ಕುದುರೆ ಮತ್ತು ಪಟ್ಟದ ದನಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ.ಇಂದು ಮುಂಜಾನೆ 6.15 ರಿಂದ 6.30ರವರೆಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುಗಳನ್ನ ಆನೆ ಬಾಗಿಲಿನ ಮೂಲಕ ಬರಮಾಡಿಕೊಂಡು ಪೂಜೆ ಸಲ್ಲಿಸಲಾಗಿದೆ.6.50ಕ್ಕೆ ಖಾಸಗಿ ಆಯುಧಗಳನ್ನ ಕೋಡಿ ಸೋಮೇಶ್ವರ ದೇವಸ್ಥಾನಕ್ಕೆ ಆನೆ ಬಾಗಿಲಿನ ಮೂಲಕ ಕಳಿಸಿ ಪೂಜೆ ಸಲ್ಲಿಸಿ ಪುನಃ ಅರಮನೆಗೆ ಬರಮಾಡಿಕೊಳ್ಳಲಾಗಿದೆ. ಬೆಳಗ್ಗೆ 8 ಗಂಟೆಗೆ ಚಂಡಿಕಾ ಹೋಮ ಹಾಗೂ ಇತರ ಹೋಮಗಳ ಪೂರ್ಣಾಹುತಿ ನಡೆದಿದೆ.
 
 
 
ನಂತರ ಆನೆ ಬಾಗಿಲಿನ ಒಳಗೆ ಇರುವ ತೊಟ್ಟಿಯಲ್ಲಿ 9.45ಕ್ಕೆ ಆಯುಧ ಪೂಜೆಯಲ್ಲಿ ಯದುವೀರ್ ಕೃಷ್ಣದತ್ತಚಾಮರಾಜ ಒಡೆಯರ್ ಭಾಗವಹಿಸಿ ಪಟ್ಟದ ಹಸು, ಪಟ್ಟದ ಕುದುರೆ, ಪಟ್ಟದ ಆನೆ, ಪಟ್ಟದ ಒಂಟೆ ಹಾಗೂ ರಾಜರು ಬಳಸುತ್ತಿದ್ದ ರತ್ನ ಖಚಿತ ಆಯುಧಗಳಿಗೆ ಕಲ್ಯಾಣ ತೊಟ್ಟಿಯಲ್ಲಿ ಪೂಜೆ ಸಲ್ಲಿಸಿದ್ದಾರೆ. ಅರಮನೆ ಪುರೋಹಿತರ ಸಮ್ಮುಖದಲ್ಲಿ ಯಧುವೀರ ಪೂಜೆ ಸಲ್ಲಿಸಿದ್ದಾರೆ.
 
 
ಬಳಿಕ ಅರಮನೆಯ ವಾಹನಗಳು ಹಾಗೂ ದಿವಂಗತ ಶ್ರೀಕಂಠಕೃಷ್ಣದತ್ತ ನರಸಿಂಹರಾಜ ಒಡೆಯರ್ ಅವರ ನೆಚ್ಚಿನ ಕಾರುಗಳಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಗರ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿಯಿಂದಲೂ ಪೂಜೆ ಸಲ್ಲಿಕೆಯಾಗಿದೆ.
ಸಂಜೆ 7 ಗಂಟೆಗೆ ಅಂಬಾವಿಲಾಸ ದರ್ಬಾರ್ ಹಾಲ್‍ನಲ್ಲಿ ಕೊನೆಯ ದಿನದ ಖಾಸಗಿ ದರ್ಬಾರ್ ನಡೆಸಿ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ ಸಿಂಹಾಸನವನ್ನ ವಿಸರ್ಜನೆ ಮಾಡಲಾಗುತ್ತದೆ.
ಸಂಸದೆ ಶೋಭಾರಿಂದ ಉಪಹಾರ
ದಸರಾ ಅಂಗವಾಗಿ ಮಾವುತರು ಮತ್ತು ಕಾವಾಡಿಗರ ಮಕ್ಕಳಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯಿಂದ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here