'ಆದಿ ದ್ರಾವಿಡ' ಜನಾಂಗದ ಹೆಸರಿನಲ್ಲಿ ಜಾತಿ ದೃಢೀಕರಣ ಪತ್ರ ನೀಡಲು ಒತ್ತಾಯ

0
703

ಮಡಿಕೇರಿ ಪ್ರತಿನಿಧಿ ವರದಿ
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ನೆಲೆಸಿರುವ ದಕ್ಷಿಣ ಕನ್ನಡ ಮೂಲದ ‘ಆದಿ ದ್ರಾವಿಡ’ ಜನಾಂಗ ಬಾಂಧವರಿಗೆ ಅವರ ಜಾತಿಯ ಹೆಸರಿನಲ್ಲಿ ಜಾತಿ ದೃಢೀಕರಣ ಪತ್ರ ನೀಡಲು ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೊಡಗು ಜಿಲ್ಲಾ ಆದಿ ದ್ರಾವಿಡ ಸೇವಾ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಂ. ಸೋಮಪ್ಪ ಒತ್ತಾಯಿಸಿದ್ದಾರೆ.
 
 
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ವ್ಯಾಪ್ತಿಗೆ ಆದಿ ದ್ರಾವಿಡ ಜನಾಂಗ ಒಳಪಡುತ್ತಿದ್ದು, ಜಿಲ್ಲೆಯಲ್ಲಿ 20 ಸಾವಿರಕ್ಕೂ ಹೆಚ್ಚಿನ ಆದಿ ದ್ರಾವಿಡ ಜನಾಂಗ ಬಾಂಧವರು ಇದ್ದಾರೆ ಎಂದರು. ಇವರಲ್ಲಿ ಕೇವಲ ಶೇ.10 ರಷ್ಟು ಮಂದಿಗೆ ಮಾತ್ರ ‘ಆದಿ ದ್ರಾವಿಡ’ ಹೆಸರಿನಲ್ಲಿ ಜಾತಿ ದೃಢೀಕರಣ ಪತ್ರ ದೊರಕಿದೆ. ಉಳಿದವರಿಗೆ ಆದಿ ಕರ್ನಾಟಕ, ಪಾಲೆ ಮೊದಲಾದ ಹೆಸರಿನಲ್ಲಿ ಮನಬಂದಂತೆ ಅಧಿಕಾರಿಗಳು ಜಾತಿ ದೃಢೀಕರಣ ಪತ್ರ ನೀಡಿದ್ದಾರೆ. ಇದರಿಂದ ಸಮೂಹ ಬಾಂಧವರು ಸರ್ಕಾರದ ಸೌಲಭ್ಯಗಳನ್ನು ಪಡೆಯುವಲ್ಲಿ ವಂಚಿತರಾಗಿದ್ದಾರೆ ಎಂದು ಅವರು ಆರೋಪಿಸಿದರು.
 
 
ನೆರೆಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆದಿ ದ್ರಾವಿಡ ಸಂಘ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಶೇ.90 ರಷ್ಟು ಮಂದಿ ‘ಆದಿ ದ್ರಾವಿಡ’ ಹೆಸರಿನಲ್ಲಿ ಜಾತಿ ದೃಢೀಕರಣ ಪತ್ರವನ್ನು ಪಡೆದುಕೊಂಡಿದ್ದಾರೆ. ಅಲ್ಲಿನ ಸಂಘಟನೆ ಸಕ್ರಿಯವಾಗಿ ತಮ್ಮ ಸಮೂಹ ಬಾಂಧವರಲ್ಲಿ ಅರಿವನ್ನು ಮೂಡಿಸುವ ಕಾರ್ಯವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದು, ಪ್ರಸಕ್ತ ಸಾಲಿನ ಏಪ್ರಿಲ್ ನಲ್ಲಿ ದಶಮಾನೋತ್ಸವ ಆಚರಣೆಗೆ ಮುಂದಾಗಿದೆ. ಅದೇ ಕೊಡಗು ಜಿಲ್ಲೆಯಲ್ಲಿ 2011 ರಲ್ಲಿ ಆದಿ ದ್ರಾವಿಡ ಸಂಘಟನೆಯನ್ನು ಹುಟ್ಟು ಹಾಕಲಾಗಿದೆ. ಆದರೆ ಇದು ನಿಷ್ಕ್ರೀಯವಾಗಿದ್ದು, ಪುನಶ್ಚೇತನಗೊಳಿಸಲು ಕ್ರಮ ಕೈಗೊಳ್ಳಾಗುವುದು ಎಂದರು.
 
 
ಇತ್ತೀಚೆಗಷ್ಟೆ ನಡೆದ ಜಾತಿ ಜನಗಣತಿ ಸಂದರ್ಭ ಅಧಿಕಾರಿಗಳು ತಮಗೆ ತೋಚಿದಂತೆ ಗಣತಿ ಕಾರ್ಯ ನಡೆಸಿದ್ದು, ಸಮರ್ಪಕ ರೀತಿಯಲ್ಲಿ ತಮ್ಮ ಜಾತಿಯ ಹೆಸರನ್ನು ದಾಖಲಿಸಿಕೊಳ್ಳದೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು. ಮುಂದಿನ ದಿನಗಳಲ್ಲಿ ತಮ್ಮ ಸಮೂಹ ಬಾಂಧವರನ್ನು ‘ಆದಿ ದ್ರಾವಿಡ’ವೆಂದೇ ನಮೂದಿಸಿ ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಿದರು.
 
ಅರಿವಿನ ಕೊರತೆ ಹೊಂದಿರುವ ಜಿಲ್ಲೆಯ ಆದಿ ದ್ರಾವಿಡ ಸಮೂಹ ಬಾಂಧವರಿಗೆ ತಿಳುವಳಿಕೆಯನ್ನು ನೀಡುವ ಚಿಂತನೆ ಹೊಂದಲಾಗಿದೆ. ಇದೇ ಫೆ.27 ರಂದು ಬೆಳಗ್ಗೆ 11 ಗಂಟೆಗೆ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಕೊಡಗು ಜಿಲ್ಲಾ ಆದಿ ದ್ರಾವಿಡ ಸೇವಾ ಸಮಿತಿಯ ಸಮಾವೇಶ ಮತ್ತು ಜಿಲ್ಲಾ ಸಮಿತಿಯ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗುವುದೆಂದು ಹೆಚ್. ಸೋಮಪ್ಪ ಮಾಹಿತಿ ನೀಡಿದರು. ಸಮಾವೇಶದಲ್ಲಿ ದಕ್ಷಿಣ ಕನ್ನಡ ಆದಿ ದ್ರಾವಿಡ ಸಂಘಟನೆಯ ಅಧ್ಯಕ್ಷರು, ಕಾರ್ಯದರ್ಶಿಗಳು ಸೇರಿದಂತೆ ಪದಾಧಿಕಾರಿಗಳು ಆಗಮಿಸಿ ಅಗತ್ಯ ಮಾಹಿತಿಯನ್ನು ಒದಗಿಸಲಿದ್ದಾರೆ ಎಂದು ಹೆಚ್.ಎಂ.ಸೋಮಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸೋಮವಾರಪೆೇಟೆ ಹೋಬಳಿ ಪ್ರಮುಖ ತನಿಯಪ್ಪ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here