ಆದಿವಾಸಿಗಳ ಕಡೆಗಣನೆ ಆರೋಪ : ಮಾ.6 ರಂದು ಪ್ರತಿಭಟನೆ

0
359

ಮಡಿಕೇರಿ ಪ್ರತಿನಿಧಿ ವರದಿ
ಕೊಡಗಿನಲ್ಲಿ ತಲೆತಲಾಂತರಗಳಿಂದ ಆದಿವಾಸಿ ಮೂಲ ನಿವಾಸಿಗಳು ಸಂಕಷ್ಟದ ಜೀವನವನ್ನು ನಡೆಸುತ್ತಾ ಬಂದಿದ್ದು, ಇಂದಿಗೂ ಈ ಜನಾಂಗಕ್ಕೆ ಯಾವುದೇ ಹಕ್ಕುಗಳು ದೊರೆತ್ತಿಲ್ಲವೆಂದು ಆರೋಪಿಸಿರುವ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಮಾ.6 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
 
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ವೈ.ಕೆ.ಗಣೇಶ್ ನಿವೇಶನ ಮತ್ತು ಭೂಮಿ ರಹಿತ ಆದಿವಾಸಿಗಳು ತಮ್ಮ ಹಕ್ಕುಗಳನ್ನು ಪಡೆಯಲು ತಾವು ವಾಸವಿರುವ ಪ್ರದೇಶದ ಆಡಳಿತ ವ್ಯವಸ್ಥೆಗೆ ಅರ್ಜಿಗಳನ್ನು ನೀಡಿ ಹಲವು ವರ್ಷಗಳೇ ಕಳೆದರೂ ಬೇಡಿಕೆಗಳಿಗೆ ಇಲ್ಲಿಯವರೆಗೆ ಸ್ಪಂದನೆ ದೊರೆತ್ತಿಲ್ಲವೆಂದು ಆರೋಪಿಸಿದರು.
 
 
ಸಂಬಂಧಪಟ್ಟ ಗ್ರಾ.ಪಂ ಹಾಗೂ ತಾ.ಪಂ ಗಳಿಗೆ ಅರ್ಜಿಗಳನ್ನು ನೀಡಿದ್ದರೂ ಸೂಕ್ತ ನ್ಯಾಯ ಸಿಕ್ಕಿಲ್ಲ. ರಾಜ್ಯ ಮಟ್ಟದಲ್ಲಿ ಹೋರಾಟಗಳನ್ನು ನಡೆಸಿ ಸರಕಾರದ ಗಮನ ಸೆಳೆಯುವ ಅನೇಕ ಪ್ರಯತ್ನಗಳನ್ನು ಮಾಡಿದರೂ ಮೂಲ ಆದಿವಾಸಿಗಳಿಗೆ ನಿವೇಶನ ಮತ್ತು ವಸತಿಯ ಹಕ್ಕು ದೊರೆತ್ತಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೆಲವು ಪ್ರದೇಶಗಳನ್ನು ಮಾತ್ರ ಸೀಮಿತಗೊಳಿಸಿಕೊಂಡು ನಿವೇಶನ ಹಂಚಿಕೆಯ ನಾಟಕವಾಡುತ್ತಿದ್ದು, ಮೂಲ ಆದಿವಾಸಿಗಳನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದರು.
ಆದ್ದರಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಇದೇ ಮಾ.6 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆಯನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
 
 
ಪಾಲೇಮಾಡಿನ ಬಡವರ್ಗದ ಸ್ಮಶಾನದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವುದು ಅರ್ಥಹೀನವಾಗಿದ್ದು, ಈ ವಿಚಾರದಲ್ಲಿ ಕೆಲವರು ಸ್ವಪ್ರತಿಷ್ಠೆಯನ್ನು ಪ್ರದರ್ಶಿಸುತ್ತಿರುವುದು ಖಂಡನೀಯವೆಂದು ಗಣೇಶ್ ಅಸಮಾಧಾನ ವ್ಯಕ್ತಪಡಿಸಿದರು. ಕ್ರೀಡಾಂಗಣ ನಿರ್ಮಾಣಗೊಳ್ಳುವುದನ್ನು ಸ್ವಾಗತಿಸುತ್ತೇವೆ. ಆದರೆ ಬಡವರ ಸ್ಮಶಾನದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವುದು ಬೇಡ ಎನ್ನುವುದು ನಮ್ಮ ಒತ್ತಾಯವಾಗಿದೆ ಎಂದು ಸ್ಪಷ್ಟಪಡಿಸಿದ ಅವರು ತಕ್ಷಣ ಜಿಲ್ಲಾಡಳಿತ ಈ ವಿವಾದವನ್ನು ಶಾಂತ ರೀತಿಯಲ್ಲಿ ಬಗೆಹರಿಸಬೇಕೆಂದು ಒತ್ತಾಯಿಸಿದರು.
 
 
ಕೆ.ಬಾಡಗ ಗ್ರಾಮದ ತಿರುನಾಡ ಹಾಡಿಯ ಅಧ್ಯಕ್ಷರಾದ ಪಿ.ಎಂ.ತಮ್ಮು ಮಾತನಾಡಿ, ತಿರುನಾಡ ಹಾಡಿಯ ನಿವಾಸಿಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಹಾಡಿಯಲ್ಲಿ ಸುಮಾರು 27 ಪಂಜಿರಿಯರವರ (ಆದಿವಾಸಿ)ಕುಟುಂಬಗಳಿದ್ದು ರಸ್ತೆ, ವಿದ್ಯುತ್, ನೀರಿನ ವ್ಯವಸ್ಥೆಗಳಿಲ್ಲದೆ ಪರದಾಡುತ್ತಿದ್ದಾರೆ. ಸ್ವಾತಂತ್ರ್ಯ ಸಿಕ್ಕಿ 69 ವರ್ಷಗಳು ಕಳೆದರು ಇಂದಿಗೂ ಯಾವುದೇ ಸರ್ಕಾರಿ ವಸತಿ ಸೌಲಭ್ಯಗಳಿಲ್ಲದೆ ಗುಡಿಸಲುಗಳಲ್ಲಿ ವಾಸಿಸುತ್ತಿರುವುದು ವಿಪರ್ಯಾಸವಾಗಿದೆ ಎಂದರು.
 
 
ಬೇಡಿಕೆಗಳು:
ನಿವೇಶನ ಮತ್ತು ಭೂಮಿಯ ಹಕ್ಕನ್ನು ತಕ್ಷಣ ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು, ಮೂಲ ಆದಿವಾಸಿಗಳು ನೆಲೆ ನಿಂತಿರುವ ಮತ್ತು ಕೃಷಿ ಮಾಡುತ್ತಿರುವ ಭೂಮಿಗೆ ಹಕ್ಕು ಪತ್ರ ನೀಡಬೇಕು, ಆದಿವಾಸಿಗಳು ವಾಸಿಸುತ್ತಿರುವ ಹಾಡಿಗಳು ಅಥವಾ ಕಾಲೋನಿಗಳಿಗೆ ಕುಡಿಯುವ ನೀರು, ಶೌಚಾಲಯ, ವಿದ್ಯುತ್, ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು, ಅರಣ್ಯ ಇಲಾಖೆಯ ಹುದ್ದೆಗಳಿಗೆ ಆದಿವಾಸಿಗಳನ್ನು ನೇಮಿಸಿಕೊಳ್ಳಬೇಕು, ವಿದ್ಯಾವಂತ ಆದಿವಾಸಿ ಯುವಕ, ಯುವತಿಯರಿಗೆ ಸರಕಾರಿ ಮತ್ತು ಖಾಸಗಿ ವಲಯದಲ್ಲೂ ಉದ್ಯೋಗ ಮೀಸಲಾತಿ ನೀಡಬೇಕು ಮತ್ತು ಈ ಜವಬ್ದಾರಿಯನ್ನು ಸರಕಾರ ಹಾಗೂ ಜಿಲ್ಲಾಡಳಿತವೇ ನಿಭಾಯಿಸಬೇಕು, ಆದಿವಾಸಿಗಳಿಗೆ ಸೇರಬೇಕಾದ ಭೂಮಿಯನ್ನು ಪ್ರಭಾವಿಗಳು ಸ್ವಾಧೀನ ಪಡಿಸಿಕೊಂಡಿದ್ದು, ಇದನ್ನು ಮರಳಿ ಆದಿವಾಸಿಗಳಿಗೆ ನೀಡಲು ಕ್ರಮ ಕೈಗೊಳ್ಳಬೇಕು. ಆದಿವಾಸಿಗಳನ್ನು ವಂಚಿಸಿ ಭೂಮಿ ಕಸಿದುಕೊಂಡಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು, ಆದಿವಾಸಿಗಳ ಭೂ ದಾಖಲೆಗಳನ್ನು ಕಸಿದುಕೊಳ್ಳುವ ಪ್ರವೃತ್ತಿಗೆ ಕಡಿವಾಣ ಹಾಕಬೇಕು, ಆದಿವಾಸಿಗಳಿಗೆ ಮತದಾರರ ಗುರುತಿನ ಚೀಟಿ ಮತ್ತು ರೇಷನ್ ಕಾರ್ಡ್ ಗಳಂತೆ ಎಲ್ಲಾ ಮೂಲ ದಾಖಲೆಗಳನ್ನು ಅದಲಾತ್ ಸಭೆ ಮೂಲಕ ವಿತರಿಸಬೇಕು, ಆದಿವಾಸಿಗಳನ್ನು ಜೀತಮುಕ್ತರನ್ನಾಗಿ ಮಾಡಿ, ಸಾಲ ಮನ್ನಾ ಮಾಡಲು ಖುದ್ದು ಸರಕಾರವೇ ಸೂಕ್ತ ಕ್ರಮ ಕೈಗೊಳ್ಳಬೇಕು, ಆದಿವಾಸಿಗಳು ಹಾಗೂ ದಲಿತರ ಸ್ಮಶಾನ ಒತ್ತುವರಿಯಾಗಿದ್ದರೆ ವಶಪಡಿಸಿಕೊಂಡು ಮರಳಿ ಈ ಸಮುದಾಯಗಳಿಗೆ ನೀಡಬೇಕು ಮತ್ತು ಸ್ಮಶಾನ ಇಲ್ಲದವರಿಗೆ ಸ್ಮಶಾನದ ಜಾಗ ಗುರುತಿಸಿ ನೀಡಬೇಕು, ಪಾಲೇಮಾಡುವಿನಲ್ಲಿ ಬಡಕುಟುಂಬಗಳು ಶವ ಸಂಸ್ಕಾರ ಮಾಡುತ್ತಿದ್ದ ಭೂಮಿಯನ್ನೇ ಸ್ಥಳೀಯ ನಿವಾಸಿಗಳ ಸ್ಮಶಾನಕ್ಕಾಗಿ ಬಿಟ್ಟುಕೊಡಬೇಕು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಪಿ.ಟಿ.ಲೋಕೇಶ್ ಹಾಗೂ ವೈ.ರವಿ ಉಪಸ್ಥಿತರಿದ್ದರು. ಫೋಟೋ :: ಆದಿವಾಸಿ ಹಕ್ಕು

LEAVE A REPLY

Please enter your comment!
Please enter your name here