ಅ್ಯಂಟಿ ಆಕ್ಸಿಡೆಂಟ್ ಗುಣದ ಕಲ್ಲಟ್ಟೆ ಕಾಯಿ

0
590

ಚಿಗುರು ಅಂಕಣ: ರಾಧಾಕೃಷ್ಣ ಹೊಳ್ಳ
ಹಳಿಗಳಲ್ಲಿ ಪ್ರಾದೇಶಿಕವಾಗಿ ಕಲಟ್ಟೆ , ಕಾದ ಕಲ್ಲಟ್ಟಿ, ಶುಂಡಕ್ಕಾಯಿ, ಕಾಡು ಬದನೆ, ಚುಂಡೆ ಎಂಬೆಲ್ಲಾ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡುವ ಬದನೆ ಕುಟುಂಬದ ಸಸ್ಯ ಕಲ್ಲಟ್ಟೆ. ಮೂಲತಃ ಬ್ರೆಝಿಲ್ ನದ್ದು. ವೆಸ್ಟ್ ಇಂಡಿಯನ್ನರು ಭಾರತಕ್ಕೆ ಬರುವಾಗ ಕಳೆಯ ರೂಪದಲ್ಲಿ ದಕ್ಷಿಣ ಭಾರತದ ಭಾಗಗಳಿಗೆ ಬಂತು. ನಮ್ಮ ರಾಜ್ಯದಲ್ಲಿ ಎಲ್ಲಾ ಕಡೆಗಳಲ್ಲೂ ಈ ಸಸ್ಯ ವರ್ಗವನ್ನು ಕಾಣಬಹುದು. ಇದನ್ನು ಒಂದು ಕಳೆ ಗಿಡವೆಂದು ಪರಿಗಣಿಸಿದವರೇ ಹೆಚ್ಚು. ಇದನ್ನು ವಿದೇಶಗಳಲ್ಲಿ ಟರ್ಕಿ ಬೆರ್ರಿ ಎನ್ನುತ್ತಾರೆ.
kallaate chigu
ಇದು ಸುಮಾರು 2-3 ಮೀಟರ್ ಎತ್ತ್ರರದ ತನಕ ಬೆಳೆಯುವ ಸಸ್ಯವಾಗಿದ್ದು ಕಾಂಡದ ಮೇಲೆ ಮುಳ್ಳ್ಳುಗಳಿರುತ್ತವೆ. ಸಾಮಾನ್ಯವಾಗಿ ಬದನೆಯ ಸಸ್ಯದ ಎಲೆಗಳನ್ನು ಹೂವುಗಳನ್ನು ಹೋಲುವ ಇದರಲ್ಲಿ ಬದನೆ ತರಹದ್ದೇ ಸಣ್ಣ ಗಾತ್ರದ ಕಾಯಿಗಳಾಗುತ್ತದೆ. ಇದನ್ನು ಕಾಡು ಬದನೆ ಎಂಬುದಾಗಿಯೂ ಕರೆಯುತ್ತಾರೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಇದು ತೋಟದಲ್ಲಿ, ಬೇಲಿಗಳಲ್ಲಿ ಕಳೆ ಸಸ್ಯದಂತೆ ದಷ್ಟ ಪುಷ್ಟವಾಗಿ ಬೆಳೆಯುತ್ತಿರುತ್ತದೆ. ಅನುಕೂಲಕರ ವಾತಾವರಣ ಇದ್ದಲ್ಲಿ ಎರಡು ಮೂರು ವರ್ಷ ತನಕವೂ ಬದುಕಿರುತ್ತದೆ. ಕಡಿದರೆ ಸಾಯುತ್ತದೆ.
 
kallaate chigu1
ಬೆಳೆದು ಬಿದ್ದ ಕಾಯಿಗಳು ನೆಲದಲ್ಲಿ ಮತ್ತೆ ಸಸ್ಯವಾಗಿ ಹುಟ್ಟಿಕೊಳ್ಳುತ್ತದೆ. ಈ ಸಸ್ಯ ಅಳಿಯುವುದು ಅಪರೂಪ. ಕಳೆ ನಾಶಕಗಳಿಂದ ಮಾತ್ರವೇ ಇದನ್ನು ನಿರ್ಮೂಲನೆ ಮಾಡಲು ಸಾಧ್ಯ. ಗಿಡದಲ್ಲಿ ವರ್ಷ ಪೂರ್ತಿ ಗೊಂಚಲು ಗೊಂಚಲಿನಂತೆ ಕಾಯಿಗಳು ಬಿಡುತ್ತವೆ. ಕೊಯ್ದರೆ ಉಪಯೋಗವಾಗುತ್ತದೆ. ಇಲ್ಲವಾದರೆ ಅಲ್ಲಿಯೇ ಬೆಳೆದು ಹಣ್ಣಾಗಿ ಉದುರುತ್ತದೆ.  ಹಕ್ಕಿಗಳು ಇದನ್ನು ತಿಂದು ಹಿಕ್ಕೆ ಹಾಕುವುದೂ ಇದೆ. ತೀರಾ ಸಣ್ಣದಾದ ಬದನೆ ಬೀಜದ ತರಹದ್ದೇ ಬೀಜಗಳು. ಕಲ್ಲಟ್ಟೇ ಸಸ್ಯಕ್ಕೆ ಬದನೆಯನ್ನು ಕಸಿ ಮಾಡಿ ಹೆಚ್ಚು ಸಮಯದ ತನಕ ಉಳಿಸಬಹುದು.
 
 
ನಮ್ಮ ಹಳ್ಳಿಗಳಲ್ಲಿ ಇದರಿಂದ ಒಂದಷ್ಟು ಬಗೆಯ ಅಡುಗೆಗಳನ್ನು ಮಾಡುತ್ತಾರೆ. ಮುಖ್ಯವಾಗಿ ಕಲ್ಲಟ್ಟೆಯ ಎಳೆ ಕಾಯಿಗಳನ್ನು ಇದಕ್ಕೆ ಬಳಕೆ ಮಾಡುವುದು ಕ್ರಮ. ಎಳೆ ಕಾಯಿಗಳನ್ನು ತುಪ್ಪದಲ್ಲಿ ಅಥವಾ ಎಣ್ಣೆ ಸ್ವಲ್ಪ ಹಾಕಿ ಬಾಣಲೆಯಲ್ಲಿ ಬಾಡಿಸಿ ಅದನ್ನು ಒಗ್ಗರಣೆ ಹಾಕಿ ಗೊಜ್ಜು ಮಾಡುವುದು ಇದೆ. ಇದಕ್ಕೆ ಬದನೆಯ ಗೊಜ್ಜಿನಂತೆ ಸಾಮಾನುಗಳನ್ನು ಹಾಕಬೇಕು.
kallaate chigu2
ಇದಲ್ಲದೆ ಬದನೆ ಹುಳಿ ಮಾಡಿದಂತೆ ಇದನ್ನೂ ಹುಳಿ ಮಾಡಲಿಕ್ಕೆ ಬರುತ್ತದೆ. ಆದರೆ ಕೊರೆದು ಇದನ್ನು ನೀರಿನಲ್ಲಿ ಹಾಕಿ ರಸ ತೆಗೆಯಬೇಕು.
ಇದಲ್ಲದೆ ಕರಾವಳಿಯಲ್ಲಿ ಮೆಣಸು ಕಾಯಿ ಎಂಬ ಅಡಿಗೆಯನ್ನು ಮಾಡುವುದಿದೆ. ಎಳ್ಳು ಸೇರಿಸಿ ಹೆಚ್ಚು ಸಿಹಿಯಾಗಿರುವ ಈ ಅಡುಗೆಯನ್ನು ಮಾವಿನಕಾಯಿ, ಹಣ್ಣು, ಹಾಗಲಕಾಯಿ, ಅಮಟೆ, ಅನಾನಾಸು ಮುಂತಾದವುಗಳಿಂದ ಮಾಡಿದಂತೆ ಕಲ್ಲಟ್ಟೆಯಲ್ಲೂ ಮಾಡಲಿಕ್ಕಾಗುತ್ತದೆ. ಕರಾವಳಿ ಮಲೆನಾಡಿನಲ್ಲದೆ ಬೇರೆ ಕಡೆಯಲ್ಲೂ ಇದರ ಬೇರೆ ಬೇರೆ ಅಡುಗೆಗಳನ್ನು ಮಾಡುವುದಿದೆ.
ಇದರ ವೈಜ್ಞಾನಿಕ ಹೆಸರು Solnum torvum Swartz ಕಾಂಡದ ಮೇಲೆ ಮುಳ್ಳುಗಳಿರುತ್ತವೆ. ಎಲೆಗಳಲ್ಲಿ ಇರುವುದಿಲ್ಲ.ಎಲೆಯ ಮೇಲೆ ಕೂದಲುಗಳಿವೆ. ಜುಲೈ ತಿಂಗಳಲ್ಲಿ ಹೆಚ್ಚು ಹೂ ಬಿಡುತ್ತದೆ. ನೀರಾವರಿ ಇದ್ದಾಗ ಬೇರೆ ಸಮಯದಲ್ಲೂ ಹೂ ಬಿಟ್ಟು ಕಾಯಿಯಾಗುತ್ತದೆ. ರಾಜ್ಯದಾದ್ಯಂತ ಬೆಳೆಯುವುದನ್ನು ಕಾಣಬಹುದು.
ಇದರ ಕಾಯಿಯಲ್ಲಿ ಅಧಿಕ ಪ್ರಮಾಣದಲ್ಲಿ ಸೋಂಕು ನಿರೋಧಕ ಗುಣ ಇರುತ್ತದೆ. ಮಧುಮೇಹ ನಿರೋಧಕ ಶಕ್ತಿ ಹೆಚ್ಚಿಸಿಕೊಡುವ ಅ್ಯಂಟಿ ಆಕ್ಸಿಡೆಂಟ್ ಗಳು ಇವೆಯಂತೆ. ಇದನ್ನು ಇಲಿಗಳಲ್ಲಿ ಪ್ರಯೋಗ ಮಾಡಿ ನೋಡಿ ಫಲಿತಾಂಶ ಉತ್ತಮವಿರುವುದು ಕಂಡು ಬಂದಿದೆ. ಇದರಲ್ಲಿರುವ ಸೋಂಕು ನಿರೋಧಕ ಗುಣದಿಂದಾಗಿ ಇದನ್ನು ಔಷಧೀಯ ಬಳಕೆಗೆ ಉಪಯೋಗ ಮಡುವ ಸಾಧ್ಯತೆಯೂ ಇದೆ. ಸಾಂಪ್ರದಾಯಿಕವಾಗಿ ಕಲ್ಲಟ್ಟೆ ಕಾಯಿಯನ್ನು ಬ್ಯಾಕ್ಟೀರಿಯಾ ಮತ್ತು ಶಿಲೀಂದ್ರ ಸೋಂಕಿಗೆ ಔಷದಿಯಾಗಿ ಬಳಕೆ ಮಾಡುವ ಕ್ರಮ ಇದೆ.
ನಮ್ಮ ದೇಶವಲ್ಲದೆ ಬೇರೆ ದೇಶಗಳಲ್ಲೂ ಇದರ ಸಸ್ಯಗಳು ಇದ್ದು ಇದನ್ನು ಒಣಗಿಸಿ ಸಂಗ್ರಹಿಸುವ ಕ್ರಮ ಇದೆ ಎಂಬುದು ಅಂತರ್ಜಾಲ ಹುಡುಕಾಟದಲ್ಲಿ ಮಾಹಿತಿ ದೊರೆಯುತ್ತದೆ.
ಇವೆಲ್ಲಾ ಅಂಶಗಳಿಂದ ನಮ್ಮ ಹಿರಿಯರು ಕಳೆ ಗಿಡಗಳಿಂದ ಕೆಲವು ಅಡುಗೆಗಳನ್ನು ಮಾಡಿ ಬಳಕೆ ಮಾಡುವುದರಲ್ಲಿ ಅರ್ಥವಿದೆ ಎಂದು ಕಂಡು ಬರುತ್ತದೆ. ಹೊಸ ತಲೆಮಾರಿಗೆ ಹಿರಿಯರು ಮಾಡುತ್ತಿದ್ದ ಅಡುಗೆಗಳ ಮಾಹಿತಿಯ ಕೊರತೆ ಕಂಡು ಬರುತ್ತದೆ.
ರಾಧಾಕೃಷ್ಣ ಹೊಳ್ಳ
[email protected]

LEAVE A REPLY

Please enter your comment!
Please enter your name here