ಅಹ್ಮದ್ ಅನ್ವರ್ರಿಗೆ 'ಶೇಖ್ ಅಹ್ಮದ್ ಸರ್ ಹಿಂದೀ' ಪ್ರಶಸ್ತಿ

0
143

 
ಮಂಗಳೂರು ಪ್ರತಿನಿಧಿ ವರದಿ
ಯುನಿವೆಫ್ ಕರ್ನಾಟಕ ಪ್ರತಿ ವರ್ಷ ಸ್ವಾತಂತ್ರ್ಯೋತ್ಸವದಂದು ಕೊಡಮಾಡುವ 2016ನೇ ಸಾಲಿನ ‘ಶೇಖ್ ಅಹ್ಮದ್ ಸರ್ ಹಿಂದೀ’ ಪ್ರಶಸ್ತಿಗೆ ಪತ್ರಿಕಾ ಛಾಯಾಚಿತ್ರಗಾರ, ಕವಿ, ಲೇಖಕ ಅಹ್ಮದ್ ಅನ್ವರ್ ಆಯ್ಕೆಯಾಗಿದ್ದಾರೆ.
 
 
ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಂಘ ಮೂಡಬಿದರೆ, ಮುಸ್ಲಿಮ್ ಲೇಖಕರ ಸಂಘ, ಕರ್ನಾಟಕ ಫೋಟೋಗ್ರಾಫಿಕ್ ಅಸೋಸಿಯೇಶನ್, ದಕ್ಷಿಣ ಕನ್ನಡ ಛಾಯಾಗ್ರಾಹಕ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಯೂತ್ ಫೊಟೋಗ್ರಾಫಿಕ್ ಅಸೋಸಿಯೇಶನ್ ಮುಂತಾದ ಸಂಘಟನೆಗಳ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಅಹ್ಮದ್ ಅನ್ವರ್ರವರ ಬ್ಯಾರಿ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಬರೆದ ಮಹಾ ಪ್ರಬಂಧವೊಂದು ಹಂಪಿ ವಿಶ್ವ ವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗವು ಪ್ರಕಟಿಸಿದೆ.
 
‘ಭಾರತ ಗೀತ’ ನೂರೊಂದು ಕವಿತೆಗಳು, ‘ಗುಲ್ ಮೊಹರ್’ಕವನ ಸಂಕಲನ, ‘ನನ್ನ ಕನಸಿನ ಭಾರತ’ ಲೇಖನ ಸಂಕಲನ, ‘ಬೇವು ಬೆಲ್ಲ ಹನಿಗವನಗಳು ಇವರ ಪ್ರಕಟಿತ ಕೃತಿಗಳಾಗಿವೆ. ಸೃಜನ ಶೀಲ ಛಾಯಾ ಚಿತ್ರಗಾರರಾಗಿರುವ ಇವರ ಅನೇಕ ಛಾಯಾ ಚಿತ್ರ ಪ್ರದರ್ಶನಗಳು ರಾಜ್ಯದ ವಿವಿಧೆಡೆ ಆಯೋಜಿತವಾಗಿದ್ದು, ಮುಂಬೈ ಕರ್ನಾಟಕ ಸಂಘದ ‘ಪೇಜಾವರ ಸದಾಶಿವ ರಾವ್ ಸ್ಮಾರಕ ಪ್ರಶಸ್ತಿ’, ಮುಸ್ಲಿಮ್ ಲೇಖಕರ ಸಂಘದ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’, ಬೆಂಗಳೂರು ಸ್ನೇಹ ಸೇತು ಸಾಹಿತ್ಯ ಸಂಘದ ‘ಸ್ನೇಹ ಸೇತು ಪ್ರಶಸ್ತಿ’ ಸೇರಿದಂತೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಇವರಿಗೆ ಲಭಿಸಿವೆ.
 
 
ಕೆರಿಯರ್ ಗೈಡೆನ್ಸ್ ಆಂಡ್ ಇನ್ಫೊರ್ಮೇಶನ್ ಸೆಂಟರ್ ನ ಅಧ್ಯಕ್ಷ ಉಮರ್ ಯು.ಹೆಚ್. ಹಾಗೂ ಎನ್ಎಂಪಿಟಿಯ ನಿವೃತ ಅಧೀಕ್ಷಕ ಬಿ.ಎ. ಮುಹಮ್ಮದ್ ಅಲಿ ಆಯ್ಕೆ ಸಮಿತಿಯ ಸಲಹೆಗಾರರಾಗಿ ಸಹಕರಿಸಿದ್ದು, ಆ.15ರಂದು ನಗರದ ಫಳ್ನೀರು ರಸ್ತೆಯಲ್ಲಿರುವ ಲುಲು ಸೆಂಟರ್ನಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವ ಸಮಾರಂಭದಂದು ಅಹ್ಮದ್ ಅನ್ವರ್ರವರನ್ನು ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕಾರ್ಯಕ್ರಮ ಸಂಚಾಲಕ ಮುಹಮ್ಮದ್ ನಯೀಮ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here