ಅಹಂ ತೊರೆಸಲು ನಿದ್ಯಾನಂದರು ಉಪಾಯ ಹೂಡುತ್ತಿದ್ದರು!

0
9255

ನಿತ್ಯ ಅಂಕಣ-೧೦೩ : ತಾರಾನಾಥ್‌ ಮೇಸ್ತ, ಶಿರೂರು.
ಭಗವಾನ್ ನಿತ್ಯಾನಂದರ ಶಿಷ್ಯ ವೃಂದದಲ್ಲಿ ಪೂಜ್ಯ ಗೋವಿಂದ ಸ್ವಾಮಿಗಳು ಕೂಡ ಓರ್ವರು. ಪರಮಪೂಜ್ಯರು ಮಹಾತಪಸ್ವಿಗಳು ಕಾಲಜ್ಞಾನಿ ಯೋಗಿಗಳಾಗಿದ್ದರು. ಗೋವಿಂದ ಸ್ವಾಮಿಗಳು ಕೇರಳ ರಾಜ್ಯದ ಉತ್ತರ ಮಲಬಾರ್ ಜಿಲ್ಲೆಯ “ಮಡಿಯಾಂಕಳಮ್” ಗ್ರಾಮದಲ್ಲಿ ಮೇ15, 1925 ರಂದು ನಂಬೂದರಿ ಬ್ರಾಹ್ಮಣ ಸಮಾಜದಲ್ಲಿ ಜನಿಸಿದರು. ಎರಡನೆಯ ವಯಸ್ಸಿನಲ್ಲಿ ಇವರು ಹೆತ್ತಬ್ಬೆಯನ್ನು ಕಳೆದುಕೊಳ್ಳುತ್ತಾರೆ. ಬಾಲ್ಯದಲ್ಲಿ ಇವರಿಗೆ ಅಮ್ಮನ ಪ್ರೀತಿ ವಾತ್ಸಲ್ಯವು ದೊರೆತ್ತಿರುವುದಿಲ್ಲ. ಮಲತಾಯಿ ಹಾಗೂ ತಂದೆಯ ಆಶ್ರಯದಲ್ಲಿ ಬೆಳೆಯುತ್ತಾರೆ. ವೈದಿಕರ ಕುಟುಂಬವಾದರಿಂದ ಸಣ್ಣ ಪ್ರಾಯದಲ್ಲಿಯೇ ದೇವರಪೂಜೆ, ವೇದಮಂತ್ರಗಳ ಪಠಣ, ವೇದಾಭ್ಯಾಸಗಳು ಅತಿಯಾದ ಶ್ರದ್ಧಾಭಕ್ತಿ ಇವೆಲ್ಲವು ಗೋವಿಂದರ ಬಾಲ್ಯ ಜೀವನದ ದಿನಚರಿಯಲ್ಲಿ ಇದ್ದವು. ಸಣ್ಣ ಪ್ರಾಯದಲ್ಲಿಯೇ ಭಗವಾನ್ ನಿತ್ಯಾನಂದರ ದರ್ಶನವನ್ನು ತಂದೆಯವರು ಕಾಂಞಂಗಾಡಿನಲ್ಲಿ ಹಲವಾರು ಸಲ ಮಾಡಿಸಿದ್ದರು.
ಹೀಗಿರುವಾಗ ತಾಯಿ ಇಲ್ಲದ ತಬ್ಬಲಿಯಾಗಿ ಮಲತಾಯಿ, ತಂದೆಯ ಆಶ್ರಯದಲ್ಲಿ ಬೆಳೆಯುತ್ತಿರುವಾಗ ಗೊವೀಂದನ ತಂದೆಯವರು ಇಹಲೋಕ ತ್ಯಜಿಸುತ್ತಾರೆ. ಆವಾಗ ಗೋವಿಂದ ಹದಿನೈದು ವರ್ಷದ ಬಾಲಕ. ಬಾಲ್ಯದ ದಿನಗಳಲ್ಲಿ ತಾಯಿ ತಂದೆ ಕಳೆದುಕೊಂಡ ಗೋವಿಂದರಿಗೆ ಅನಾಥಪ್ರಜ್ಞೆ ಕಾಡುತ್ತದೆ. ಹೆತ್ತವರ ಅಗಲಿಕೆಯಿಂದ ಬಾಲಕ ಗೋವಿಂದ ಮಾನಸಿಕವಾಗಿ ನೊಂದು ಬೆಂದು ಹೋಗುತ್ತಾನೆ. ದುಃಖದಿಂದ ಹೊರಬರಲು ಆಗುದಿಲ್ಲ. ಸಂಸಾರಿಕ ಜೀವನವೇ ಬೇಡವೆಂಬ ಭಾವನೆ ಕಾಡುತ್ತದೆ ವೈರಾಗ್ಯ ಜಿಗುಪ್ಸೆ ಉಂಟಾಗುತ್ತದೆ. ಮನೆ, ಬಂಧು ಬಳಗ, ಆಪ್ತವಲಯ ಎಲ್ಲರಿಂದ ದೂರವಾಗಲು ಮನಸ್ಸು ಬಯಸುತ್ತದೆ. ಹಾಗಾಗಿ ಹುಟ್ಟೂರನ್ನು ಬಿಡಲು ನಿಶ್ಚಯಿಸುತ್ತಾರೆ. ಗಟ್ಟಿ ನಿರ್ಧಾರ ಮಾಡಿಕೊಂಡು ಗೋವಿಂದರು ಊರು ಬಿಟ್ಟು ತೆರಳುತ್ತಾರೆ. ಹೀಗೆ ಕೆಲವು ವರ್ಷ ಗೊತ್ತು ಗುರಿ ಇಲ್ಲದೆ ಗೋವಿಂದರ ವೈರಾಗ್ಯ ಯಾತ್ರೆಯು, ನೆಮ್ಮದಿ ಶಾಂತಿಗಾಗಿ ಆಧ್ಯಾತ್ಮ ಸಾನಿಧ್ಯ ಹುಡುಕುತ್ತ ಸಾಗುತ್ತದೆ.
ಗೋವಿಂದರು ತ್ರಾವಣಕೋರಿ ಎಂಬ ಊರಿನ ದೇವಸ್ಥಾನ ಒಂದರಲ್ಲಿ ಅರ್ಚಕರಾಗಿ ಸೇವೆ ಮಾಡುತ್ತಾರೆ. ಇಲ್ಲಿಯು ಅವರಿಗೆ ಮನಸ್ಸು ಹೆಚ್ಚು ಸಮಯ ನಿಲ್ಲಸುವುದಿಲ್ಲ. ಅಲ್ಲಿಂದಲು ಅವರು ತೆರಳುತ್ತಾರೆ. ಬಹಳಷ್ಟು ತೀರ್ಥ ಕ್ಷೇತ್ರಗಳಲ್ಲಿ ಮೊಕ್ಕಾಂ ಇದ್ದರೂ ಅಲ್ಲಿ ಗೋವಿಂದರಿಗೆ ಮನಃಶಾಂತಿ ದೊರೆಯುದಿಲ್ಲ. ಕೊನೆಗೆ ಅವರು ಅರುಣಾಚಲ ರಮಣ ಮಹರ್ಷಿಗಳ ಆಶ್ರಮದಲ್ಲಿ ಆಶ್ರಯ ಪಡೆಯುತ್ತಾರೆ. ಅಲ್ಲಿ ಜ್ಞಾನಿಗಳ, ಯೋಗಿಗಳ, ಸಾಧಕರ, ಆಧ್ಯಾತ್ಮಿಕ ಕ್ಷೇತ್ರದಲ್ಲಿ ಸಿದ್ಧಿ ಪಡೆದಿರುವ ಸಿದ್ಧಿಪುರಷರ ಸಂಪರ್ಕವನ್ನು ಪಡೆಯುತ್ತಾರೆ. ಅವರಿಂದ ಆಶೀರ್ವಾದ ಪಡೆದು ಮನಃತೃಪ್ತಿ ಹೊಂದುತ್ತಾರೆ. ನಂತರ ಗೋವಿಂದರು ಬಡಗರದ ಪರಮಹಂಸ ಶಿವಾನಂದ ಸ್ವಾಮಿಗಳ ಆಶ್ರಮಕ್ಕೆ ಬರುತ್ತಾರೆ. ಇಲ್ಲಿ ಗೋವಿಂದರ ಅಂತರ್ಯದಲ್ಲಿ ಇರುವ ಗುರು ಅನ್ವೇಷಣೆಯ ಹಸಿವು ಶಿವಾನಂದ ಸ್ವಾಮಿಗಳಿಗೆ ಗೊತ್ತಾಗುತ್ತದೆ. ಅವರು ಗೋವಿಂದರಿಗೆ ಅವಧೂತ ನಿತ್ಯಾನಂದರನ್ನು ಸಂಪರ್ಕಿಸಲು ಸಲಹೆ ನೀಡುತ್ತಾರೆ. ಆ ಸಮಯದಲ್ಲಿ ನಿತ್ಯಾನಂದರು ಗಣೇಶಪುರಿ ವಜ್ರೇಶ್ವರಿಯಲ್ಲಿ ದಿನಗಳನ್ನು ಕಳೆಯುತ್ತಿದ್ದರು. ಗೋವಿಂದರು ಪಾದಯಾತ್ರೆ ಮೂಲಕವಾಗಿ ಗಣೇಶಪುರಿಗೆ ತೆರಳುತ್ತಾರೆ. ಆವಾಗ ಗೋವಿಂದರಿಗೆ 28 ರ ಹರೆಯ.
ಗೋವಿಂದರಲ್ಲಿ ನಿತ್ಯದ ಖರ್ಚಿಗೆ ಧನವು ಇಲ್ಲವಾಗಿತ್ತು. ಮಳಯಾಳಂ ಭಾಷೆ ಬಿಟ್ಟರೆ ಬೇರೆ ಭಾಷೆಯ ಜ್ಞಾನವು ಇರಲಿಲ್ಲ. ಪರಿಚಯದ ವ್ಯಕ್ತಿಗಳು, ಮೊಕ್ಕಾಂ ಇರಲು ನಿವಾಸಗಳು ಇರಲಿಲ್ಲ. ಆದರೆ ಅವರು ಗುರುದೇವ ನಿತ್ಯಾನಂದರ ಮೇಲಿಟ್ಟ ಪ್ರಾರ್ಥನೆ, ಎಲ್ಲಾ ಸಮಸ್ಯೆಗಳು ತಾವೇ ಪರಿಹರಿಸಿಕೊಳ್ಳುತ್ತಿದ್ದವು. ಅಂತು ಧೈರ್ಯದಿಂದ ಛಲಹಿಡಿದು ಗೋವಿಂದರು ಪಾವನಪವಿತ್ರ ನಿತ್ಯಾನಂದರ ಸಾನಿಧ್ಯವನ್ನು ತಲುಪುತ್ತಾರೆ. ಗುರುದೇವರ ದರ್ಶನ ಪಡೆದು ಪುನೀತರಾಗುತ್ತಾರೆ. ನಿತ್ಯಾನಂದರ ಸಾಂಗತ್ಯದಲ್ಲಿದ್ದು ಸಾಧನೆಯ ಪಥದಲ್ಲಿ ದಿನಗಳನ್ನು ಕಳೆಯುತ್ತಾರೆ. ಆಗಲೇ ಆಶ್ರಮ ಭಕ್ತರು ಗೋವಿಂದ ಸ್ವಾಮಿ, ಗೋವಿಂದ ಬಾಬಾ ಎಂದು ಸಂಭೋದಿಸಿ ಅವರನ್ನು ಕರೆಯಲು ಪ್ರಾರಂಭಿಸುತ್ತಾರೆ.
ಹೀಗೆ ಒಂದು ದಿನ ಗೋವಿಂದ ಸ್ವಾಮಿಗಳನ್ನು ನಿತ್ಯಾನಂದರು ಸನಿಹ ಕರೆದು ವಜ್ರೇಶ್ವರಿಯಲ್ಲಿದ್ದ ಹೋಟೆಲಿಗೆ ಕೆಲಸಕ್ಕೆ ಹೋಗಲು ಹೇಳುತ್ತಾರೆ. ಕೆಲಸಕ್ಕೆ ಜನ ಕಳಿಸುವ ವಿಚಾರ, ಮತ್ತು ಅವನಿಂದ ಎಲ್ಲಾ ಬಗೆಯ ಕೆಲಸ ಮಾಡಿಸಿಕೊಳ್ಳಲು ಹೋಟೆಲು ಮಾಲಕರಿಗೆ ನಿತ್ಯಾನಂದರು ಮುಂಚಿತವಾಗಿ ವಿಷಯವನ್ನು ಹೇಳಿಟ್ಟಿದ್ದರು. ಆ ಹೋಟೆಲಿನಲ್ಲಿ ಮಾಂಸಹಾರ ಮತ್ತು ಸಸ್ಯಾಹಾರದ ಆಹಾರ ಖಾದ್ಯಗಳನ್ನು ಗಿರಾಕಿಗಳಿಗೆ ಒದಗಿಸುತಿತ್ತು. ಗುರುದೇವರ ಆದೇಶ ಕಟ್ಟಾಜ್ಞೆಯೆಂದು ತಿಳಿದು ಗೋವಿಂದ ಸ್ವಾಮಿಗಳು ಕೆಲಸವನ್ನು ಪ್ರಮಾಣಿಕವಾಗಿ ನಿರ್ವಹಿಸುತ್ತಾರೆ. ಹೋಟೆಲು ಮಾಲಿಕರಿಗೆ ಮಾತ್ರ ಗೋವಿಂದ ಸ್ವಾಮಿಯ ಪೂರ್ವಾಪರ, ಆತ ಗಣೇಶಪುರಿಗೆ ಬಂದಿರುವ ಉದ್ಧೇಶ, ಆತ ಬ್ರಾಹ್ಮಣ ಯುವಕ ಎನ್ನುವ ವಿಚಾರಗಳು ತಿಳಿದಿರುವುದಿಲ್ಲ. ಕೆಲಸದ ಬಿಡುವಿನ ಸಮಯದಲ್ಲಿ ಗೋವಿಂದರು ಗಣೇಶಪುರಿಗೆ ಬಂದು, ನಿತ್ಯಾನಂದರ ದರ್ಶನ ಪಡೆಯುತ್ತಿದ್ದರು.
ಒಂದು ದಿನ ನಿತ್ಯಾನಂದರು, ಕೆಲಸ ಹೇಗೆ ನಡೆಯುತ್ತಿದೆ, ಬೇಸರ ತೊಂದರೆ ಇದೆಯೇ ಎಂದು ವಿಚಾರಿಸಿ ತಿಳಿದುಕೊಂಡರು. “ಯಾವ ಕೆಲಸವನ್ನು ಆಯ್ಕೆ ಮಾಡಿಕೊಳ್ಳಲು ಹಿಂದೆಮುಂದೆ ನೋಡ ಬಾರದು. ಯಾವ ಕೆಲಸವೂ ಹೀನ ದರ್ಜೆಯದು ಆಗಿರುವುದಿಲ್ಲ. ಮಾಂಸ ಸೇವನೆಗೆ ನಿಷೇಧವಾದ್ದರಿಂದ ಬಂಧನಗಳಿದ್ದರೂ, ವ್ಯವಹಾರಿಕ ಕಾರಣಗಳ ಸಲುವಾಗಿ ನಿಷಿದ್ಧ ವಸ್ತುಗಳನ್ನು ಮುಟ್ಟುವಾಗ ಮನಸ್ಸು ಬೇಜಾರು ಮಾಡಿಕೊಳ್ಳಬಾರದು” ಎಂದು ಹೇಳಿದರು. ಆರು ತಿಂಗಳ ಬಳಿಕ ಗೋವಿಂದ ಸ್ವಾಮಿಗಳಿಗೆ ಕೆಲಸ ಬಿಡುವಂತೆ ನಿತ್ಯಾನಂದರು ಹೇಳುತ್ತಾರೆ. ಭಕ್ತನು ಅಹಂಭಾವ ತೊರೆಯಲು ನಿತ್ಯಾನಂದರು ಹೂಡಿದ ಉಪಾಯವು ಅದು ಆಗಿರಬೇಕು. ಮುಂದೆ ಗೋವಿಂದ ಸ್ವಾಮಿಗಳಿಗೆ ಗುರುದೇವರಿಂದ ಆಶೀರ್ವಾದ, ಶಿಷ್ಯತ್ವ ಪ್ರಾಪ್ತಿಯಾಗುತ್ತದೆ. ಅನಂಗಾವ್ ಪ್ರದೇಶಕ್ಕೆ ತೆರಳಲು ನಿತ್ಯಾನಂದರು ಆದೇಶ ನೀಡುತ್ತಾರೆ.
ಅದರಂತೆ ಗೋವಿಂದ ಸ್ವಾಮಿಗಳು ಅನಂಗಾವಗೆ ತೆರಳಿ ಅಲ್ಲಿಯ ಭಕ್ತರ ಸಹಕಾರದಿಂದ ಆಶ್ರಮ ತೆರೆಯುತ್ತಾರೆ. ಭಿವಾಳಿ ಎಂಬಲ್ಲಿಯೂ ಆಶ್ರಮ ಸ್ಥಾಪನೆ ಅವರಿಂದ ನಡೆಯುತ್ತದೆ. ಮುಂದೆ ಅವರು ನಿತ್ಯಾನಂದರ ಪಾದಸ್ಪರ್ಶ ಪಡೆದ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳಕ್ಕೆ ಬಂದು ಸ್ಮಶಾನದಲ್ಲಿ ನೆಲೆಸುತ್ತಾರೆ. ಅಲ್ಲಿಯ ಭಕ್ತರ ಸಹಕಾರದಿಂದ ನೇತ್ರಾವತಿ ನದಿ ದಂಡೆಯ ಮೇಲೆ ಆಶ್ರಮ- ನಿತ್ಯಾನಂದ ಮಂದಿರದ ಸ್ಥಾಪನೆ ಕಾರ್ಯವು ನಡೆಯುತ್ತದೆ. ಹಲವು ಸಮಯದವರೆಗೆ ಗೋವಿಂದ ಸ್ವಾಮಿಗಳು ಬಂಟವಾಳದಲ್ಲಿ ಕಳೆಯುತ್ತಾರೆ. ನಂತರ ಗೋವಿಂದ ಸ್ವಾಮಿಗಳು ಕೊನೆಯ ದಿನಗಳನ್ನು ಭಿವಾಳಿ ಆಶ್ರಮದಲ್ಲಿ ಕಳೆದರು. ಅಲ್ಲಿ ಫೆಬ್ರವರಿ-12, 1994 ರಂದು ಸಮಾಧಿ ಪಡೆದರು. ಗಣೇಶಪುರಿ ಸನಿಹದ ಭಿವಾಳಿಯಲ್ಲಿ ಪೂಜ್ಯರ ಸಮಾಧಿ ಮಂದಿರ ಇದ್ದು ಅದು ಭಕ್ತರ ಶ್ರದ್ಧಾ ಕೇಂದ್ರವಾಗಿ ಬೆಳೆದು ನಿಂತಿದೆ. ಗೋವಿಂದ ಸ್ವಾಮಿಗಳ ಕುರಿತಾಗಿ ಲೇಖಕರಾದ ಡಾ. ವಿದ್ಯಾಧರ ಶಿವರಾಮ ಕರಿ ಅವರು “ಪರಮಪೂಜ್ಯ ಗೋವಿಂದ ಸ್ವಾಮಿ” ಚರಿತಾಮೃತ ಗ್ರಂಥ ಬರೆದಿದ್ದಾರೆ. ಅದರಲ್ಲಿ ಪರಮಪೂಜ್ಯರ ಮಹಿಮೆ, ಪವಾಡಗಳು ಭಕ್ತರ ಅನುಭವ, ಮೊದಲಾದ ಸಂಗತಿಗಳನ್ನು ಓದುಗರ ಮನಮುಟ್ಟುವಂತೆ ಅನಾವರಣ ಮಾಡಿದ್ದಾರೆ.

LEAVE A REPLY

Please enter your comment!
Please enter your name here