ಅಸಲಿ ಗೋರಕ್ಷಕರು ಯಾರು ?

0
339

ವರದಿ: ವಿ. ಎಸ್. ಬೇರಿಂಜ
ದೇಶದಲ್ಲಿ ಆರ್.ಎಸ್.ಎಸ್. ಪ್ರಾಯೋಜಕತ್ವದ ಬಿಜೆಪಿ ಆಡಳಿತದಲ್ಲಿ, ಶ್ರೀಮಾನ್ ನರೇಂದ್ರ ಮೋದಿಯ ಸರ್ವಾಧಿಕಾರಿ ಆಡಳಿತವು ಇತರ ರಾಜಕೀಯ ಪಕ್ಷಕ್ಕಿಂತ ಭಿನ್ನವಾಗಿದೆ.! ಗುಜರಾತಿನ ಊನದಲ್ಲಿ ಸತ್ತ ದನದ ಚರ್ಮವನ್ನು ಸುಲಿದ ದಲಿತರ ಮೇಲೆ ಹಲ್ಲೆ ಮಾಡಿದ ಗೋರಕ್ಷಕರನ್ನು ಹಾಗೂ ಇತರ ರಾಜ್ಯಗಳಲ್ಲಿ ದಲಿತರ,ಅಲ್ಪಾಸಂಖ್ಯಾತರ ಮೇಲೆ ದಾಳಿ ಮಾಡಿದ ಗೋರಕ್ಷಕರನ್ನು ನಕಲಿ ಗೋರಕ್ಷಕರು ಎಂದು ಹೇಳಿದ ಪ್ರಧಾನ ಮಂತ್ರಿಯವರು, ಹಾಗಾದರೆ ಅಸಲಿ ಗೋರಕ್ಷಕರು ಇದ್ದಾರೆಯೇ, ಇದ್ದರೆ ಅವರು ಯಾರು ಎಂದು ಈ ದೇಶದ ಜನರಿಗೆ ಹೇಳಬೇಕು ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ದ.ಕ. ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ಕಾಮ್ರೇಡ್ ವಿ. ಕುಕ್ಯಾನ್ ಆಗ್ರಹಿಸಿದರು.
 
 
ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟದ, ಬೆಲೆಯೇರಿಕೆಯನ್ನು ನಿಯಂತ್ರಿಸದ, ಕಾರ್ಮಿಕ ವಿರೋಧಿ, ಸರ್ವಾಧಿಕಾರಿ ಕೇಂದ್ರ ಸರಕಾರದ ಧೋರಣೆಗಳನ್ನು ಪ್ರತಿಭಟಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ರಾಷ್ಟ್ರವ್ಯಾಪಿ ಆಂದೋಲನದಂಗವಾಗಿ ಇಂದು ದ.ಕ ಜಿಲ್ಲಾಧಿಕಾರಿ ಕಛೇರಿಯೆದುರು ನಡೆದ ಪ್ರತಿಭಟನಾ ಪ್ರದರ್ಶನವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
 
 
ಪಕ್ಷದ ಜಿಲ್ಲಾ ಕೋಶಾಧಿಕಾರಿ ಕಾಮ್ರೇಡ್ ಎ. ಪ್ರಭಾಕರ್ ರಾವ್ ಮಾತನಾಡಿ ಇವತ್ತು ಅಚ್ಚೇ ದಿನ್ ಬಂದಿದೆಯೆಂದು ಪ್ರಚಾರ ಮಾಡುತ್ತಿರುವುದು ಕಾರ್ಪೊರೇಟ್ ಸಂಸ್ಥೆಗಳು ಯಾಕೆಂದರೆ ಬಂಡವಾಳ ಶಾಹಿಗಳಿಗೆ ಪೂರಕವಾದ ನೀತಿಗಳನ್ನು ಸರಕಾರ ಅಂಗೀಕರಿಸುತ್ತಿದೆ. ಜನ ಸಾಮಾನ್ಯರಿಗೆ ಬಂದಿರುವುದು ಕೆಟ್ಟ ದಿನಗಳು. ಅಭಿವೃದ್ಧಿ ದರ ಏರಿಕೆಯಾಗಿದೆಯೆಂದು ಸುಳ್ಳು ಸುಳ್ಳು ಪ್ರಚಾರ ಮಾಡಿ ಜನರನ್ನು ನಂಬಿಸಲಾಗುತ್ತಿದೆ ಎಂದು ತಿಳಿಸಿದರು.
 
 
ಭಾರತದಿಂದ 2014 ರಲ್ಲಿ ಉಡಾಯಿಸಿದ ಹಾರುವ ಚಿಟ್ಟೆ ಯಾವುದೆಂದರೆ ಅದು ನರೇಂದ್ರ ಮೋದಿ. ಕೇಂದ್ರ ಸರಕಾರದ ಅಧಿಕಾರ ವಹಿಸಿದಂದಿನಿಂದ ಸುಮಾರು ಐವತ್ತಕ್ಕಿಂತಲೂ ಹೆಚ್ಚಿನ ದೇಶಗಳಿಗೆ ಪ್ರವಾಸ ಮಾಡಿ ಜನರ ತೆರಿಗೆ ಹಣವನ್ನು ಪೋಲು ಮಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ವಿದೇಶಿ ಬಂಡವಾಳಿಗರು ನೀಡಿದ ಕಪ್ಪು ಹಣಕ್ಕೆ ಋಣ ಸಂದಾಯ ಮಾಡಲು ಮೋದಿಯವರು ವಿದೇಶಾಂಗ ಸಚಿವರನ್ನು ಲೆಕ್ಕಿಸದೆ ವಿದೇಶ ಪ್ರಯಾಣ ಮಾಡುತ್ತಿದ್ದಾರೆ. ಈ ರಾಜ್ಯದ ಪೊಲೀಸ್ ಸಿಬ್ಬಂದಿಗಳ ಸಂಬಳ ಏರಿಕೆ ಮಾಡಲು ಸರಕಾರ ಮೀನ ಮೇಷ ಎನಿಸುತ್ತಿದೆ. ಅತ್ಯಲ್ಪ ಮಜೂರಿಯಲ್ಲಿ ದುಡಿಯುತ್ತಿರುವ ಬೀಡಿ ಕಾರ್ಮಿಕರ ಮಜೂರಿಯನ್ನು ಮಾಲಕಪರ ರಿಯಾಯಿತಿ ನೀಡಿದೆ. ಇಂತಹ ಜನ ವಿರೋಧಿ ನೀತಿಗಳನ್ನು ಜನರು ವಿರೋಧಿಸಲೇಬೇಕಾಗಿದೆ ಎಂದು ಸಿಪಿಐ ಮಂಗಳೂರು ತಾಲೂಕು ಕಾರ್ಯದರ್ಶಿ ವಿ. ಎಸ್. ಬೇರಿಂಜ ಸರಕಾರಗಳ ನೀತಿಗಳನ್ನು ಟೀಕಿಸಿದರು.
 
ಪಕ್ಷದ ಜಿಲ್ಲಾ ನಾಯಕ ಎಂ. ಕರುಣಾಕರ್ ಸ್ವಾಗತಿಸಿದರು, ತಾಲೂಕು ಸಹಾಯಕ ಕಾರ್ಯದರ್ಶಿ ತಿಮ್ಮಪ್ಪ ಕಾವೂರು ವಂದಿಸಿದರು. ಪ್ರತಿಭಟನೆಯ ನೇತೃತ್ವವನ್ನು ಹೆಚ್. ವಿ ರಾವ್, ಆರ್. ಡಿ ಸೋನ್ಸ್, ಡಿ. ಭುಜಂಗ, ಎಂ. ಶಿವಪ್ಪ ಕೋಟ್ಯಾನ್, ಸುಧಾಕರ್ ಕಲ್ಲೂರು, ಯು. ಭಾಸ್ಕರ್, ರಘು ಪೂಜಾರಿ, ಸುಲೋಚನ, ಚಿತ್ರಾಕ್ಷಿ, ಸುಜಾತ, ಸಂಜೀವಿ ಮುಂತಾದವರು ವಹಿಸಿದ್ದರು.

LEAVE A REPLY

Please enter your comment!
Please enter your name here