ಅವರು ಮಲಗಿದಾಗ ಮರವೇ ಚಾಮರ ಬೀಸುತ್ತಿತ್ತು!!!

0
1426

ನಿತ್ಯ ಅಂಕಣ: 42

ಕಾಶಿಯಿಂದ ಮರಳಿ ಬಂದ ನಿತ್ಯಾನಂದ ಸ್ವಾಮಿಗಳು ಕ್ಯೊಲಾಂಡಿಯಲ್ಲಿ ಒಂದಿಷ್ಟು ಸಮಯ ಮೊಕ್ಕಾಂ ಇದ್ದು ಲೀಲೆಗಳ ತೋರ್ಪಡಿಸುತ್ತಾರೆ. ರೋಗಿಗಳ ರೋಗಗಳ ಶಮನ ಮಾಡುತ್ತಾರೆ. ಬಳಿಗೆ ಭಕ್ತರ ಹರಸುತ್ತಾರೆ. ನಂತರ ಅವರು ಕ್ಯೊಲಾಂಡಿ ಊರು ಬಿಟ್ಟು ದಕ್ಷಿಣ ಕೇರಳದ ಕಡೆಗೆ ಯಾತ್ರೆ ಬೆಳೆಸುತ್ತಾರೆ. ತ್ರಿಚೂರು ಎಂಬಲ್ಲಿ ಮೊಕ್ಕಾಂ ಇದ್ದು ದಿನಗಳ ಕಳೆಯುತ್ತಾರೆ. ಅಲ್ಲಿ ಅವರು ವಿಶ್ರಾಂತಿ ಪಡೆಯಲು, ದೇವರ ಸ್ವರೂಪವಾದ ಔದುಂಬರ ವೃಕ್ಷದ ಬುಡ ಅಂದರೆ, ಅತ್ತಿ ಮರವನ್ನು ಆಯ್ಕೆ ಮಾಡಿಕೊಂಡಿದ್ದರು. ಅದರ ಬುಡದಲ್ಲಿಯೆ ಅವರ ಧ್ಯಾನ, ಶಯನಗಳು ನಡೆಯುತ್ತಿದ್ದವು. ಅವರು ಮಲಗಿದಾಗ ಮರವೇ ಚಾಮರ ಬೀಸಿ ತಂಗಾಳಿಯ ತಂಪು ನಿತ್ಯಾನಂದರಿಗೆ ನೀಡುತಿತ್ತು.

ಚಿತ್ರಕೃಪೆ:ಅಂತರ್ಜಾಲ

ನಿತ್ಯಾನಂದರ ವಾಸ ಸ್ಥಾನವು ಸುಜ್ಞಾನಸಿದ್ಧಿಯ ಸ್ಥಳ ಅದು. ಸರಸ್ವತಿ, ನವಗ್ರಹಗಳಲ್ಲಿ ಒಂದಾದ ಶುಕ್ರಗ್ರಹ, ಶುಕ್ರಾಚಾರ್ಯರ ಸಾನಿಧ್ಯ ಇರುವ ಸ್ಥಳ ಅದು. ನಿತ್ಯಾನಂದ ಸ್ವಾಮಿಗಳ ದರ್ಶನ ಪಡೆಯಲು ಬಹಳ ಭಕ್ತರು ಅಲ್ಲಿಗೆ ಬರುತ್ತಿದ್ದರು. ಕೆಲವರು ನೆರವು ಯಾಚಿಸಿ ಬರುತ್ತಿದ್ದರು. ಇನ್ನೂ ಕೆಲವರು ಖಾಯಿಲೆಗಳಿಗೆ ಮದ್ದು ಪಡೆಯಲು ಬರುತ್ತಿದ್ದರು. ಅವರು ರೋಗಿಯ ರೋಗ ಬಾಧೆಯ ಲಕ್ಷಣ ತಿಳಿದ ಬಳಿಕ ಅತ್ತಿ ಮರದ ಎಲೆ, ತೊಗಟೆ, ಹಣ್ಣುಗಳನ್ನು ನೀಡುತ್ತಿದ್ದರು. ನೊಂದವರು ಕೌಟಂಬಿಕ ಕಲಹಗಳ ಸಮಸ್ಯೆಗಳಿಗೆ ಪರಿಹಾರ ಕೊಂಡುಕೊಳ್ಳಲು ಬರುತ್ತಿದ್ದರು. ನಿತ್ಯಾನಂದರು ಭಕ್ತರಿಗೆ ಗುರುವಾಗಿ ಹರಸುತ್ತಿದ್ದರು. ವೈದ್ಯರಾಗಿ ರೋಗಿಗಳಿಗೆ ಮದ್ದು ನೀಡುತ್ತಿದ್ದರು. ಕುಟುಂಬ ಕಲಹಗಳಿಗೆ ನ್ಯಾಯಧೀಶರಾಗಿ ನ್ಯಾಯವನ್ನು ಒದಗಿಸುತ್ತಿದ್ದರು. ನಿತ್ಯಾನಂದರು ನೀಡಿದ ದಿವ್ಯೌಷಧ ಪಡೆದು, ಅದೆಷ್ಟೋ ಸಮಯಗಳಿಂದ, ವ್ಯಾಧಿಯಿಂದ ಬಳಲುತ್ತಿದ್ದ ರೋಗಿಗಳು ಗುಣವಾಗುತ್ತಿದ್ದರು. ದರ್ಶನ ಪಡೆದ ಭಕ್ತರು ಪುನೀತರಾಗುತ್ತಿದ್ದರು. ನೊಂದವರು ಜೀವನದಲ್ಲಿ ಆನಂದ ಪಡೆಯುತ್ತಿದ್ದರು. ಅಲ್ಲಿ ಮೊಕ್ಕಾಂ ಇದ್ದಿರುವ ದಿನಗಳವರೆಗೆ ಪವಿತ್ರ ಔದುಂಬರ ವೃಕ್ಷದ ಪಾದತಳದಲ್ಲಿ ನಿತ್ಯಾನಂದರಿಂದ ಸೇವೆಗಳು ನಡೆಯುತ್ತವೆ. ಅದಲ್ಲದೆ ಹಲವಾರು ಚಮತ್ಕಾರಗಳನ್ನು ನಿತ್ಯಾನಂದರು ತ್ರಿಚೂರಿನಲ್ಲಿ ತೋರಿಸಿ, ಭಕ್ತರನ್ನು ಅಚ್ಚರಿಗೆ ಒಳಪಡಿಸಿದ್ದಾರೆ.

ಒಂದು ಹಕ್ಕಿಯ ಭಾರವನ್ನು ಹೊರಲಾಗದ ಅತ್ತಿ ಮರದ ಅತಿಸಣ್ಣ ಗೆಲ್ಲಿನ ಮೇಲೆ ನಿತ್ಯಾನಂದರು ಸ್ವಯಂ ಅಣುವಿನಂತೆ ಸಣ್ಣಗಾತ್ರ ಪಡೆದುಕೊಂಡು ಕುಳಿತುಕೊಳ್ಳುತ್ತಿದ್ದರು. ಮಗದೊಮ್ಮೆ ಅತ್ತಿ ಮರದ ತಳದಲ್ಲಿ ಮೊದಲಿದ್ದ ರೂಪದಲ್ಲಿ ದರ್ಶನವನ್ನು ನೀಡುತ್ತಿದ್ದರು. ಈ ಅದ್ಭುತವಾದ ನಿತ್ಯಾನಂದರ ಲೀಲಾಮೃತವನ್ನು ಅಂದು ಕಣ್ಣಾರೆ ಕಂಡ ಭಕ್ತರು ಹಲವರು. ಅವರಲ್ಲಿ ನಿತ್ಯಾನಂದರ ಭಕ್ತ ತಂಕಪ್ಪನ್ ಆಸನ್ ಕೂಡ ಒಬ್ಬನು. ಒಮ್ಮೆ ನಿತ್ಯಾನಂದ ಸ್ವಾಮಿಗಳ ಬಳಿ ಭಿಕ್ಷುಕನೊಬ್ಬ ಬರುತ್ತಾನೆ. ಆತನು ನಿತ್ಯಾನಂದರ ಮುಂದೆ ಭಿಕ್ಷಾಪಾತ್ರೆಯನ್ನು ಮುಂದೂಡ್ಡುತ್ತಾನೆ. ನಿತ್ಯಾನಂದರು ಪಾತ್ರೆಯೊಳಗೆ ಕಣ್ಣಾಡಿಸಿದಾಗ ಅದರೊಳಗೆ ಭತ್ತದ ಕಾಳುಗಳು ಇರುವುದು ಕಂಡುಬರುತ್ತದೆ. ನಿತ್ಯಾನಂದರು ಭಿಕ್ಷಾಪಾತ್ರೆಯೊಳಗೆ ಕೈಹಾಕಿ ಒಂದು ಮುಷ್ಠಿಯಷ್ಟು ಭತ್ತವನ್ನು ತೆಗೆಯುತ್ತಾರೆ. ಬಳಿಕ ಭತ್ತದ ಕಾಳುಗಳನ್ನು ಭಿಕ್ಷುಕನ ಸುತ್ತಲು ಹರಡಿ ಹಾಕುತ್ತಾರೆ. ಇದು ನೋಡಿದವರಿಗೆ ಹಠ ಮಾಡುವ ಮಕ್ಕಳ ಹುಚ್ಚಾಟದಂತೆ ಕಾಣುತ್ತದೆ. ಆದರೆ ಬಿದ್ದಿರುವ ಭತ್ತದ ಕಾಳುಗಳೆಲ್ಲವು ತಕ್ಷಣದಲ್ಲಿ ನಾಣ್ಯಗಳಾಗುತ್ತವೆ. ಬಿದ್ದಿರುವ ನಾಣ್ಯಗಳನ್ನು ಭಿಕ್ಷುಕ ಭಿಕ್ಷಾಪಾತ್ರೆಯಲ್ಲಿ ತುಂಬಿ ಕೊಳ್ಳುತ್ತಾನೆ. ಅಲ್ಲಿದ್ದವರು ನಾಣ್ಯಗಳನ್ನು ಜೇಬಿಗೆ ತುಂಬಿಕೊಳ್ಳುತ್ತಾರೆ.

ಮಾಡಿರುವ ಸುಕೃತ ಕರ್ಮದಂತೆ ಫಲ ಸಿಕ್ಕಂತೆ, ಅದೃಷ್ಠ ಇದ್ದವರಿಗೆ ನಾಣ್ಯಗಳು ಅಲ್ಲಿ ದೊರೆಯುತ್ತದೆ. ಮೌಖಿಕವಾಗಿ ಪ್ರಚಲಿತದಲ್ಲಿ ಇದೆ ಗುರುದೇವರ ಲೀಲೆ. ಈ ಅವಧೂತರ ಲೀಲೆಗಳನ್ನು ಹತ್ತಿರದಲ್ಲಿ ಇದ್ದು ನೋಡಿದವನು ತಂಕಪ್ಪನ್ ಆಸನ್ ಎನ್ನುವ ಮಲೆಯಾಳಿ ವ್ಯಕ್ತಿ. ಆತನಿಗೂ ಅಂದು ನಾಣ್ಯಗಳು ಸಿಕ್ಕಿರುತ್ತವೆ. ಮಳಯಾಳ ಭಾಷೆಯ ಲೇಖಕ ಕಣನ್ನೂರಿನ ‘ಆನಂದ ವಿಹಾರ’ ಮನೆಯ ನಿವಾಸಿಯಾದ ಪಿ.ವಿ.ರವೀಂದ್ರನ್ ಅವರು ನಿತ್ಯಾನಂದ ಚರಿತ್ರೆ ಪುಸ್ತಕ ಬರೆದು ಪ್ರಕಟಿಸಿದ್ದಾರೆ. ಬರೆಯುವಾಗ ತಂಕಪ್ಪನ್ ಆಸನ್ ಅವರನ್ನು ಸಂಪರ್ಕಿಸಿದ್ದಾರೆ. ಲೇಖಕರಲ್ಲಿ ತಂಕಪ್ಪನ್ ಆಸನ್ ಅವರು ತಾವು ಕಣ್ಣಾರೆ ಕಂಡಿರುವ, ಅನುಭವಿಸಿರುವ ಅವಧೂತ ನಿತ್ಯಾನಂದರ ಅದ್ಭುತವಾದ ಪವಾಡಗಳನ್ನು ಹೇಳಿಕೊಂಡಿದ್ದಾರೆ. ಆ ಕೃತಿಯಲ್ಲಿಯೂ ಲೇಖಕರು ತಂಕಪ್ಪನ್ ಆಸನ್ ಹೇಳಿದ ವಿಷಯವನ್ನು ಉಲ್ಲೇಖಿಸಿದ್ದಾರೆ.

Advertisement

-ತಾರಾನಾಥ್‌ ಮೇಸ್ತ,ಶಿರೂರು.

LEAVE A REPLY

Please enter your comment!
Please enter your name here