ಅವರಿಗೆ ಎಲ್ಲವೂ ಅರಿವಿರುತ್ತಿತ್ತು…!

0
1366

ನಿತ್ಯ ಅಂಕಣ-೮೬ : ತಾರಾನಾಥ್‌ ಮೇಸ್ತ, ಶಿರೂರು
ದೇವದಾಸ ಗೌಡ ಎನ್ನುವವರು ನಿತ್ಯಾನಂದರ ಭಕ್ತರು. ಅವರ ತಾಯಿಗೆ ಉದರಬೇನೆ ಆಗಿಂದಾಗ ಕಾಡುತಿತ್ತು. ಇದು ಕೆಲವು ವರ್ಷಗಳಿಂದ ಅವರಿಗಿದ್ದ ವ್ಯಾಧಿ ಆಗಿತ್ತು. ವೈದ್ಯರಲ್ಲಿ ತೋರಿಸಿದರೂ ಪರಿಹಾರ ಕಾಣಲಿಲ್ಲವಾಗಿತ್ತು. ಹೀಗಿರುವಾಗ ದೇವದಾಸರು ಅಮ್ಮನನ್ನು ಗಣೇಶಪುರಿ ಗುರುದೇವರ ಬಳಿಗೆ ಕರೆದುಕೊಂಡು ಹೋಗಿ, ಪರಿಹಾರ ಪಡೆಯಲು ನಿರ್ಧರಿಸುತ್ತಾರೆ. ಅದರಂತೆ ಒಂದು ದಿನ ಅಮ್ಮನನ್ನು ಗಣೇಶಪುರಿಗೆ ಕರೆದು ಕೊಂಡು ಹೋದರು. ಗಣೇಶಪುರಿಗೆ ತಾಯಿ ಮಗನು ತಲುಪಿದಾಗ, ಅಲ್ಲಿ ಗುರುದೇವರ ದರ್ಶನ ಪಡೆಯಲು ನಿಂತಿರುವ ಭಕ್ತರ ಸರತಿಸಾಲು ಬಹಳ ಉದ್ದವಾಗಿತ್ತು. ಭಕ್ತರ ಸಾಲು ಉದ್ದ ಇದ್ದರೂ ಅವರು ಬೇಸರಿಸುವುದಿಲ್ಲ. ಸಾಲಿನ ಕೊನೆಯಲ್ಲಿ ನಿಂತುಕೊಳ್ಳುತ್ತಾರೆ. ಸ್ವಾಮಿಗಳೊಂದಿಗೆ ಅವಕಾಶ ಸಿಕ್ಕಷ್ಟು ಸಮಯ ಮಾತನಾಡಲು ಅವಕಾಶವಾಗುತ್ತದೆ ಎಂಬ ಯೋಚನೆ ದೇವದಾಸ ಅವರದಾಗಿರುತ್ತದೆ.
ಭಕ್ತರಿಗೆ ದರ್ಶನ ನೀಡುತ್ತಿರುವಾಗ ನಿತ್ಯಾನಂದರು ಕೊನೆಯ ಸಾಲಿನಲ್ಲಿರುವ ದೇವದಾಸರ ತಾಯಿಯನ್ನು ಕಂಡು, ಅವರ ಉದರದಡೆಗೆ ಕೈ ತೋರಿಸಿ ನಿಮಗೆ, ಹೊಟ್ಟೆಯ ಆ ಭಾಗದಲ್ಲಿ ನೋವಿದೆಯಲ್ಲವಾ..? ಎಂದು ಕೇಳುತ್ತಾರೆ. ದೇವದಾಸರ ತಾಯಿ ಹೌದೆಂದು ಹೇಳುತ್ತಾರೆ. ಕೊನೆಗೆ ನಿತ್ಯಾನಂದರು ಇನ್ನು ನೀವು ಮನೆಗೆ ತೆರಳಿರಿ ಎಂದು ಹೇಳುತ್ತಾರೆ. ಗುರುದೇವರ ಆಜ್ಞೆಯಂತೆ ಅವರು ಮನೆಗೆ ತೆರಳುತ್ತಾರೆ. ಮುಂದೆ ದೇವದಾಸ ಅವರ ತಾಯಿಗೆ ಎಂದೆಂದಿಗೂ ಹೊಟ್ಟೆ ನೋವು ಕಾಣಿಸಿಕೊಳ್ಳುವುದಿಲ್ಲ. ದೇವದಾಸರು ಗುರುದೇವರ ದರ್ಶನ ಭಾಗ್ಯದಿಂದಲೇ ಅಮ್ಮನ ಸಮಸ್ಯೆಗೆ ಪರಿಹಾರ ಪಡೆಯುತ್ತಾರೆ. ಈಗಲೂ ಹಲವಾರು ಭಕ್ತರು ಗುರುದೇವರ ಆರಾಧನೆ, ಪ್ರಾರ್ಥನೆಗಳ ಮೂಲಕ ತಮ್ಮ ಸಂಕಷ್ಟಗಳನ್ನು ಪರಿಹರಿಸಿಕೊಂಡಿರುವ ಸಾವಿರಾರು ಉದಾಹರಣೆಗಳು ಇವೆ.
ನಿತ್ಯಾನಂದ ಸ್ವಾಮಿಗಳ ಭಕ್ತನೊಬ್ಬ ಗಣೇಶಪುರಿಗೆ ವಾರದಲ್ಲಿ ಒಂದು ದಿನ ಬಂದು ದರ್ಶನ ಪಡೆಯುತ್ತಿದ್ದ. ಹಾಗೆಯೇ ಗುರುದೇವರ ಮುಂದೆ ಕುಳಿತು ಶಾಸ್ತ್ರ ಪಠಣ ಮಾಡುತ್ತಿದ್ದ. ಹೀಗೆ ಒಂದು ದಿನ ತನ್ನ ಕ್ರಮ ಎಲ್ಲವೂ ಮುಗಿದ ಬಳಿಕ, ಆತನು ನಿತ್ಯಾನಂದರ ಬಳಿ, ತನಗೆ ಶ್ವಾಸಕೋಶ ಸಮಸ್ಯೆ ಇದೆ. ಕೆಮ್ಮಿನ ಬಾಧೆಯಿಂದ ಬಳಲುತ್ತಿದ್ದೇನೆ. ಗುಣಪಡಿಸಿ ಅನುಗ್ರಹಿಸ ಬೇಕೆಂದು ಪ್ರಾರ್ಥಿಸಿದ. ಆಗ ನಿತ್ಯಾನಂದ ಸ್ವಾಮಿಗಳು ಅವನ ಅಳಲಿಗೆ ಸ್ಪಂದಿಸುತ್ತಾರೆ. ಔಷಧಿ ತಯಾರಿಸಬೇಕಾದ ವಿಧಾನವನ್ನು ಹೇಳಿಕೊಡುತ್ತಾರೆ.
ಗುರುದೇವರು ಹೇಳಿರುವ ಔಷಧಿ ತಯಾರಿಸುವ ವಿಧಾನವು ಈ ರೀತಿ ಇತ್ತು. ಸಣ್ಣದಾದ ಕಪ್ಪೆಯನ್ನು ಹಿಡಿದು, ಅದರ ತಲೆಯ ಭಾಗವನ್ನು ಬೆರ್ಪಡಿಸ ಬೇಕು. ಉಳಿದ ಭಾಗವನ್ನು ಆಕಳಿನ ಹಾಲಿನಲ್ಲಿ ಬೇಯಿಸಿ ನಿಗದಿ ಪಡಿಸಿರುವ ದಿನಗಳ ತನಕ ಸೇವಿಸಬೇಕು ಎಂದು ಹೇಳುತ್ತಾರೆ. ಗುರುದೇವರು ಹೇಳಿರುವ ಔಷಧಿ ಕೇಳಿದ ಆತ ಗಾಬರಿಗೊಳಗಾದ. ಈ ಔಷಧಿ ಮಾಂಸಾಹಾರ ಭಕ್ಷಕನು ಅಸಹ್ಯ ಪಡಬಹುದು..! ಆದರೆ ಶುದ್ಧ ಸಸ್ಯಹಾರ ಸೇವನೆಯ ವ್ಯಕ್ತಿಗೆ ಹೇಗಾಗ ಬಹುದು..! ಹೀಗೆಂದು ತನ್ನೊಳಗೆ ಪ್ರಶ್ನಿಸಿಕೊಂಡ ಆತನು, ತನಗೆ ತಗಲಿರುವ ಕೆಮ್ಮಿನ ವ್ಯಾಧಿ ಗುಣವಾಗಬೇಕಾದರೆ, ಸ್ವಾಮಿಗಳು ಉಲ್ಲೇಖಿಸಿದ ಔಷಧಿ ಸೇವನೆಗೆ ಅನಿವಾರ್ಯವಾಗಿ ಬದ್ಧನಾಗಲೇ ಬೇಕಾಯಿತು. ನಂತರದ ದಿನಗಳಲ್ಲಿ ಆತನ ಶ್ವಾಸಕೋಶದ ಸ್ವಾಸ್ಥ್ಯವು ಗುಣಪಡೆಯಿತು. ಅದರೊಂದಿಗೆ ಮಾಂಸಹಾರಿಗಳನ್ನು ಅಸಹ್ಯ ದೃಷ್ಟಿಯಿಂದ ಕಾಣುವ ಅವನ ಮಡಿ ಸೋಂಕು ಕೂಡ ದೂರವಾಯಿತು. ಇದು ಬಹುಶಃ ನಿತ್ಯಾನಂದರು ಭಕ್ತನ ಮಾಂಸಹಾರಿಗಳನ್ನು ತೆಗಳುವ ಗುಣವನ್ನು ದೂರಗೊಳಿಸಲು ಮಾಡಿರುವ ಪರೀಕ್ಷೆ. ಅದರೊಂದಿಗೆ ಆತನ ಸ್ವಾಸ್ಥ್ಯವನ್ನು ಸರಿಪಡಿಸಿದರು.

LEAVE A REPLY

Please enter your comment!
Please enter your name here