ಅವನ ಬಿಳಿ ಬಣ್ಣದ ದೇಹಕಾಯವು ಕಪ್ಪು ಬಣ್ಣ ಪಡೆಯುತ್ತದೆ!

0
934

ನಿತ್ಯ ಅಂಕಣ: ೩೩ (ನಿನ್ನೆಯ ಸಂಚಿಕೆಯ ಮುಂದುವರಿದ ಭಾಗ)

ಶರೀರದಲ್ಲಿ ಜ್ವರದ ಲಕ್ಷಣಗಳಿದ್ದರೂ ಚಾತು ನಾಯರ್ ಕಟ್ಟಿಗೆ ಒಡೆಯುವ ಕೆಲಸ ಮಾಡಲು ಹೊರಗಡೆ ಹೋಗಿರುತ್ತಾನೆ. ಉನ್ನಿಯಮ್ಮಳು ಮಾಡಿಕೊಟ್ಟ ಕಷಾಯ ಮದ್ದು ಕುಡಿದು ಸಂಜೆಯವರೆಗೂ ಕೆಲಸ ಮಾಡಿ ಚಾತು ನಾಯರ್ ಮರಳಿ ಮನೆಗೆ ಬರುತ್ತಾನೆ. ಸಂಜೆ ಹೊತ್ತಿಗೆ ಚಾತು ನಾಯರಿಗೆ ಬಾಧಿಸಿದ ಜ್ವರವು ಮತ್ತಷ್ಟು ಉಲ್ಭಣಗೊಳ್ಳುತ್ತದೆ. ಚಾತು ನಾಯರಿಗೆ ತಾನಿನ್ನು ಖಂಡಿತವಾಗಿ ಬದುಕಲಾರೆ…! ಎನ್ನುವುದು ಮನದಟ್ಟಾಗುತ್ತದೆ. ಪ್ರೀತಿಯ ಹೆಂಡತಿ ಉನ್ನಿಯನ್ನು ಸನಿಹ ಕರೆಯುತ್ತಾನೆ. ಅಕ್ಕರೆಯಿಂದ ಪುಟ್ಟ ರಾಮನ ತಲೆ ಸವರುತ್ತಾ, ‘ಉನ್ನಿ… ನನ್ನ ರಾಮನ ಚೆನ್ನಾಗಿ ನೋಡಿಕೋ..’ ಎಂದು ಹೇಳಿ ಕಣ್ಣೀರು ಸುರಿಸುತ್ತಾನೆ. ಅದು ಚಾತು ನಾಯರ್ ನುಡಿದ ಕೊನೆಯ ನುಡಿ ಆಗಿರುತ್ತದೆ. ಚಾತು ನಾಯರ್ ಇಹಲೋಕ ತ್ಯಜಿಸುತ್ತಾನೆ. ಮುಂದೆ ಚಾತು ನಾಯರ್ ಅವರ ಅಂತ್ಯಸಂಸ್ಕಾರದ ವಿಧಿ ವಿಧಾನಗಳು ವಕೀಲ ಈಶ್ವರ್ ಐಯ್ಯರ್ ಅವರ ಮುಂದಾಳತ್ವದಲ್ಲಿ ನಡೆಯುತ್ತವೆ. ಗಂಡನನ್ನು ಕಳೆದು ಕೊಂಡ ಉನ್ನಿಯಮ್ಮ ಚಿಂತೆಗೆ ಒಳಗಾಗುತ್ತಾಳೆ. ಒಟ್ಟು ಆರು ಜನ ಮಕ್ಕಳ ಪೋಷಣೆಯ ಹೊಣೆ ಉನ್ನಿಯಮ್ಮ ಅವಳದಾಗುತ್ತದೆ. ಯಾವೂದಕ್ಕೂ ಹೆದರದೆ, ಸಂಸಾರದ ರಥ ಎಳೆಯಲು ಉನ್ನಿಯಮ್ಮ ಮುಂದಾಗುತ್ತಾಳೆ. ವಕೀಲರಾದ ಈಶ್ವರ್ ಐಯ್ಯರ್ ಅವರಿಂದ ಉನ್ನಿ ಅಮ್ಮಳ ಕಷ್ಟದ ಕಾಲದಲ್ಲಿ ನೆರವು ದೊರೆಯುತ್ತದೆ. ರಾಮನ್ ಎಂದರೆ ಈಶ್ವರ್ ಐಯ್ಯರ್ ಅವರಿಗೂ ಬಹಳವಾದ ಪ್ರೀತಿ. ಆತನನ್ನು ತಮ್ಮ ಮನೆಯಲ್ಲಿ ಆಟ ಆಡಲು ಕರೆದುಕೊಂಡು ಹೋಗುತ್ತಿದ್ದರು.

ಈಶ್ವರ ಐಯ್ಯರ್ ಮನೆಯ ಅಂಗಳದಲ್ಲಿ ಆಟ ಆಡುತ್ತ ಹೆಜ್ಜೆಗಳಿಡಲು ಕಲಿತ ರಾಮ, ಒಂದು ದಿನ ತಡೆಯಲಾಗದ ಹೊಟ್ಟೆ ನೋವಿನಿಂದ ನರಳುತ್ತಿದ್ದನು. ವೇದನೆ ತಾಳಲಾರದೆ ರಾತ್ರಿ ಪೂರ್ತಿ ಬೊಬ್ಬಿಡುತ್ತಿದ್ದ, ಉನ್ನಿಯಮ್ಮ ರಾಮನ ಉದರ ಬೇನೆಗಾಗಿ ಕುಡಿಸಿದ ಕಷಾಯಗಳು ಸ್ಪಂದಿಸುವುದಿಲ್ಲ. ರಾಮನ ಹೊಟ್ಟೆ ಸಮಸ್ಯೆಗೆ ಏನು ಮಾಡುವುದೆಂದು ಉನ್ನಿಯಮ್ಮಳಿಗೆ ದಿಕ್ಕು ತೋಚದಾಗುತ್ತದೆ. ರಾಮನ ಬೊಬ್ಬೆಯಿಂದ ಅಲ್ಲೆ ಹತ್ತಿರದ ಜಮೀನುದಾರ, ನಿಮ್ಮ ಮಗನ ಬೊಬ್ಬೆಯಿಂದ ನಮಗೆ ರಾತ್ರೆ ನಿದ್ದೆ ಮಾಡಲಾಗಲಿಲ್ಲ, ಎಂದು ಉನ್ನಿ ಅಮ್ಮನಲ್ಲಿ ದೂರಿದ. ಕಠೋರಿಯಾದ ಶ್ರೀಮಂತ ಜಮೀನುದಾರ ಆ ಮಗುವನ್ನು ಹತ್ತಿರದಲ್ಲಿ ಹರಿಯುವ ನದಿಯಲ್ಲಿ ಎಸೆದು ಬೀಡೆಂದು ಆಕ್ರೋಶದಿಂದ ಹೇಳುತ್ತಾನೆ. ಅಸಹಾಯಕಳಾದ ಉನ್ನಿಯಮ್ಮ ದಿಕ್ಕುತೋಚದೆ, ಇನ್ನು ನಮಗೆ ದೇವರೆ ಗತಿ..! ಎಂದು ರಾಮನನ್ನು ಕೈಯಲ್ಲಿ ಎತ್ತಿಕೊಂಡು ಮನೆ ಸನಿಹದ ವಿಷ್ಣು, ಶಿವ, ಅಯ್ಯಪ್ಪ ದೇವಸ್ಥಾನದ ಬಳಿಗೆ ಬಂದು, ದೇವರುಗಳಲ್ಲಿ ತನಗೆ ಎದುರಾದ ಸಂಕಟ ಹೇಳಿ ಪ್ರಾರ್ಥಿಸುತ್ತಾಳೆ. ಹಾಗೇ ಹಿಂತಿರುಗಿ ಮನೆಗೆ ಹೋಗುವಾಗ ಉನ್ನಿ ಅಮ್ಮಳಿಗೆ ಅಪರಿಚಿತ ವ್ಯಕ್ತಿಯೊರ್ವ ನಡುದಾರಿಯಲ್ಲಿ ಎದುರಾಗುತ್ತಾನೆ. ಆತ ಶೇಂದಿ ತೆಗೆಯುವ ವ್ಯಕ್ತಿಯಂತೆ ಇದ್ದ. ಆತನ ಕೈಯಲ್ಲಿ ಹರಿತವಾದ ಕತ್ತಿ, ಶೇಂದಿ ಸಂಗ್ರಹಿಸುವ ಪಾತ್ರೆ, ವೃತ್ತಿಯ ಪರಿಕರಗಳು ಇದ್ದವು. ಅದಲ್ಲದೆ ಆತನ ಬಲಕೈಯಲ್ಲಿ ಕಾಗೆಯೊಂದನ್ನು ಹಿಡಿದುಕೊಂಡಿದ್ದ. ಉನ್ನಿಯಮ್ಮಳಲ್ಲಿ ಅವನಾಗಿಯೇ ಮಾತನಾಡಿಸುತ್ತಾನೆ. ‘ನೀನು ಗಾಬರಿಯಾಗಬೇಡ..!’ ಮಗುವಿಗೆ ಬಾಧಿಸಿರುವ ಉದರ ವ್ಯಾಧಿ ಬೇಗನೆ ಗುಣವಾಗುತ್ತದೆ. ಈ ಕಾಗೆಯನ್ನು ಮನೆಗೆ ತೆಗೆದುಕೊಂಡು ಹೋಗು. ಇದರ ರಕ್ತವನ್ನು ಹಿಂಡಿ ತೆಗೆದು, ಹುಡುಗನ ಪೂರ್ಣ ಮೈಗೆ ಲೇಪಿಸು. ಬಳಿಕ ಕಾಗೆಯ ಮಾಂಸವನ್ನು ದನದ ತುಪ್ಪದಲ್ಲಿ ಹುರಿದು ಲೇಹ್ಯ ತಯಾರಿಸು. ದಿನಾಲೂ ಬೆಳಿಗ್ಗೆ ಒಂದು ಚಮಚದ ಪ್ರಮಾಣದಲ್ಲಿ ಲೇಹ್ಯವನ್ನು ಹುಡುಗನಿಗೆ ತಿನ್ನಿಸೆಂದು ಹೇಳಿ, ಆ ಅಪರಿಚಿತ ವ್ಯಕ್ತಿಯು ಮುಂದೆ ಸಾಗುತ್ತಾನೆ.

ಎಂದೂ ಕೇಳಿರದ ಔಷಧಿ ಇದು. ನಾನು ಪ್ರಾರ್ಥಿಸಿದಾಗ ಅನುಗ್ರಹ ರೂಪದಲ್ಲಿ ಔಷಧವು ಪ್ರಾಪ್ತಿ ಆಗಬೇಕಾದರೆ..! ನಿಜವಾಗಲು ಔಷಧ ನೀಡಿದ ವೈದ್ಯ ದೇವರೇ ಇರಬೇಕೆಂದು ಉನ್ನಿ ಅಮ್ಮ ನಂಬುತ್ತಾಳೆ. ಎಲ್ಲದಕ್ಕೂ ಮೊದಲು, ನನ್ನ ರಾಮನ ಸಮಸ್ಯೆ ಅವನಿಗೆ ಹೇಗೆ ಗೊತ್ತಾಯಿತು..! ನಿಜವಾಗಲೂ ದೈವಿಶಕ್ತಿಯೊಂದು ರಾಮನ ರಕ್ಷಣೆಗೆ ನಿಂತಿದೆ ಎಂದು ಉನ್ನಿ ಅಮ್ಮ ಭಾವಿಸುತ್ತಾಳೆ. ಅಪರಿಚಿತ ವ್ಯಕ್ತಿ ಹೇಳಿದಂತೆ, ಉನ್ನಿಯಮ್ಮ ಅವನು ನೀಡಿದ ಕಾಗೆಯಿಂದ ಔಷಧ ತಯಾರಿಸುತ್ತಾಳೆ. ಹೇಳಿದ ರೀತಿಯಲ್ಲಿಯೇ ಔಷಧೋಪಚಾರ ನಡೆಸುತ್ತಾಳೆ. ಔಷಧ ಅಸಹ್ಯವಾಗಿ ಕಂಡುಬಂದರೂ ದಿವ್ಯ ಔಷಧವಾಗಿ ಸ್ಪಂದಿಸುತ್ತದೆ. ರಾಮ ಹಂತ ಹಂತವಾಗಿ ಸಂಪೂರ್ಣವಾಗಿ ಗುಣಮುಖನಾಗುತ್ತಾನೆ. ಅವನ ಬಿಳಿ ಬಣ್ಣದ ದೇಹಕಾಯವು ಕಪ್ಪು ಬಣ್ಣ ಪಡೆಯುತ್ತದೆ. ರಾಮನು ಮೇಘ ಶ್ಯಾಮನಂತೆ ಕಾಣುತ್ತಾನೆ. ಮೈಬಣ್ಣವು ಕಪ್ಪು ವರ್ಣವಾಗಿ ಶಾಶ್ವತವಾಗಿ ಉಳಿದುಕೊಳ್ಳುತ್ತದೆ.

(ಮುಂದುವರಿಯುವುದು)

Advertisement

LEAVE A REPLY

Please enter your comment!
Please enter your name here