ಅವಧೂತ್‌ ಹೇಳಿದ್ದೆಲ್ಲವೂ ನಿಜವಾಯಿತು!

0
1130

ನಿತ್ಯ ಅಂಕಣ: 67 -ತಾರಾನಾಥ್‌ ಮೇಸ್ತ,ಶಿರೂರು.
ಮೃಕಂಡು ಗಾಂವ್ಕರ್ ನಿತ್ಯಾನಂದ ಸ್ವಾಮಿಗಳ ಪರಮಭಕ್ತರಾಗಿದ್ದರು. ಅವರು ಉತ್ತರ ಕನ್ನಡ ಜಿಲ್ಲೆ ಕುಮುಟ ತಾಲೂಕಿನ ಹೀರೆಗುತ್ತಿ ಗ್ರಾಮದ ನಿವಾಸಿ. ಮೃಕಂಡು ಗಾಂವ್ಕರ್ ಅವರು ಗಣೇಶಪುರಿಯಲ್ಲಿ ಗುರುದೇವರ ಸಂಪರ್ಕ ಪಡೆಯುತ್ತಾರೆ. ಆಧ್ಯಾತ್ಮದ ಸೆಳೆತದಿಂದ ನಿತ್ಯಾನಂದರ ಸಾಂಗತ್ಯದಲ್ಲಿದ್ದು, ಅಲ್ಲಿ ಅವರು ಆಶ್ರಮ ಸೇವೆಯಲ್ಲಿ ನಿರತರಾಗಿದ್ದವರು. ಗುರುಗಳ ಅನುಗ್ರಹಕ್ಕೂ ಪಾತ್ರರಾಗುತ್ತಾರೆ.

ನಿತ್ಯಾನಂದರು ಒಂದು ದಿನ ಭಕ್ತ ಮೃಕಂಡು ಗಾಂವ್ಕರ್ ಬಳಿಯಲ್ಲಿ “ನಿನಗೆ ಐವರು ಮಕ್ಕಳು ಹುಟ್ಟುತ್ತವೆ. ಮೊದಲು ಎರಡು ಹೆಣ್ಣು, ನಂತರ ಮೂವರು ಗಂಡು ಮಕ್ಕಳಾಗುತ್ತವೆ” ಎಂದು ಹೇಳುತ್ತಾರೆ. ಅಲ್ಲದೆ ಹುಟ್ಟಿದ ಮಕ್ಕಳಿಗೆ ಹೆಸರಿಡಲು ಹೆಸರುಗಳನ್ನು ಭಗವಾನ್ ನಿತ್ಯಾನಂದರು ಸೂಚಿಸುತ್ತಾರೆ. ಮೊದಲು ಹುಟ್ಟಿದ ಮಗಳಿಗೆ ಶಾಂತಿ, ಎರಡನೆಯ ಮಗಳಿಗೆ ಸೀತಾ, ಮೂರನೆಯವನಿಗೆ ಪುರಸರ, ನಾಲ್ಕನೇಯವನಿಗೆ ಉದ್ಧ್ರತ, ಐದನೇಯವನಿಗೆ ದೇವದತ್ತ, ಈ ರೀತಿ ಐದು ಮಕ್ಕಳಿಗೆ ನಾಮಕರಣ ಮಾಡಲು ನಿತ್ಯಾನಂದರು ಹೇಳಿರುವ ಶುಭ ನಾಮಗಳಾಗಿದ್ದವು. ನಿತ್ಯಾನಂದರು ಹೇಳಿದ ಭವಿಷ್ಯದ ನುಡಿಯಂತೆ ಮೃಕಂಡು ಗಾಂವ್ಕರ್ ಮತ್ತು ಲಕ್ಷ್ಮೀ ಗಾಂವ್ಕರ್ ದಂಪತಿಗಳಿಗೆ ಎರಡು ಹೆಣ್ಣು ಮೂರು ಗಂಡು ಮಕ್ಕಳು ಸೇರಿ ಒಟ್ಟು ಐದು ಮಕ್ಕಳು ಜನಿಸುತ್ತವೆ. ಗುರುದೇವರು ಸೂಚಿಸಿದ ಹೆಸರುಗಳನ್ನು ಮೃಕಂಡು ಗಾಂವ್ಕರ್ ಅವರು ಮಕ್ಕಳಿಗೆ ಜನಿಸಿದ ಕ್ರಮದಂತೆ ನಾಮಕರಣ ಮಾಡುತ್ತಾರೆ.

ಹೀಗಿರುವಾಗ ಕೆಲವು ವರ್ಷಗಳ ಬಳಿಕ ಮೃಕಂಡು ಗಾಂವ್ಕರ್ ಅವರು ಪತ್ನಿ ಲಕ್ಷ್ಮೀ ಅವರು ತಮ್ಮ ತಾಯಿ ಮನೆ ಗೋಕರ್ಣ ಸನಿಹದ ತೊರ್ಕೆ ಎಂಬಲ್ಲಿ ವಾಸವಾಗಿರುತ್ತಾರೆ. ಅಲ್ಲಿ ಲಕ್ಷ್ಮೀ ಅವರು ಇದ್ದಕಿದ್ದಂತೆ ಟೈಪಾಯಿಡ್ ಜ್ವರಬಾಧೆಗೆ ತುತ್ತಾಗುತ್ತಾರೆ. ಆ ಕಾಲದಲ್ಲಿ ಟೈಯಫಾಡ್ ಜ್ವರ ಎಂದರೆ ಮಾರಣಾಂತಿಕ ಕಾಯಿಲೆ ಅದು. ಆವಾಗ ಅವರ ಆರೋಗ್ಯವು ಬಹಳಷ್ಟು ಹದಗೆಟ್ಟು ಪರಿಸ್ಥಿತಿ ಗಂಭೀರ ಹಂತದಲ್ಲಿರುತ್ತದೆ. ಭಯಭೀತರಾದ ಮನೆ ಮಂದಿ, ಗಣೇಶಪುರಿಯಲ್ಲಿ ಇರುವ ಮೃಕಂಡು ಅವರಿಗೆ ಪತ್ರ ಬರೆದು ಅಂಚೆ ಮೂಲಕ ವಿಷಯ ಮುಟ್ಟಿಸುತ್ತಾರೆ. ಕೆಲವು ದಿನಗಳಾದ ಬಳಿಕ ಪತ್ರವು ಮೃಕಂಡು ಅವರಿಗೆ ತಲುಪುತ್ತದೆ. ಪತ್ರ ಓದಿದ ಮೃಕಂಡು ಅವರು ಗಾಭರಿಗೆ ಒಳಗಾಗುತ್ತಾರೆ. ಮಡದಿಯ ಅಸೌಖ್ಯದ ವಿಚಾರ ತಿಳಿದು ದುಃಖಿತರಾದ ಅವರು, ತಕ್ಷಣ ಗೋಕರ್ಣಕ್ಕೆ ಹೋಗಲು ನಿರ್ಧರಿಸುತ್ತಾರೆ. ಅನುಮತಿ ಪಡೆಯಲು ಗುರುದೇವ ನಿತ್ಯಾನಂದರಲ್ಲಿ ವಿಷಯ ಹೇಳುತ್ತಾರೆ. ಆವಾಗ ಗುರುದೇವರು, “ನೀನು ಇಲ್ಲಿಯೇ ಇದ್ದರೆ, ನೀನು ಬದುಕುತ್ತಿಯಾ, ಊರಲ್ಲಿ ಮಾತ್ರ ನಿನ್ನ ಹೆಂಡತಿ ಮೃತಪಡುತ್ತಾಳೆ.” “ನೀನು ಊರಿಗೆ ಹೋದರೆ, ನೀನು ಮೃತಪಡುತ್ತಿಯಾ, ಆದರೆ ಹೆಂಡತಿ ಬದುಕಿ ಉಳಿಯುತ್ತಾಳೆ” ಎಂದು ಗುರುದೇವರು ಹೇಳುತ್ತಾರೆ. ಹೀಗೆಂದು ನಿರ್ಧರಿಸ ಬೇಕಾದ ಆಯ್ಕೆಯನ್ನು ಮೃಕಂಡು ಅವರ ಮುಂದೆ ಇಡುತ್ತಾರೆ. ಚಿಂತೆಗೊಳಗಾದ ಮೃಕಂಡು ಅವರು, ತಾನು ಸತ್ತರೆ ತೊಂದರೆ ಇಲ್ಲ..! ನನ್ನ ಐವರು ಮಕ್ಕಳು ಸಣ್ಣವರಿದ್ದಾರೆ. ತಾನು ಹೆಂಡತಿಯನ್ನು ಕಾಣಲು ಊರಿಗೆ ಹೋಗುತ್ತೇನೆಂದು ಗುರುದೇವರಲ್ಲಿ ತಮ್ಮ ನಿರ್ಧಾರ ಹೇಳುತ್ತಾರೆ.

ಮೃಕಂಡು ಅವರು ಗುರುದೇವರಿಂದ ಒಪ್ಪಿಗೆ ಪಡೆದು, ಗಣೇಶಪುರಿಯಿಂದ ಗೋಕರ್ಣಕ್ಕೆ ಬಂದು ತಲುಪುತ್ತಾರೆ. ಮನೆಯಲ್ಲಿ ಹೆಂಡತಿ ಆರೋಗ್ಯ ಪೂರ್ಣವಾಗಿ,ಲವಲವಿಕೆಯಿಂದ ಇರುವುದನ್ನು ಕಂಡು ಅಚ್ಚರಿಪಡುತ್ತಾರೆ. ಇದೆಲ್ಲವು ನಾನು ನಂಬಿರುವ ಗುರುದೇವರದೇ ಮಹಿಮೆ ಎಂದು ಅವರಿಗೆ ತಿಳಿಯುತ್ತದೆ. ಊರಿಗೆ ಬಂದ ಕೆಲವು ದಿನಗಳನ್ನು ಮನೆ ಮಂದಿಯೊಂದಿಗೆ ಮೃಕಂಡು ಅವರು ಕಳೆಯುತ್ತಾರೆ. ನಂತರ ಒಂದು ದಿನ ಮೃತಪಡುತ್ತಾರೆ. ಇವರಿಗೆ ಗುರುದೇವರು ಹೇಳಿದ್ದು ಎಲ್ಲವೂ ಸತ್ಯವಾಗಿ ಘಟಿಸಿ ಹೋಗುತ್ತದೆ. ಇವಾಗ ಮೃಕಂಡು ಗಾಂವ್ಕರ್ ಅವರ ಐವರು ಮಕ್ಕಳು ತುಂಬು ಜೀವನ ನೆಡೆಸಿ ಭಗವಂತನ ಪಾದ ಸೇರಿದ್ದಾರೆ. ಕೊನೆಯ ಮಗ ದೇವದತ್ತ ಅವರು ಕೊನೆಯವರಾಗಿ ದೈವಾಧೀನರಾಗಿದ್ದಾರೆ. ಈ ಗುರುದೇವರ ಲೀಲಾಮೃತವನ್ನು ದಿ. ಮೃಕಂಡು ಗಾಂವ್ಕರ್ ಅವರ ಪ್ರಥಮ ಪುತ್ರಿ ದಿ.ಶಾಂತಿ ಅವರ ಪುತ್ರ, ಅಂದರೆ ಮೃಕಂಡು ಅವರ ಮೊಮ್ಮಗ ಅವರು ನನ್ನಲ್ಲಿ ಹೇಳಿಕೊಂಡರು. ಇವರು ಸರಕಾರಿ ಇಲಾಖೆಯೊಂದರಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರೆ. ಇವಾಗ ಮಂಗಳೂರಿನಲ್ಲಿ ವಾಸವಾಗಿದ್ದಾರೆ. ಗುರುದೇವ ನಿತ್ಯಾನಂದರ ಭಕ್ತರು ಆಗಿದ್ದಾರೆ.

LEAVE A REPLY

Please enter your comment!
Please enter your name here