ಅವಧೂತ್‌ ನಿತ್ಯಾನಂದ ಮಹಿಮೆ ಅಪಾರ…

0
835

ನಿತ್ಯ ಅಂಕಣ: ೩೦

ಉಡುಪಿ ಜಿಲ್ಲೆಯ ದಕ್ಷಿಣದ ಗಡಿಭಾಗವಾದ ಹೆಜಮಾಡಿ ಎಂಬ ಊರಲ್ಲಿ ನಡೆದ ಘಟನೆ ಇದು. ಬಾಲಕನೊರ್ವ ರಸ್ತೆಯ ಬಯಲಿನಲ್ಲಿ ಮಕ್ಕಳೊಂದಿಗೆ ಸೇರಿಕೊಂಡು ಕಾಲ್ಚೆಂಡಾಟ(ಪುಟ್ಬಾಲ್) ಆಡುತ್ತಿದ್ದ. ಅದೇ ಸಮಯದಲ್ಲಿ ಬಾಲಕ ಕಾಲಿನಿಂದ ಒದ್ದ ಚೆಂಡು ಬಯಲಿನಲ್ಲಿ ನಡೆದುಕೊಂಡು ಹೋಗುತ್ತಿರುವ ಕಪ್ಪಗಿರುವ ಸಾಧುವಿನ ಹತ್ತಿರ ಬಂದು, ಅವರ ಪಾದಗಳಿಗೆ ಸ್ಪರ್ಶಿಸಿತ್ತದೆ. ಚೆಂಡನ್ನು ಹಿಡಿಯಲು ಬಾಲಕನು ಓಡುತ್ತ ಸಾಧು ಇದ್ದಡೆಗೆ ಬರುತ್ತಾನೆ. ಆವಾಗ ಆ ಸಾಧು ಬಾಲಕನ ತಲೆ ಸವರಿ, ಮುದ್ದಾಡುತ್ತಾರೆ. ಆ ಸಾಧು ಬೇರಾರು ಅಲ್ಲ..! ಆ ಸಮಯದಲ್ಲಿ ಕರಾವಳಿ ಭಾಗದಲ್ಲಿ ಸಂಚಾರದಲ್ಲಿದ್ದು ಲೀಲೆಗಳನ್ನು ತೋರ್ಪಡಿಸುತ್ತಿದ್ದ ಭಗವಾನ್ ನಿತ್ಯಾನಂದರಾಗಿದ್ದರು. ಆ ಬಾಲಕ ಅಲ್ಲಿಯೇ ಪಕ್ಕದ ಮನೆಯ ಶೀನ ಆಗಿದ್ದನು. ಶೀನನ ತಂದೆಯು ಶೀನ ಸಣ್ಣವನಿರುವಾಗಲೇ ಅಕಾಲಿಕವಾಗಿ ಮೃತರಾಗಿದ್ದರು. ಬಡತನದಲ್ಲಿಯೇ ಅವರ ಜೀವನ ಸಾಗುತಿತ್ತು.

ಶೀನನಿಗೂ ಮನೆಯ ಜವಾಬ್ದಾರಿ ಹೊರ ಬೇಕಾದ ಪರಿಸ್ಥಿತಿ ಚಿಕ್ಕವನಿರುವಾಗಲೇ ಎದುರಾಯಿತು. ಹೆಜಮಾಡಿಯ ಕೃಷ್ಣ ಭಟ್ಟರು ಮುಂಬೈಯಲ್ಲಿ ಹೊಟೇಲು ನಡೆಸುತ್ತಿದ್ದರು. ಧಣಿ ಕೃಷ್ಣ ಭಟ್ಟರು ಶೀನನ್ನು ಹೊಟೇಲು ಕೆಲಸಕ್ಕೆಂದು ಮುಂಬೈಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಕೆಲಸ ಕಲಿತು ಶೀನ ರುಚಿಕರ ಖಾದ್ಯ ತಯಾರಿಸುವ ಬಾಣಸಿಗ ಆಗುತ್ತಾನೆ. ಆದರೆ ಶೀನನ ಮನಸ್ಸು ಆಧ್ಯಾತ್ಮದತ್ತ ವಾಲಿಕೊಂಡಿತು. ಹೋಟೆಲಿನಲ್ಲಿ ತಿಂಡಿ ತಯಾರಿಸುವಾಗ ಎಣ್ಣೆ ಕುದಿಯುವ ಬಾಣಲೆಯಿಂದ ಬಿಸಿ ಬಿಸಿ ತಿಂಡಿಗಳನ್ನು ಸೌಟಿನ ಸಹಾಯ ಪಡೆಯದೆ ಬರಿಗೈಯಿಂದ ತೆಗೆದು, ನೋಡುಗರನ್ನು ಅಚ್ಚರಿ ಪಡಿಸುವ ಪವಾಡಗಳನ್ನು ನಡೆಸುತ್ತಿದ್ದನು. ಹೀಗಿರುವಾಗ ಶೀನ ವೃತ್ತಿ ಬದುಕಿಗೆ ತಿಲಾಂಜಲಿ ಇಟ್ಟು ಪವಿತ್ರ ತೀರ್ಥಕ್ಷೇತ್ರಗಳ ಯಾತ್ರೆ ಮಾಡಲು ಆರಂಭಿಸುತ್ತಾನೆ. ಸ್ವಲ್ಪ ಸಮಯ ಗಾಣಾಗಪುರದ ಭಸ್ಮಗುಡ್ಡೆಯ ಮೇಲೆ ತಪ್ಪಸ್ಸು ಆಚರಿಸುತ್ತಾನೆ. ನಂತರ ಅವರು ಕಾಂಞಂಗಾಡಿಗೆ ಬರುತ್ತಾರೆ. ಅಲ್ಲಿ ಆ ಸಮಯದಲ್ಲಿ ನಿತ್ಯಾನಂದರು ಗುಹೆಗಳ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದರು. ಶೀನ ಅಲ್ಲಿ ಶ್ರಮದಾನ ಮಾಡುವ ಮೂಲಕ ಸೇವೆಸಲ್ಲಿಸುತ್ತಾನೆ.

ಮತ್ತೆ ನಿತ್ಯಾನಂದರು ಶೀನ ಅವರಿಗೆ ಹಿಮಾಲಯಕ್ಕೆ ಹೋಗಿ ಸಾಧನೆ ಮಾಡುವಂತೆ ಆದೇಶ ನೀಡುತ್ತಾರೆ. ಅದರಂತೆ ಶೀನ ಒಂದಿಷ್ಟು ಸಮಯ ಹಿಮಾಲಯದಲ್ಲಿ ಸಾಧನೆ ಮಾಡುತ್ತಾನೆ. ಅಲ್ಲಿಂದ ಕೈಲಾಸ, ಮಾನಸ ಸರೋವರ ಇನ್ನಿತರ, ಪವಿತ್ರ ತೀರ್ಥ ಕ್ಷೇತ್ರಗಳ ದರ್ಶನಗೈದು ಗಣೇಶಪುರಿಗೆ ಬರುತ್ತಾನೆ. ಬರುವಾಗ ಶೀನ ಅವರ ತಲೆ ಕೂದಲು ಜಟೆ ಕಟ್ಟಿದ್ದವು. ಗಡ್ಡ ಬೆಳೆದಿತ್ತು. ಬಂದವನು ನಿತ್ಯಾನಂದ ಸ್ವಾಮಿಗಳ ದರ್ಶನ ಪಡೆದು, ಕಾಲಿಗೆರಗಿ ನಮಸ್ಕರಿಸುತ್ತಾನೆ. ಒಡನೆ ನಿತ್ಯಾನಂದರು ಬಿಸಿ ನೀರಿನ ಕುಂಡದಲ್ಲಿ ಸ್ನಾನ ಮಾಡಿ ಬರಲು ಹೇಳುತ್ತಾರೆ. ಸ್ನಾನ ಮುಗಿಸಿ ಬಂದಾಗ ನಿತ್ಯಾನಂದರು ಶೀನನ ಮೇಲೆ ಕೃಪಾದೃಷ್ಠಿ ಬಿರುತ್ತಾರೆ. ದೃಷ್ಠಿ ಹಾಯಿಸಿ ಶಕ್ತಿಪಾತ ಮಾಡುತ್ತಾರೆ. ಶೀನ ಅವರಿಗೆ ಜನಾನಂದ ಸ್ವಾಮಿ ಎಂದು ಶುಭ ನಾಮಕರಣ ಮಾಡಿ, ಕಾಂಞಂಗಾಡಿನಲ್ಲಿ ನೆಲೆ ನಿಲ್ಲಲು ಆಜ್ಞಾಪಿಸುತ್ತಾರೆ. ಮುಂದೆ ಅವರೇ ಕಾಂಞಂಗಾಡ್ ನಿತ್ಯಾನಂದ ಆಶ್ರಮದ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಾರೆ. ಭಕ್ತ ಜನರಿಗೆ ಆನಂದ ಕರುಣಿಸುತ್ತಾರೆ. ನಿತ್ಯಾನಂದ ಸ್ವಾಮಿಗಳ ಮೆಚ್ಚಿನ ಶಿಷ್ಯಕೂಟದಲ್ಲಿ ಇವರು ಓರ್ವರು. ಮುಂದೆ ಜನಾನಂದ ಸ್ವಾಮಿಗಳು ಕಾಂಞಂಗಾಡಿನಲ್ಲಿ 29- 12- 1982 ರಲ್ಲಿ ಸಮಾಧಿ ಪಡೆಯುತ್ತಾರೆ.

ತಾರಾನಾಥ್‌ ಮೇಸ್ತ ಶಿರೂರು.

Advertisement

LEAVE A REPLY

Please enter your comment!
Please enter your name here