ಅವಧೂತ್‌ ಕಲ್ಲೆಸೆದರು…ಆ ಕಾಟ ತೊಲಗಿಹೋಯಿತು…!

0
1152

ನಿತ್ಯ ಅಂಕಣ-೮೫ : ತಾರಾನಾಥ್‌ ಮೇಸ್ತ, ಶಿರೂರು.
ನಿತ್ಯಾನಂದರು ಸಂಚಾರದಲ್ಲಿದ್ದಾಗ ಮಂಗಳಪೇಟೆ ಊರಲ್ಲಿ ಇದ್ದರು. ಅಲ್ಲಿ ಅವರಿಗೊಬ್ಬ ಬಳೆಗಾರ ಕೊಲ್ಲಪ್ಪಣ್ಣ ಹೆಸರಿನ ಭಕ್ತನಿದ್ದನು. ನಿತ್ಯಾನಂದರು ಕೊಲ್ಲಪ್ಪಣ್ಣನ ಮನೆ ಸನಿಹದ ಹಾಡಿಯಲ್ಲಿ ದಿನಗಳ ಕಳೆಯುತ್ತಿದ್ದರು. ಸ್ವಾಮೀಜಿ ಅವರಿಗೆ ಗಂಜಿ ಊಟವನ್ನು ಕೊಲ್ಲಪ್ಪಣ್ಣ ಅವರು ತಮ್ಮ ಮನೆಯಿಂದಲೇ ಒದಗಿಸುತ್ತಿದ್ದರು. ರಾತ್ರಿಯ ಸಮಯವನ್ನು ಅವರ ಮನೆಯ ಜಗುಲಿಯಲ್ಲಿ ಮಲಗಿ ಕಳೆಯುತ್ತಿದ್ದರು. ಕೊಲ್ಲಪ್ಪಣ್ಣರ ಮನೆಯ ವಠಾರದಲ್ಲಿ ಒಂದಿಷ್ಟು ದಲಿತರ ಮನೆಗಳಿದ್ದವು. ಅವರ ಮಕ್ಕಳಿಗೆ ನಿತ್ಯಾನಂದರು ಆಟವನ್ನು ಆಡಿಸುತ್ತಿದ್ದರು. ಹೀಗೆ ನಿತ್ಯಾನಂದರು ಮಂಗಳಪೇಟೆಯಲ್ಲಿ ದಿನಗಳ ಕಳೆದಿದ್ದರು.
ಹೀಗಿರುವಾಗ ಅದೇ ಪರಿಸರದ ಮನೆಯೊಂದರ ಮಹಿಳೆಯೊರ್ವಳು, ಹಲವು ಸಮಯದಿಂದ ಪ್ರೇತಬಾಧೆಯಿಂದ ಬಳಲುತ್ತಿದ್ದಳು. ನಿತ್ಯಾನಂದರ ಜತೆ ಕೊಲ್ಲಪ್ಪಣ್ಣ ಅವರಿಗೆ, ಬಹಳ ಹತ್ತಿರದ ಒಡನಾಟ ಇದ್ದುದರಿಂದ, ಮಹಿಳೆಯ ಮನೆಮಂದಿ ಕೊಲ್ಲಪ್ಪಣ್ಣನಲ್ಲಿ ಸಮಸ್ಯೆಯನ್ನು ಹೇಳಿಕೊಂಡು, ನಿತ್ಯಾನಂದರ ಬಳಿ ತೋರಿಸಲು ಸಹಕರಿಸವಂತೆ ಕೇಳಿಕೊಂಡರು. ಅದರಂತೆ ಕೊಲ್ಲಪಣ್ಣನ ಸಂಗಡ ಐದಾರು ಮಹಿಳೆಯರು ಸೇರಿಕೊಂಡು ಪ್ರೇತಬಾಧೆಗೆ ಒಳಪಟ್ಟಿರುವ ಮಹಿಳೆಯನ್ನು ಹಿಡಿದುಕೊಂಡು, ನಿತ್ಯಾನಂದರು ಇರುವ ಗುಡ್ಡೆಗೆ ಹೊರಟರು. ಅಲ್ಲಿ ಕೊಲ್ಲಪ್ಪಣ್ಣರು ನಿತ್ಯಾನಂದರಲ್ಲಿ ಎಲ್ಲಾ ವಿಷಯವನ್ನು ಹೇಳಿ, ಮಹಿಳೆಗೆ ಕಾಡುತ್ತಿರುವ ಪ್ರೇತಬಾಧೆ ಉಚ್ಚಾಟಿಸುವಂತೆ ಕೇಳಿಕೊಂಡರು.
ನಿತ್ಯಾನಂದರನ್ನು ಕಂಡಕೂಡಲೇ ಮಹಿಳೆಯ ಆವೇಷವು ಉಗ್ರರೂಪ ತಾಳಿತು. ತನ್ನನ್ನು ಹಿಡಿದಿಟ್ಟು ಕೊಂಡಿರುವ ಮಹಿಳೆರಿಂದ ಆರ್ಭಟಿಸಿ ತಪ್ಪಿಸಿಕೊಂಡಳು. ನಿತ್ಯಾನಂದರು ಇದ್ದಡೆಗೆ ಒಮ್ಮೆಗೆ ನುಗ್ಗಿದಳು. ನಿತ್ಯಾನಂದರ ಕೆನ್ನೆಗೆ ಒಂದು ಪೆಟ್ಟು ನೀಡಿದಳು. ಆವಾಗ ನಿತ್ಯಾನಂದರು ಮುಖದಲ್ಲಿ ಬೇಸರ, ಕ್ರೋಧ ವ್ಯಕ್ತಪಡಿಸದೆ ನಕ್ಕರು. ಅಲ್ಲೇ ಇದ್ದ ಸಣ್ಣ ಕಲ್ಲನ್ನು ಎತ್ತಿಕೊಂಡು ದೂರ ಎಸೆದು, “ನೀನು ತೊಲಗಿ ಹೋಗು” ಎಂದು ಹೇಳಿದರು. ಆ ಮಹಿಳೆ ಹಲವು ಸಮಯಗಳಿಂದ ಪ್ರೇತಬಾಧೆಗೆ ಒಳಪಟ್ಟು ವಿಚಿತ್ರವಾಗಿ ವರ್ತಿಸುತ್ತಿದ್ದವಳು. ಅಂದು ನಿತ್ಯಾನಂದರಿಂದ ಆಕೆ ಸಂಪೂರ್ಣ ಬಾಧೆಯಿಂದ ಮುಕ್ತಿ ಪಡೆದು ಶಾಂತಳಾದಳು. ನಂತರ ಎಲ್ಲರೂ ನಿತ್ಯಾನಂದರಲ್ಲಿ ಕ್ಷಮೆಯಾಚಿಸಿ ನಮಸ್ಕರಿಸಿ ತೆರಳಿದರು.
ಅದರಂತೆ ಅದೇ ಪ್ರದೇಶದಲ್ಲಿ ಓರ್ವ ಮಹಿಳೆಗೆ ಸೊಂಟದ ಸ್ವಾಧೀನ ಇಲ್ಲದೆ ನಡೆಯಲಾಗದ ಪರಿಸ್ಥಿತಿ ಇತ್ತು. ಎದ್ದು ನಿಲ್ಲಲೂ ಸಾಧ್ಯವಾಗುತ್ತಿರಲಿಲ್ಲ. ಮಹಿಳೆಯ ಅಸಹಾಯಕತೆ ಕಂಡು ಕೊಲ್ಲಪ್ಪಣ್ಣ ನಿತ್ಯಾನಂದರ ಬಳಿಗೆ ಕರೆದೊಯೈಲು ಅವರಿಗೆ ಸಲಹೆ ನೀಡುತ್ತಾರೆ. ಅದರಂತೆ ನಾಲ್ಕೈದು ಜನರು ಸೇರಿಕೊಂಡು ಮಹಿಳೆಯನ್ನು ಎತ್ತಿಕೊಂಡು, ನಿತ್ಯಾನಂದರು ಇರುವ ಗುಡ್ಡದ ಕಡೆಗೆ ಸಾಗುತ್ತಾರೆ. ಅದೇ ದಾರಿಯಲ್ಲಿ ಗುಡ್ಡದಿಂದ ಕೆಳಗೆ ನಿತ್ಯಾನಂದರು ಇಳಿದು ಬರುತ್ತಿದ್ದರು. ನಿತ್ಯಾನಂದರು ನಡೆಯಲಾಗದ ಸ್ಥಿತಿಯಲ್ಲಿದ್ದ ಮಹಿಳೆಯನ್ನು ನಿಲ್ಲಿಸಿ, ನಿಧಾನವಾಗಿ ನಡೆಯಲು ಸೂಚಿಸುತ್ತಾರೆ. ಆ ಮಹಿಳೆ ನಿಧಾನವಾಗಿ ಹೆಜ್ಜೆಗಳಿಟ್ಟು ನಡೆಯುತ್ತದೆ. ಮುಂದಿನ ದಿನಗಳಲ್ಲಿ ಮಹಿಳೆ ಸಹಜವಾಗಿ ನಡೆಯಲಾರಂಭಿಸುತ್ತಾಳೆ. ಕೊಲ್ಲಪ್ಪಣ್ಣನವರು ನಿತ್ಯಾನಂದರ ಲೀಲೆಗಳನ್ನು ಬಹಳ ಹತ್ತಿರದಿಂದ ಕಂಡವರು. ತಾವು ಕಣ್ಣಾರೆ ಕಂಡಿರುವ ಗುರುದೇವರ ಲೀಲೆಗಳನ್ನು ತನ್ನಡೆಗೆ ಬರುತ್ತಿರುವ ಗುರುದೇವರ ಭಕ್ತರಲ್ಲಿ ಹೇಳಿಕೊಳ್ಳುತ್ತಿದ್ದರು.

LEAVE A REPLY

Please enter your comment!
Please enter your name here