ಅಳಿವಿನಂಚಿನಲ್ಲಿ ಮರಕೆಸು

0
1932

 
ಚಿಗುರು ಅಂಕಣ: ರಾಧಾಕೃಷ್ಣ ಹೊಳ್ಳ
ಇದು ಆಷಾಢ (ಆಟಿ)ಮಾಸ. ಈ ಸಮಯದಲ್ಲಿ ಒಮ್ಮೆಯಾದರೂ ಮರ ಕೆಸುವಿನ ಪತ್ರೋಡೆ ಮಾಡಿ ಸೇವನೆ ಮಾಡಿದರೆ ದೇಹ ಸ್ವಚ್ಚವಾಗುತ್ತದೆ ಎಂಬುದು ಹಿರಿಯರ ಮಾತು. ಆದರೆ ಮರಕೆಸು ಈಗ ಸಿಗುವುದೇ ಈಗ ಕಷ್ಟವಾಗಿದೆ. ಆಗುಂಬೆಯಿಂದ ಬರುವ ಬಸ್ಸುಗಳ ಮೂಲಕ ತರಿಸಿ ತಿನ್ನುವ ಕ್ರಮ ಈಗ ನಮ್ಮಲ್ಲಿ ಉಳಿದುಕೊಂಡಿದೆ.
 
marakesu1
ಮರ ಕೆಸು (ತುಳುವಿನಲ್ಲಿ ಮರಚೇವು) ನೆಲ ಕೆಸುವಿನ ಜಾತಿಯದೇ ಕೆಸು. ಬೇರೆ ಮರಗಳನ್ನು ಆಶ್ರಯಿಸಿಕೊಂಡು ಬಂದಣಿಕೆ ತರ ಬೆಳೆಯುವುದು ಎನ್ನುತ್ತಾರೆಯಾದರೂ ಸೂಕ್ಷ್ಮವಾಗಿ ಗಮನಿಸಿದರೆ ಅದು ಬದನಿಕೆ ಸಸ್ಯ ಅಲ್ಲ. ಆಟಿ ತಿಂಗಳಲ್ಲಿ ಸಸ್ಯವು ಪುಷ್ಟಿಯಾಗಿ ಬೆಳೆದು ತನ್ನ ಎಲೆಯಲ್ಲಿ ಎಲ್ಲಾ ವಿಧದ ಔಷಧಿಗಳನ್ನು ಕೂಡಿಸಿಕೊಂಡಿರುತ್ತದೆ ಎಂಬ ಕಾರಣಕ್ಕೆ ಈ ತಿಂಗಳಲ್ಲಿ ಇದನ್ನು ತಿನ್ನಬೇಕು ಎಂದು ವಾಡಿಕೆ ಮಾಡಿದ್ದಾರೆ. ಹೊಟ್ಟೆಯಲ್ಲಿ ಉಳಿದಿರಬಹುದಾದ ವಿಷಾಹಾರ ನಿರ್ಮೂಲನೆ (ವಿರೋಧಿಗಳು ಉಣಿಸಿರಬಹುದಾದದ್ದು, ತುಳುವಿನಲ್ಲೆ ಕೈಮಾಸು ಎನ್ನುತ್ತಾರೆ) ಮರಕೆಸುವಿನ ಎಲೆಗಳನ್ನು ಆಟಿ ತಿಂಗಳಿನ (ಆಷಾಢ ಮಾಸ) ಆಹಾರವಾಗಿ ಬಳಸುವುದರಿಂದ ಸಾಧ್ಯ ಎನ್ನುವ ನಂಬಿಕೆ. ನೆಲಕೆಸುವಿನಿಂದ ಮಾಡುವ ಎಲ್ಲಾ ನಮೂನೆಯ ಖಾದ್ಯಗಳನ್ನು ಇದರಿಂದ ಮಾಡಬಹುದು.
 
marakesu
ಮರಕೆಸುವು ಹಿಂದೆ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತಿತ್ತು. ಆಟಿ ತಿಂಗಳಲ್ಲಿ ಮರಕೆಸು ಹುಡುಕಿ ಎರಡು ಮೂರು ಭಾರಿಯದರೂ ಅದರ ಅಡುಗೆ, ಪತ್ರೋಡೆ (ಕೆಸುವಿನ ಎಲೆಗೆ ಬೆಳ್ತಿಗೆ ಅಕ್ಕಿ ಬೆಲ್ಲ ಮೆಣಸು, ಹುಳಿ ಮುಂತಾದ ಸಾಂಬಾರ ಹಾಕಿ ಅರೆದ ಹಿಟ್ಟನ್ನು ತೆಳುವಾಗಿ ಲೇಪಿಸಿ ಅದನ್ನು ಎರಡು ಬದಿಗಳನ್ನು ಮೊದಲು ಮಡಚಿ ನಂತರ ಚಾಪೆಯಂತೇ ಮಡಚಿ ಅದನ್ನು ಹಬೆಯಲ್ಲಿ ಬೇಯಿಸಿ ತಿನ್ನುವ ತಿಂಡಿ) ಮಾಡುವುದು ಕರಾವಳಿಯ ಜನರ ಅಭ್ಯಾಸವಾಗಿತ್ತು. ಈಗ ಮರ ಕೆಸುಗಳನ್ನು ಹುಡುಕುತ್ತಾ ಹೋದರೆ ಇಡೀ ದಿನ ಅಲೆದರೂ ಒಂದು ಸಲದ ಪತ್ರೋಡೆಗೆ ಕಷ್ಟ. ಆದರೆ ಮಲೆನಾಡಿನಲ್ಲಿ ಶ್ರಿಂಗೇರಿ, ಕೊಪ್ಪ, ತೀಥಹಳ್ಳಿ, ಸಾಗರ, ಶಿರಸಿ ಮುಂತಾದ ಘಟ್ಟ ಪ್ರದೇಶಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇದೆ. ಮರಗಳು ಹೇರಳವಾಗಿದ್ದು, ತೂತುಳ್ಳ, ಶಿಥಿಲವಾದ ಮರಮಟ್ಟುಗಳು ಇರುವಲ್ಲಿ , ಅವುಗಳ ಸಂದಿನಲ್ಲಿ ಈ ಮರ ಕೆಸುವು ಬದುಕಿರುತ್ತದೆ. ನೆಲದಲ್ಲೂ ಬದುಕುತ್ತದೆಯಾದರೂ ಅದಕ್ಕೆ ಮರ ಶಿಥಿಲವಾದ ಹ್ಯೂಮಸ್ ಸಾರ ಬೇಕಾಗುತ್ತದೆ. ಸಾಮಾನ್ಯವಾಗಿ ಯಾವುದಾದರೂ ಮರ ಬಿದ್ದು ಅದು ಮಣ್ಣಿನಲ್ಲಿ ಸೇರ್ಪಡೆಯಾಗುತ್ತಿದ್ದರೆ ಅಲ್ಲಿ ಮರ ಕೆಸುವಿನ ಸಸ್ಯಗಳನ್ನು ಸಣ್ಣ ಸಸಿ ನೆಟ್ಟು ಬದುಕಿಸಬಹುದು. ಅದೇ ಮರದಲ್ಲಿ ಗಡ್ಡೆಗಳಿದ್ದರೆ ಅದು ಅಲ್ಲಿ ಹುಟ್ಟಿ ಬೆಳೆಯುತ್ತಿರುತ್ತದೆ.
 
 
marakesu2
ಮರಕ್ಕೆ ಜರಿ ಗಿಡದ ಬದನಿಕೆ ಬಂದಿದ್ದಲ್ಲಿ, ಗೋಳಿ ಸಸ್ಯವು ಮರಕ್ಕೆ ಅಂಟಿಕೊಂಡಿದ್ದಲ್ಲಿ ಈ ಮರಕೆಸುವಿನ ಸಸ್ಯಗಳು ಬೆಳೆಯುತ್ತವೆ. ಮಳೆ ಚೆನ್ನಾಗಿ ಹಿಡಿಯುವಾಗ ಅಂದರೆ ಆಷಾಢ ಮಾಸದಲ್ಲಿ ಇದರ ಎಲೆಗಳು ಸ್ವಲ್ಪ ದೊಡ್ದದಾಗಿ ಬಳಕೆಗೆ ಸೂಕ್ತವಾಗುತ್ತವೆ. ಎಲೆ ಲಭ್ಯವಿದ್ದರೆ ಆಷಾಢ ಮಾಸದ ತರುವಾಯವೂ ಅಡುಗೆ ಮಾಡಬಹುದು. ಬರೇ ಎಲೆ ಅಲ್ಲದೇ ಗಡ್ಡೆಯನ್ನೂ, ದಂಟನ್ನೂ ಅಡಿಗೆಗೆ ಬಳಕೆ ಮಾಡಲಾಗುತ್ತದೆ.
 
 
ಮರ ಕೆಸುವಿನ ಸಂತತಿ ಕರಾವಳಿಯಲ್ಲಿ ಅಳಿಯಲಾರಂಭಿಸಿದೆ. ಕಾರಣ ಮರಮಟ್ಟುಗಳ ನಾಶ ಮತ್ತು ಹಿಂಸಾತ್ಮಕವಾಗಿ ಅದರ ಬಳಕೆ. ಕೆಸುವಿನ ಸಸ್ಯದಿಂದ ಕೇವಲ ಎಲೆ ಮತ್ತು ದಂಟು ತೆಗೆಯುವ ಬದಲು ಇಡೀ ಸಸ್ಯವನ್ನೇ ಕಿತ್ತು ಸಾಕಷ್ಟು ನಾಶ ಆಗಿದೆ ಎಂದರೂ ತಪ್ಪಾಗಲಾರದು.
ಸ್ವಾಭಾವಿಕವಾಗಿ ಇದರ ಸಸ್ಯಾಭಿವೃದ್ದಿಯು ಹಕ್ಕಿಗಳಿಂದ ನಡೆದಿರಹುದು. ಸಣ್ಣ ಗಾತ್ರದಗಡ್ಡೆಗಳು ಗಾಳಿಯ ಮೂಲಕ ಪಸರಿಸಿಯೂ ವಂಶಾಭಿವೃದ್ದಿಯಾಗಿರಬಹುದು. ಮರಕೆಸು ಸಸ್ಯ ಬೆಳೆದಾಗ ಬುಡದಲ್ಲಿ ಬಳ್ಳಿಯಂತಹ ಬೆಳವಣಿಗೆ ಅಗಿ ಅದರಲ್ಲಿ ಹೂವಾಗಿ ಬೀಜವಾಗುತ್ತದೆ. ಈ ಬೀಜಗಳು ಗಾಳಿಯಲ್ಲಿ ಪಸರಿಸಿಯೂ ವಂಶಾಭಿವೃದ್ಧಿಯಾಗುತ್ತದೆ.
 
 
ಅವ್ಯಾಹತವಾಗಿ ಇದೇ ರೀತಿ ಮರಮಟ್ಟುಗಳನ್ನು ನಾಶ ಮಾಡುತ್ತಾ ಬಂದರೆ ಇನ್ನು ಕೆಲವೇ ವರ್ಷಗಳಲ್ಲಿ ಮಳೆಕಾಡಿನಲ್ಲಿ ಕಂಡು ಬರುವ ವಿಶಿಷ್ಠ ಮರ ಕೆಸು ಅವನತಿಯಾದರೂ ಅಚ್ಚರಿ ಇಲ್ಲ. ಇದು ನಮ್ಮ ಪ್ರಾದೇಶಿಕತೆಯ ಒಂದು ಅಂಗ. ಇದನ್ನು ಅಳಿಯಲು ಬಿಡಬಾರದು. ಮರಕೆಸು ಉಳ್ಳ ಶಿಥಿಲಾವಸ್ಥೆಯ ಮರಗಳಲ್ಲಿ ಕಂಡು ಬರುವ ಸಸಿಯನ್ನು ಅವರವರ ಹೊಲದ ಶಿಥಿಲಾವಸ್ಥೆಯ ಮರ ಮಟ್ಟುಗಳ ಸಂದಿನಲ್ಲಿ ಬೆಳೆಸಬಹುದು. ಒಟ್ಟಿನಲ್ಲಿ ಈ ವರ್ಗದ ಕೆಸುವು ಹ್ಯೂಮಸ್ ಯುಕ್ತ ಮಾಧ್ಯಮದಲ್ಲಿ ಬೆಳೆಯುವ ಸಸ್ಯವಾಗಿದ್ದು ಅದನ್ನು ಒದಗಿಸಿಕೊಟ್ಟು ಬೆಳೆಸುವುದು ಸುಲಭ.
 
 
ಮರಕೆಸು ಕೇವಲ ಖಾದ್ಯ ಅಡುಗೆಗೆ ಮಾತ್ರ ಬಳಕೆಯಾಗುವುದಲ್ಲ. ನಾಟೀ ಔಷದೋಪಚಾರದಲ್ಲಿಯೂ ಇದನ್ನು ಬಳಸುತ್ತಾರೆ. ಆಳವಾಗಿ ಮುಳ್ಳು ಹೊಕ್ಕು ತೆಗೆಯುವುದೇ ಕಷ್ಟವಾಗಿದ್ದರೆ ಅಥವಾ ಮುಳ್ಳಿನ ತುದಿ ಗಾಯದಲ್ಲಿ ಉಳಿದಿದ್ದರೆ, ಮರ ಕೆಸುವಿನ ಗಡ್ಡೆಯನ್ನು ಮುಳ್ಳು ಹೊರತೆಗೆಯಲು ಬಳಸುತ್ತಾರೆ. ಇದು ಹಿಂದೆ ಹಳ್ಳಿಯಲ್ಲಿ ಮಾಡುತ್ತಿದ್ದ ಚಿಕಿತ್ಸೆ.
 
 
ಬಳಸುವ ರೀತಿ: ಮರಕೆಸುವಿನ ಗಡ್ಡೆಯನ್ನು ಶುಚಿ ಮಾಡಿ ಸುಮಾರು ಒಂದು ಸೆಂಟಿಮೀಟರು ದಪ್ಪದ ಚಿಪ್ಸ್ ಗಳಂತೆ ಸೀಳಬೇಕು. ಉದ್ದ ಎಷ್ಟಿದ್ದರೂ ಆದೀತು. ಒಂದು ಚಿಪ್ ಅನ್ನು ಕೆಂಡದಲ್ಲಿ ಸುಟ್ಟು ಗಾಯವನ್ನು ಮುಳ್ಳು ಹೊರ ಬರಲು ಸಹಾಯವಾಗುವಂತೆ ಬಿಡಿಸಿ ಸಹಿಸಲು ಸಾಧ್ಯವಾದಷ್ಟು ಬಿಸಿಯಿರುವ ಗಡ್ಡೆಯ ಹಲಗೆಯನ್ನು ಗಾಯದ ಮೇಲಿಟ್ಟು ಗಟ್ಟಿಯಾಗಿ ಕಟ್ಟಬೇಕು. ಮರುದಿನ ಬೇಂಡೇಜು ಬಿಚ್ಚಿದಾಗ ಮುಳ್ಳು ಹೊರ ಬಂದಿರುತ್ತದೆ. ಮತ್ತೂ ಆಳದಲ್ಲಿದ್ದರೆ ಮತ್ತೊಂದು ದಿನ ಪ್ರಯೋಗಿಸಬಹುದು. ಹಿಂದಿನ ಕಾಲದಲ್ಲಿ ವೈದ್ಯರ ಅಭಾವವಿದ್ದಾಗ ಹಳ್ಳಿಗರು ಶರಣಾಗಿದ್ದ ಸುಲಭ ಆಯುರ್ವೇದ ಚಿಕಿತ್ಸೆ.
ರಾಧಾಕೃಷ್ಣ ಹೊಳ್ಳ
[email protected]

LEAVE A REPLY

Please enter your comment!
Please enter your name here