ಅಲ್ಟ್ರಾ ಹೈ ಡೆನ್ಸಿಟಿ ಪ್ಲಾಂಟಿಂಗ್: UHDP

0
660

 
ಚಿಗುರು ಅಂಕಣ: ರಾಧಾಕೃಷ್ಣ ಹೊಳ್ಳ
ಅಧಿಕ ಸಾಂದ್ರ ಮಾವುಬೇಸಾಯ ತಾಂತ್ರಿಕತೆ ಎಂದರೆ ಸಾಂಪ್ರದಾಯಿಕ 7><7 ಮೀ ಅಂತರದ ಬದಲಿಗೆ ಗಿಡದಿಂದ ಗಿಡಕ್ಕೆ 2 ಮೀ. ಹಾಗೂ ಸಾಲಿನಿಂದ ಸಾಲಿಗೆ 3 ಮೀ. ಅಂತರದಲ್ಲಿ ಎಕ್ರೆಗೆ 674 ಗಿಡಗಳನ್ನು ಹಿಡಿಸುವ ತಂತ್ರಜ್ಞಾನ. ಹೀಗೆ ನೆಟ್ಟ ಸಸಿಗಳು ನಾಟಿ ಮಾಡಿದ ನಂತರದ ವರ್ಷ ಮೊದಲ ಹಂತದ ಪ್ರೂನಿಂಗ್ ಗೆ ಒಳಪಡುತ್ತವೆ. ಸಸ್ಯಗಳಿಗೆ ಪ್ರೂನಿಂಗ್ ಮಾಡುವುದು ಸಮರ್ಪಕ ಆಕಾರ ಕೊಡುವುದಕ್ಕೆ , ಮತ್ತು ಹೂ ಹಾಗೂ ಫಸಲು ಹೆಚ್ಚಲು ಅನುಕೂಲವಾಗುವಂತೆ ಸಸ್ಯದ ಎಲ್ಲಾ ಭಾಗಗಳಿಗೂ ಬಿಸಿಲು ಬೀಳಲು. ಮೊದಲ ಹಂತದ ಪ್ರೂನಿಂಗ್ ಮಾಡುವಾಗ ಗಿಡದಿಂದ ಸುಮಾರು 2 ಅಡಿ ಎತ್ತರಕ್ಕೆ ಎರಡು ಮೂರು ಗೆಲ್ಲುಗಳು ಬರುವಂತೆ ಮಾಡಲಾಗುತ್ತದೆ. ಹೆಚ್ಚುವರಿ ಚಿಗುರುಗಳನ್ನು ತೆಗೆಯಲಾಗುತ್ತದೆ. ಇದು ನಾಟಿ ಮಾಡಿದ ಒಂದು ವರ್ಷದ ನಂತರ. ಎರಡನೇ ವರ್ಷಕ್ಕೆ ಮೊದಲನೇ ವರ್ಷದಲ್ಲಿ ಬೆಳೆಯಲು ಬಿಟ್ಟ ಗೆಲ್ಲು 3 ಅಡಿ ಬೆಳೆದಿರುತ್ತದೆ. ಆಗ ಸೆಕೆಂಡರಿ ಪ್ರೂನಿಂಗ್ (secondary pruning)ಮಾಡಲಾಗುತ್ತದೆ.
 
 
 
ಗೆಲ್ಲಿನ ತುದಿಯನ್ನು ಚಿವುಟಿ ಅದರಲ್ಲಿ 2-3 ಚಿಗುರುಗಳು ಬೆಳೆಯುವಂತೆ ಮಾಡುವುದು. ಈ ಸಮಯದಲ್ಲಿ ರೋಗ ಬಂಧ, ಕೀಟ ಬಾಧಿತ, ಆರೋಗ್ಯವಾಗಿಲ್ಲದ ಗೆಲ್ಲುಗಳನ್ನು ತೆಗೆಯಲಾಗುತ್ತದೆ. ಕಸಿ ಮಾಡಿದ ಗಿಡವಾದ ಕಾರಣ ಎರಡನೇ ವರ್ಷಕ್ಕೇ ಕೆಲವು ಗಿಡದಲ್ಲಿ ಹೂ ಮೊಗ್ಗುಗಳು ಬರಬಹುದು. ಅದನ್ನು ಉಳಿಸಲಿಕ್ಕಿಲ್ಲ. ನಂತರ ಟರ್ಶಿಯರಿ ಪ್ರೂನಿಂಗ್ (Tertiary pruning) ಇಲ್ಲಿಯೂ ಸಹ 2-3 ಗೆಲ್ಲುಗಳನ್ನು ಸಸ್ಯದ ಬೆಳವಣಿಗೆ ನೋಡಿಕೊಂಡು ಬಿಡಲಾಗುತ್ತದೆ. ಇಷ್ಟೆಲ್ಲಾ ಪ್ರೂನಿಂಗ್ ಮಾಡುತ್ತಾ ಸಸಿಯ ಎತ್ತರವನ್ನು 6.5 ಅಡಿಗೆ ನಿಯಂತ್ರಿಸಲಾಗುತ್ತದೆ. ಕಾರಣ ಕಟಾವು ಮತ್ತು ನಿರ್ವಹಣೆ ಸುಲಲಿತವಾಗಲು. ಪ್ರತೀ ಬಾರಿ ಕೊಯಿಲು ಮಾಡಿದ ನಂತರ ಹೂ ಬಿಟ್ಟ ಭಾಗವನ್ನು 5 ಇಂಚು ಕೆಳಗೆ ಕತ್ತರಿಸಲಾಗುತ್ತದೆ. ಒಮ್ಮೆ ಹೂ ಬಿಟ್ಟ ಗೆಲ್ಲು ಮತ್ತೆ ಹೂ ಗೊಂಚಲು ಬಿಡುವುದಿಲ್ಲ. ಅದರಲ್ಲಿ ಹೊಸ ಚಿಗುರು ಬಂದು ಅದರಲ್ಲಿ ಹೂ ಬಿಡಬೇಕು. ಆ ಹೊಸ ಚಿಗುರನ್ನು ಆರೋಗ್ಯಕರವಾಗಿ ಬರುವಂತೆ ಮಾಡಲು ಕಟಾವು ಮುಗಿದ ತಕ್ಷಣ ಗೆಲ್ಲು ಕತ್ತರಿಸಲಾಗುತ್ತದೆ. ಪ್ರತೀ ಬಾರಿ ಪ್ರೂನಿಂಗ್ ಮಾಡಿದಾಗಲೂ ಕತ್ತರಿಸಿದ ಆ ಭಾಗಕ್ಕೆ ಶಿಲೀಂದ್ರ ನಾಶಕ (Copper oxychloride or Bordo paste) ಹಚ್ಚಲಾಗುತ್ತದೆ.
 
mango chiguru vaarte
 
 
ಸಸಿ ನಾಟಿ ಮಾಡುವಾಗಲೇ ಅದಕ್ಕೆ ಹನಿ ನೀರಾವರಿಯನ್ನು ಮಾಡಲಾಗುತ್ತದೆ. ಪ್ರತೀ ಸಸಿಗೆ ದಿನಕ್ಕೆ 20 ಲೀ. ಪ್ರಮಾಣದಲ್ಲಿ ನೀರುಣಿಸಲಾಗುತ್ತದೆ. ಜೊತೆಗೆ ರಸಾವರಿಯನ್ನೂ ಮಾಡಲಾಗುತ್ತದೆ. ಎಡೆ ಎಡೆಯಲ್ಲಿ ಸ್ವಲ್ಪ ಕುಂಠಿತ ಬೆಳವಣಿಗೆ ಹೊಂದಿದ ಸಸಿಗಳಿದಲ್ಲಿ ಅದಕ್ಕೆ ಹೆಚ್ಚುವರಿ ಡೋಸ್ ಗೊಬ್ಬರಗಳನ್ನು ಕೊಡಲಾಗುತ್ತದೆ.
 
 
ಮೂರು ವರ್ಷ ಕಳೆದ ನಂತರ ಆ ಸಸಿಯಲ್ಲಿ ಫಸಲು ಪಡೆಯಲು ಪ್ರಾರಂಭ. ಮಾವಿನಲ್ಲಿ ಫಸಲು ಯಾವಾಗಲೂ ಏಕ ಪ್ರಕಾರವಾಗಿರುವುದಿಲ್ಲ. ಈ ತೊಂದರೆಯನ್ನು ನಿವಾರಿಸದಿದ್ದರೆ ಬೆಳೆಗಾರರಿಗೆ ಲಾಭ ಅನಿಶ್ಚಿತ. ಇದಕ್ಕಾಗಿ ವರ್ಷವೂ ಏಕ ಪ್ರಕಾರ ಫಸಲು ಪಡೆಯಲು ಹಾರ್ಮೊನಿನ ಉಪಚಾರ (ಕಲ್ಟಾರ್) ಮಾಡಲಾಗುತ್ತದೆ. ಇದು ಸಂಪೂರ್ಣ ವೈಜ್ಞಾನಿಕವಾಗಿದ್ದು ಮರದ ಬೆಳವಣಿಗೆ, ಗೆಲ್ಲು ಹಬ್ಬಿದ ವಿಷಾಲತೆ ನೋಡಿಕೊಂಡು ಬಳಕೆ ಮಾಡಲಾಗುತ್ತದೆ. ಹೂ ಬರುವ 150 ದಿನಗಳ ಮುಂಚೆ ಈ ಉಪಚಾರವನ್ನು ಮಾಡುವುದರಿಂದ ಸರಿಯಾದ ಸಮಯಕ್ಕೆ ಹೂ ಬಿಡುತ್ತದೆ. ಏಕ ಪ್ರಕಾರವಾಗಿ ಹೂ ಬಿಡುತ್ತದೆ. ಇದನ್ನು ಇಲ್ಲಿ ಜೈನ್ ಇರ್ರಿಗೇಶನ್ ಸಂಸ್ಥೆಯ ತಾಂತ್ರಿಕ ಸಿಬ್ಬಂದಿ ರೈತರಿಗೆ ತಿಳಿಸಿಕೊಡುತ್ತಾರೆ.
 
ನಾಟಿ ಮಾಡುವರೇ ಸಸಿಯನ್ನೂ ಜೈನ್ ಸಂಸ್ಥೆಯ ಉದ್ಮಲ್ ಪೇಟೆ ನರ್ಸರಿಯಿಂದ ತರಿಸಿ ಕೊಡಲಾಗುತ್ತದೆ. ನಾಟಿ ಮಾಡಿ 5 ವರ್ಷ ತನಕ ನಿರ್ವಹಣೆ ಮತ್ತು ಯಾವುದೇ ಸಮಸ್ಯೆಗಳಿಗೆ ಜೈನ್ ಸಂಸ್ಥೆಯ ಪ್ರತಿನಿಧಿಗಳು ಭೇಟಿ ಕೊಟ್ಟು ಮಾಹಿತಿ ಕೊಡುತ್ತಾರೆ. ರೈತರು ಬೆಳೆದ ಮಾವಿನಕಾಯಿಯನ್ನು ಸಂಸ್ಥೆಯು ನೇರವಾಗಿ ಕೊಂಡು ಅದಕ್ಕೆ ಮಾರುಕಟ್ಟೆಯ ಗರಿಷ್ಟ ಬೆಲೆಯನ್ನು ಕೊಡುತ್ತದೆ.
 
ಜೈನ್ ಸಂಸ್ಥೆ ಆಂಧ್ರದ ಚಿತ್ತೂರಿನಲ್ಲಿ ದೊಡ್ಡ ಪ್ರಮಾಣದ ಹಣ್ಣಿನ ರಸ ತೆಗೆಯುವ ( Farm fresh ) ಫ್ಯಾಕ್ಟರಿಯನ್ನು ಹೊಂದಿದೆ. ಇಲ್ಲಿ ದಿನಕ್ಕೆ 13000 ಟನ್ ಮಾವಿನ ರಸವನ್ನು ತೆಗೆಯಬಹುದು. ಈ ರಸ ತೆಗೆದ ಮಾವಿನ ತಿರುಳನ್ನು ನಾವು ಮಾಝಾ (Maaza) ಎಂಬ ಹೆಸರಿನ ಪಾನೀಯವಾಗಿ ಸೇವಿಸುತ್ತೇವೆ.
ನಾವು ಕುಡಿಯುವ ಮಾವಿನ ರಸ ಅಲ್ಫೋನ್ಸೋ ಹಣ್ಣಿನದ್ದಲ್ಲ.
 
ತಾಜಾ ಅಲ್ಪೋನ್ಸೋ ಮಾವಿನ ಹಣ್ಣೀನ ಪೇಯ ಎಂದು ನಾವು ಪ್ರೀತಿಯಲ್ಲಿ ಕುಡಿಯುತ್ತೇವೋ ಅದು ಅಲ್ಫೋನ್ಸೋ ಹಣ್ಣಿನದ್ದಲ್ಲ. ಕಾರಣ ಇಷ್ಟೇ. ಅಲ್ಫೋನ್ಸೋ ಹಣ್ಣಿನಲ್ಲಿ ಹೆಚ್ಚು ರಸ ಇರಲಾರದು. ಯಾವ ಹಣ್ಣು ಹೆಚ್ಚು ಮಾಂಸ ತುಂಬಿ ತೂಕದಲ್ಲಿ ಹೆಚ್ಚಿರುತ್ತದೆಯೋ ಅದರಲ್ಲಿ ಅಧಿಕ ಪ್ರಮಾಣದಲ್ಲಿ ರಸ ಇರುತ್ತದೆ. ಇಂಥಃ ಹಣ್ಣುಗಳಲ್ಲಿ ಇಂದಿಗೂ ತೋತಾಪುರಿಯನ್ನು ಮೀರಿಸುವ ಹಣ್ಣು ಬೇರೆ ಇಲ್ಲ. ಒಂದು ತೋತಾಪುರಿ ಮಾವು 400 ಗ್ರಾಂ ನಿಂದ 800 ಗ್ರಾಂ ತನಕ ತೂಗುತ್ತದೆ. ಆ ಹಣ್ಣಿನಲ್ಲಿ 300-700 ಗ್ರಾಂ ನಷ್ಟು ರಸ ಲಭ್ಯ. ಆದರೆ ಅಲ್ಫೋನ್ಸೊ ಹಣ್ಣಿನಲ್ಲಿ ಈ ಪ್ರಮಾಣದಲ್ಲಿ ರಸ ಇಲ್ಲ. ಆದ ಕಾರಣ ಅದು ವ್ಯಾವಹಾರಿಕವಾಗಿ ರಸ ತೆಗೆಯಲು ಪೂರೈಸುವುದಿಲ್ಲ. ಎಲ್ಲಾ ವ್ಯಾವಹಾರಿಕ ಪಲ್ಪ್ ತೆಗೆಯುವ ಪ್ಯಾಕ್ಟರಿಗಳೂ ಇಂದು ತೋತಾಪುರಿ ಹಣಿನ ರಸ ತೆಗೆಯುತ್ತವೆಯೇ ಹೊರತು ಅಲ್ಫೋನ್ಸ್ ಹಣ್ಣಿನದ್ದಲ್ಲ. ಒಂದೆರಡು ಉದ್ದಿಮೆಗಳು ಅಲ್ಪ ಸ್ವಲ್ಪ ರಸ ತೆಗೆದರೂ ಅದನ್ನು ರೀಟೈಲ್ ಮಾರಾಟ ಮಾಡಿದರಷ್ಟೇ ಅದು ಲಾಭದಾಯಕವಾಗುತ್ತದೆ.
ರೈತರು ಅಧಿಕ ಪ್ರಮಾಣದಲ್ಲಿ ತೋತಾಪುರಿ ಬೆಳೆಸುವುದರ ಕಾರಣ ಇದು. ರೈತರು ಮಾಗುವ ಹಂತಕ್ಕೆ ಬಂದಾಗ ಕಟಾವು ಮಾಡಿ ಫ್ಯಾಕ್ಟರಿಗೆ ಮಾರಾಟ ಮಾಡುತ್ತಾರೆ. ಅವರು ಅದನ್ನು ಕೃತಕವಾಗಿ ಹಣ್ಣು ( ಎಥಿಫೋನ್ ಉಪಚಾರ) ಮಾಡಿ ಅದರ ರಸ ತೆಗೆಯುತ್ತಾರೆ. ಈ ರಸವು 200 ಲೀ. ಬ್ಯಾರೆಲ್ ಗಳಲ್ಲಿ ಸಂಗ್ರಹಿಸಲ್ಪಟ್ಟು ಮಾರಾಟವಾಗುತ್ತದೆ. ಮಾವಿನ ಹಣ್ಣಿನ ಪಾನೀಯ ತಯಾರಿಸುವ ಆಸಕ್ತರಿಗೆ ಇಂಥ ರಸ ಹೇರಳವಾಗಿ ಮಾರುಕಟ್ಟೆಯಲ್ಲಿ ಲಭ್ಯ.
 
 
 
 
ಕೃಷಿ ವೃತ್ತಿಯಲ್ಲಿ ಇನ್ನು ಮುಂದುವರಿಯಬೇಕಾದರೆ, ನಾವು ಈಗ ಅನುಸರಿಸುತ್ತಿರುವ ಸಾಂಪ್ರದಾಯಿಕ ಬೇಸಾಯ ಕ್ರಮವನ್ನು ಬದಲಾವಣೆ ಮಾಡಲೇ ಬೇಕಾಗುತ್ತದೆ. ಮರಏರಿ ಮಾವು, ಪೇರಳೆ, ಗೇರು, ತೆಂಗಿನಕಾಯಿ, ಅಡಿಕೆ ಕೊಯ್ಯುವ ನೈಪುಣ್ಯದ ಕೆಲಸಗಾರರಿಲ್ಲದೆ ಮರದಲ್ಲಿ ಮಾವಿದ್ದರೂ ಕೊಯ್ಯುವವರಿಲ್ಲದೆ ಹಾಳಾಗುವ ಸ್ಥಿತಿ ಬಂದರೂ ಅಚ್ಚರಿ ಇಲ್ಲ. ಮಾವಿನ ಮರದಿಂದ ಕೈಯಲ್ಲೇ ಮಾವು ಕೀಳಬೇಕು. ತೆಂಗಿನ ಮರದಿಂದ ಕಾಯಿಯನ್ನೂ ಕೈಯಲ್ಲೇ ಕೀಳಬೇಕು. ಈ ಪರಿಸ್ಥಿತಿ ಬರುವ ದಿನ ದೂರವಿಲ್ಲ. ಕೃಷಿಕ್ಷೇತ್ರದ ಸ್ಥಿತಿ ವರ್ಷದಿಂದ ವರ್ಷಕ್ಕೆ ಬಿಗಡಾಯಿಸುತ್ತಲೇ ಇದೆ. ಭೂಮಿ, ಕೆಲಸಗಾರ, ಬಂಡವಾಳ, ನಿರ್ವಹಣೆ ಮತ್ತು ಆಧುನಿಕ ತಂತ್ರಜ್ಞಾನಗಳೆಂಬ ಪಂಚಾಂಗದ ಮೇಲೆ ನಿಂತಿರುವ ಕೃಷಿ ವೃತ್ತಿಗೆ ಈಗ ಕೆಲಸಗಾರರ ವರ್ಗ ಕೈ ಕೊಟ್ಟಿದೆ. ಭೂಮಿ ಮತ್ತು ಇನ್ನಿತರ ನೈಸರ್ಗಿಕ ಸಂಪನ್ಮೂಲ ಸಹ ಕೊರತೆಯಾಗುತ್ತಿದೆ. ಬಂಡವಾಳಕ್ಕೆ ಕೊರತೆ ಇಲ್ಲ. ನಿರ್ವಹಣೆ ಮತ್ತು ಸೂಕ್ತ ತಂತ್ರಜ್ಞಾನದ ನೆಲೆಗಟ್ಟಿನಲ್ಲಿ ಕೃಷಿಯನ್ನು ಉಳಿಸುವ ಕೆಲಸ ತುರ್ತಾಗಿ ಆಗಬೇಕಿದೆ. ಜೈನ್ ಸಂಸ್ಥೆಯು ಈ ಬಗ್ಗೆ ಗಹನವಾಗಿ ಚಿಂತನೆ ನಡೆಸುತ್ತಿದೆ. ಬಹುಷಃ ಮುಂದಿನ ದಿನಗಳಲ್ಲಿ ಕೃಷಿ, ಖಾಸಗಿ ಕಂಪೆನಿಗಳ ಕೊಡು ಕೊಳ್ಳುವ ಕರಾರಿನ ಮೇಲೆ ನಡೆದರೂ ಅಚ್ಚರಿ ಇಲ್ಲ.
 
ಚಿತ್ತೂರು ಜಿಲ್ಲೆ ವಾವಿಲಿಚೇನುವಿನ ನರಸಿಂಹಾ ರೆಡ್ಡಿ ಇವರು 4 ಎಕ್ರೆಯಲ್ಲಿ ಅಧಿಕ ಸಾಂದ್ರ ಮಾವಿನ ಬೆಳೆ ಬೆಳೆಸಿದ್ದಾರೆ. ಇವರ ಮಾವಿನ ಸಸಿಗಳಿಗೆ ಈಗ ಮೂರು ವರ್ಷ ತುಂಬಿದ್ದು ಈ ವರ್ಷ ಫಸಲು ಬಿಟ್ಟಿದೆ. ಇವರ ಅಭಿಪ್ರಾಯದಂತೆ ಈ ತಾಂತ್ರಿಕತೆಯಲ್ಲಿ ನಾವು 7-8 ವರ್ಷದಲ್ಲಿ ಪಡೆಯುವ ಇಳುವರಿ 3 ನೇ ವರ್ಷಕ್ಕೆ ದೊರೆತಿದೆ. ಇವರು ಸಮರ್ಪಕ ನೀರಾವರಿ, ಗೊಬ್ಬರ ಕೊಟ್ಟು ಸರಾಸರಿ 400 ಗ್ರಾಂ ತೂಕದ ಮಾವಿನ ಕಾಯಿ ಪಡೆಯುತ್ತಾರೆ. ಇವರ ಪ್ರಕಾರ ಸಾಂಪ್ರದಾಯಿಕ ಕ್ರಮದಲ್ಲಿ ಎಕ್ರೆಗೆ ಸರಾಸರಿ 2 ಟನ್ ಇಳುವರಿಯಂತೆ. ಅದೂ ಅನಿಶ್ಚಿತ. ಆದರೆ ಇದರಲ್ಲಿ ನಿಶ್ಚಿತವಾಗಿ ಇಳುವರಿ ಪಡೆಯಬಹುದೆನ್ನುತ್ತಾರೆ. ಸಾಮಾನ್ಯವಾಗಿ 10% ಅಲ್ಫೋನ್ಸೋ ಅಥವಾ ಇನ್ಯಾವುದಾದರೂ ತಳಿಯನ್ನು ಬೆಳೆಸುತ್ತಾರೆ. ಉಳಿದುದೆಲ್ಲಾ ತೋತಾಪುರಿ. ಚಿತ್ತೂರಿಗೆ ತೋತಾಪುರಿಯೇ ಸೈ ಎನ್ನುತ್ತಾರೆ.
ಇನ್ನೋರ್ವ ಕೃಷಿಕ ಹೇಮಚಂದ್ರಾ ರೆಡ್ಡಿಯವರು ಸುಮಾರು 6 ಎಕ್ರೆಯಲ್ಲಿ ಹನಿ ನೀರಾವರಿ ಮಾಡಿ ಮಾವು ಬೆಳೆಸಿದ್ದಾರೆ. 3 ನೇ ವರ್ಷಕ್ಕೆ 1/2 ಪಾಲು ಸಸಿ ಹೂ ಬಿಟ್ಟು ಕಾಯಿ ಕೊಟ್ಟಿದೆ. ಸರಾಸರಿ ಎಕ್ರೆಗೆ 2 ಟನ್ ಇಳುವರಿ ಬರಬಹುದು ಎನ್ನುತ್ತಾರೆ. ನೀರಾವರಿ , ಗೊಬ್ಬರ, ಮತ್ತು ಪ್ರೂನಿಂಗ್ ಮಾಡಿ ಕಷ್ಟವಿಲ್ಲದೆ ಮಾವಿನ ಬೆಳೆ ಪಡೆಯಲು ಸಾಧ್ಯ ಎನ್ನುತ್ತಾರೆ.
ಇಲ್ಲಿನ ಹೆಚ್ಚಿನ ರೈತರು ಕೊಯಂಬತ್ತೂರಿನ ಉದುಮಲ್ ಪೇಟ್ ಗೆ ಹೋಗಿ ನೋಡಿ ಅದರಿಂದ ಪ್ರೇರಿತರಾಗಿ ಈ ವಿಧಾನದ ಕೃಷಿಗೆ ಮುಂದಾಗಿದ್ದಾರೆ.
 
 
ರಾಧಾಕೃಷ್ಣ ಹೊಳ್ಳ
[email protected]

LEAVE A REPLY

Please enter your comment!
Please enter your name here