ಅರೆಕಾಲಿಕ ಪತ್ರಕರ್ತರ ನೋವು ಅರ್ಥವೇ ಆಗೋದಿಲ್ವೇ?

1
931

ಹರೀಶ್‌ ಕೆ.ಆದೂರು

ಹೌದು… ಶಿಕ್ಷಣ ಸಂಸ್ಥೆಯಲ್ಲಿ ʻಗೌರವ ಶಿಕ್ಷಕʼರಿದ್ದಂತೆ ಮಾಧ್ಯಮ ಅದರಲ್ಲೂ ಮುದ್ರಣ ಮಾಧ್ಯಮ ವಲಯದಲ್ಲಿ ʻಅರೆಕಾಲಿಕʼ (ಸ್ಟ್ರಿಂಜರ್ಸ್)‌ ವರದಿಗಾರರು ರಾಜ್ಯದಾದ್ಯಂತ ಕಾರ್ಯ ನಿರ್ವಹಿಸುತ್ತಿದ್ದಾರೆ. ನಾನಿಲ್ಲಿ ಉಲ್ಲೇಖಿಸುತ್ತಿರುವುದು ಕರ್ನಾಟಕದ ಕನ್ನಡ ದೈನಿಕ ಹಾಗೂ ವಾರ ಪತ್ರಿಕೆಗಳ ಪ್ರತಿನಿಧಿಗಳ ವಿಚಾರ. ಹಗಲಿರುಳೆನ್ನದೆ, ಯಾವ ತುರ್ತು ಸಂದರ್ಭಗಳಲ್ಲೂ ರಾಜಿಮಾಡಿಕೊಳ್ಳದೆ ಬೆವರು ಸುರಿಸಿ ʻತನ್ನ ಪತ್ರಿಕೆಯಲ್ಲಿ ಇದು ಬರಬೇಕುʼ ಎಂದು ಪ್ರಾಮಾಣಿಕವಾಗಿ ದುಡಿಯುವ ಮಂದಿ ಈ ಅರೆಕಾಲಿಕ ಪತ್ರಕರ್ತರು. ಅವರ ಪ್ರಸ್ತುತ ಸ್ಥಿತಿ ಹೇಗಿದೆ ಗೊತ್ತೇ? ಇಂತಹ ಅರೆಕಾಲಿಕ ಪತ್ರಕರ್ತರು ಅದೆಷ್ಟು ನೋವು, ಹಿಂಸೆ ಅನುಭವಿಸುತ್ತಿದ್ದಾರೆ ಗೊತ್ತೇ? ಸಮಾಜದಲ್ಲಿ ʻಪತ್ರಕರ್ತʼ ಎಂಬ ದೊಡ್ಡ ಹೆಗ್ಗಳಿಕೆ ಅವರಿಗೆ ಲಭಿಸುತ್ತಿದೆಯಾದರೂ, ಜೀವನಾಧಾರಕ್ಕೆ ಬಹುತೇಕ ಮಂದಿ ಇದೇ ʻಮಾಧ್ಯಮʼ ಕ್ಷೇತ್ರವನ್ನೇ ಅವಲಂಬಿಸಿರುತ್ತಾರೆ. ಕೊಟ್ಟ ಸುದ್ದಿಗೆ ಸಿಗುವ ಕಿಂಚಿತ್ತು ಹಣ, ಅದರೊಂದಿಗೆ ಪ್ರಕಟವಾದ ಛಾಯಚಿತ್ರಕ್ಕೆ ಕೊಂಚ ದುಡ್ಡು, ಜಾಹೀರಾತು ಸಿಕ್ಕರೆ ಅದರಲ್ಲಿ ಒಂದಷ್ಟು ಪರ್ಸಂಟೇಜು ಇವಿಷ್ಟೇ ಇವರಿಗೆ ಸಿಗುವ ಸಂಭಾವನೆ!. ಯಾವುದೇ ಪಿ.ಎಫ್‌ ಆಗಲೀ, ಇ.ಎಸ್.ಐ ಭದ್ರತೆಯಾಗಲೀ  ಇವರಿಗಿಲ್ಲ. ಹೆಚ್ಚೇನು ತಿಂಗಳಿಗೆ ʻಇಂತಿಷ್ಟೇʼ ಎಂಬ ನಿಗಧಿತ ವೇತನವೂ ಅನೇಕ ಪತ್ರಿಕೆಗಳಲ್ಲಿಲ್ಲ.ನಾಲ್ಕಂಕಿ ದಾಟದ ಸಂಭಾವನೆಯ ಮೊತ್ತ ಎಂದರೆ ತಪ್ಪಲ್ಲ. ಕೆಲವೊಂದು ಪತ್ರಿಕೆ ಅರೆಕಾಲಿಕ ಪತ್ರಕರ್ತರಿಗೆ ನಿಗಧಿತ ಸಂಭಾವನೆಯನ್ನು ನೀಡುತ್ತಿವೆ. ಆದರೆ ಇತರ ಭದ್ರತೆಗಳನ್ನು ನೀಡುತ್ತಿಲ್ಲ ಎಂಬುದನ್ನು ಅಷ್ಟೇ ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕಾಗುತ್ತದೆ.

ಗ್ರಾಮೀಣ ಭಾಗಗಳಲ್ಲಿ, ತಾಲೂಕು ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಇಂತಹ ಅರೆಕಾಲಿಕ ಪತ್ರಕರ್ತರಿಗೆ ಯಾವುದೇ ಭದ್ರತೆಗಳಿಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಎಷ್ಟೋ ಪತ್ರಿಕೆಗಳು ಇವರು ತಮ್ಮ ಪ್ರತಿನಿಧಿ ಎಂದು ಹೇಳಿಕೊಳ್ಳುವ ʻಗುರುತು ಚೀಟಿʼಯನ್ನು ನೀಡಲೂ ಹಿಂದೂ ಮುಂದೂ ನೋಡುತ್ತಾರೆ. ನೇಮಕ ಪತ್ರವೂ ಸರಿಯಾಗಿ ನೀಡುತ್ತಿಲ್ಲ. ತಾಲೂಕು, ಜಿಲ್ಲಾ ಮಟ್ಟದ ಪತ್ರಕರ್ತರ ಸಂಘಟನೆಯ ಸದಸ್ಯರಾಗಿ ಅವರಿಂದ ಪಡೆದ ಗುರುತು ಚೀಟಿಯೇ ಇಂತಹ ಅರೆಕಾಲಿಕ ಪತ್ರಕರ್ತರಿಗೆ ʻಆಧಾರʼ ಎಂಬಂತಹ ಸ್ತಿತಿಯಿದೆ. ಸರಕಾರ ನೀಡುವ ಯಾವೊಂದು ಸವಲತ್ತುಗಳು ಅರೆಕಾಲಿಕ ಪತ್ರಕರ್ತರಿಗೆ ಲಭಿಸುತ್ತಿಲ್ಲ.

ಪತ್ರಿಕೆಯೊಂದು ಹೊರಬರಬೇಕಾದರೆ ಅದರಲ್ಲಿ ಅರೆಕಾಲಿಕ ಪತ್ರಕರ್ತರ ಪಾಲು ಪ್ರಾಮುಖ್ಯವಾಗಿದೆ. ಇದು ಒಪ್ಪಿಕೊಳ್ಳಬೇಕಾದ ಸತ್ಯ. ಪತ್ರಿಕೆಯ ʻಸ್ಟಾಫ್‌ʼ ಜರ್ನಲಿಸ್ಟ್‌ ಗಳಿಗೆ ಸರಿ ಸಮಾನವಾಗಿ , ಕೆಲವು ಸಂದರ್ಭಗಳಲ್ಲಿ ಅವರನ್ನೇ ಮೀರಿಸುವ ರೀತಿಯಲ್ಲಿ ಈ ಪತ್ರಕರ್ತರು ಕಾರ್ಯ ನಿರ್ವಹಿಸುತ್ತಾರೆ. ಇದಕ್ಕೆ ಇಡೀ ರಾಜ್ಯವನ್ನವಲೋಕಿಸಿದರೆ ಸಾಕಷ್ಟು ಉದಾಹರಣೆಗಳು ಲಭ್ಯವಾಗುತ್ತವೆ. ಆದರೆ ಯಾವೊಂದು ಪತ್ರಿಕೆಯ ಮಾಲೀಕರಾಗಲೀ, ಸರಕಾರವಾಗಲಿ ಇವರ ನೋವಿಗೆ ಸ್ಪಂದಿಸುತ್ತಿಲ್ಲ ಎಂಬುದು ಅಚ್ಚರಿಯ ಸಂಗತಿ!

Advertisement

ಕೊರೊನಾ ಮಹಾಮಾರಿ ಇಡೀ ವಿಶ್ವವನ್ನೇ ವ್ಯಾಪಿಸಿ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸುತ್ತಿದೆ. ಪ್ರತಿಯೊಂದು ಕ್ಷೇತ್ರವೂ ಆರ್ಥಿಕ ಮುಗ್ಗಟ್ಟಿಗೊಳಗಾಗಿವೆ. ಮಾಧ್ಯಮ ಇದಕ್ಕೆ ಹೊರತಾಗಿಲ್ಲ.

ಭಾರತೀಯ ಪತ್ರಿಕೋದ್ಯಮದಲ್ಲಿ ಜಾಹೀರಾತುಗಳ ಮೇಲೆ ಅತಿಯಾದ ಅವಲಂಬನೆಯಿದೆ ಎಂಬುದು ಸಂಶೋಧನೆಗಳು ತಿಳಿಸಿವೆ. ಸರಿ ಸುಮಾರು ೨೫ವರುಷಗಳ ಹಿಂದೆ ಜಾಹೀರಾತು ಮತ್ತು ಪ್ರಸರಣದ ಪ್ರಮಾಣ ೫೦:೫೦ಪ್ರಮಾಣದಲ್ಲಿತ್ತು. ಆದರೆ ಕಾಲ ಬದಲಾಗಿದೆ. ಇಂದು ಜಾಹೀರಾತುಗಳ ಮೇಲಿನ ಅವಲಂಬನೆಯೇ ಹೆಚ್ಚಾಗಿದೆ. ಇದರಿಂದಾಗಿ ಮಾರುಕಟ್ಟೆ ಬಿಗಡಾಯಿಸಿದ್ದು ಸುಳ್ಳಲ್ಲ. ಒಟ್ಟಾರೆ ನೋಡುವುದಾದರೆ ಪತ್ರಿಕೋದ್ಯಮದ ಬೆಳವಣಿಗೆಗೆ ಇದು ಮಾರಕವಾಗಿದೆ. ಇಂದಿನ ವಾಸ್ತವ ಸ್ಥಿತಿಯನ್ನವಲೋಕಿಸಿದರೆ ಜಾಹೀರಾತುಗಳಿಗಾಗಿ ಪತ್ರಿಕೆಗಳು ಪರದಾಡುವ ವಾಸ್ತವ ಸ್ಥಿತಿ ಬಂದೊದಗಿದೆ. ಸ್ಥಳೀಯ ಮಟ್ಟದ ಜಾಹೀರಾತುಗಳು ಇಂದು ಲಭಿಸದಂತಾಗಿದೆ. ಸಭೆ, ಸಮಾರಂಭಗಳಾಗಲೀ, ಇತರೆ ಸಾರ್ವಜನಿಕ ಕಾರ್ಯಕ್ರಮಗಳಾಗಲೀ ಇಲ್ಲದಾಗಿದೆ. ಈ ಎಲ್ಲಾ ಕಾರಣಗಳು ಅರೆಕಾಲಿಕ ಪತ್ರಕರ್ತರ ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಕುಗ್ಗುವಂತೆ ಮಾಡಿದೆ. ಸಮಾಜದಲ್ಲಿ ವಿಶೇಷ ಗೌರವ ಸ್ಥಾನಮಾನಕ್ಕೆ ಅರ್ಹರಾಗಿರುವ ಈ ಪತ್ರಕರ್ತರು ತಮ್ಮ ಸ್ಥಾನಮಾನಗಳನ್ನು ಉಳಿಸಿಕೊಳ್ಳಲು ಹರ ಸಾಹಸ ಪಡುವಂತಾಗಿದೆ. ಮಾಧ್ಯಮ ಸಂಸ್ಥೆಗಳು ಅರೆಕಾಲಿಕ ಪತ್ರಕರ್ತರ ನೋವನ್ನು ಅರ್ಥಮಾಡಿಕೊಳ್ಳಬೇಕು. ಇಂತಹ ವಿಶೇಷ ಸಂದರ್ಭಗಳಲ್ಲಿ ಅವರಿಗೆ ಆರ್ಥಿಕ ಭದ್ರತೆ ಒದಗಿಸುವ ಕಾರ್ಯ ಮಾಡಬೇಕಾಗಿದೆ.

ಪ್ರಜಾಪ್ರಭುತ್ವದಲ್ಲಿ ಪತ್ರಿಕೆಗಳು-ಪತ್ರಕರ್ತರನ್ನು ನಾಲ್ಕನೆಯ ಅಂಗವಾಗಿ ಕರೆಯಲಾಗಿದೆ. ಶಾಸಕಾಂಗ, ಕಾರ್ಯಾಂಗ,ನ್ಯಾಯಾಂಗಗಳು ಉಳಿದ ಮೂರು ಅಂಗಗಳು. ಪ್ರಜಾಪ್ರಭುತ್ವಕ್ಕೆ ಈ ನಾಲ್ಕು ಅಂಗಗಳು ಆಧಾರ ಸ್ತಂಭಗಳಿದ್ದಂತೆ. ಪ್ರಜಾಪ್ರಭುತ್ವದ ಸೌಧ ಈ ನಾಲ್ಕು ಆಧಾರಸ್ತಂಭಗಳ ಮೇಲೆ ನಿಂತಿದೆ. ಇಂತಹ ಗೌರವಯುತ ಸ್ಥಾನದಲ್ಲಿರುವ ಮಂದಿಯ ನೋವಿಗೆ ಸ್ಪಂದಿಸುವವರು ಯಾರು? ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು? ಎಂಬಂತಹ ಸ್ಥಿತಿ ಬಂದೊದಗಿದೆ.

1 COMMENT

  1. ತಮ್ಮ ಉದ್ಯಮದ, ಉದ್ಯಮದ ಇತರ ಯಾರೂ ಹೇಳದ ಆದರೆ ಹೇಳಲೇಬೇಕಾಗಿರುವ ಒಂದು ಜ್ವಲಂತ ಹಾಗೂ ದಾರುಣ ಸಮಸ್ಯೆಯನ್ನು ಸಾಂದರ್ಭಿಕವಾಗಿ ಸವಿವರವಾಗಿ ತಿಳಿಸಿದ್ದೀರಿ. ಈ ಲೇಖನದ ಮೂಲಕ ಪ್ರಜಾಪ್ರಭುತ್ವದ ನಾಲ್ಕನೇಯ ಕಂಬ ಎಷ್ಟು ಅಧುರ ಅನ್ನುವ ಸತ್ಯ ಉಳಿದ ಮೂರೂ ಕಂಬಗಳಿಗೆ ಗೊತ್ತಾದೀತೆಂದು ಆಶಿಸುತ್ತೇನೆ.

LEAVE A REPLY

Please enter your comment!
Please enter your name here