ಪ್ರಮುಖ ಸುದ್ದಿವಾರ್ತೆವಿಶೇಷ ಪುಟ

ಅಪಾಯದ ಅಂಚಿನಲ್ಲಿ ವಿಶ್ವವಿಖ್ಯಾತ ಸಾವಿರಕಂಬದ ಬಸದಿ

ಸೂಕ್ತ ರಕ್ಷಣೆಗೆ ಕಾದಿದೆ ತ್ರಿಭುವನತಿಲಕ ಚೂಡಾಮಣಿ ಬಸದಿ
ವಾರ್ತೆ ಎಕ್ಸ್ಕ್ಲೂಸಿವ್ : ಹರೀಶ್ ಕೆ.ಆದೂರು.
ಅಪರೂಪದ ಕಲಾ ಮತ್ತು ವಾಸ್ತು ವೈಭವದ, ಮೂರು ಹಂತಗಳನ್ನು ಹೊಂದಿದ, ಏಳು ಮಂಟಪಗಳನ್ನೊಳಗೊಂಡ ವಿಶ್ವವಿಖ್ಯಾತ `ಸಾವಿರ ಕಂಬದ ಬಸದಿ’ಗೆ ಅಪಾಯ ಬಂದೊದಗಿದೆ. ಮೂಡಬಿದಿರೆಯ ಜೈನಪೇಟೆಯಲ್ಲಿರುವ ಈ ಬಸದಿಗೆ ಆಧುನಿಕತೆಯೇ ಮುಳುವಾಗತೊಡಗಿದೆ. ಬಸದಿಯ ಮುಂಭಾಗದಲ್ಲಿರುವ ಹೆದ್ದಾರಿಯಲ್ಲಿ ಸಾಗುವ ಘನ ವಾಹನಗಳ ಸಂಚಾರದಿಂದ ಭೂಮಿಯಲ್ಲುಂಟಾಗುವ ಕಂಪನ ಬಸದಿಯ ಮೇಲೆ ತೀವ್ರ ಪರಿಣಾಮ ಬೀರತೊಡಗಿದೆ. ವಾಹನಗಳ ಕರ್ಕಶ ಧ್ವನಿಗಳು, ಪರಿಸರದಲ್ಲಿ ಸ್ಫೋಟಕಗಳ ನಿರಂತರ ಬಳಕೆ, ವಾಹನಗಳಿಂದ ಹೊರಬರುವ ಹೊಗೆ ಬಸದಿಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪರಿಣಾಮ ವಿಶ್ವ ಪ್ರಸಿದ್ಧಿಯ ಮೂಡಬಿದಿರೆಯ ಸಾವಿರ ಕಂಬದ ಬಸದಿಯ ಸೌಂದರ್ಯಕ್ಕೆ ಕುತ್ತು ತರುತ್ತಿದೆ. ಪರಂಪರೆಯ ಕೊಂಡಿಯಂತಿರುವ ಬಸದಿ `ಇತಿಹಾಸ’ಕ್ಕೆ ಸೇರುವ ಮೊದಲು ಎಚ್ಚೆತ್ತುಕೊಳ್ಳುವುದು ಉತ್ತಮ ಎಂಬುದು `ವಾರ್ತೆ.ಕಾಂ ‘ನ ಆಶಯ.
 
 
ಸಾವಿರ ಕಂಬದ ಬಸದಿ
ಈ ಬಸದಿಗೆ ಮೂರು ಹೆಸರು. ಸದಾ ಹೊಸದರಂತೆ ಕಾಣುತ್ತಿರುವುದರಿಂದ `ಹೊಸ ಬಸದಿ’ ಎಂದೂ ಸಾವಿರಾರು ಕಂಬಗಳಿಂದ ನಿರ್ಮಾಣಗೊಂಡುದುದರಿಂದ ಸಾವಿರ ಕಂಬದ ಬಸದಿ ಎಂದೂ ತ್ರಿಭುವನ ತಿಲಕದಂತೆ, ಚೂಡಾಮಣಿ ರತ್ನದಂತೆ ಮೆರೆಯುವುದರಿಂದ ತ್ರಿಭುವನ ತಿಲಕ ಚೂಡಾಮಣಿ ಬಸದಿ ಎಂದೂ ಚರಿತ್ರಕಾರರು ಹೆಸರಿಟ್ಟಿರುತ್ತಾರೆ.
 
 
 
15ನೇ ಶತಮಾನದಲ್ಲಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳ ಅಪ್ಪಣೆಯ ಮೇರೆಗೆ ವಿಜಯನಗರ ಅರಸ ಎರಡನೇಯ ದೇವರಾಯ ಗುರುಗಳ ಆದೇಶವನ್ನು ಶಿರಸಾ ವಹಿಸಿ ತನ್ನ ಮಂಗಳೂರಿನ(ನಾಗಮಂಗಲ) ಗವರ್ನರ್ರಾದ ದೇವಪ್ಪ ಒಡೆಯರು ಮಂಗಳೂರು ಸೀಮೆಯನ್ನು ಆಳುತ್ತಿದ್ದ ಕಾಲದಲ್ಲಿ ಸ್ಥಳವನ್ನು ನೀಡಿದರು. ಆ ಸ್ಥಳದಲ್ಲಿ ಪ್ರಸಿದ್ಧ ಶಿಲ್ಪಿಗಳ, ವಿನ್ಯಾಸಕಾರರನ್ನು ಗೊತ್ತುಪಡಿಸಿ ಬೃಹದಾಕಾರದ ಬಸದಿಯ ನಕಾಶೆಯನ್ನು ತಜ್ಞರಿಂದ ತಯಾರಿಸಿ ಜಿನಮಂದಿರದ ಯೋಜನೆಯನ್ನು ರೂಪಿಸಲಾಯಿತು.
 
ಬಸದಿಯ ಮುಂಭಾಗದಲ್ಲಿ ತಲೆಯೆತ್ತಿ ನಿಂತಿರುವ ಮಾನಸ್ತಂಭವನ್ನು ಭೈರರಸನ ಮಡದಿಯಾದ ನಾಗಲಾದೇವಿಯ 60 ಅಡಿ ಉತ್ತುಂಗವಾಗಿ ನಿರ್ಮಿಸಿದರು. ಭೈರಾದೇವಿ ಮಂಟಪ ಅದೊಂದು ಕಲೆಗಳ ಭಂಡಾರ, ಚಿತ್ತಾಕರ್ಷಕ ಬೊಕ್ಕಸ. ಮಂಟಪದ ಕೆಳಗಿನ ಪಂಚಾಂಗದ ಸುತ್ತಲೂ ಶಿಲೆಯಲ್ಲಿ ಜಿರಾಫೆ, ಚೀನಾದೇಶದ ಡ್ರಾಗನ್, ಅರಬೀ ದೇಶದ ಕುದುರೆಗಳು ಕೆತ್ತಲ್ಪಟ್ಟಿವೆ. ಭಾರತೀಯ ನೃತ್ಯ ಪ್ರಕಾರಕ್ಕೆ ಸಂಬಂಧಪಟ್ಟಂತೆ ಭರತನಾಟ್ಯ, ಮೊದಲಾದ ವಿವಿಧ ಭಂಗಿಗಳ ಉಬ್ಬು ಶಿಲ್ಪಗಳನ್ನು, ಬಹಮನಿ ಸುಲ್ತಾನರ ಹಾಗೂ ವಿಜಯನಗರ ಸೈನಿಕರ ಯುದ್ಧ ದೃಶ್ಯ, ನಾನಾ ರೀತಿಯ ಪಶುಪಕ್ಷಿ ಅದರಲ್ಲೂ ಶಾದರ್ೂಲ, ಗಂಡಭೇರುಂಡ, ಸಮರಕಲೆ, ಬೇಟೆಯಾಡುವಿಕೆ, ಕುಟ್ಟುವಿಕೆ, ಬೀಸುವಿಕೆ, ಒಂಟೆಯ ಉಳುಮೆ, ಹಾವಾಡಿಗ, ಬಹುರೂಪಿ ಕುಣಿತ, ನಾನಾ ಪ್ರಕಾರದ ಧರ್ಮವಾದ್ಯ, ತಂತಿವಾದ್ಯಗಳ, ನಗಾರಿಯನ್ನು ಬಾರಿಸುವುದು, ಪುಂಗಿಯನ್ನು ಊದುವುದು, ತಮಟೆ-ಗಂಟೆಗಳ ಚಿತ್ರಗಳನ್ನು ಕುಶಲ ಶಿಲ್ಪಗಳು ಆಕರ್ಷಕವಾಗಿ ಕೆತ್ತಿರುವರು. ಕೃಷಿಗೆ ಸಂಬಂಧಪಟ್ಟಂತೆ ಒಂಟೆಯ ಉಳುಮೆ, ರಾಜಸ್ಥಾನದ ವ್ಯವಸಾಯ ಜೀವನವನ್ನು ನೆನಪಿಸಿದರೆ ಇನ್ನೊಂದು ಕೆಲವು ಮಹಿಳೆಯರು ಮೊಸರು ಕಡೆಯುವ ಗುಜರಾತಿನ ದೃಶ್ಯ ಜನಜೀವನದ ಮೇಲೆ ಬೆಳಕು ಚೆಲ್ಲಿದೆ.
 
 
ಇಷ್ಟೆಲ್ಲಾ ಕಲಾ ಕೌತುಕಗಳ ಆಗರವಾಗಿರುವ ಬಸದಿಯೊಳಗೆ ಇಂದು ಬಾವಲಿ, ಪಾರೀವಾಳ, ಗೂಬೆಗಳು ತಮ್ಮ ಸಾಮ್ರಾಜ್ಯ ಸ್ಥಾಪಿಸಿವೆ. ಬಸದಿಯ ಪರಿಸರದಲ್ಲಿದ್ದ ಬೃಹದಾಕಾರದ ಮರಗಳು ಕೊಡಲಿಯೇಟಿಗೆ ಬಲಿಯಾದ ಹಿನ್ನಲೆಯಲ್ಲಿ ಈ ಪಕ್ಷಿಗಳಿಗೆ ನೆಲೆಯಿಲ್ಲದಾಗಿದೆ. ಇದೀಗ ಬಸದಿಯೇ ಇವುಗಳಿಗೆ ಆಶ್ರಯನೀಡುತ್ತಿವೆ. ಪಕ್ಷಿಗಳ ಹಿಕ್ಕೆಗಳು ಬಸದಿಯ ಸೌಂದರ್ಯವನ್ನು ಹಾಳುಗೆಡವುತ್ತಿವೆ. ಹಿಂದೆ ಬಸದಿಯದ್ದಾಗಿದ್ದ ಭೂಮಿಯು ಇಂದು ಕಬಳಿಕೆಯಾಗಿದೆ. ಬಸದಿಯ ಆವರಣದಲ್ಲಿದ್ದ ಒಳಚರಂಡಿಗಳು ಮುಚ್ಚಿ ನೀರು ಹರಿಯುವಿಕೆಗೂ ತೊಂದರೆಯಾಗಿದೆ. ಪಶ್ಚಿಮಭಾಗದ ಕಲಾತ್ಮಕ ಆವರಣಗೋಡೆ ಕುಸಿಯುವ ಭೀತಿಯಲ್ಲಿದೆ. ಬೃಹತ್ ಮಾನಸ್ಥಂಭ, ಎತ್ತರದ ಬಸದಿಯಲ್ಲಿ ಒಂದೇ ಒಂದು ಮಿಂಚು ಬಂಧಕವೂ ಅಳವಡಿಸಿಲ್ಲ. ಈ ಹಿಂದೆ ಮಹಾಧ್ವಾರ, ಕಂಬಗಳಿಗೆ ಸಿಡಿಲಾಘಾತದಿಂದ ತೊಂದರೆಯುಂಟಾಗಿದ್ದನ್ನು ಸ್ಮರಿಸಬಹುದು.
 
 
 
ಕಲೆಯ ಬಸದಿಯ ಮೂಲನಾಯಕ ಭಗವಾನ್ ಚಂದ್ರನಾಥ ಸ್ವಾಮಿಯ ಪಂಚಲೋಹದ 9 ಅಡಿಎತ್ತರದ ಪ್ರತಿಮೆ ಅಪ್ರತಿಮೆವಾಗಿ ಜಗಜಗಿಸುತ್ತದೆ. ಯೋಗ-ಧ್ಯಾನಕ್ಕೆ ಸಂಬಂಧಪಟ್ಟ ಚಿತ್ರಗಳು ಇದ್ದು, ಮಲ್ಲಕಂಭ, ಕುಸ್ತಿ ಕಾಳಗ ಮೊದಲಾದ ದೇಶೀ ಮಾದರಿಯ ಸಮರ ಕಲೆಗಳ ಅಪರೂಪದ ಚಿತ್ರಗಳು ಜನಸಾಮಾನ್ಯರ ಆ ಕಾಲದ ಸಾಂಸಾರಿಕ-ಸಾಮಾಜಿಕ-ಸಾಂಸ್ಕೃತಿಕ ಬದುಕಿನ ಮೇಲೆ ಬೆಳಕು ಚೆಲ್ಲಿ ಪುರುಷಾರ್ಥವನ್ನು ಸಾಧಿಸಹೊರಟ ಮಾನವ ಒಂದಲ್ಲ ಒಂದು ದಿನ ಇದನ್ನೆಲ್ಲ ಮೀರಿ ನಿಂತು ಧರ್ಮಧ್ಯಾನನಿರತನಾಗಿ ಕ್ರಮದಿಂದ ಅರಿಗಳನ್ನು ಅರ್ಥಾತ್ ಕಾಮಕ್ರೋಧಾದಿ ಅರಿಷಡ್ವರ್ಗಗಳನ್ನು ಜೈಸಿ ಅರಿಹಂತ ಸಿದ್ಧರ ಶರಣು ಹೋಗಿ ಸ್ವತಃ ಭಗವಂತರಾಗುವ ಅರ್ಹತೆ ಎಲ್ಲಾ ಆತ್ಮರಲ್ಲೂ ಇದೆ ಎನ್ನುವುದನ್ನು ನೆನಪಿಸುವಂತೆ ಸ್ತಂಭಗಳಲ್ಲಿ ಚಿಕ್ಕಚಿಕ್ಕ ಮಾನಸ್ತಂಭ, ಅದರ ಮೇಲ್ಗಡೆ ತೀರ್ಥಂಕರ ಬಿಂಬ, ಭೈರಾದೇವಿ ಮಂಟಪದ ಮೇಲ್ಛಾವಣಿಯ ಮೇಲೆ ಅಷ್ಟಪಟ್ಟಿ ಸಹಿತ ಸುಂದರ ಶಿಲ್ಪದಲ್ಲಿ ತ್ರಿಕಾಲ ತೀರ್ಥಂಕರರ 72 ಬಿಂಬಗಳನ್ನು ಸುಂದರವಾಗಿ ಕೆತ್ತಿದ್ದಾರೆ.
 
 
ಹಾಸುಗಲ್ಲಿನಲ್ಲಿ ಕೆತ್ತಿರುವ ಚಿತ್ರಿಕೆಗಳು ಆಕರ್ಷಕವಾಗಿದ್ದು, ಒಂದರಂತೆ ಇನ್ನೊಂದಿಲ್ಲ. ಗುರುತ್ವಾಕರ್ಷಣದ ಬಲದಿಂದಲೇ ನಿಂತ ನೈರುತ್ಯ ದಿಕ್ಕಿನ ಕಂಬವನ್ನು ಆಧುನಿಕ ಶಿಲ್ಪಗಳಿಗೆ ಸವಾಲನ್ನೊಡ್ಡುವಂತೆ ನಿಲ್ಲಿಸಿದ್ದಾರೆ. ಗಜಮುಖವು ಪಾಶ್ರ್ವದಲ್ಲಿ ಕುದುರೆಯ ಮುಖದಂತೆ ಕಂಡರೆ ಸುಂದರ ಕಲಾಕೃತಿಗಳಿಂದೊಡಗೂಡಿದ ಸ್ತಂಭಗಳೂ ಬೆಡಗಿನ ಷೋಡಶಿಯರಂತೆ ಕಂಗೊಳಿಸುತ್ತದೆ. ದಕ್ಷಿಣ ಭಾರತದಲ್ಲೇ ಇದನ್ನು ಹೋಲುವ ಇನ್ನೊಂದು ದೇವಾಲಯ ದುರ್ಲಭ. ಆದುದರಿಂದಲೇ ಏನೋ’ತ್ರಿಭುವನ ತಿಲಕ ಚೂಡಾಮಣಿ’ ಎಂಬ ಹೆಸರೇ ಅದರ ಭವ್ಯತ್ವವನ್ನೂ ದಿವ್ಯತ್ವವನ್ನೂ ಎತ್ತಿಹಿಡಿದಂತಿದೆ. ಐದಾರು ಶತಮಾನಗಳಷ್ಟು ಹಿಂದಿನ ಭವ್ಯ ಪರಂಪರೆಯನ್ನು ಈ ದೇಗುಲ ಕನ್ನಡಿ ಹಿಡಿದಂತೆ ರೂಪುಗೊಂಡಿದೆ. ಮುಂದಿನ ಪೀಳಿಗೆಗೆ ಇದರ ಉಳಿವು ಇರಬೇಕಾದರ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕು.
 
 
 
ಪುರಾತತ್ವ ಇಲಾಖೆಯಿಂದ ಎಚ್ಚರಿಕೆ
2011ರಲ್ಲೇ ಪುರಾತತ್ವ ಇಲಾಖೆ ಸರ್ವೇಕ್ಷಣೆ ನಡೆಸಿ ಈ ಭಾಗದಲ್ಲಿ ಘನ ವಾಹನ ಸಂಚಾರ ಹೆಚ್ಚಾಗುತ್ತಿದ್ದು ಬಸದಿಯ ಕಂಬಗಳಿಗೆ, ಮೇಲ್ಛಾವಣಿಗೆ ತೊಂದರೆಯಾಗುತ್ತಿದೆ ಎಂಬ ಎಚ್ಚರಿಕೆಯ ಸೂಚನೆ ನೀಡಿತ್ತು. ಬಸದಿಯ ನಾಲ್ಕೂ ಭಾಗಗಳಲ್ಲಿ ಸೂಕ್ತ ಒಳಚರಂಡಿ ಅಭಿವೃದ್ಧಿ ಆಗಲೇಬೇಕೆಂಬ ಸೂಚನೆ ನೀಡಿತ್ತು.
* ಬಸದಿಯ ಸುತ್ತುಮುತ್ತಲು ಹೊಗೆಯುಗುಳುವ ಘನ ವಾಹನ ಸಂಚಾರ ನಿಷೇಧವಾಗಬೇಕು
* ಮಿಂಚುಬಂಧಕ ಅಳವಡಿಕೆಯಾಗಲಿ.
* ಬಸದಿಯಾವರಣದಲ್ಲಿ ಫಲ ನೀಡುವ ವೃಕ್ಷ ಬೆಳೆಸಬೇಕು
* ಸರಿಯಾದ ಒಳಚರಂಡಿ ವ್ಯವಸ್ಥೆ
* ಕಸದ ತೊಟ್ಟಿ, ಸ್ವಚ್ಛತೆಯ ಬಗ್ಗೆ ಸೂಕ್ತ ವ್ಯವಸ್ಥೆ.
* ಸೂಚನಾ ಫಲಕ, ಸೋಲಾರ್ ಬೀದಿ ದೀಪ ವ್ಯವಸ್ಥೆಯಾಗಲಿ.
 
 
ಘನವಾಹನ ಸಂಚಾರ ನಿಷೇಧವಾಗಲಿ
ಬಸದಿಯ ಸಮೀಪ ಘನ ವಾಹನ ಸಂಚಾರವನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಬೈಪಾಸ್ ರಸ್ತೆಯ ಮೂಲಕ ಘನವಾಹನ ಸಂಚಾರ ಮಾಡುವಂತಾಗಬೇಕು. ಮಳೆಗಾಲದ ಮೊದಲು ಮಿಂಚುಬಂಧಕ ಅಳವಡಿಕೆಯಾಗಬೇಕು. ಹೀಗಾದಲ್ಲಿ ಈ ಬಸದಿಯ ಸೌಂದರ್ಯ ಉಳಿಯಬಹುದು.
– ಭಾರತಭೂಷಣ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯಮಹಾಸ್ವಾಮಿಗಳು
ಜೈನಮಠ, ಮೂಡಬಿದಿರೆ.
jain shree_moo
 
 
ಜೈನಪೇಟೆಯ ಆವರಣದಲ್ಲಿ ಅಗಲಕಿರಿದಾದ ರಸ್ತೆಯಿಂದಾಗಿ ವಾಹನ ದಟ್ಟಣೆ ಅಧಿಕ. ಘನವಾಹನ ಸಂಚಾರವೂ ಅಧಿಕವಾಗಿ ಭೂ ಅದುರುವಿಕೆ ಉಂಟಾಗುತ್ತಿದೆ. ಕಾಲಕ್ರಮೇಣ ಇದು ಬಸದಿಯ ಸೌಂದರ್ಯಕ್ಕೆ ಪೆಟ್ಟುಕೊಡುವುದರಲ್ಲಿ ಸಂದೇಹವಿಲ್ಲ. ಪರ್ಯಾಯ ವ್ಯವಸ್ಥೆಯ ಬಗ್ಗೆ ಚಿಂತಿಸಬೇಕಾಗಿದೆ.
– ಡಾ.ಎಲ್.ಸಿ.ಸೋನ್ಸ್
ತಜ್ಞರು.
soans_mood

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.

Comment here