ಅಪರೂಪದ ಕರಗ ಕಲಾವಿದ ವೆಂಕಟೇಶ್‌ ಬಂಗೇರ

0
6031
ಕಲೆಯಲ್ಲಿ ತನ್ಮಯರಾದ ವೆಂಕಟೇಶ್‌ ಬಂಗೇರ

 

ಹರೀಶ್‌ ಕೆ.ಆದೂರು

ಮೂಡುಬಿದಿರೆ: ಐತಿಹಾಸಿಕ ಪ್ರಸಿದ್ಧಿಯ ಮೂಡುಬಿದಿರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಕೀಲು ಕುದುರೆ , ಕರಗ ನೃತ್ಯ ತಂಡವನ್ನು ಸ್ಥಾಪಿಸಿ ಇಂದಿಗೂ ಮುನ್ನಡೆಸುತ್ತಿರುವ ವೆಂಕಟೇಶ್‌ ಬಂಗೇರ ಎಲೆಮರೆಯ ಕಾಯಿಯಂತಿರುವ ಅಪೂರ್ವ ಕಲಾವಿದ.  8ನೇ ವರ್ಷದಲ್ಲಿ ಸೈಕಲ್ ಬ್ಯಾಲೆನ್ಸ್‍ನಲ್ಲಿ ನೃತ್ಯ ಕಲಾವಿದನಾಗಿ  ಬದುಕು ಕಟ್ಟತೊಡಗಿದ ಇವರು ಸುದೀರ್ಘಾವಧಿಯ ಕಲಾವಿದರಾಗಿ ಇಂದಿಗೂ ಕಲೆಯನ್ನು ಬೆಳೆಸಿಕೊಂಡು ಬರುತ್ತಿದ್ದಾರೆ. 40 ವರ್ಷಗಳ ಹಿಂದೆ ಮೂಡುಬಿದಿರೆಯ ಮೊದಲ ಕೀಲು ಕುದುರೆ, ಕರಗನೃತ್ಯ ತಂಡ ʻಮಣಿಕಂಠ ಬಳಗʼವನ್ನು ಸ್ಥಾಪಿಸಿ ಇಂದಿಗೂ ತಮ್ಮ ವಿಭಿನ್ನ ನೃತ್ಯ ಪ್ರಕಾರದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಮೂಡುಬಿದಿರೆಯ ಬಿದಿರೆ ಆಟ್ಸ್ ಕೀಲುಕುದುರೆ ಸುಸಜ್ಜಿತ ತಂಡದ ಕೀಲುಕುದುರೆ, ಗೊಂಬೆ ಕುಣಿತ ತಂಡದ ಮುಖ್ಯಸ್ಥರಾಗಿದ್ದು, ತಮ್ಮ 60 ವರ್ಷ ಪ್ರಾಯದಲ್ಲೂ ಸ್ತ್ರೀವೇಷ ಧರಿಸಿ, ಕರಗದೊಂದಿಗೆ ಶಾಸ್ತ್ರೀಯ ಮಾದರಿಯಲ್ಲಿ ನೃತ್ಯ ಪ್ರದರ್ಶನ ನೀಡುತ್ತಿದ್ದಾರೆ.

ಕರಗದೊಂದಿಗೆ ಕಲಾವಿದ ವೆಂಕಟೇಶ್‌ ಬಂಗೇರ

ಕರ್ನಾಟಕದ ವಿವಿಧ ಜಿಲ್ಲೆಗಳು ಸೇರಿದಂತೆ ನೆರೆಯ ಕೇರಳ, ಮುಂಬೈಗಳಲ್ಲಿ ತಮ್ಮ ಪ್ರದರ್ಶನವನ್ನು ನೀಡಿದ್ದಾರೆ. ಬೆಂಗಳೂರು, ದಾರವಾಡ, ಹುಬ್ಬಳಿ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಹಾಸನ, ಹಾವೇರಿ, ಚಾಮರಾಜನಗರ, ಗದಗ, ಚಿಕ್ಕಮಗಳೂರು, ಮೈಸೂರು, ಉತ್ತರ ಕನ್ನಡ, ದಾವಣಗೆರೆ, ತುಮಕೂರು, ಕೊಡಗು, ಚಿತ್ರದುರ್ಗ, ವಿಜಯಪುರ, ಮಂಡ್ಯ ಜಿಲ್ಲೆಗಳ ವಿವಿಧ ಜಾತ್ರೆ, ಇನ್ನಿತರ ಸಮಾರಂಭಗಳಲ್ಲಿ 2 ಸಾವಿರಕ್ಕೂ ಅಧಿಕ ಪ್ರದರ್ಶನ ನೀಡಿದ್ದಾರೆ. ಮಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಯುವಜನೋತ್ಸವ, ಆಳ್ವಾಸ್ ನುಡಿಸಿರಿ, ಅಖಿಲ ಭಾರತ ವಿಶ್ವವಿದ್ಯಾಲಯಗಳ ಕ್ರೀಡಾಕೂಟ, ವಿವಿಧ ದೇವಳಗಳ ಬ್ರಹ್ಮಕಲಶೋತ್ಸವ ಸಹಿತ ಜಾತ್ರೆ ಇನ್ನಿತರ ಸಮಾರಂಭಗಳಲ್ಲಿ ಪ್ರದರ್ಶನ ನೀಡಿದ್ದಾರೆ.

ಕರಗನೃತ್ಯ, ಕೀಲುಕುದುರೆ, ಗೊಂಬೆ ಕುಣಿತ(ಹಾಸ್ಯ ಹಾಗೂ ಬೇತಾಳ ಗೊಂಬೆಗಳು) ವೆಂಕಟೇಶ್ ಬಂಗೇರ ಅವರ ಕಲಾತಂಡದಲ್ಲಿದ್ದು, ಪ್ರಸ್ತುತ 25 ಕಲಾವಿದರು ಇವರ ತಂಡದಲ್ಲಿದ್ದು ತಮ್ಮ ಕಲಾಜೀವನ ಮುಂದುವರಿಸುತ್ತಿದ್ದಾರೆ.

Advertisement

ವಿಭಿನ್ನ ಕರಗ:

        ವೆಂಕಟೇಶ್ ಅವರು ತಮ್ಮ ಪರಿಕಲ್ಪನೆಯಿಂದಲೇ ಕರಗವನ್ನು ತಯಾರಿಸಿ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಅಲ್ಯೂಮಿನಿಯಂ ಕೊಡವನ್ನು ಕಲಾತ್ಮಕವಾಗಿ ಅಲಂಕರಿಸಿ, ಅದರ ಮೇಲೆ ಹರಿವಾಣಗಳನ್ನು  ಜೋಡಿಸಿ ಆರುವರೆ ಫೀಟ್‍ನ ಕರಗವನ್ನು ಕಲಾತ್ಮಕವಾಗಿ ರೂಪಿಸಿರುವುದು ವಿಶೇಷ. ಪ್ರಸ್ತುತ ಇವರು ತಲೆ ಮೇಲೆ ಇರಿಸಿ ನೃತ್ಯ ಮಾಡುವ ಕರಗ 20ಕೆ.ಜಿ ಇದೆ. 24 ಮಂದಿ ಕಲಾವಿದರಿಗೆ ಕರಗನೃತ್ಯವನ್ನು ಕಲಿಸಿದ್ದಾರೆ.   

ರಂಗ ಕಲಾವಿದನೂ ಹೌದು!:      ತಮ್ಮ 10ನೇ ವರ್ಷದ ಪ್ರಾಯದಿಂದಲೇ ನಾಟಕಗಳಲ್ಲಿ ಸ್ತ್ರೀ ಪಾತ್ರದಲ್ಲಿ ಕಾಣಿಸಿಕೊಂಡ ಇವರು, ತುಳು ನಾಟಕ ರಂಗದ ಪ್ರಸಿದ್ಧ ನಾಟಕಗಳು ಸೇರಿದಂತೆ 50 ನಾಟಕಗಳಲ್ಲಿ ಪಾತ್ರ ಮಾಡಿದ್ದಾರೆ. ನಂದಿಕೇಶ್ವರ ಕನ್ನಡ ನಾಟಕ ತಂಡದಲ್ಲಿ ಅತಿಥಿ ಕಲಾವಿದರಾಗಿಯೂ ಸೇವೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here