'ಅಡ್ಕ' ವಚೋಹಾಸ ಕೃತಿ ಅನಾವರಣ

0
513

ವರದಿ/ಚಿತ್ರ: ಶ್ಯಾಮ್ ಪ್ರಸಾದ್
ಅಡ್ಕ ಗೋಪಾಲಕೃಷ್ಣ ಭಟ್ ಅಭಿನಂದನೆ
” ಯಕ್ಷಗಾನದಂತಹ ಕಲೆಯು ಮಲೆಯಾಳೀ ಮಣ್ಣಿನಲ್ಲಿ ಕನ್ನಡವನ್ನು ಉಳಿಸಿ, ಬೆಳೆಸಲು ಸಹಕಾರಿಯಾಗಿದೆ. ಹಲವಾರು ಮಂದಿ ಹಿರಿಯ ಕಲಾವಿದರು , ಮೇಳಗಳು, ಸಂಘಟನೆಗಳು ಈ ದಿಸೆಯಲ್ಲಿಯಲ್ಲಿ ದುಡಿಯುತ್ತಿವೆ. ಅಡ್ಕರಂತಹ ಅನುಭವೀ ಕಲಾವಿದರು ಈ ಕೈಂಕರ್ಯದಲ್ಲಿ ಸೇವಾ ಭಾವದಿಂದ ದುಡಿದಿದ್ದಾರೆ. ಇಂತಹ ಅನುಭವಿಗಳ ಅನುಭವಗಳ ಹಾದಿಯು ಮಾದರಿಯಾಗಿದೆ, ” ಎಂದು ಎಡನೀರು ಮಠಾಧೀಶ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು.
 
muliyaru krithi anavarana1
 
ಅವರು ಕಾಸರಗೋಡು ಜಿಲ್ಲೆಯ ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಜರುಗಿದ ಅರ್ಥಧಾರಿ, ವೇಷಧಾರಿ, ನಿವೃತ್ತ ಅಧ್ಯಾಪಕ ಅಡ್ಕ ಗೋಪಾಲಕೃಷ್ಣ ಭಟ್ಟರ ಸಹಸ್ರ ಚಂದ್ರ ದರ್ಶನ ಸಂಭ್ರಮ ಸಮಾರಂಭದಲ್ಲಿ ‘ ಅಡ್ಕ ವಚೋಹಾಸ ‘ ಕೃತಿಯನ್ನು ಅನಾವರಣಗೊಳಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರರು ವಹಿಸಿದ್ದರು. ಶ್ರೀ ಕ್ಷೇತ್ರ ಮಲ್ಲದ ಮೊಕ್ತೇಸರ ಆನೆಮಜಲು ವಿಷ್ಣು ಭಟ್ ಶುಭಾಶಂಸನೆ ಮಾಡಿದರು.
 
 
 
 
ಈ ಸಂದರ್ಭದಲ್ಲಿ ಕೋಟೂರಿನ ಯಕ್ಷ ತೂಣೀರ ಸಂಪ್ರತಿಷ್ಥಾನವು ಪ್ರಕಾಶಿಸಿದ “ಅಡ್ಕ ವಚೋಹಾಸ “ಕೃತಿಯ ಸಂಪಾದಕ ನಾ.ಕಾರಂತ ಪೆರಾಜೆಯವರನ್ನು ಎಡನೀರು ಶ್ರೀಗಳು ಗೌರವಿಸಿದರು. ಕೃತಿಗೆ ನೆರವಾದ ಪೆರಡಂಜಿ ಗೋಪಾಲಕೃಷ್ಣ ಭಟ್, ರಾಜೇಶ್ವರಿ ಈಶ್ವರ ಭಟ್ ಅವರನ್ನು ಗೌರವಿಸಲಾಯಿತು. ಕೃತಿಯ ಪರಿಚಯವನ್ನು ಉಡುಪುಮೂಲೆ ರಘುರಾಮ ಭಟ್ ಮಾಡಿದರು. ಯಕ್ಷಗಾನ ಅರ್ಥಧಾರಿ, ಖ್ಯಾತ ವೈದ್ಯ ಡಾ. ರಮಾನಂದ ಬನಾರಿ ಅಭಿನಂದನಾ ಭಾಷಣ ಮಾಡಿದರು. ಯಕ್ಷ ತೂಣೀರ ಸಂಪ್ರತಿಷ್ಥಾನ, ಅಡ್ಕರ ಕುಟುಂಬದವರು ಮತ್ತು ಅಭಿಮಾನಿಗಳು ಅಡ್ಕ ಗೋಪಾಲಕೃಷ್ಣ ಭಟ್ಟ- ಸುಮತಿ ದಂಪತಿಯನ್ನು ಸನ್ಮಾನಿಸಿದರು.
 
 
 
ಈ ಸಂದರ್ಭದಲ್ಲಿ ಅಡ್ಕರ ಒಡನಾಡಿ ಮಂತ್ರವಾದಿ, ಅರ್ಥಧಾರಿ ಉಡುಪುಮೂಲೆ ಗೋಪಾಲಕೃಷ್ಣ ಭಟ್ಟರನ್ನು ಸಂಮಾನಿಸಲಾಯಿತು. ಅಡ್ಕರ ಯಕ್ಷಗಾನದ ಯಶಕ್ಕೆ ಅಮೃತದ ಧಾರೆಯೆರೆದು ಪ್ರಕಾಶಗೊಳಿಸಿದ ಕೀರ್ತಿ ಶೇಷ ಚೇತನಗಳನ್ನು ನೆನೆಸಿಕೊಂಡು, ಅವರ ಕುಟುಂಬದವರಿಗೆ ಅಭಿನಂದನೆ ಸಲ್ಲಿಸಲಾಯಿತು. ಕಾರ್ಯಕ್ರಮದ ನಿರ್ವಹಣೆಯನ್ನು ರಾಘವೇಂದ್ರ ಭಟ್ ಉಡುಪುಮೂಲೆ ನಿರ್ವಹಿಸಿದರು. ಅಡ್ಕ ಸುಬ್ರಹ್ಮಣ್ಯ ಭಟ್ ವಂದಿಸಿದರು. ರಾಮ ಅಡ್ಕ ಪ್ರಾರ್ಥಿಸಿದರು.
 
 
ಭಾಗವತ ತಲ್ಪಣಾಜೆ ವೆಂಕಟ್ರಮಣ ಭಟ್ ನಿರ್ದೇಶನದಲ್ಲಿ ಬೆಳಗ್ಗೆ ಯಕ್ಷಬಾಲರ ‘ನಾಟ್ಯಾಂಜಲಿ’ ಪ್ರಸ್ತುತವಾಯಿತು. ಈಶ್ವರ ಭಟ್ ಬಳ್ಳಮೂಲೆ, ಈಶ್ವರ ಮಲ್ಲ, ಉದಯ ಕಂಬಾರು ಹಿಮ್ಮೇಳದಲ್ಲಿ ಸಹಕರಿಸಿದರು. ಅನಿರುದ್ಧ ವಾಸಿಷ್ಥ ಶರ್ಮ, ಸ್ತುತಿ ಅಡ್ಕ, ಸುಪ್ರೀತಾ -ಈ ಯಕ್ಷ ಬಾಲರು ದೀಪಜ್ವಲಿಸಿ ‘ಅಡ್ಕ ಯಶೋಹಾಸ ‘ ಕಾರ್ಯಕ್ರಮಕ್ಕೆ ಶುಭ ಚಾಲನೆ ಮಾಡಿದ್ದರು.
 
 
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ. ಯಲ್. ಸಾಮಗ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, “ಇಳಿ ವಯಸ್ಸಿನಲ್ಲೂ ತುಂಬು ಉತ್ಸಾಹದಲ್ಲಿರುವ ಅಡ್ಕರಿಗೆ ಯಕ್ಷಗಾನವು ಬದುಕುವ ಕಲೆಯನ್ನು ತೋರಿಸಿದೆ ” ಎಂದರು. ಸುಳ್ಯದ ಪ್ರತಿಭಾ ವಿದ್ಯಾಲಯದ ಪ್ರಾಚಾರ್ಯರಾದ ವೆಂಕಟರಾಮ ಭಟ್ ಸುಳ್ಯ ಇವರು ಅಡ್ಕರ ಯಕ್ಷಗಾನದ ಮೆಲುಕನ್ನು ಮಾಡಿದರು. ಶ್ರೀ ಕ್ಷೇತ್ರದ ಸೀತಾರಾಮ ಬಳ್ಳುಳ್ಳಾಯ, ಅರ್ಥಧಾರಿ ಬೆಳ್ಳಿಗೆ ನಾರಾಯಣ ಮಣಿಯಾಣಿ, ಯಕ್ಷ ತೂಣೀರ ಸಂಪ್ರತಿಷ್ಥಾನದ ಅಧ್ಯಕ್ಷ ಈಶ್ವರ ಭಟ್ ಬಳ್ಳಮೂಲೆ ಉಪಸ್ಥಿತರಿದ್ದರು.
 
 
ಪತ್ರಕರ್ತ, ಕಲಾವಿದ ನಾ. ಕಾರಂತ ಪೆರಾಜೆ ನಿರ್ವಹಿಸಿದ ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ಕಲಾವಿದ ಪೆರಡಂಜಿ ಗೋಪಾಲಕೃಷ್ಣ ಭಟ್ ಪ್ರಸ್ತಾವಿಸಿದರು. ಅನುಪಮಾ ರಾಘವೇಂದ್ರ ಉಡುಪುಮೂಲೆ ವಂದಿಸಿದರು. ಯಕ್ಷ ತೂಣೀರ ಸಂಪ್ರತಿಷ್ಥಾನದ ಕಾರ್ಯದರ್ಶಿ ಮುರಳಿಕೃಷ್ಣ ಸ್ವಾಗತಿಸಿದರು.
 
 
 
ಬಳಿಕ ‘ ಅಂಗದ ಸಂಧಾನ ‘ ಪ್ರಸಂಗದ ತಾಳಮದ್ದಲೆ ಜರುಗಿತು. ಬಳ್ಳಮೂಲೆ ಗೋವಿಂದ ಭಟ್ ಕಲಾವಿದರನ್ನು ಗೌರವಿಸಿದರು. ಕೊನೆಯಲ್ಲಿ ಎಡನೀರು ಮೇಳದವರಿಂದ ‘ ದಕ್ಷಾಧ್ವರ – ಗಿರಿಜಾ ಕಲ್ಯಾಣ ‘ ಪ್ರಸಂಗದ ಬಯಲಾಟ ಜರುಗಿತು.
ಅಡ್ಕ ಕೃಷ್ಣ ಭಟ್, ಡಾ. ಶಿವ ಕುಮಾರ್ ಅಡ್ಕ, ಗಣಪತಿ ಭಟ್ ಮಧುರಕಾನನ, ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು.

LEAVE A REPLY

Please enter your comment!
Please enter your name here