“ಅಡಿಕೆ ಕದ್ದರೂ ಕಳ್ಳ, ಆನೆ ಕದ್ದರೂ ಕಳ್ಳನೇ..!”

0
1069

ನಿತ್ಯ ಅಂಕಣ:೫೬-ತಾರಾನಾಥ್‌ ಮೇಸ್ತ,ಶಿರೂರು.

ಸ್ನಾನ ಮಾಡಿದಾಗ ಮೈ ಒದ್ದೆಯಾಗುವುದು ಸಹಜ. ನಂತರ ಟವಲಿನಿಂದ ಮೈಯನ್ನು ಒರೆಸಿಕೊಂಡರೆ ಒದ್ದೆಯಾದ ದೇಹವು ಒಣಗುತ್ತದೆ. ನಿತ್ಯಾನಂದ ಸ್ವಾಮಿಗಳು ಕಾಂಞಂಗಾಡಿನಲ್ಲಿ ಇರುವಾಗ ಮಣ್ಣಿನ ತೊಟ್ಟಿಯಲ್ಲಿ ತುಂಬಿಸಿಟ್ಟ ನೀರಿನಿಂದ ಸ್ನಾನ ಮಾಡುತ್ತಿದ್ದರು. ತಣ್ಣೀರು ಸ್ನಾನವನ್ನು ಮಾಡುವುದು ಅವರ ರೂಢಿಯಾಗಿತ್ತು. ಸ್ನಾನ ಮುಗಿಸಿದ ಬಳಿಕ ನಿತ್ಯಾನಂದರು ತಮ್ಮ ದೇಹವನ್ನು ಒಣಗಿದ ಬಟ್ಟೆಯಿಂದ ಒರೆಸಿಕೊಳ್ಳುತ್ತಿರಲಿಲ್ಲ. ತಕ್ಷಣದಲ್ಲಿಯೇ ಅವರ ದೇಹವು ಒಣಗುತಿತ್ತು. ಧರಿಸಿರುವ ಲಂಗೋಟಿಯು ಒಣಗಿರುತಿತ್ತು. ಜಡಿ ಮಳೆಯಲ್ಲಿ ನೆನೆದು ಬಂದರೂ, ಕೂಡಲೇ ನಿತ್ಯಾನಂದರ ಒದ್ದೆಯಾದ ಶರೀರವು ಒಣಗುತಿತ್ತು. ಕೆಲವರು ಸೂಕ್ಷ್ಮವಾಗಿ ಗಮನಸಿ ಅಚ್ಚರಿಪಡುತಿದ್ದರು. ನಿತ್ಯಾನಂದರು ಶರೀರದಲ್ಲಿ ಉಷ್ಣಾಂಶವನ್ನು ಸ್ವಯಂ ತಾವಾಗಿಯೇ ಏರಿಸುತ್ತಿದ್ದರು. ಆ ಮೂಲಕ ದೇಹದಲ್ಲಿ ಉಂಟಾದ ತಾಪದಿಂದ ಅವರು, ತಮ್ಮ ಒದ್ದೆಯಾದ ದೇಹಸಿರಿಯನ್ನು ಒಣಗಿಸುತ್ತಿದ್ದರು.

ನಿತ್ಯಾನಂದ ಸ್ವಾಮಿಗಳಿಗೆ ಸರ್ವ ಧರ್ಮದ ಭಕ್ತರಿದ್ದರು. ಮಡಿ ಮೈಲಿಗೆ, ಜಾತಿ ಬೇಧವು ಅವರಲ್ಲಿ ಇಲ್ಲವಾಗಿತ್ತು. ಮುನುಕುಲದ ಎಲ್ಲಾ ಜನರನ್ನು ಬಲು ಪ್ರೀತಿಯಿಂದ ನೋಡುತಿದ್ದರು. ಒಂದು ದಿನ ನಿತ್ಯಾನಂದ ಗುರುದೇವರು, ಗುಹೆಗಳಿರುವ ಸನಿಹದ ಮರದಡಿಯಲ್ಲಿ ಕುಳಿತು ವಿಶ್ರಮಿಸುತ್ತಿದ್ದರು. ಆವಾಗ ಇಸ್ಲಾ ಧರ್ಮದ ಮೂವರು ವ್ಯಕ್ತಿಗಳು ಅವರಲ್ಲಿಗೆ ಬಂದು, ಭಕ್ತಿಯಿಂದ ವಿಧೇಯರಾಗಿ ಎದುರುಗಡೆ ನಿಂತರು. ಅವರು ಹಜ್ ಯಾತ್ರೆ ಕೈಗೊಂಡು, ಮುಸ್ಲಿಂಮರ ಪವಿತ್ರಕ್ಷೇತ್ರ ಮೆಕ್ಕಾಗೆ ಹೋಗಿ ಬಂದವರಾಗಿದ್ದರು. ಹೋಗುವ ಮೊದಲು ಅವರು ನಿತ್ಯಾನಂದರ ಆಶೀರ್ವಾದ ಪಡೆದು ತೆರಳಿದ್ದರು. ಹಾಗಾಗಿ ಏನನ್ನು ಪ್ರಶ್ನಿಸದೇ ನಿತ್ಯಾನಂದರು ಸುಲಭವಾಗಿ ಮೂವರು ಮುಸ್ಲಿಂ ಬಂಧುಗಳನ್ನು ಗುರುತಿಸಿದರು. ಸ್ವಾಮಿಗಳು ನಗುತ್ತಲೇ ಅವರಲ್ಲಿ, “ನನ್ನನ್ನು ನೋಡಿರುವಿರೇ..” ಎಂದು ಕೇಳಿದರು. ಆಗ ಮೂವರು “ಸ್ವಾಮೀಜಿ ನಾವು ನಿಮ್ಮನ್ನು ಅಲ್ಲಿ ನೋಡಿದ್ದೆವು.” ಎಂದರು. ನಿಮಗೆ ವಂದಿಸಲು ಬಂದಿರುವೆವು, ಎಂದು ಅವರು ಹೇಳಿ, ತಾವು ಅರಬ್ಬೀ ದೇಶದಿಂದ ತಂದಿರುವ ಕರ್ಜೂರಗಳನ್ನು ಸಮರ್ಪಿಸಿದರು.

ಒಮ್ಮೆ ನಿತ್ಯಾನಂದ ಸ್ವಾಮಿಗಳು ಕಾಂಞಂಗಾಡ್ ಆಶ್ರಮದಲ್ಲಿ ದೊಡ್ಡ ಮಟ್ಟದಲ್ಲಿ ಅನ್ನದಾನ ಮಾಡಲು ಸಂಕಲ್ಪಿಸಿದ್ದರು. ಅನ್ನದಾನ ಯೋಜನೆಗೆ ಬೇಕೆಂದು ಮುಂಚಿತವಾಗಿ ಅಕ್ಕಿಯ ಗೋಣಿಗಳನ್ನು ತಂದು ದಾಸ್ತಾನು ಮಾಡಿಸಿದ್ದರು. ಅದರಲ್ಲಿರುವ ಕಲ್ಲು ಹೆಕ್ಕಿ ಸ್ವಚ್ಚಗೊಳಿಸವ ಕೆಲಸವನ್ನು ಸ್ಥಳಿಯ ನಾಲ್ವರು ಮಹಿಳೆಯರಿಗೆ ವಹಿಸಿಕೊಟ್ಟಿದ್ದರು. ಸ್ವಾಮಿಗಳು ಹೇಳಿದಂತೆ ನಾಲ್ವರು ಮಹಿಳೆಯರು ಗೆರಸೆ ಹಿಡಿದುಕೊಂಡು ಅಕ್ಕಿ ಸ್ವಚ್ಚಗೊಳಿಸುವ ಕೆಲಸಕ್ಕೆ ತೊಡಗಿಸಿಕೊಂಡರು. ನಾಲ್ವರು ಮಹಿಳೆಯರು ಮೊದಲೇ ತಮ್ಮೊಳಗೆ ಕಳ್ಳತನ ಮಾಡುವ ಒಪ್ಪಂದ ಮಾಡಿಕೊಂಡಿದ್ದರು. ಅಲ್ಲಿದ್ದ ಅಕ್ಕಿಯಲ್ಲಿ ಸ್ವಲ್ಪ ಅಕ್ಕಿಯನ್ನು ಚೀಲದಲ್ಲಿ ತುಂಬಿಸುಕೊಂಡು, ಅಲ್ಲಿಯೇ ಸ್ವಲ್ಪ ದೂರದ ಪ್ರವಾಸಿ ಮಂದಿರದ, ಸನಿಹದ ಗಿಡಗಂಟಿಗಳು ಬೆಳೆದಿರುವ ಪೊದೆಯಲ್ಲಿ ಯಾರಿಗೂ ಕಾಣದಂತೆ ಅಡಗಿಸಿ ಇಟ್ಟಿದ್ದರು. ಸಂಜೆ ಸಮಯ ಕೆಲಸ ಬಿಟ್ಟು ಹೋಗುವಾಗ, ಕದ್ದಿರುವ ಅಕ್ಕಿಯನ್ನು ನಾಲ್ವರು ಸಮನಾಗಿ ಹಂಚಿಕೊಂಡು ಮನೆಗೆ ತೆರಳುವುದು ಅವರ ಉದ್ದೇಶವಾಗಿತ್ತು.

Advertisement

ಸಂಜೆಯಾದಂತೆ ನಾಲ್ವರು ಮಹಿಳೆಯರು ಕೆಲಸ ಮುಗಿಯಿತು. ಸಂಬಳ ಪಡೆಯಲೆಂದು ಸ್ವಾಮೀಜಿ ಅವರ ಬಳಿಗೆ ನಾಲ್ವರು ಮಹಿಳೆಯರು ಪ್ರಾಮಾಣಿಕವಾಗಿ ಕಾರ್ಯ ಮಾಡಿದವರಂತೆ ಬಂದು ನಿಂತರು. ಸ್ವಾಮೀಗಳು…ಸಂಬಳ ನೀಡುವ ಮೊದಲು, ತಮ್ಮಿಂದ ಒಂದು ಸಣ್ಣದಾದ ಕೆಲಸ ಆಗಬೇಕಾಗಿದೆ, ಎಂದು ಹೇಳಿದ ನಿತ್ಯಾನಂದ ಸ್ವಾಮಿಗಳು, ನಾಲ್ವರನ್ನು ಪ್ರವಾಸಿ ಮಂದಿರದ ಸನಿಹ ಕರೆದುಕೊಂಡು ಹೋದರು. ಅಲ್ಲಿ ಬಚ್ಚಿಟ್ಟಿರುವ ಅಕ್ಕಿಯನ್ನು ತೋರಿಸಿದರು. ಅಕ್ಕಿಯನ್ನು ಆಶ್ರಮಕ್ಕೆ ತಲುಪಿಸುವಂತೆ ಹೇಳಿದರು. ನಾಲ್ವರು ಮಹಿಳೆಯರು, ಸ್ವಾಮೀಜಿ ಅವರಿಗೆ ತಮ್ಮ ಅಪರಾಧ ತಿಳಿದು ಹೊಯಿತಲ್ಲ..! ಎಂದು ಬೆವರಿದರು. ನಾಲ್ವರು ತಾವು ಅಡಗಿಸಿಟ್ಟ ಅಕ್ಕಿಚೀಲಗಳನ್ನು ತಲೆ ಮೇಲೆ ಹೊತ್ತುಕೊಂಡು ಬಂದು ಆಶ್ರಮಕ್ಕೆ ತಲುಪಿಸಿದರು. ಎಲ್ಲರೂ ತಮ್ಮಿಂದಾದ ತಪ್ಪಿಂದ ಸ್ವಾಮೀಜಿಗಳ ಮುಂದೆ, ತಲೆತಗ್ಗಿಸಿಕೊಂಡು, ನಿಂತುಕೊಂಡರು. ಮುಂದೆ ಕೆಲಸದಿಂದ ತೆಗೆದು ಹಾಕುತ್ತಾರೆನ್ನುವ ಭಯವು ಅವರಿಗೆ ಕಾಡುತ್ತದೆ. ಆದರೆ ಅವರ ತಪ್ಪಿಗೆ ಸ್ವಾಮೀಜಿಗಳು ಕ್ಷಮೆನೀಡುತ್ತಾರೆ. ಯಾವತ್ತೂ ನಂಬಿದವರಿಗೆ ವಿಶ್ವಾಸ ದ್ರೋಹ ಮಾಡಬೇಡಿ, ಕೆಲಸದಲ್ಲಿ ಯಾವತ್ತೂ ವಂಚಿಸದಿರಿ, ಎಂದು ಸ್ವಾಮಿಗಳು ಬುದ್ದಿ ಮಾತುಗಳ ಹೇಳಿ ಆ ದಿನದ ಸಂಬಳ ನೀಡಿ ಅವರನ್ನು ಮನೆಗೆ ಕಳಿಸುತ್ತಾರೆ. ಕೆಲಸದಾಳುಗಳ ಮನೆಯಲ್ಲಿ ಪಾಪ..! ಬಡತನವಿತ್ತು. ಒಂದು ಹೊತ್ತಿನ ತುತ್ತಿಗೂ ಪರದಾಡ ಬೇಕಾದ ಕಾಲಘಟ್ಟ ಅದು. ಹಾಗಾಗಿ ಅವರು ಆಶಾಭಾವನೆಯಿಂದ ಸಣ್ಣದಾದ ಅಪರಾಧ ಕೃತ್ಯ ಎಸಗಿದ್ದರು. ಆದರೆ “ಅಡಿಕೆ ಕದ್ದರೂ ಕಳ್ಳ, ಆನೆ ಕದ್ದರೂ ಕಳ್ಳನೇ..!” ಎಂಬ ಗಾದೆ ಮಾತಿದೆ. ಅಕ್ಕಿ ಕದ್ದವರಿಗೆ ಸ್ವಾಮೀಜಿಗಳಿಗೆ ಕದ್ದ ವಿಷಯ ಹೇಗೆ ಗೊತ್ತಾಯಿತು..? ಎಂಬ ಸಂಶಯವು ಹುಟ್ಟಿರ ಬಹುದು. ಗುರುದೇವರಿಗೆ ಸರ್ವವನ್ನು ತಿಳಿದುಕೊಳ್ಳುವ ಶಕ್ತಿ ಇದೆ, ಎಂಬುವುದನ್ನು ನಂತರ ಅವರಿಗೆ ತಿಳಿದು ಬಂದಿತು.

LEAVE A REPLY

Please enter your comment!
Please enter your name here