ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಮಂಗಳೂರು ಆಶ್ರಯದಲ್ಲಿ ಮೂಡುಬಿದಿರೆ ಹೋಬಳಿಯ ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ತುರಾತುರಿಯಲ್ಲಿ ಗುರುವಾರ ಸ್ವರಾಜ್ಯಮೈದಾನದ ಬಳಿ ಏರ್ಪಡಿಸಲಾಗಿತ್ತು. ಉದ್ಘಾಟನೆಗೆ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಆಗಮಿಸಬೇಕಾಗಿತ್ತು. ಅವರ ಅನುಪಸ್ಥಿತಿಯಲ್ಲಿ ಶಾಸಕ ಉಮಾನಾಥ್ ಕೋಟ್ಯಾನ್ ಉದ್ಘಾಟಿಸಿದರು. ಇರಲಿ…ಆದರೆ ಪ್ರವೇಶ ಧ್ವಾರದ ಎಡಭಾಗದಲ್ಲಿದ್ದ ಶಿಲಾ ಫಲಕವೊಂದು ಕಾರ್ಯಕ್ರಮವನ್ನು ಅಣಕಿಸುವಂತಿತ್ತು!. ಅದರಲ್ಲಿತ್ತು ಹೀಗೆ… ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮಂಗಳೂರು, ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಮಂಗಳೂರು ತಾಲೂಕು ಮೂಡುಬಿದಿರೆ ರೈತ ಸಂಪರ್ಕ ಕೇಂದ್ರ ಕಟ್ಟಡದ ಕಾಮಗಾರಿ ಉದ್ಘಾಟನಾ ಸಮಾರಂಭ. ದಿನಾಂಕ 7-1-2018, ಭಾನುವಾರ ಸಂಜೆ 4ಕ್ಕೆ. ಸ್ಥಳ ಸ್ವರಾಜ್ಯ ಮೈದಾನ!
ಉದ್ಘಾಟನೆ ಮಾನ್ಯ ಮುಖ್ಯಮಂತ್ರಿಗಳು ಸನ್ಮಾನ್ಯ ಶ್ರೀ ಸಿದ್ಧರಾಮಯ್ಯ, ಅಧ್ಯಕ್ಷತೆ, ಶಾಸಕ ಕೆ.ಅಭಯಚಂದ್ರ ಜೈನ್…!!!
`ಕಟ್ಟಡ ಕಾಮಗಾರಿ ಉದ್ಘಾಟನೆಯ ಫಲಕ’ವನ್ನು ದೊಡ್ಡದಾಗಿ ಹಾಕಿ ಇಲಾಖೆ ಪೇಜಿಗೆ ಸಿಲುಕಿತ್ತು… ಇದೇನು ಎಂಬ ಅಚ್ಚರಿಯನ್ನು ಉಂಟುಮಾಡುವಂತೆ ಮಾಡಿತ್ತು… ನಿಜವಾದ ಕಟ್ಟಡ ಉದ್ಘಾಟನೆಗಿಂತಲೂ ಇದೇ ದೊಡ್ಡ ಚರ್ಚೆಗೆ ಗ್ರಾಸವಾಗುವಂತಾಯಿತು…
ಯಾರೂ ಬಂದಿಲ್ಲ! : ಲೋಕಸಭಾ ಸದಸ್ಯ ನಳೀನ್ ಕುಮಾರ್ ಕಟೀಲು, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ, ಬಿ.ಎಂ.ಫಾರೂಕ್, ಕೆ.ಹರೀಶ್ ಕುಮಾರ್ , ಆಯನೂರು ಮಂಜುನಾಥ್, ಎಸ್.ಎಲ್ ಭೋಜೇಗೌಡ ಹೀಗೆ ಹತ್ತು ಹಲವು ಮಂದಿಯ ಹೆಸರು ಆಮಂತ್ರಣದಲ್ಲಿ ನಮೂದಿಯಾಗಿತ್ತು. ಆದರೆ ಅವರ್ಯಾರೂ ಬಂದಿರಲಿಲ್ಲ. ಅಷ್ಟಕ್ಕೂ ಹರಿಬರಿಯಲ್ಲಿ ಕಾರ್ಯಕ್ರಮ ಇರಿಸಿದ್ದೇಕೆ ಎಂಬ ಹಲವರ ಪ್ರಶ್ನೆ ಪ್ರಶ್ನೆಯಾಗಿಯೇ ಕಾಡುತ್ತಿತ್ತು…