ಪ್ರಮುಖ ಸುದ್ದಿರಾಜ್ಯವಾರ್ತೆ

ಅಕ್ರಮ ವಲಸಿಗರ ಪತ್ತೆಗೆ ಕ್ರಮ

ಬೆಳಗಾವಿ ಪ್ರತಿನಿಧಿ ವರದಿ
ಅಕ್ರಮ ವಲಸಿಗರ ಪತ್ತೆಗೆ ಕ್ರಮ ಕೈಗೊಳ್ಳುವುದಾಗಿ ಮಂಗಳವಾರ ಸದನಕ್ಕೆ ಭರವಸೆ ನೀಡಿದ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಈಗಾಗಲೇ 52 ಮಂದಿ ಬಾಂಗ್ಲಾ ವಲಸಿಗರನ್ನು ಗಡಿಪಾರು ಮಾಡಲಾಗಿದೆ ಎಂದು ಪ್ರಕಟಿಸಿದರು.
 
 
 
ರಾಜ್ಯ ವಿಧಾನ ಸಭೆಯಲ್ಲಿ ಕಾರ್ಕಳದ ಶಾಸಕ ವಿ, ಸುನೀಲ್ ಕುಮಾರ್ ಅವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಚಿವರು ರಾಜ್ಯದಲ್ಲಿ ಬಾಂಗ್ಲಾದೇಶದ ವಲಸಿಗರು ಅಕ್ರಮವಾಗಿ ನುಸುಳಿದ್ದಾರೆ. ರಾಜ್ಯದಲ್ಲಿ ಅನಧಿಕೃತವಾಗಿ ನೆಲೆಸಿರುವ ಎಲ್ಲಾ ಅಕ್ರಮ ವಲಸಿಗರನ್ನು ಹೊರಹಾಕಲಾಗುವುದು ಈ ವಲಸಿಗರನ್ನು ಪತ್ತೆ ಹಚ್ಚಲು ರಾಜ್ಯದ ಎಲ್ಲಾ ಜಿಲ್ಲಾ ಮಟ್ಟದಲ್ಲಿ ಹಾಗೂ ನಗರ ಮಟ್ಟದಲ್ಲಿ ಕಾರ್ಯಪಡೆಯನ್ನು ರಚಿಸಲಾಗಿದೆ. ಅನಧಿಕೃತ ವಲಸಿಗರನ್ನು ಪತ್ತೆ ಹಚ್ಚುವ ಕಾರ್ಯ ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುಂದುವರೆದಿದೆ. ಅನಧಿಕೃತವಾಗಿ ರಾಜ್ಯಕ್ಕೆ ನುಸುಳಿದ್ದ 748 ಅಕ್ರಮ ವಲಸಿಗರನ್ನು ಗುರುತಿಸಿ, 283 ಮಂದಿಯನ್ನು ಈಗಾಗಲೇ ಪತ್ತೆ ಮಾಡಲಾಗಿದೆ. ಅಲ್ಲದೆ, 52 ಮಂದಿಯನ್ನು ಗಡಿಪಾರು ಮಾಡಲಾಗಿದೆ ಎಂದು ಅವರು ವಿವರಿಸಿದರು.
 
 
 
ಆಂತರಿಕ ಭದ್ರತೆಗೆ ಸರ್ಕಾರ ಅತ್ಯಾಧ್ಯತೆ ನೀಡಲಿದೆ. ಅಕ್ರಮ ವಲಸಿಗರ ಮೇಲೆ ಪೊಲೀಸ್ ಇಲಾಖೆ ನಿಗಾ ಇರಿಸಿದೆ. ಇಪ್ಪತ್ತೈದು ಅಪರಾಧ ಪ್ರಕರಣಗಳಲ್ಲಿ ಬಾಂಗ್ಲಾದೇಶದ ವಲಸಿಗರು ಭಾಗಿಯಾಗಿದ್ದಾರೆ. ನ್ಯಾಯಾಲಯದ ವಿಚಾರಣೆ ನಡೆಯುತ್ತಿದೆ. ಆ ನಂತರ ಅವರನ್ನು ಆ ದೇಶಕ್ಕೆ ವಾಪಸ್ ಕಳುಹಿಸಲಾಗುವುದು ಎಂದು ಸಚಿವರು ಹೇಳಿದರು.
 
 
 
ರಾಜ್ಯದೆಲ್ಲೆಡೆ ಬಾಂಗ್ಲಾ ವಲಸಿಗರು ಕಾಫಿ ತೋಟ ಸೇರಿದಂತೆ ವಿವಿಧೆಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವೆರೆಲ್ಲರ ಮೇಲೆ ಕ್ರಮ ಜರುಗಿಸುವಂತೆ ಶಾಸಕರಾದ ಕೆ. ಜಿ ಬೋಪಯ್ಯ, ವಿಶ್ವೇಶ್ವರ ಹೆಗಡೆ ಕಾಗೇರಿ ಅವರೂ ಸೇರಿದಂತೆ ಅನೇಕ ಶಾಸಕರು ಸರ್ಕಾರಕ್ಕೆ ಸಲಹೆ ಮಾಡಿದರು.
 
 
ರೈತರ ವಿರುದ್ಧ ದಾಖಲಾಗಿರುವ ಪ್ರಕರಣಗಳು ಹಿಂದಕ್ಕೆ : ಡಾ ಜಿ ಪರಮೇಶ್ವರ್
ರಾಜ್ಯದಲ್ಲಿ ರೈತರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ರಾಜ್ಯ ವಿಧಾನ ಸಭೆಯಲ್ಲಿ ಮಂಗಳವಾರ ಪ್ರಕಟಿಸಿದರು.
ಅರೆಭಾವಿ ಶಾಸಕ ಪಿ. ರಾಜೀವ್ ಅವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಚಿವರು ಮಹದಾಯಿ ಜಲ ವಿವಾದಕ್ಕೆ ಸಂಬಂಧಿಸಿದಂತೆ 82 ಪ್ರಕರಣಗಳಿ ದಾಖಲಾಗಿವೆ. ಅಲ್ಲದೆ, ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ 44 ಪ್ರಕರಣಗಳಿ ದಾಖಲಾಗಿವೆ. ಅಮಾಯಕರ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವಂತೆ ಮುಖ್ಯಮಂತ್ರಿಯವರು ಈಗಾಗಲೇ ಭರವಸೆ ನೀಡಿದಂತೆ ದಾಖಲಾಗಿರುವ ಪ್ರಕರಣಗಳ ಗಂಭೀರತೆಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಸರ್ಕಾರವು ಸುಳ್ಳು ಮೊಕ್ಕದ್ದಮೆಗಳನ್ನು ದಾಖಲಿಸಿವೆ. ರೈತರು ದರೋಡೆಕೋರರಲ್ಲ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಭಾರತೀಯ ಜನತಾ ಪಕ್ಷದ ಶಾಸಕರು ಹಾಗೂ ಜಾತ್ಯಾತೀತ ಜನತಾ ದಳದ ಶಾಸಕರು ಬಣ್ಣಿಸಿದಾಗ, ನ್ಯಾಯಾಲಯಕ್ಕೆ ಬೆಂಕಿ ಹಚ್ಚಿರುವ ಹಾಗೂ ಸಾರ್ವಜನಿಕ ಆಸ್ತಿ-ಪಾಸ್ತಿಗಳನ್ನು ನಾಶಪಡಿಸಿರುವ ಪ್ರಕರಣಗಳಿವೆ. ನಮಗೂ ರೈತರ ಮೇಲೆ ಅಪಾರ ಕಳಕಳಿ ಮತ್ತು ಕಾಳಜಿ ಇದೆ. ಆದರೆ, ಎಲ್ಲಾ ಪ್ರಕರಣಗಳನ್ನು ಸಮಗ್ರವಾಗಿ ಪರಿಶೀಲಿಸಿ ನೈಜ ಪ್ರಕರಣಗಳನ್ನು ಮಾತ್ರ ಹಿಂದಕ್ಕೆ ಪಡೆಯಲಾಗುವುದು ಎಂದು ಸಚಿವರು ಸದನಕ್ಕೆ ಭರವಸೆ ನೀಡಿದರು.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here