ಅಕ್ರಮ ಬಾಂಗ್ಲಾ ವಲಸಿಗ ಹಾಗೂ ಆಶ್ರಯ ನೀಡಿದಾತನ ಬಂಧನ

0
476

ಮಡಿಕೇರಿ ಪ್ರತಿನಿಧಿ ವರದಿ
ಕಾಫಿ ತೋಟಗಳೇ ಹೆಚ್ಚಾಗಿರುವ ಕೊಡಗು ಜಿಲ್ಲೆಗೆ ಕಾರ್ಮಿಕರಾಗಿ ದುಡಿಯಲು ಬಾಂಗ್ಲಾದೇಶದಿಂದಲು ಅಕ್ರಮ ವಲಸಿಗರು ಬರುತ್ತಿದ್ದಾರೆ ಎನ್ನುವ ಖಚಿತ ಮಾಹಿತಿಯನ್ನು ಅನುಸರಿಸಿದ ಜಿಲ್ಲಾ ಪೊಲೀಸರು ವಿರಾಜಪೇಟೆಯಲ್ಲಿ ಓರ್ವ ಬಾಂಗ್ಲಾದೇಶಿಗ ಹಾಗೂ ಆಶ್ರಯ ನೀಡಿದಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
 
ಬಾಂಗ್ಲಾ ಪ್ರಜೆ ಸಹರುಲ್ ಇಸ್ಲಾಂ ಹಾಗೂ ಈತನಿಗೆ ಆಶ್ರಯ ನೀಡಿದ ಪಶ್ಚಿಮ ಬಂಗಾಳದ ತಾರೀಫ್ ಶೇಖ್ ಬಂಧಿತ ಆರೋಪಿಗಳಾಗಿದ್ದು, ಇವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.
 
ಫೆ.19 ರಂದು ರಾತ್ರಿ 8 ಗಂಟೆ ಸುಮಾರಿಗೆ ಬಾಂಗ್ಲಾದೇಶದ ಒಬ್ಬ ವ್ಯಕ್ತಿ ವೀರಾಜಪೇಟೆ ಪಟ್ಟಣದ ಮೊಗರಗಲ್ಲಿ ಬಳಿ ಇದ್ದಾನೆ ಎಂಬ ಖಚಿತ ಮಾಹಿತಿ ದೊರೆತ ಹಿನ್ನೆಲೆ ವೀರಾಜಪೇಟೆ ನಗರ ಪೊಲೀಸ್ ಠಾಣಾ ಅಧಿಕಾರಿ ಸಂತೋಷ್ ಕಶ್ಯಪ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಆತನನ್ನು ವಿಚಾರಣೆಗೆ ಒಳಪಡಿಸಿದಾಗ ತಾನು ಬಾಂಗ್ಲಾದೇಶಿಗನೆಂದು ಒಪ್ಪಿಕೊಂಡಿದ್ದಾನೆ. ಸಹರುಲ್ ಇಸ್ಲಾಂ ಎಂಬ ಹೆಸರಿನ ಈತ ಬಾಂಗ್ಲಾ ದೇಶದ ಢಾಕಾ ರಾಜ್ಯದ ರಾಜಸೈ ಜಿಲ್ಲೆಯ ಗುದಗರಿ ಥಾನದ ಆಸರ್ದೋಹ ನಿವಾಸಿಯಾಗಿದ್ದಾನೆ. ಪಾಸ್ ಪೋರ್ಟ್ ಮತ್ತು ವೀಸಾದ ಬಗ್ಗೆ ವಿಚಾರಿಸಿದಾಗ ತನ್ನ ಬಳಿ ಯಾವುದೇ ದಾಖಲೆಗಳಿರುವುದಿಲ್ಲ. ಬಾಂಗ್ಲಾದಿಂದ ಕೂಲಿ ಕೆಲಸಕ್ಕಾಗಿ ಅಕ್ರಮವಾಗಿ ಭಾರತಕ್ಕೆ ನುಸುಳಿರುವುದಾಗಿ ಆತ ಹೇಳಿಕೊಂಡಿದ್ದಾನೆ.
 
ಈತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಕಳೆದ ಎರಡು ವರ್ಷಗಳಲ್ಲಿ ಕೂಲಿ ಕೆಲಸಕ್ಕೆಂದು ಮೂರನೇ ಬಾರಿ ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳಿಕೊಂಡು ಭಾರತಕ್ಕೆ ಬಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಈತನ ವಿರುದ್ಧ ವಿದೇಶಿ ಕಾಯ್ದೆ 1946 ರ ಪ್ರಕಾರ ಪ್ರಕರಣ ದಾಖಲಿಸಿ ದಸ್ತಗಿರಿ ಮಾಡಲಾಗಿದೆ.
 
ಈತನೊಂದಿಗೆ ವಿರಾಜಪೆೇಟೆಗೆ ಆಗಮಿಸಿದ್ದ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮೂಲದವವಾದ ತಾರೀಫ್ ಶೇಖ್ ಕೂಡ ಇದ್ದ. ಪೊಲೀಸರಿಗೆ ಮಾಹಿತಿ ನೀಡದೆ ಸಹರುಲ್ ಇಸ್ಲಾಂ ಗೆ ಆಶ್ರಯ ನೀಡಿದ ಆರೋಪದ ಹಿನ್ನೆಲೆ ತಾರೀಫ್ ಶೇಖ್ನನ್ನು ಪೊಲೀಸರು ಬಂಧಿಸಿದ್ದಾರೆ.
 
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ವೀರಾಜಪೇಟೆ ಉಪ ವಿಭಾಗದ ಡಿವೈಎಸ್ಪಿ ನಾಗಪ್ಪ ಅವರ ನೇತೃತ್ವದಲ್ಲಿ ವೀರಾಜಪೇಟೆ ವೃತ್ತದ ಸಿಪಿಐ ಕುಮಾರಆರಾಧ್ಯ, ಪಿಎಸ್ಐ ಸಂತೋಷ್ ಕಶ್ಯಪ್, ಎಎಸ್ಐಗಳಾದ ಸುಬ್ರಮಣಿ, ಶಿವಪ್ಪ, ಸಿಬ್ಬಂದಿಗಳಾದ ಟಿ.ಎಂ.ಸಾಬು, ಹೆಚ್.ಸಿ. ಸುನಿಲ್, ಎನ್.ಕೆ.ಉಮೇಶ್, ಪಿ.ಪಿ.ಕಾವೇರಮ್ಮ, ರಜನ್, ಮಧು, ಮುನೀರ್, ಯೋಗೇಶ್ ಇವರುಗಳು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
 
 
ಮಾಹಿತಿ ನೀಡಿ:
ಕೊಡಗು ಜಿಲ್ಲೆಯ ತೋಟಗಳಲ್ಲಿ, ಹೊಟೇಲ್, ಹೋಂ ಸ್ಟೇ, ರೆಸಾರ್ಟ್, ಕಟ್ಟಡ ಕಾಮಗಾರಿ ಅಥವಾ ಇತರೆಡೆಗಳಲ್ಲಿ ಬಾಂಗ್ಲಾದೇಶಿಗರು ಅಕ್ರಮವಾಗಿ ಬಂದು ನೆಲೆಸಿರುವ ಸಾಧ್ಯತೆಗಳಿದೆಯೆಂದು ತಿಳಿಸಿರುವ ಪೊಲೀಸ್ ವರಿಷ್ಟಾಧಿಕಾರಿ ರಾಜೇಂದ್ರ ಪ್ರಸಾದ್, ಈ ಬಗ್ಗೆ ಮಾಹಿತಿ ಲಭಿಸಿದಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಅಥವಾ ಪೊಲೀಸ್ ಕಂಟ್ರೋಲ್ ರೂಂ ದೂ.ಸಂ. 08272-228330ಗೆ ಮಾಹಿತಿ ನೀಡಬಹುದೆಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here