ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

0
765

ನಮ್ಮ ಪ್ರತಿನಿಧಿ ವರದಿ
ಮಹಿಳೆ ಅಬಲೆಯಲ್ಲ ಗಟ್ಟಿತನವೊಂದಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂದು ಸುವರ್ಣ ವಾಹಿನಿ ಕವರ್ ಸ್ಟೋರಿ ಖ್ಯಾತಿಯ ವಿಜಯ ಲಕ್ಷ್ಮೀ ಶಿಬರೂರು ಅವರುದೆಹಲಿ ಕರ್ನಾಟಕ ಸಂಘ ಇತ್ತೀಚೆಗೆ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
 
 
 
ತಾವು ಇಂದು ತನಿಖಾ ಮಾಧ್ಯಮ ಕ್ಷೇತ್ರದಲ್ಲಿ ಬೆಳೆದು ಬಂದಿರುವ ಹಿನ್ನೆಲೆಯನ್ನು ವಿವರಿಸುತ್ತ ಚಿಕ್ಕಂದಿನಿಂದ ಯಾವುದೇ ಕಟ್ಟುಪಾಡುಗಳಿಲ್ಲದೇ ಬೆಳೆದು ಬಂದಿರುವುದನ್ನು ತಿಳಿಸಿದರು. ಕ್ರಿಕೆಟ್ಯಾಕೆ ಆಡಬಾರದು, ಪುಟ್ಬಾಲ್ಯಾಕೆ ಆಡಬಾರದು, ಯಾಕೆ ಈಜಬಾರದು ಹೀಗೆಲ್ಲಾ ಯೋಚನೆಗಳು ನನ್ನಲ್ಲಿ ಸುಳಿಯುತ್ತಾ ಈ ರೀತಿಯ ಮನೋಪ್ರವೃತ್ತಿ ನನ್ನಲ್ಲಿ ಬೆಳೆದು ಇಂದು ಈ ಮಾಧ್ಯಮ ಕ್ಷೇತ್ರದಲ್ಲಿ ಮುಂದುವರಿಯಲು ಕಾರಣವಾಗಿದೆ. ಭಾಷಣ ಮಾಡುವ ಕಲೆಯು ನನಗೆ ಚಿಕ್ಕನಂದಿನಿಂದಲೇ ಇತ್ತು. ಯಕ್ಷಗಾನ ಗಂಡು ಕಲೆ, ಗಂಡಸರು ಮಾತ್ರ ಗೆಜ್ಜೆ ಕಟ್ಟಬಹುದು, ಮಹಿಳೆಯರು ಯಾಕೆ ಗೆಜ್ಜೆ ಕಟ್ಟಬಾರದು ಎನ್ನುವ ಪ್ರಶ್ನೆ ನನ್ನನ್ನುಕಾಡಿದಾಗ ನಾನು ಮೊದಲಿಗೆ ಗೆಜ್ಜೆ ಕಟ್ಟಿದೆ, ಇವತ್ತು ಸಾಕಷ್ಟು ಮಹಿಳಾ ಯಕ್ಷಗಾನ ತಂಡಗಳು ಹುಟ್ಟಿಕೊಂಡಿವೆ. ಯಾರಾದರೂ ಕೂಡಾ ಒಂದು ದೃಢವಾದ ಕನಸನ್ನು ಕಂಡು ಅದನ್ನು ಬೆನ್ನತ್ತಿ ಹೋದರೆ ಅದುತಾ ನೇತಾನಾಗಿ ಸಾಕಾರಗೊಳ್ಳುತ್ತದೆ ಎಂದು ಹೇಳುತ್ತಾ ತಾವು ಇಂದು ಈ ಎತ್ತರಕ್ಕೆ ತಲುಪಿರುವುದನ್ನು ಹಂಚಿಕೊಂಡರು.
 
 
 
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷರಾದ ವಸಂತ ಶೆಟ್ಟಿ ಬೆಳ್ಳಾರೆ ಅವರು ಮಾತನಾಡಿ ನಾವು ಸಮಾಜದ ಬಗ್ಗೆ ಮಾತನಾಡುವಾಗ ಆ ಸಮಾಜ ಒಂದು ಒಳ್ಳೆಯ ಸಮಾಜ ಎಂದು ಹೇಳುತ್ತೇವೆ, ಒಳ್ಳೆಯ ಸಮಾಜ ಎಂದರೆ ಏನು?ನೀವು ಮಹಿಳೆಯರನ್ನು ಹೇಗೆ ಗೌರವಿಸಿದ್ದೀರಿ ಎನ್ನುವುದಿದೆಯಲ್ಲ ಅದು ಒಂದು ಒಳ್ಳೆಯ ಸಮಾಜದ ಸೂಚ್ಯಂಕವಾಗುತ್ತದೆ ಎಂದು ಹೇಳಿದರು. ಅವರನ್ನು ಗೌರವಿಸಲಿಲ್ಲ ಎಂದರೆ ಆ ಸಮಾಜ ಒಳ್ಳೆಯ ಸಮಾಜ ಆಗುವುದಕ್ಕೆ ಸಾಧ್ಯವಿಲ್ಲ, ಆದ್ದರಿಂದ ಒಂದು ಒಳ್ಳೆಯ ಸಮಾಜದ ನಿರ್ಮಾಣಕ್ಕೆ ಮಹಿಳೆಯರನ್ನು ಗೌರವಿಸಬೇಕು ಎಂದು ಈ ಸಂದರ್ಭದಲ್ಲಿ ನುಡಿದರು.
 
 
 
ಆರಂಭದಲ್ಲಿ, ಉಪಾಧ್ಯಕ್ಷರಾದ ಆಶಾಲತಾಅವರು ಸ್ವಾಗತ ಭಾಷಣ ಮಾಡಿದರು.ಕಾರ್ಯಕ್ರಮವು ಜನಕಪುರಿ ಮಹಿಳಾ ಮಂಡಳಿ ಸದಸ್ಯೆಯರಿಂದ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಕಾರ್ಯಕಾರಿ ಸಮಿತಿ ಸದಸ್ಯರಾದ ಸುಮಿತಾ ಮುರಗೋಡ ಅವರು ಅತಿಥಿಗಳ ಪರಿಚಯ ಮಾಡಿದರು. ಸಂಘದ ಜಂಟಿ ಕಾರ್ಯದರ್ಶಿ ಜಮುನಾ ಸಿ.ಮಠದ ಅವರು ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಪೂಜಾ ಪಿ.ರಾವ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
 
 
 
ಕವನ ಸಂಕಲನ ಬಿಡುಗಡೆ
ದೆಹಲಿಯ ಕನ್ನಡ ಕವಯತ್ರಿಯರಾದ ರೇಣುಕಾ ನಿಡಗುಂದಿ ಅವರ ನಮ್ಮಿಬ್ಬರ ನಡುವೆ ಮತ್ತು ಸವಿತಾ ಇನಾಮದಾರ್ ಅವರ ರಂಗಿನೋಕುಳಿ ಕವನ ಸಂಕಲನಗಳನ್ನು ಇದೇ ಸಂದರ್ಭದಲ್ಲಿ ವಿಜಯಲಕ್ಷ್ಮೀ ಶಿಬರೂರು ಅವರು ಬಿಡುಗಡೆಗೊಳಿಸಿದರು. ಈ ಪುಸ್ತಕಗಳನ್ನು ದೆಹಲಿ ಕರ್ನಾಟಕ ಸಂಘವೇ ಪ್ರಕಟಿಸಿದೆ. ರಂಜಿನಿ ಗಿರೀಶ್ ಅವರು ಈ ಕೃತಿಗಳ ಕುರಿತು ಮಾತಾಡಿದರು. ಕವಯತ್ರಿ ನಿಡಗುಂದಿ ಅವರು ಮತ್ತು ಸವಿತಾ ಇನಾಮದಾರ್ ಕೂಡಾ ತಮ್ಮ ಕವನ ಸಂಕಲನದ ಕುರಿತು ಮಾತಾಡಿದರು.
 
 
 
ವಿದ್ಯಾರ್ಥಿ ವೇತನ ವಿತರಣೆ
ಇದೇ ಸಂದರ್ಭದಲ್ಲಿ ದೆಹಲಿ ಕರ್ನಾಟಕ ಸಂಘದ ವತಿಯಿಂದ ನೀಡಲಾಗುವ ವಿದ್ಯಾರ್ಥಿ ವೇತನವನ್ನು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಬಡ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಯಿತು.
 
ಸಾಂಸ್ಕೃತಿಕ ಕಾರ್ಯಕ್ರಮ
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಶ್ವೇತಾ ಭಟ್ ಅವರಿಂದ ಕಥಕ್ ನೃತ್ಯ ನಡೆಯಿತು. ಜನಕಪುರಿ ಮಹಿಳಾ ಮಂಡಳಿ ಸದಸ್ಯೆಯರು ಸವಿತಾ ನೆಲ್ಲಿ ಅವರ ನಿರ್ದೇಶನದಲ್ಲಿ ‘ ಇನ್ನಾದರೂ ನೀ ಬದಲಾಗು’ ಸಮೂಹ ನೃತ್ಯ ಕಾರ್ಯಕ್ರಮವನ್ನು ನೀಡಿದರು. ದೆಹಲಿ ಸ್ನೇಹಾಕನ್ನಡ ಲೇಡೀಸ್ ಅಸೋಸಿಯೇಷನ್ ಸದಸ್ಯೆಯರಿಂದ ಪ್ಯಾಶನ್ ಶೋ ಹಾಗೂ ಗುರುಗಾಂ ಕನ್ನಡ ಸಂಘದ ಮಹಿಳಾ ಕಲಾವಿದೆಯರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ದಿ ಚಾನೆಲ್ಥೇಟರ್ಸ್, ಪಾಂಡವಪುರ ಇದರ ಅಕ್ಷತ ಪಾಂಡವಪುರ ಪ್ರಸ್ತುತ ಪಡಿಸಿದ ‘ದಾರಿಯೋ ಫೋ’ನ ‘ದಿ ವುಮನ್ಅಲೋನ್’ಆಧಾರಿತ ನಾಟಕ’ಒಬ್ಬಳು’ ಪ್ರದರ್ಶನ ನಡೆಯಿತು. ಮಹಿಳೆಯರ ಕಲಾಕೃತಿಗಳ ಚಿತ್ರಕಲಾ ಪ್ರದರ್ಶನವನ್ನು ಕೂಡಾ ಈ ಸಂದರ್ಭದಲ್ಲಿ ಆಯೋಜಿಸಲಾಗಿತ್ತು.

LEAVE A REPLY

Please enter your comment!
Please enter your name here