ಅಂತರಂಗದ ಗಟ್ಟಿತನವನ್ನು ಕಟ್ಟಿಕೊಡುವ ಪ್ರಭುಲಿಂಗ ಲೀಲೆ

0
58

ಚಾಮರಸ ಕವಿಯ “ಪ್ರಭುಲಿಂಗ ಲೀಲೆ” ಕಾವ್ಯದಲ್ಲಿ ಹೋರಾಟದ ಮತ್ತು ಸಾವಿನ ಪ್ರಸ್ತಾಪಗಳಿಲ್ಲ. ಮನಸ್ಸಿನಿಂದಲೇ ಒಬ್ಬರನ್ನೊಬ್ಬರು ಗೆದ್ದು ಶಾಶ್ವತ ನೆಮ್ಮದಿಯನ್ನು ಕಂಡುಕೊಳ್ಳಲು ನೆರವಾಗವುದರ ಜೊತೆಗೆ ಅಂತರಂಗದ ಗಟ್ಟಿತನವನ್ನು ಕಟ್ಟಿಕೊಡುವ ವಿಶಿಷ್ಟ ಕಾವ್ಯ ಇದಾಗಿದೆ ಎಂಬುದಾಗಿ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರಾಗಿರುವ ಪ್ರೊ.ಮೊರಬದ ಮಲ್ಲಿಕಾರ್ಜುನ ಅವರು ತಿಳಿಸಿದರು.

ಅವರು ಕಾಂತಾವರ ಅಲ್ಲಮಪ್ರಭು ಪೀಠದ ಅನುಭವದ ನಡೆ ಅನುಭಾವದ ನುಡಿ ತಿಂಗಳ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು “ಪ್ರಭುಲಿಂಗ ಲೀಲೆಯ ಮಾಯೆಯ ಪ್ರಸಂಗ” ಎಂಬ ಕುರಿತು ಉಪನ್ಯಾಸ ನೀಡಿದರು.


ಚಾಮರಸನೇ ಹೇಳಿಕೊಳ್ಳುವಂತೆ “ನನ್ನ ಕಾವ್ಯ ಕಾಳಗದ ಕತೆಯಲ್ಲ, ವಿಷಯ ಸುಖಗಳಲ್ಲಿ ಜಾಲಾಡುವ ವಿರಹಿಗಳ ಶೃಂಗಾರ ಕತೆಯೂ ಅಲ್ಲ, ಬದುಕಲು ಹಿಂಸೆ ಅನಿವಾರ್ಯ ಎಂಬ ಕಾವ್ಯವೂ ನನ್ನದಲ್ಲ, ಒಟ್ಟು ಬದುಕಿನ ದೃಷ್ಟಿಯಲ್ಲಿ ಪಂಚೇಂದ್ರಿಯಗಳನ್ನು ಗೆಲ್ಲುವುದರ ಮೂಲಕ ಕುಂಡಲಿನೀ ಯೋಗದಲ್ಲಿ ನನ್ನನ್ನೇ ನಾನು ಜಯಿಸಿ ಮೋಕ್ಷವನ್ನು ಪಡೆಯುವುದೇ ನಿಜವಾದ ಧರ್ಮವಿಜಯವಾಗಿದ್ದು ಅದನ್ನು ಸಾರುವುದೇ ನನ್ನ ಕಾವ್ಯದ ಉದ್ದೇಶ” ಎಂದಿದ್ದಾನೆ.

ಯಾವುದೇ ಸಂಘರ್ಷಗಳಿಲ್ಲದೆ ಮನುಷ್ಯ ಸಂಬಂಧಗಳಿಗೆ ಧಕ್ಕೆ ಬರದಂತೆ ಸೃವಿಚಾರಗಳನ್ನು ಮಂಡಿಸುವುದೇ ವಿವೇಕದ ಲಕ್ಷಣವಾಗಿದೆ. ತಕರಾರುಗಳನ್ನು ದಾಖಲಿಸಿದರೂ ಕನ್ನಡದ ವಿವೇಕವನ್ನು ಎತ್ತಿ ಹಿಡಿಯುವ ಕಾರ್ಯಗಳನ್ನು ಕನ್ನಡದ ಮಹಾಕಾವ್ಯಗಳು ಮಾಡಿವೆ. ಚಾಮರಸನ ಪ್ರಭುಲಿಂಗ ಲೀಲೆಯಲ್ಲಿ ಬರುವ ಮಾಯಾ ಪ್ರಸಂಗವು ಒಂದು ಕಾಲ್ಪನಿಕ ಪಾತ್ರವಾದರೂ ಸೂಕ್ಷ್ಮವೊಂದನ್ನು ಧ್ವನಿಸುವ ಪಾತ್ರವಾಗಿ ಒಂದು ತಾತ್ವಿಕವಾದ ಸಂದೇಶವನ್ನು ಕೂಡಾ ಇದು ಸಾರುವಂತೆ ರಚಿಸಲಾಗಿದೆ. ಅಲ್ಲಮಪ್ರಭುಗಳ ವ್ಯಕ್ತಿತ್ವಕ್ಕೆ ಕಳಂಕ ಬಾರದ ರೀತಿಯಲ್ಲಿ ಮತ್ತು ಇತರ ಪಾತ್ರಗಳಿಗೂ ಘನತೆ ತುಂಬುವ ಕಾರ್ಯವನ್ನು ಚಾಮರಸ ತನ್ನ ಕಾವ್ಯದಲ್ಲಿ ಮಾಡಿರುವುದಾಗಿಯೂ ತಿಳಿಸಿದರು.

ಅತಿಥಿಗಳನ್ನು ಇದೇ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಕಲ್ಲೂರು ನಾಗೇಶ ಕಾರ್ಯಕ್ರಮ ನಿರ್ವಹಿಸಿದರು. ಡಾ.ನಾ.ಮೊಗಸಾಲೆ ಸ್ವಾಗತಿಸಿ ಯಶೋಧರ ಪಿ.ಕರ್ಕೇರಾ ವಂದಿಸಿದರು.

LEAVE A REPLY

Please enter your comment!
Please enter your name here